







ಪುತ್ತೂರು: ಪರಿಸರ ಸಂರಕ್ಷಣೆ, ಗಿಡಮರಗಳನ್ನು ಬೆಳೆಸುವುದು ಹಾಗೂ ಅರಣ್ಯನಾಶವನ್ನು ತಡೆಯುವುದು ವನಮಹೋತ್ಸವ ಆಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಲಿಟ್ಲ್ ಫ್ಲವರ್ ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಪುತ್ತೂರು ಸರ್ಕಾರಿ ತಾಲೂಕು ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಯದುರಾಜ್ ಹೇಳಿದರು.


ಲಿಟ್ಲ್ ಫ್ಲವರ್ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಕಬ್ ಹಾಗೂ ಬುಲ್ಬುಲ್ ದಳದ ವತಿಯಿಂದ ಆ. 11ರಂದು ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಿಟ್ಲ್ ಫ್ಲವರ್ ಶಾಲೆಯು ಪುತ್ತೂರು ಹಾಗೂ ಸುತ್ತಮುತ್ತಲಿನ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣದ ಅವಕಾಶ ಕಲ್ಪಿಸುತ್ತಿದ್ದು, ಶತಮಾನೋತ್ಸವದ ಹೊಸ್ತಿಲಿಗೆ ತಲುಪಿರುವುದು ಹೆಮ್ಮೆಯ ವಿಚಾರವಾಗಿದೆ.



ಈ ಶಾಲೆಯಲ್ಲಿ ಕಳೆದ ನನ್ನ ಬಾಲ್ಯದ ನೆನಪುಗಳು ಇನ್ನೂ ಅಚ್ಚಳಿಯದೆ ಉಳಿದಿವೆ. ವನಮಹೋತ್ಸವದ ಮೂಲಕ ಈ ಶಾಲೆ ಹಿಂದಿನಿಂದಲೂ ಗಿಡಗಳನ್ನು ವಿತರಿಸುತ್ತಾ ಬಂದಿದೆ. ಇಂದು ಗಿಡಗಳನ್ನು ನೆಟ್ಟರೆ ಮುಂದಿನ ದಿನಗಳಲ್ಲಿ ಅದರ ಪ್ರಯೋಜನಗಳನ್ನು ಪಡೆಯಬಹುದು. ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವೂ ಇದಾಗಿದೆ. ಪರಿಸರವನ್ನು ರಕ್ಷಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಮುಖ್ಯ ಅತಿಥಿ ಪುತ್ತೂರು ಕುಲಾಲ್ ಸೇವಾ ಸಂಘದ ಅಧ್ಯಕ್ಷ ಶೇಶಪ್ಪ ಕುಲಾಲ್ ಮಾತನಾಡಿ, ಗಿಡಮರಗಳಿಂದ ನಾವು ಅನೇಕ ಪ್ರಯೋಜನಗಳನ್ನು ಪಡೆಯುತ್ತೇವೆ. ಹೀಗಾಗಿ ಪ್ರತಿಯೊಬ್ಬರೂ ಅವುಗಳನ್ನು ರಕ್ಷಿಸುವ ಜವಾಬ್ದಾರಿ ಹೊಂದಬೇಕು. ಭಾರತದ ಭವಿಷ್ಯವಾಗಿರುವ ಇಂದಿನ ಮಕ್ಕಳು ಈಗಿನಿಂದಲೇ ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಪರಿಸರ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಹಿರಿಯ ವಿದ್ಯಾರ್ಥಿ ಪುತ್ತೂರು ಸುದ್ದಿ ಬಿಡುಗಡೆ ಮತ್ತು ಸುದ್ದಿ ಮೀಡಿಯಾದ ಸಿಇಒ ಸೃಜನ್ ಊರುಬೈಲು ಮಾತನಾಡಿ, ಜಗತ್ತಿನಾದ್ಯಂತ ಸಂಸ್ಥೆಗಳು ಬೆಳೆಯಲು ತಂತ್ರಜ್ಞಾನಗಳಲ್ಲಿ ಅನೇಕ ಅವಕಾಶಗಳಿದ್ದು, ಆ ಹಿನ್ನೆಲೆಯಲ್ಲಿ ಸುದ್ದಿ ಸಮೂಹ ಸಂಸ್ಥೆಗಳು ಮೀಡಿಯಾ ಹೌಸ್ ಪ್ರಾರಂಭಿಸಿದೆ ಎಂದು ಹೇಳಿ ಮೀಡಿಯಾ ಹೌಸ್ನ ಉದ್ದೇಶ ಹಾಗೂ ಒಡಂಬಡಿಕೆ ಬಗ್ಗೆ ವಿವರಿಸಿದರು. ಲಿಟ್ಲ್ ಫ್ಲವರ್ ಶಾಲೆ ಎಂದರೆ ಅದೊಂದು ರೀತಿಯ ಭಾವನಾತ್ಮಕ ಸಂಬಂಧ. ಈ ಶಾಲೆಯೊಂದಿಗಿನ ಸಂಬಂಧ ಬೇರೆಲ್ಲೂ ಸಿಗಲಿಲ್ಲ. ಈಗಲೂ ಶಾಲೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಕಾರ್ಯಕ್ರಮದಲ್ಲಿ ವಿತರಿಸಿದ ಗಿಡವನ್ನು ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ನೆಟ್ಟು, ಅದನ್ನು ಕಾಳಜಿಯಿಂದ ಪೋಷಿಸಬೇಕು ಎಂದು ಸಲಹೆ ನೀಡಿದರು.
ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ನಗರಸಭೆಯ ಮಾಜಿ ಸದಸ್ಯ ಮುಖೇಶ್ ಕೆಮ್ಮಿಂಜೆ ಮಾತನಾಡಿ, ಶ್ರೀಮಂತರಿಗೆ ಮಾತ್ರ ಶಿಕ್ಷಣ ಸೀಮಿತವಾಗಿದ್ದ ಕಾಲದಲ್ಲಿ ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಅನೇಕ ಕಡೆಗಳಲ್ಲಿ ಶಾಲೆಗಳು ಆರಂಭಗೊಂಡವು. ಈ ಪೈಕಿ ಶತಮಾನೋತ್ಸವದ ಹೊಸ್ತಿಲಲ್ಲಿರುವ ಲಿಟ್ಲ್ ಫ್ಲವರ್ ಸಂಸ್ಥೆಯೂ ಒಂದು. ಇಲ್ಲಿ ವಿದ್ಯಾಭ್ಯಾಸ ಮಾಡಿದ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅನೇಕರು ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದಾರೆ ಎಂದರು.
ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮನೆ, ಫ್ಲಾಟ್ ಸೇರಿದಂತೆ ವಿವಿಧ ಕಟ್ಟಡಗಳ ನಿರ್ಮಾಣವೂ ಹೆಚ್ಚುತ್ತಿದೆ. ಕಟ್ಟಡ ನಿರ್ಮಾಣಕ್ಕಾಗಿ ಮರಗಳನ್ನು ಕಡಿದಾಗ, ಮತ್ತೊಂದೆಡೆ ಗಿಡಗಳನ್ನು ನೆಡುವ ಕಾರ್ಯವನ್ನೂ ಮಾಡಬೇಕು. ಆಗ ಮಾತ್ರ ಪರಿಸರ ಸಮತೋಲನವನ್ನು ಕಾಪಾಡಲು ಸಾಧ್ಯ. ಪರಿಸರ ಮಾಲಿನ್ಯ ಸೇರಿದಂತೆ ಪ್ರಕೃತಿಗೆ ನಾವು ಮಾಡುತ್ತಿರುವ ಹಾನಿಯನ್ನು ನಿಲ್ಲಿಸಬೇಕು ಎಂದು ಹೇಳಿದರು.
ಸಂಸ್ಥೆಯ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್. ಮಾತನಾಡಿ, ಪ್ರತಿದಿನ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರವನ್ನು ಬೆಳೆಸುವ ಕಾರ್ಯ ನಡೆಯಬೇಕು. ನಾವು ಸೇವಿಸುವ ಆಮ್ಲಜನಕ ಗಿಡಮರಗಳಿಂದ ಲಭಿಸುತ್ತದೆ. ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಣ್ಣುಗಳನ್ನೂ ಪರಿಸರ ನಮಗೆ ನೀಡುತ್ತದೆ. ಹೀಗಾಗಿ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಶುಭ ಹಾರೈಸಿದರು.
ಹಿರಿಯ ವಿದ್ಯಾರ್ಥಿನಿ ಹಾಗೂ ಟಿಸಿಎಸ್ ಕಂಪನಿಯ ಸುಮಾ ಮಾತನಾಡಿ, ಗಿಡವನ್ನು ನೆಟ್ಟರೆ ಮಾತ್ರ ಸಾಲದು. ಅದನ್ನು ನಿರಂತರವಾಗಿ ಪೋಷಿಸುವುದರ ಜೊತೆಗೆ ಅದರ ಬೆಳವಣಿಗೆಯನ್ನು ಗಮನಿಸಬೇಕು. ಸ್ನೇಹಿತರಿಗೆ ತೋರುವ ಪ್ರೀತಿಯನ್ನು ಗಿಡಗಳ ಮೇಲೂ ತೋರಿಸಬೇಕು. ಆಗ ಪರಿಸರ ಸಂರಕ್ಷಣೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡುತ್ತದೆ ಎಂದರು.
ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ವಿನಯ್ ಸುವರ್ಣ, ಸುದ್ದಿ ಮೀಡಿಯಾ ವಿಭಾಗದ ಉಮೇಶ್ ಮಿತ್ತಡ್ಕ, ಹಿರಿಯ ವಿದ್ಯಾರ್ಥಿ ಹಾಗೂ ಪ್ರೊ. ವಿಫಿಕ್ಸ್ ಕಂಪ್ಯೂಟರ್ಸ್ ಮತ್ತು ಸಿಸಿಟಿವಿಯ ದಕ್ಷಿತ್ ಎಸ್.ಎಂ. ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಐರಿನ್ ವೇಗಸ್ ಮಾತನಾಡಿ, ಗಿಡಮರಗಳಿಲ್ಲದಿದ್ದರೆ ಜೀವಸಂಕುಲಗಳು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಹಣ್ಣು, ಹೂವುಗಳಿರುವಲ್ಲಿ ಪಕ್ಷಿಗಳನ್ನೂ ಕಾಣಬಹುದು. ಪ್ರಕೃತಿಯ ಈ ಸೊಬಗನ್ನು ವೀಕ್ಷಿಸುವ ಅವಕಾಶವೂ ದೊರೆಯುತ್ತದೆ. ಹಿಂದೆ ನಾವು ಉತ್ತಮ ಪರಿಸರದ ವಾತಾವರಣದಲ್ಲಿ ಕಾಲ ಕಳೆದಿದ್ದೇವೆ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ನಾವು ಹೊರಸೂಸುವ ಇಂಗಾಲದ ಡೈಆಕ್ಸೈಡ್ ಅನ್ನು ಮರಗಳು ಹೀರಿಕೊಂಡು ನಮಗೆ ಆಮ್ಲಜನಕವನ್ನು ನೀಡುತ್ತವೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಡುವ ಮೂಲಕ ಶುದ್ಧ ಗಾಳಿ ಹಾಗೂ ಉತ್ತಮ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೊಡುಗೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸ್ಕೌಟ್-ಗೈಡ್ ವಿದ್ಯಾರ್ಥಿಗಳು ಸ್ಕೌಟ್-ಗೈಡ್ ಹಾಗೂ ಪರಿಸರ ಗೀತೆಗಳನ್ನು ಹಾಡಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ನಯನ ಮಲ್ಯ ವಂದಿಸಿದರು. ವಿದ್ಯಾರ್ಥಿಗಳ ಪೋಷಕರು, ರಕ್ಷಕ ಶಿಕ್ಷಕ ಸಂಘದ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಲಿಟ್ಲ್ ಫ್ಲವರ್ ಜೊತೆ ಮೀಡಿಯಾ ಹೌಸ್ ಒಡಂಬಡಿಕೆ

ಸುದ್ದಿ ಮತ್ತು ಲಿಟ್ಲ್ ಫ್ಲವರ್ ಮಧ್ಯೆ `ಮೀಡಿಯಾ ಹೌಸ್’ನ ಒಡಂಬಡಿಕೆ ನಡೆದಿದ್ದು, ಕಾರ್ಯಕ್ರಮದಲ್ಲಿ ಸಂಸ್ಥೆಗಳ ಲೋಗೋಗಳನ್ನು ಪರಸ್ಪರ ವಿನಿಮಯ ಮಾಡುವ ಮೂಲಕ ಮೀಡಿಯಾ ಹೌಸ್ಗೆ ಚಾಲನೆ ನೀಡಲಾಯಿತು. ಇದೇ ವೇಳೆ ಭ್ರಷ್ಟಾಚಾರದ ವಿರುದ್ಧದ ಸುದ್ದಿ ಆಂದೋಲನದ ಫಲಕ ನೀಡಿ ಪ್ರತಿಜ್ಞೆ ಮಾಡಲಾಯಿತು.











