







ರೂ.1,32,30,718.91 ಲಾಭ, ಶೇ.14 ಡಿವಿಡೆಂಡ್


ಪುತ್ತೂರು: ಇರ್ದೆ-ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ಮಹಾಸಭೆ ಸಂಘದ ಸಭಾಂಗಣದಲ್ಲಿ ಆ.8ರಂದು ನಡೆಯಿತು.
ಸಂಘದ ಅದ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು 2025-26ನೇ ಸಾಲಿನ ವರದಿ ವಾಚಿಸಿ ವರದಿ ವರ್ಷದ ಅಂತ್ಯಕ್ಕೆ ಸಂಘದಲ್ಲಿ 3398 ಸದಸ್ಯರಿದ್ದು 3,61,18,065 ಪಾಲು ಬಂಡವಾಳ ಇರುತ್ತದೆ. ವರ್ಷಾಂತ್ಯಕ್ಕೆ 39,70,38,276.94 ಮೊತ್ತದ ಠೇವಣಿಗಳಿದ್ದು ಸದಸ್ಯರಿಗೆ ವಿವಿಧ ರೀತಿಯಲ್ಲಿ ನೀಡಿದ ಸಾಲಗಳು 46,73,23,720 ರೂ. ಆಗಿದೆ. ಕೇಂದ್ರ ಸಹಕಾರಿ ಬ್ಯಾಂಕ್ಗೆ ರೂ. 17,89,87,761 ಸಲ್ಲತಕ್ಕ ಸಾಲಗಳಾಗಿವೆ. ರೂ.5,27,32,724.99 ನಿಧಿಗಳು ಆಗಿರುತ್ತದೆ ಎಂದರು. ಸಂಘದ ಮುಖಾಂತರ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳು, ಕೃಷಿ ಉಪಕರಣಗಳು, ಅಡುಗೆ ಅನಿಲ ಮತ್ತು ಪಡಿತರ ವಸ್ತುಗಳ ವ್ಯಾಪಾರ ವಹಿವಾಟನ್ನು ನಡೆಸಲಾಗುತ್ತಿದ್ದು ರೂ.13,39,985.07 ವ್ಯಾಪಾರ ಲಾಭ ಬಂದಿರುತ್ತದೆ. ಲೆಕ್ಕಪರಿಶೋಧನೆಯಲ್ಲಿ “ಎ” ತರಗತಿ ಬಂದಿದ್ದು ಕಳೆದ ಸಾಲಿನಲ್ಲಿ ರೂ.1,32,30,718.91 ಲಾಭ ಗಳಿಸಿ ಸದಸ್ಯರಿಗೆ ಶೆ.14 ಡಿವಿಡೆಂಡು ನೀಡಲಾಗುವುದು ಎಂದು ತಿಳಿಸಿದರು.




ಸಾಲ ಮರುಪಾವತಿ ಮಾಡದ ಸದಸ್ಯರ ಮೇಲೆ ಕಠಿಣ ನಿರ್ಣಯ:
ಸಂಘದ ಆಡಳಿತ ಮಂಡಳಿಗೆ 12 ಮಂದಿ ನಿರ್ದೇಶಕರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದ್ದೀರಿ. ಸದಸ್ಯರಿಗೆ ವಿವಿಧ ರೀತಿಯಲ್ಲಿ ಸಾಲ ನೀಡಿದ್ದೇವೆ. ಆದರೆ 3- 4 ಮಂದಿ ಸದಸ್ಯರ ಸಾಲ ಮರುಪಾವತಿ ಆಗಿಲ್ಲ. ಆದ್ದರಿಂದ ಅವರ ಮೇಲೆ ಕಠಿಣ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದ ಅವರು. ನಿಮ್ಮೆಲ್ಲರ ಆಶೀರ್ವಾದದಿಂದ ಸಹಕಾರಿ ಯೂನಿಯನ್ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಸಹಕಾರಿ ಯೂನಿಯನ್ ಈ ಬಾರಿ ರಾಜ್ಯದಲ್ಲಿಯೇ ಅತಿ ಹೆಚ್ಚು ಲಾಭ ಗಳಿಸಿದ ಸಂಸ್ಥೆಯಾಗಿದೆ ಎಂದರು. 2025-26ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮತ್ತು ಅದರ ಅನುಪಾಲನಾ ವರದಿ ಪರಿಶೀಲಿಸಿದರು. 2025-26ನೇ ಸಾಲಿನಲ್ಲಿ ಬಜೆಟ್ಗಿಂತ ಹೆಚ್ಚು ಖರ್ಚಾದ ವಿವರ ಓದಿ ಅನುಮೋದನೆ ಪಡೆದುಕೊಂಡರು. 2025-26ನೇ ಸಾಲಿನ ನಿವ್ವಳ ಲಾಭದ ವಿಲೇವಾರಿ ಮಾಡಿದರು. 2026-27ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿ ಓದಿದರು.
ಸಂಘದ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರಾಗಿರುವ ರಂಗನಾಥ್ ರೈ ಗುತ್ತು ಮಾತನಾಡಿ ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಂಘ ಈ ಭಾಗದಲ್ಲಿ ಅತ್ಯುತ್ತಮ ಸಂಘವಾಗಿ ಕೆಲಸ ಮಾಡುತ್ತಿದೆ ಕೇಂದ್ರ ಸಹಕಾರಿ ಬ್ಯಾಂಕ್ ಮಹಾಸಭೆಯಲ್ಲಿಯೂ ಪ್ರೋತ್ಸಾಹ ಬಹುಮಾನ ಸಂಘಕ್ಕೆ ಸಿಕ್ಕಿದೆ. ಸಹಕಾರಿ ಸಂಘಕ್ಕೆ ಅದರದ್ದೇ ಆದ ಬೈಲಾ ಇದೆ. ಅದರಂತೆ ಸಾಮಾಜಿಕ ಕೆಲಸ ಕೂಡ ಮಾಡಿದ್ದೇವೆ. ಬ್ಯಾಕಿಂಗ್ ವ್ಯವಹಾರ ಅಲ್ಲದೆ ಇತರ ಕಾರ್ಯಗಳನ್ನು ಮಾಡುತ್ತಿದೆ ಎಂದು ಹೇಳಿ ಮುಂದೆ ಎಲ್ಲರ ಸಹಕಾರ ಇರಲಿ ಎಂದರು.
ಸದಸ್ಯರ ಪ್ರಶ್ನೋತ್ತರಗಳು:
ಈ ಬಾರಿ ಸಂಘಕ್ಕೆ ಉತ್ತಮ ಲಾಭ ಬಂದಿದೆ. ಶೇ.16ರಷ್ಟು ಲಾಭ ಕೊಡಬೇಕು. ಅಲ್ಲದೆ ಗಿಫ್ಟ್ ಆದರೂ ಕೊಡಬೇಕು ಎಂದು ಸದಸ್ಯ ಪ್ರಕಾಶ್ ರೈ ಹೇಳಿದರು. ಇದಕ್ಕೆ ಅಧ್ಯಕ್ಷರು ಮಾತನಾಡಿ ಸಂಘದ ಹಳೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಅದನ್ನು ತೆಗೆದು ಹೊಸ ಕಮರ್ಷಿಯಲ್ ಕಟ್ಟಡ ಮಾಡಬೇಕಾಗಿದೆ. ಇದಕ್ಕೆ ಕಟ್ಟಡ ನಿಧಿಯಿಂದ ಹಣ ಭರಿಸಬೇಕು ಆದುದರಿಂದ ಡಿವಿಡೆಂಡು ಹೆಚ್ಚು ಮಾಡಲು ಸಾಧ್ಯವಿಲ್ಲ. ಸದಸ್ಯರು ಸಹಕರಿಸಬೇಕು. ಗಿಫ್ಟ್ ಬದಲು ಮದ್ಯಾಹ್ನ ಊಟ ನೀಡುತ್ತಿದ್ದೇವೆ ಎಂದು ಹೇಳಿದರು.
ಸದಸ್ಯ ದೇವಿಕಿಶೋರ್ ಕೋನಡ್ಕ ಮಾತನಾಡಿ ಹೊಸ ಕಮರ್ಷಿಯಲ್ ಕಟ್ಟಡ ನಿರ್ಮಾಣಕ್ಕೆ ಸರಕಾರದ ಫಂಡ್ ಪಡೆದುಕೊಳ್ಳಬಹುದು. ಅಲ್ಲದೆ ಲಾಭಾಂಶದಲ್ಲಿ ಕಟ್ಟಡ ನಿರ್ಮಿಸಬಹುದು ಎಂದರು. ಇದಕ್ಕೆ ಅಧ್ಯಕ್ಷರು ಮಾತನಾಡಿ ಸರಕಾರದಿಂದ ಫಂಡ್ ಸಿಗುವುದು ಕಷ್ಟ. ಲಾಭಾಂಶದಲ್ಲಿ ಇತರ ನಿಧಿಗಳಿಗೆ ಶೇಕಡಾವಾರು ಹೋಗುತ್ತದೆ ಆದುದರಿಂದ ಕಟ್ಟಡ ನಿಧಿಯಲ್ಲೇ ಮಾಡಬೇಕಾಗುತ್ತದೆ ಎಂದರು.ಸಂಘದ ಕಛೇರಿಯಲ್ಲಿ ಈಗಲೂ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರ ಹೆಸರಿನ ಬೋರ್ಡ್ ಹಳೆಯದೆ ಇದೆ ಅದನ್ನು ಸರಿಪಡಿಸಿ ಎಂದು ಕೆ.ಪಿ ಭಟ್ ಕೋನಡ್ಕ ಹೇಳಿದರು. ಆದಷ್ಟು ಬೇಗ ಸರಿಪಡಿಸುತ್ತೇವೆ ಎಂದು ಅಧ್ಯಕ್ಷರು ಹೇಳಿದರು.ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ ಮಳೆ ಮಾಪನಕ್ಕೆ ಬಳಸುವ ಮಳೆಮಾಪನ ಸಲಕರಣೆ ಸರಿ ಇಲ್ಲ. ಅದು ಯಾವಾಗ ಸರಿಯಾಗುವುದು? ಎಂದು ಸದಸ್ಯ ಚಂದ್ರಶೇಖರ್ ರೈ ಬಾಲ್ಯೊಟ್ಟು ಹೇಳಿದರು. ಇದರ ಬಗ್ಗೆ ಸಂಬಂದಪಟ್ಟವರ ಗಮನಕ್ಕೆ ತರುತ್ತೇವೆ ಎಂದು ಅದ್ಯಕ್ಷರು ಹೇಳಿದರು.ಮಹಾಸಭೆ ನೋಟಿಸ್ ಸರಿಯಾಗಿ ತಲುಪುವುದಿಲ್ಲ ಎಂದು ಸದಸ್ಯರು ಹೇಳಿದರು. ನೋಟೀಸ್ ಎಲ್ಲರಿಗೆ ರಿಜಿಸ್ಟರ್ ಪೋಸ್ಟ್ ಮಾಡಿ ಕಳಿಸಿದ್ದೇವೆ. ಹೊಸ ಪೋಸ್ಟ್ಮ್ಯಾನ್ ಇರುವ ಕಾರಣ ಸಮಸ್ಯೆ ಆಗಿದೆ ಎಂದು ಅಧ್ಯಕ್ಷರು ಹೇಳಿದರು.ದೂಮಡ್ಕ ಶಾಖಾ ಕಚೇರಿ ಸೋರುತ್ತಿದೆ. ಅದನ್ನು ಸರಿಪಡಿಸಿ ಎಂದು ಸದಸ್ಯರೊಬ್ಬರು ಹೇಳಿದರು. ಶಾಖಾ ಕಛೇರಿ ಕಟ್ಟಡವನ್ನು ರಿಪೇರಿ ಮಾಡುತ್ತೇವೆ ಎಂದು ಅಧ್ಯಕ್ಷರು ಹೇಳಿದರು.
ಕಛೇರಿಯ ಕ್ಯಾಶ್ ಕೌಂಟರ್ನಲ್ಲಿ ಟೋಕನ್ ವ್ಯವಸ್ಥೆ ಮಾಡಬೇಕು. ನಮಗೆ ಒಮ್ಮೊಮ್ಮೆ ಕಾದು ಕುಳಿತು ಕೊಳ್ಳಬೇಕಾಗುತ್ತದೆ. ಬೇಗ ಬಂದವರಿಗೆ ಬೇಗ ಹಣ ಸಿಗುವುದಿಲ್ಲ ಎಂದು ಸದಸ್ಯ ಚಂದ್ರಶೇಖರ ರೈ ಬಾಲ್ಯೊಟ್ಟು ಹೇಳಿದರು. ಇದರ ಬಗ್ಗೆ ಪರಿಶೀಲಿಸುತ್ತೇವೆ ಎಂದು ಅಧ್ಯಕ್ಷರು ಹೇಳಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಪಿ. ನೋಟಿಸು ಓದಿ ದಾಖಲಿಸಿದರು. ಎಸ್ಸಿಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ವಸಂತ್, ಸಂಘದ ಉಪಾಧ್ಯಕ್ಷ ಹರೀಶ್ ಗೌಡ ಗುಮ್ಮಟೆಗದ್ದೆ, ನಿರ್ದೇಶಕರಾದ ಶಂಭು ಭಟ್ ಡಿ., ಜಗನ್ನಾಥ ರೈ ಕೆ., ನಾಗರಾಜ ಕೆ., ದಿವಾಕರ ಬಲ್ಲಾಳ್ ಬಿ., ರಾಧಾಕೃಷ್ಣ ಭಟ್ ಕೆ., ಮೊಯಿದು ಕುಂಞÂ ಕೆ., ಪರಮೇಶ್ವರ ನಾಯ್ಕ, ನಿಖಿತಾ ಕೆ.ಎಂ., ನೀಲಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಮಾರಿ ಅತಿಥಿ ಪ್ರಾರ್ಥಿಸಿ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿ ಹಿರಿಯ ಗುಮಾಸ್ತ ಆರ್.ಬಿ ಸುವರ್ಣ ವಂದಿಸಿದರು. ಸದಸ್ಯ ಮಂಜುನಾಥ್ ಎನ್.ಎಸ್ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿ ವರ್ಗ ಸಹಕರಿಸಿದರು.

ಊರಿನ ಸಾಧಕರಿಗೆ ಸನ್ಮಾನ
ಇರ್ದೆ-ಬೆಟ್ಟಂಪಾಡಿ ಗ್ರಾಮದ ಹಿರಿಯ ಹಾಗೂ ಕಿರಿಯ 8 ಮಂದಿ ಸಾಧಕರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪ್ರಗತಿಪರ ಕೃಷಿಕರು, ಹಿರಿಯರೂ ಆದ ಗಣಪತಿ ಭಟ್ ಕೋನಡ್ಕ, ಮೋನಪ್ಪ ಗೌಡ ಮಿತ್ತಡ್ಕ, ಮಹಮ್ಮದ್ ಹಾಜಿ ಅಜ್ಜಿಕಲ್ಲು, ಡಾ. ವೇದಾವತಿ ಬಲ್ಲಾಳ್ ಬೆಟ್ಟಂಪಾಡಿ ಬೀಡು, ಮುರಳೀಧರ ನಾಯಕ್ ನೆಲ್ಯಾರ್ಣೆ, ನಿವೃತ್ತ ಅಂಚೆ ಪಾಲಕ ನಾರಾಯಣ ನಾಯ್ಕ, ಝೀ ಕನ್ನಡದ ಸರಿಗಮಪ ಖ್ಯಾತಿಯ ಸಮನ್ವಿ ರೈ ಮದಕ ಹಾಗೂ ರಾಷ್ಟçಮಟ್ಟದ ಕ್ರೀಡಾಪಟು ಕುಮಾರಿ ಕೀರ್ತಿ ಗುಮ್ಮಟೆಗದ್ದೆಯವರನ್ನು ಸಂಗದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಗಣಪತಿ ಭಟ್ ಕೋನಡ್ಕ ಮಾತನಾಡಿ ಸಹಕಾರಿ ಬೀಜ ಹಾಕಿದವರು ಶ್ರೀನಿವಾಸರಾಯರು. ಈ ಸಂಘ ಮೊದಲು ಕೋ ಆಪರೇಟಿವ್ ಸ್ಟೋರ್ ಆಗಿತ್ತು. ನಾವೆಲ್ಲರೂ ಸೌಹಾರ್ದತೆಯಿಂದ ಸಹಕಾರ ತತ್ವದಲ್ಲಿ ಕೆಲಸ ಮಾಡೋಣ. ಮೇಜಿನ ಅಡಿಯಲ್ಲಿ ಕೊಡುವುದು, ತಗೊಳ್ಳುವುದು ಇಂತಹ ಸಹಕಾರ ಬೇಡ ಎಂದು ಹೇಳಿದರು. ಸಮನ್ವಿ ರೈ ಮದಕ ಮಾತನಾಡಿ ನನ್ನ ಸಾಧನೆ ಗುರುತಿಸಿ ಸನ್ಮಾನಿಸಿದ್ದೀರಿ ಇದಕ್ಕೆ ಕೃತಜ್ಞತೆಗಲು. ಹೆಚ್ಚಿನ ಪ್ರತಿಭೆಗಳು ಮೂಡಿಬರಲಿ ಎಂದರು.










