ಪರಿವಾರ ಬಂಟರ ಸಂಘ ಪುತ್ತೂರು ವಲಯದ ಆಟಿಕೂಟ

0

ಹಿಂದಿನ ಕಾಲದ ಕಷ್ಟ ಈಗಿಲ್ಲ , ಕಾಲ ಬದಲಾಗಿದೆ, ಅಭಿವೃದ್ಧಿ ಕಾಣುತ್ತಿದೆ – ಚಂದ್ರಶೇಖರ್ ನಾೖಕ್‌


ಪುತ್ತೂರು: ಪರಿವಾರ ಬಂಟರ ಸಂಘ ಮಂಗಳೂರು ಇದರ ಪುತ್ತೂರು ವಲಯ, ಮಹಿಳಾ ವೇದಿಕೆ ಮತ್ತು ಯುವ ಪರಿವಾರ ಬಂಟರ ವೇದಿಕೆ ಪುತ್ತೂರು ವಲಯದ ಸಹಭಾಗಿತ್ವದಲ್ಲಿ ಆಟಿಕೂಟ ಆ.9ರಂದು ಬೆದ್ರಾಳ ನೆಲ್ಲಿಕೇರಿಯಲ್ಲಿರುವ ದರ್ಬೆ ಸುನಂದ ಸಂಜೀವ ನಾೖಕ್‌ರವರ ಮನೆಯಲ್ಲಿ ನಡೆಯಿತು.

ಪಾರಂಪರಿಕ ಶೈಲಿಯಲ್ಲಿ ಅಲಂಕರಿಸಲಾಗಿದ್ದ ಸಂಜೀವ ನಾೖಕ್‌ ನೆಲ್ಲಿಕೇರಿ ಬೆದ್ರಾಳ ವೇದಿಕೆಯಲ್ಲಿ ಗಣ್ಯರು ದೀಪ ಬೆಳಗಿಸಿ, ಕಲ್ಪವೃಕ್ಷದ ಹಿಂಗಾರ ಅರಳಿಸುವ ಮೂಲಕ ಪರಿವಾರ ಬಂಟರ 2026ನೇ ಸಾಲಿನ ‘ಆಟಿಕೂಟ’ವನ್ನು ಉದ್ಘಾಟಿಸಲಾಯಿತು.


ಉದ್ಯಮಿ ಶಶಿಧರ್ ನಾೖಕ್‌ ಕಂರ್ಬಡ್ಕ ಮಾತನಾಡಿ, ತುಳುನಾಡಿನ ಶ್ರೀಮಂತ ಪರಂಪರೆಯಲ್ಲಿ ಬೆಳೆದ ಪರಿವಾರ ಬಂಟ ಸಮಾಜದವರೆಲ್ಲರ ಸಹಕಾರ ಹಾಗೂ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ತನ್ನದೆ ಆದ ಇತಿಹಾಸವಿದೆ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ಧಾರಿ ಎಂದರು.


ಮುಖ್ಯ ಅಭ್ಯಾಗತರಾಗಿದ್ದ ಪರಿವಾರ ಬಂಟರ ಸಂಘ ಬೆಂಗಳೂರು ವಲಯದ ಕಾರ್ಯದರ್ಶಿ, ಉದ್ಯಮಿ ನಯನ ಚಂದ್ರ ನಾೖಕ್‌ ಮಾತನಾಡಿ, ನಾವು ಎಷ್ಟೇ ಉನ್ನತ ಸ್ಥಾನವನ್ನೇರಿದರೂ ಎಲ್ಲೇ ವಾಸವಾಗಿದ್ದರೂ ಹುಟ್ಟಿ ಬೆಳೆದ ಜಾಗ, ಹೆತ್ತವರು,ಸಂಬಂಧಿಕರನ್ನು ಮರೆಯಬಾರದು ಆಗಲೇ ನಮ್ಮ ಜೀವನ ಸಾರ್ಥಕವಾಗುವುದು. ಆಧುನಿಕತೆಯ ಹೆಸರಿನಲ್ಲಿ ನಡೆಯುವ ಸ್ವೇಚಾಚಾರ ಜೀವನವನ್ನೇ ಬಲಿಕೊಡಬಹುದು. ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಸಂಪ್ರದಾಯದಲ್ಲಿ ಬೆಳೆವ ಯುವ ಜನಾಂಗ ನಮ್ಮದಾಗಬೇಕು ಎಂದರು..


ಮುಖ್ಯ ಅತಿಥಿಯಾಗಿದ್ದ ವಕೀಲ ಪುಷ್ಪರಾಜ್ ನಾೖಕ್‌ ವಿರಾಜ್ ಪೇಟೆ ಮಾತನಾಡಿ ಹಿಂದಿನ ಕಾಲದಲ್ಲಿ ಆಟಿ ತಿಂಗಳೆಂದರೆ ಕಷ್ಟದ ತಿಂಗಳು. ಅಂದಿನ ಜೀವನ ಶೈಲಿಗೂ ಇಂದಿನ ಜೀವನ ಶೈಲಿಗೂ ಅಜಗಜಾಂತರ ವ್ಯತ್ಯಾಸವಿದೆ. ಕೃಷಿ ಕೆಲಸಗಳೆಲ್ಲ ಮುಗಿದು ವಿಪರೀತ ಮಳೆಗೆ ಹೊರಗೆ ಹೋಗಲಾಗದೆ ಹಿತ್ತಿಲಲ್ಲೇ ಬೆಳೆವ ಗೆಡ್ಡೆ ಗೆಣಸು ಸೊಪ್ಪು ತರಕಾರಿಗಳನ್ನೇ ತಿಂದು ಜೀವನ ನಿರ್ವಹಣೆ ಮಾಡಬೇಕಾಗಿತ್ತು. ವಿವಿಧ ಕಷಾಯಗಳ ಮೂಲಕವೇ ಆರೋಗ್ಯವನ್ನು ಕಾಪಾಡ ಬೇಕಿತ್ತು ಈಗ ಕಾಲ ಬದಲಾಗಿದೆ ಇಂದಿನ ಜನಾಂಗಕ್ಕೆ ಈ ರೀತಿ ಆಟಿಕೂಟಗಳನ್ನು ಮಾಡಿ ಹಿಂದಿನ ಜೀವನ ಶೈಲಿಯನ್ನು ತಿಳಿಸುವ ಕೆಲಸವಾಗುತ್ತಿದೆ ಎಂದರು.


ಪರಿವಾರ ಬಂಟರ ಸಂಘ ಕೇಂದ್ರ ಸಮಿತಿ ಅಧ್ಯಕ್ಷರಾದ ವಿಶ್ವನಾಥ ನಾೖಕ್‌ ಅರೆಹಳ್ಳಿ ಮಾತನಾಡಿ, ಸಂಘದ ವತಿಯಿಂದ ಸುಸಜ್ಜಿತ ಸಭಾಭವನ ನಿರ್ಮಾಣ ಮಾಡಲುದ್ದೇಶಿಸಿದ್ದು ಅದಕ್ಕೆ ಸಮಾಜ ಬಾಂಧವರ ತನು ಮನ ಧನದ ಪೂರ್ಣ ಸಹಕಾರ ಬೇಕೆಂದರು.


ಉದ್ಯಮಿ, ಪ್ರಗತಿಪರ ಕೃಷಿಕರೂ ಆದ ಅಶೋಕ್ ನಾೖಕ್‌ ತಲೆಮನೆ ಪಾಂಡಿ ಮಾತನಾಡಿ, ಈ ಆಚರಣೆಗಳು ತಲೆತಲಾಂತರದಿಂದ ಬಂದದ್ದು. ಹಿಂದೆ ಸಂಪ್ರದಾಯದ ಹೆಸರಿನಲ್ಲಿ ಮನೆ ಮಂದಿ ಕುಟುಂಬಸ್ಥರು ಸೇರಿ ಮಾಡುತ್ತಿದ್ದ ಕಾರ್ಯಕ್ರಮವನ್ನು ಈಗ ಎಲ್ಲರೂ ಒಟ್ಟು ಸೇರಿ ಮಾಡುತ್ತಿದ್ದೇವೆ. ಇಂತಹ ಆಚರಣೆಯಿಂದ ಸಮಾಜ ಬಾಂಧವರೆಲ್ಲ ಒಟ್ಟಾಗಲು ಸಾಧ್ಯ, ಇಂತಹ ಇನ್ನಷ್ಟು ಉತ್ತಮ ಕಾರ್ಯಚಟುವಟಿಕೆಗಳನ್ನು ಮಾಡುತ್ತ ಮುನ್ನಡೆಯೋಣ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪ ತಹಶೀಲ್ದಾರ್ ಚಂದ್ರಶೇಖರ್ ನಾೖಕ್‌ ಮಾತನಾಡಿ, ಹಿಂದಿನ ಕಾಲದಲ್ಲಿ ಆಟಿ ತಿಂಗಳೆಂದರೆ ಕಷ್ಟದ ತಿಂಗಳು ಬೇಸಾಯವೇ ಕಸುಬಾಗಿದ್ದ ಕಾಲ. ಆದಾಯಕ್ಕೆ ಬೇರೆ ಏನಿಲ್ಲ. ಕೃಷಿ ಕೆಲಸಗಳೆಲ್ಲ ಮುಗಿದು ವಿಪರೀತ ಮಳೆಗೆ ಹೊರಗೆ ಹೋಗಲಾಗದೆ ಮನೆಯಲ್ಲಿ ಶೇಖರಿಸಿಟ್ಟಿದ್ದ ಧವಸ ಧಾನ್ಯಗಳನ್ನು ಜೋಪಾನವಾಗಿಟ್ಟು ಇತಿಮಿತಿಯಲ್ಲಿ ಉಪಯೋಗಿಸಿ ಕಷ್ಟದಿಂದ ನಮ್ಮ ಹಿರಿಯರು ನಮ್ಮನ್ನು ಬೆಳೆಸಿದ್ದಾರೆ. ಆದರೆ ಈಗ ಹಾಗಿಲ್ಲ ಎಲ್ಲವೂ ಬದಲಾಗಿದೆ ಮಕ್ಕಳು ಕಲಿತು ವಿದ್ಯಾವಂತರಾಗಿದ್ದಾರೆ ಉನ್ನತ ಸ್ಥಾನ ಮಾನಗಳು ದೊರಕುತ್ತಿವೆ. ನಾವೂ ಕಾಲಕ್ಕೆ ತಕ್ಕಂತೆ ಬದಲಾಗುತಿದ್ದೇವೆ ಎಂದರು.


ಕಾರ್ಯಕ್ರಮದ ಪ್ರಾಯೋಜಕರಾದ ನವೀನ್ ಚಂದ್ರ ನಾೖಕ್‌ ಬೆದ್ರಾಳ ಮಾತನಾಡಿ, ಇಂತಹ ಕಾರ್ಯಕ್ರಮ ಮಾಡಲು ನಮಗೆ ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ. ಈ ಸಮಾರಂಭ ಯಶಸ್ವಿಯಾಗಲು ಕಳೆದ ಹಲವಾರು ದಿನಗಳಿಂದ ಸದಸ್ಯರು ಶ್ರಮಿಸುತ್ತಿದ್ದಾರೆ ಅವರ ಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಎಂದರು.


ಪರಿವಾರ ಬಂಟರ ಸಂಘ ಪುತ್ತೂರು ವಲಯದ ಗೌರವಾಧ್ಯಕ್ಷರಾದ ಸುಧಾಕರ ಕೆ.ಪಿ ಮಾತನಾಡಿ, ಕಳೆದ 15 ವರ್ಷದಿಂದ ನಾವು ಆಟಿಕೂಟವನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ. ಕೆಲವೇ ಜನರ ಸದಸ್ಯತನದೊಂದಿಗೆ ಪ್ರಾರಂಭವಾದ ಸಂಘ ಇಂದು ಸಾವಿರಾರು ಜನರ ಸದಸ್ಯತನದೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.ಸಂಘದ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಸಮಾಜ ಬಾಂಧವರು ತನುಮನ ಧನದ ಸಹಕಾರವನ್ನು ನೀಡಿ ಸಕ್ರೀಯವಾಗಿ ಭಾಗವಹಿಸಬೇಕು. ಸದಸ್ಯರ ಪೂರ್ಣ ಸಹಕಾರದಿಂದ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದರು.


ಬಹುಮಾನ ವಿತರಣೆ:
ಜು.26ರಂದು ತೆಂಕಿಲ ಶಶಿಧರ್ ನಾೖಕ್‌ ರವರ ಗದ್ದೆಯಲ್ಲಿ ಕೆಸರ್ಡ್ ಒಂಜಿ ದಿನದಂದು ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಲಕ್ಕಿಡಿಪ್ ವಿಜೇತರಿಗೆ ಪರಿವಾರ ಬಂಟರ ಸಂಘ ಪುತ್ತೂರು ವಲಯದ ಅಧ್ಯಕ್ಷರಾದ ಸರ್ವೇಶ್ ನಾೖಕ್‌ ಪಾದೆ, ಉಪಾಧ್ಯಕ್ಷರಾದ ಬಾಲಕೃಷ್ಣ ನಾೖಕ್‌ ನಂದಿಲ, ಯುವ ಪರಿವಾರ ಬಂಟರ ವೇದಿಕೆಯ ಉಪಾಧ್ಯಕ್ಷ ನಿತೇಶ್ ನಾೖಕ್‌, ಕೆಸರ್ಡ್ ಒಂಜಿ ದಿನ ಕಾರ್ಯಕ್ರಮದ ಅಧ್ಯಕ್ಷರಾದ ಪುರುಷೋತ್ತಮ ನಾೖಕ್‌, ಕಾರ್ಯಕ್ರಮದ ಆಯೋಜಕರಾದ ಸುಗುಣಾ ಸಂಜೀವ ನಾೖಕ್‌, ಶರತ್ ಚಂದ್ರ ನಾೖಕ್‌ ಬೆದ್ರಾಳ ಬಹುಮಾನ ವಿತರಿಸಿದರು. ವೀಕ್ಷಿತಾ ಸರ್ವೇಶ್ ನಾೖಕ್‌ ಪಾದೆ ಬಹುಮಾನಿತರ ಪಟ್ಟಿ ವಾಚಿಸಿದರು.


ಹೇಮಲತಾ ಎಸ್.ನಾೖಕ್‌, ಮಮತಾ ನಾೖಕ್‌, ವನಿತಾ ನಾೖಕ್‌ ಪ್ರಾರ್ಥಿಸಿದರು., ಪರಿವಾರ ಬಂಟರ ಸಂಘದ ಪುತ್ತೂರು ವಲಯದ ಕಾರ್ಯದರ್ಶಿ ಕವನ್ ನಾೖಕ್‌ ಸ್ವಾಗತಿಸಿದರು.ರೂಪಾ ಶರತ್ ಚಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪರಿವಾರ ಬಂಟರ ಸಂಘ ಪುತ್ತೂರು ವಲಯದ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಪ್ರಭಾ ನಾೖಕ್‌ ಧನ್ಯವಾದ ಸಲ್ಲಿಸಿದರು,. ಸ್ಮಿತಾ ಎಸ್, ನಾಕ್ ಹಣಿಯೂರು, ನೀತು ರಾಜೇಶ್ ನಾೖಕ್‌ ಕಾರ್ಯಕ್ರಮ ನಿರೂಪಿಸಿದರು. ಪರಿವಾರ ಬಂಟರ ಸಂಘ ಪುತ್ತೂರು ವಲಯ, ಮಹಿಳಾ ವೇದಿಕೆ ಮತ್ತು ಯುವ ಪರಿವಾರ ಬಂಟರ ವೇದಿಕೆ ಯ ಪದಾಧಿಕಾರಿಗಳು, ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಹಭೋಜನದ ಬಳಿಕ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಪಾರಿವಾರ ಬಂಟ ಸಮಾಜದ 13 ವಲಯಗಳಿದ್ದು ಅಲ್ಲಿನ ಹಲವಾರು ಗಣ್ಯರು ಆಗಮಿಸಿದ್ದರು, ಸದಸ್ಯರು ಮತ್ತು ಸಮಾಜ ಬಾಂಧವರು, ಹಿತೈಷಿಗಳು ಉಪಸ್ಥಿತರಿದ್ದರು.

ಸುದರ್ಶನ್ ನಾೖಕ್‌ ಕಂಪ ರವರಿಗೆ ಸನ್ಮಾನ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಉಪಾಧ್ಯಕ್ಷ ಸುದರ್ಶನ್ ನಾೖಕ್‌ ಕಂಪ ಅವರನ್ನು ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿದರು.ಪ್ರೇಮಾನಂದ ನಾೖಕ್‌ ಸನ್ಮಾನ ಪತ್ರ ವಾಚಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುದರ್ಶನ್ ನಾೖಕ್‌ ಅವರು ಕರಾವಳಿ ಭಾಗದ ತುಳುನಾಡಿನ ಜನರ ಜೀವನ ಶೈಲಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ನಮ್ಮ ಆಚಾರ, ವಿಚಾರ, ಸಂಸ್ಕ್ರತಿ ವಿಭಿನ್ನವಾಗಿದೆ. ಕರಾವಳಿಯ ಜನಪ್ರಿಯ ಕ್ರೀಡೆಯಾದ ಕಂಬಳ ಉದ್ಘೊಷಕನಾಗಿ ನಾನು ಮಾಡಿದ ಸೇವೆಗೆ ನನಗೆ ಪ್ರಶಸ್ತಿ ಬಂದಿದೆ. ಸಮಾಜ ಬಾಂಧವರೆಲ್ಲ ಸೇರಿ ನನ್ನನ್ನು ಸನ್ಮಾನಿಸಿದ್ದೀರಿ ಇದು ನನ್ನಜೀವನದ ಅತ್ಯಮೂಲ್ಯ ಕ್ಷಣ. ಪುತ್ತೂರಿನ ಕಂಬಳದಲ್ಲಿ ಪರಿವಾರ ಬಂಟ ಸಮಾಜದ ಯುವಕರ ಪಾತ್ರ ಬಹಳವಾಗಿದೆ ಅವರೆಲ್ಲರ ಸಹಕಾರದಿಂದ ನನಗೆ ಈ ಗೌರವ ದೊರಕಿದೆ ಎಂದರು.


70 ಕ್ಕೂ ಮಿಕ್ಕಿ ಆಟಿ ಕೂಟದ ತಿಂಡಿ ತಿನಿಸುಗಳು:
ಪತ್ರೊಡೆ ಗಸಿ, ಮಂಜಲ್ದಿರೆದ ಅಡ್ಯೆ,ಪದೆಂಜಿ ಗಂಜಿ,ಪತ್ರೋಡೆ ಉಪ್ಪುಕರಿ,ಮೆಂತೆದ ಮಣ್ಣಿ,ಕಾಶಿ ಹಲ್ವಾ, ಗುಲಾಬ್ ಜಾಮೂನ್,ಕೊಲತ್ತರು ಪೆಲ್ತರಿ ಸುಕ್ಕ,ಮಶ್ರೂಮ್ ಪೆಪ್ಪರ್ ಚಿಲ್ಲಿ,ಪುನರ್ ಪುಳಿ ಸಾರು,ಬಾಳೆದಿಂಡು ಪಲ್ಯ,ಉಪ್ಪಡ್ಪಚಿಲ್ ಪಲ್ಯ,ರಾಗಿ ಮಣ್ಣಿ,ತಜಂಕ್ ಪಲ್ಯ,ಕಾಟು ಕುಕ್ಕು ಕೊದ್ಯೋಲ್, ಪೆಲಕ್ಕೈದ ಪಾಯಸ,ತಜಂಕ್ ಪೆಲತರಿ ಪಲ್ಯ,ಮರುವಾಯಿ ಸುಕ್ಕ,ಕನಿಲೆ ಪದೆಂಜಿ ಪೆಲತೆರಿ ಸುಕ್ಕ,ಕಣಿಲೆ ಪದೆಂಜಿ ಗಸಿ,ಚಿಕನ್ ಕಬಾಬ್, ಒಣ ಎಟ್ಟಿ ಪಲ್ಯ,ಮರುವಾಯಿ ಪುಂಡಿ,ತಜಂಕ್ ಚಟ್ಟಂಬಡೆ,ಮಸಾಲ ಮಜ್ಜಿಗೆ ,ಮದ್ದುಕೋಲು ಪಾಯಸ,ಕರಿಯ ಚೇವು
ದಂಟುದ ಗಸಿ ,ನೀರ್ ಕುಕ್ಕು ಚಟ್ನಿ,ಸೇಮಿಗೆ,ಕಡ್ಲೆ ಬೇಳೆ ಸಾಗು ಪಾಯಸ,ಮೆತ್ತೆ ಅಡ್ಪುನಾ,ನೀರು ದೋಸೆ,ಹಲಸಿನ ಗಟ್ಟಿ,ಸೌತೆ ಕಾಯಿ ಹುಳಿ ಪದಾರ್ಥ,ಹಲಸಿನ ಗಾರಿಗೆ,ಮದ್ದು ಕೋಲು ಮಣ್ಣಿ, ಡ್ರೈ ಎಟ್ಟಿ ಚಟ್ನಿ,ಕರಿಯ ಚೇವು ಸಾಸಿಮೆ,ಬೂತಾಯಿ ಪುಳಿಮುಂಚಿ,ಕರ್ಜಿಕಾಯಿ,ಉಂಡ್ಲಿಗ,ರವೆ ಉಂಡೆ,ಪಸಂಗರಿ,ಬಲ್ಯಾರ್ ಚಟ್ನಿ,ಪಪ್ಪಾಯಿ ಹಲ್ವಾ,ಬೂತಾಯಿ ಕೆತ್ತಿ ಪುಳಿಮುಂಚಿ, ಬಸಳೆ ಪುಂಡಿ, ಪುದಿನ ಚಟ್ನಿ,ಪಾನಕ,ತಿಮರೆ ಚಟ್ನಿ,ಕುಡು ಚಟ್ನಿ, ಪೂಂಬೆ ಪಲ್ಯ, ಅಕ್ಕಿ ಮೆಂತೆ ಲಾಡು, ಚೇವು ಅಂಬಡೆ ಪುಲಿ ಮುಂಚಿ,ಬೇವಿನ ಸೊಪ್ಪಿನ ಚಟ್ನಿ,ಸೌತೆ ಎಟ್ಟಿ ಸಾರು,ಕೊತ್ತಂಬರಿ ಗಂಜಿ,ಕೊಲ್ಲತರು ಚಟ್ನಿ, ಬಂದನಾರು ಕಷಾಯ, ಕೆರಂಗ್ ಪೋಡಿ,ಹೋಳಿಗೆ, ಇಡ್ಲಿ,ಕೆತ್ತಿಗಸಿ,ಬಿರಿಯಾಣಿ, ಮರುವಾಯಿ ಸುಕ್ಕ,ಕೋರಿ ಸಾರ್,ಸುಕ್ಕ, ವೆಜ್ ರಸಂ, ಸೇಮಿಗೆ ಪಾಯಸ, ಕಲಿ, ಐಸ್ ಕ್ರೀಂ ಹಾಗೂ ಇನ್ನಿತರ ಸುಮಾರು 70 ಕ್ಕೂ ಮಿಕ್ಕಿ ಖಾದ್ಯಗಳಿದ್ದವು. ಗೃಹಿಣಿಯರು ಮನೆಯಲ್ಲೇ ತಯಾರಿಸಿ ತಂದ ಶುಚಿರುಚಿಯಾದ ತಿನಿಸುಗಳ ಸವಿಭೋಜನ ಅದ್ಬುತವಾಗಿತ್ತು. ತಿಂಡಿ ತಿನಸುಗಳನ್ನು ಮನೆಯಲ್ಲಿ ತಯಾರಿಸಿ ತಂದವರಿಗೆ ಶ್ರೀ ಗಂಧದ ಗಿಡವನ್ನು ಸ್ಮರಣಿಕೆಯಾಗಿ ನೀಡಿ ವೇದಿಕೆಯಲ್ಲಿ ಗೌರವಿಸಲಾಯಿತು. ರೇಷ್ಮಾ ಸುಧಾಕರ್ ತಿಂಡಿ ತಿನಿಸುಗಳನ್ನು ಮಾಡಿ ತಂದವರ ಪಟ್ಟಿ ಓದಿದರು.

LEAVE A REPLY

Please enter your comment!
Please enter your name here