







ಪುತ್ತೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ಆ.13,14 ಹಾಗೂ 15ರಂದು ಹರ್ ಘರ್ ತಿರಂಗ್ ಕಾರ್ಯಕ್ರಮ ನಡೆಯಲಿದ್ದು, ಈ ಮೂರೂ ದಿನಗಳಲ್ಲೂ ಪ್ರತಿ ಮನೆಗಳಲ್ಲಿಯೂ ರಾಷ್ಟ್ರಧ್ವಜ ಹಾರಿಸುವಂತೆ ಪುತ್ತೂರು ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಮನವಿ ಮಾಡಿದ್ದಾರೆ.


ಆ.8ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ಧ್ವಜವನ್ನು ಬೆಳಗ್ಗೆ 7 ಗಂಟೆಗೆ ಧ್ವಜಾರೋಹಣ ನೆರವೇರಿಸಿ ಸಂಜೆ ಸೂರ್ಯಾಸ್ತದ ಒಳಗಾಗಿ ಧ್ವಜಾವರೋಹಣ ನಡೆಸಬೇಕು. ಪ್ಲಾಸ್ಟಿಕ್ ಧ್ವಜವನ್ನು ಬಳಸದೇ ಪ್ರತಿಯೊಬ್ಬರೂ ಬಟ್ಟೆಯ ರಾಷ್ಟ್ರ ಧ್ವಜವನ್ನು ಬಳಸಬೇಕು. ಈ ಮಹತ್ವದ ಕಾರ್ಯದಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ರಾಷ್ಟ್ರದ ಗೌರವ ಹೆಚ್ಚಿಸಬೇಕು ಎಂದು ಅವರು ವಿನಂತಿಸಿದರು.



ತಿರಂಗಾ ಯಾತ್ರೆ ಯಶಸ್ಸಿಗೆ ಕೃತಜ್ಞತೆ:
ಪ್ರಧಾನಿಯವರ ಆಶಯದಂತೆ ರಾಷ್ಟ್ರಪ್ರೇಮ ಉದ್ದೀಪನಗೊಳಿಸುವ ತಿರಂಗಾ ಯಾತ್ರೆ'ಯುಕರ್ನಾಟಕ ರಾಜ್ಯದಲ್ಲಿಯೇ ಪ್ರಥಮವಾಗಿ ಪುತ್ತೂರಿನಲ್ಲಿ ಯಶಸ್ವಿಯಾಗಿ ನಡೆದಿದೆ. ಹಿರಿಯರು, ಕಿರಿಯರು, ಯುವ ಜನತೆಯ ಒಗ್ಗೂಡುವಿಕೆಯೊಂದಿಗೆ ನಡೆದ ಕಾರ್ಯಕ್ರಮವು ಬಹಳಷ್ಟು ಅಚ್ಚುಕಟ್ಟಾಗಿ ನಡೆದಿದೆ. ಈ ಯಶಸ್ಸಿಗೆ ಕೈಜೋಡಿಸಿದ ಕಾರ್ಯಕರ್ತರು, ವರ್ತಕರು, ವಿದ್ಯಾರ್ಥಿಗಳು, ಮಾಧ್ಯಮಗಳು, ಪೊಲೀಸ್ ಇಲಾಖೆ ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ರಾಜೇಶ್ ಬನ್ನೂರು ಹೇಳಿದರು.
ಧ್ವಜಕ್ಕೆ ಅಪಮಾನ ಮಾಡಿಲ್ಲ:
ತಿರಂಗಾ ಯಾತ್ರೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ತಿರಂಗಾ ಜೋಡಿಸಿಕೊಳ್ಳುವ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಂದ ಆರೋಪಗಳಿಗೆ ಉತ್ತರಿಸಿದ ರಾಜೇಶ್ ಬನ್ನೂರು, ಈ ದೇಶದ ಅನ್ನ ತಿನ್ನುವ ಯಾರೂ ಕೂಡ ಧ್ವಜಕ್ಕೆ ಅಪಮಾನ ಮಾಡುವುದಿಲ್ಲ. ಇದು ಎಐ ತಂತ್ರಜ್ಞಾನ ಬಳಸಿ ಮಾಡಿರುವ ಆರೋಪವಿರಬಹುದು. ಅಪಮಾನ ಮಾಡುವ ಯಾವುದೇ ಘಟನೆಗಳು ಇಲ್ಲಿ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ ಪೆರಿಯತ್ತೋಡಿ, ಮಣಿಕಂಠ, ಮಾಧ್ಯಮ ಪ್ರಮುಖ್ ಸತೀಶ್ ನಾೖಕ್, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ ಹಾಗೂ ನಗರಸಭೆ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.










