ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

0

29.66ಕೋಟಿ ರೂ.ವ್ಯವಹಾರ | 26.65 ಲಕ್ಷ ರೂ.ಲಾಭ, ಶೇ.10 ಡಿವಿಡೆಂಡ್ ಘೋಷಣೆ


ಪುತ್ತೂರು: ಇಲ್ಲಿನ ತಾ.ಪಂ. ವಾಣಿಜ್ಯ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಆ.9ರಂದು ಕೊಂಬೆಟ್ಟು ಮರಾಟಿ ಸಂಘದ ಸಭಾಂಗಣದಲ್ಲಿ ನಡೆಯಿತು.


ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶೀನ ನಾಯ್ಕ್ ಅವರು ಮಾತನಾಡಿ, 2025-26ನೇ ಸಾಲಿನಲ್ಲಿ ಸಂಘವು 29.66 ಕೋಟಿ ರೂ.ವ್ಯವಹಾರ ನಡೆಸಿದ್ದು 26.65 ಲಕ್ಷ ರೂ.ಲಾಭ ಬಂದಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು. ಸಂಘದ ಉಪ ನಿಬಂಧನೆಯಂತೆ ಸದಸ್ಯರು ಮಹಾಸಭೆಗೆ ಹಾಜರಾಗುವುದರೊಂದಿಗೆ ಸಂಘದಲ್ಲಿ ಕನಿಷ್ಟ ವ್ಯವಹಾರ ಮಾಡಬೇಕು. ಉಳಿತಾಯ, ನಿರಖು ಠೇವಣಿ ಇಡುವ ಮೂಲಕ ಸಂಘದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕೆಂದು ಹೇಳಿದರು. ಸಂಘದಲ್ಲಿ 2242 ಸದಸ್ಯರಿದ್ದು 51.79 ಲಕ್ಷ ರೂ.ಷೇರು ಬಂಡವಾಳ ಇದೆ. 4.70 ಕೋಟಿ ರೂ. ಸಾಲ ನೀಡಲಾಗಿದ್ದು, ಶೇ.100 ವಸೂಲಾತಿ ಆಗಿದೆ. 6.36 ಕೋಟಿ ರೂ. ಠೇವಣಿ ಸಂಗ್ರಹಣೆ ಆಗಿದೆ ಎಂದು ಅವರು ಹೇಳಿದರು.


ಸಂಘದ ನಿರ್ದೇಶಕ, ಕಾನೂನು ಸಲಹೆಗಾರರೂ ಆದ ಮಂಜುನಾಥ್ ಎನ್.ಎಸ್.ಮಾತನಾಡಿ, 26.65 ಲಕ್ಷ ರೂ. ಲಾಭ ಗಳಿಸಲು ಶ್ರಮಪಟ್ಟ ಸಂಘದ ಅಧ್ಯಕ್ಷರು, ನಿರ್ದೇಶಕರು, ಸಿಬಂದಿಗಳಿಗೆ ಮತ್ತು ಸದಸ್ಯರಿಗೆ ಅಭಿನಂದನೆಗಳು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹಕಾರ ನೀಡುವಲ್ಲಿ ಸಂಘ ಸೈ ಎನಿಸಿದೆ. ಮೊಳಹಳ್ಳಿ ಶಿವರಾಯರು ಸಹಕಾರಿ ಕ್ಷೇತ್ರದ ಪಿತಾಮಹರಾಗಿದ್ದು, ಪ್ರಸಕ್ತ ಆರ್ಥಿಕ ಕ್ಷೇತ್ರದಲ್ಲಿ ದೇಶದಲ್ಲಿ ದ.ಕ.ಜಿಲ್ಲೆ 10ನೇ ಸ್ಥಾನದಲ್ಲಿದೆ ಎಂದರು. ಇನ್ನೋರ್ವ ನಿರ್ದೇಶಕ, ಎಸ್‌ಬಿಐ ನಿವೃತ್ತ ಡಿಜಿಎಂ ವಾಸು ನಾಯ್ಕ ಮಾತನಾಡಿ, ಸಹಕಾರಿಯ ಬೆಳವಣಿಗೆ ಹೇಗಿರಬೇಕೆಂಬುದನ್ನು ಪಾರದರ್ಶಕವಾಗಿ ನೀಡಿದ್ದೀರಿ. ನಾನು ಬ್ಯಾಂಕಿAಗ್ ಕ್ಷೇತ್ರದಲ್ಲಿ ಅನುಭವಿಯಾಗಿದ್ದರೂ ಇಲ್ಲಿ ಪ್ರಶ್ನೆ ಮಾಡುವಂತಹ ಯಾವುದೇ ವಿಚಾರಗಳು ಇಲ್ಲ. ಸಂಘದ ಕ್ರೆಡಿಟ್ ಡಿಪಾಸಿಟ್ ಅನುಪಾತವನ್ನು 74 ಶೇ.ಕ್ಕೆ ತಂದಿರುವ ಆಡಳಿತ ಮಂಡಳಿಯ ಕಾರ್ಯದಿಂದ ಸಂಘದಲ್ಲಿ ಯಾರು ಬೇಕಾದರೂ ಧೈರ್ಯದಿಂದ ಠೇವಣಿ ಇಡಬಹುದು ಎಂದರು.


ಉಪಾಧ್ಯಕ್ಷ ಚೋಮ ನಾಯ್ಕ ಅವರು ಉದ್ದೇಶಿತ ಕಾರ್ಯಯೋಜನೆಯ ಮಾಹಿತಿ ನೀಡಿದರು. ನಿರ್ದೇಶಕರಾದ ಶಿವಪ್ಪ ನಾಯ್ಕ, ರಾಮ ನಾಯ್ಕ, ರಾಮಕೃಷ್ಣ ನಾಯ್ಕ, ಕುಸುಮ, ರಾಮಚಂದ್ರ ನಾಯ್ಕ ಅವರು ವಿವಿಧ ವಿಷಯಗಳನ್ನು ಮಂಡಿಸಿದರು. ಗೋಪಾಲ ನಾಯ್ಕ ದೊಡ್ಡೇರಿ ಸುಳ್ಯ ಹಾಗೂ ಇನ್ನಿತರ ಸದಸ್ಯರು ಸಲಹೆ, ಸೂಚನೆ ನೀಡಿದರು.

ಕಾರ್ಯನಿರ್ವಹಣಾಽಕಾರಿ ನಂದಿತ್ ಬಿ. ನಾಯ್ಕ ವರದಿ ಮಂಡಿಸಿದರು. ನಿರ್ದೇಶಕ ಸುಂದರ ನಾಯ್ಕ ಸ್ವಾಗತಿಸಿದರು. ನಿರ್ದೇಶಕ ಪೂವಪ್ಪ ನಾಯ್ಕ ಕುಂಞಕುಮೇರ್ ವಂದಿಸಿದರು. ಸಿಬ್ಬಂದಿ ಮಮತಾ ಹೆಚ್. ಪ್ರಾರ್ಥಿಸಿದರು. ಸಿಬ್ಬಂದಿ ಜಯ ಹಾಗೂ ಇತರರು ಸಹಕರಿಸಿದರು.

ಮುರುಂಗಿ ಸಾಜ ನಾರಾಯಣ ನಾಯ್ಕರಿಗೆ ಸನ್ಮಾನ
ಬಲ್ನಾಡು ಮುರುಂಗಿ ಸಾಜ ನಿವಾಸಿ ತಿಮ್ಮ ನಾಯ್ಕ ಮತ್ತು ದಿ.ಲಲಿತಾ ದಂಪತಿಯ ಪುತ್ರ, 15 ವರ್ಷ ಆಯುರ್ವೇದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ಇದೀಗ ಪಂಚಕರ್ಮ ರೀತಿಯಲ್ಲಿ ಪಾರ್ಶ್ವವಾಯು, ಸೊಂಟ, ಮಂಡಿನೋವುಗಳಿಗೆ ಚಿಕಿತ್ಸೆ ನೀಡುತ್ತಿರುವ ನಾರಾಯಣ ನಾಯ್ಕ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇವರು ಬೆಳಗ್ಗಿನ ಜಾವ ವಿವಿಧ ಪತ್ರಿಕೆ ವಿತರಣೆ ಕೆಲಸ, ಶಾಲಾ ಮಕ್ಕಳ ಟ್ರಿಪ್, ಬಳಿಕ ಕೃಷಿಯ ಜೊತೆಗೆ ಕೋಳಿ ಸಾಕಾಣಿಕೆ ವೃತ್ತಿಯನ್ನು ಮಾಡುತ್ತಿದ್ದಾರೆ. ಇವರ ಪತ್ನಿ ಪ್ರೇಮ, ವ್ಯಾಸಂಗ ಮಾಡುತ್ತಿರುವ ಮೂವರು ಪುತ್ರಿಯರು ಇವರಿಗೆ ಸಹಕಾರ ನೀಡುತ್ತಿದ್ದಾರೆ. ಇವರನ್ನು ಸಂಘದ ಹಿರಿಯ ನಿರ್ದೇಶಕ ಸುಂದರ ನಾಯ್ಕ ಅವರು ಆಡಳಿತ ಮಂಡಳಿಯ ಪರವಾಗಿ ಸನ್ಮಾನಿಸಿದರು.

4 ಚಕ್ರದ ವಾಹನ ಸಾಲಕ್ಕೆ ಶೇ.11.5, ಚಿನ್ನಾಭರಣ ಮೇಲಿನ ಸಾಲಕ್ಕೆ ಶೇ.10.5 ಬಡ್ಡಿ ವಿಧಿಸಲಾಗುವುದು. ಠೇವಣಾತಿಗಳನ್ನು ಅವಧಿಗೆ ಮುಂಚಿತವಾಗಿ ಹಿಂಪಡೆದರೇ ಶೇ.1 ಮಾತ್ರ ಕಡಿತ ಮಾಡಲಾಗುವುದು.
-ಶೀನ ನಾಯ್ಕ್, ಅಧ್ಯಕ್ಷರು

LEAVE A REPLY

Please enter your comment!
Please enter your name here