ಸೇಡಿಯಾಪು: ರಸ್ತೆ ಬದಿ ಮಣ್ಣಿನಲ್ಲಿ ಹೂತು ವಾಲಿದ ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್ -ಪ್ರಯಾಣಿಕರು ಅಪಾಯದಿಂದ ಪಾರು – ಕಾಮಗಾರಿ ಸ್ಥಳದಲ್ಲಿ ಮುನ್ಸೂಚನಾ ಫಲಕ, ರಿಫ್ಲೆಕ್ಟರ್ ಅಳವಡಿಸದಿರುವುದಕ್ಕೆ ಸ್ಥಳೀಯರ ಆಕ್ರೋಶ

0

ಪುತ್ತೂರು: ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್‌ವೊಂದು ರಸ್ತೆ ಬದಿಯ ಮಣ್ಣಿನಲ್ಲಿ ಹೂತು ವಾಲಿ ನಿಂತ ಘಟನೆ ಆ.11ರ ರಾತ್ರಿ ಪುತ್ತೂರು–ಉಪ್ಪಿನಂಗಡಿ ರಸ್ತೆಯ ಸೇಡಿಯಾಪು ಬಳಿ ನಡೆದಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್ ಪುತ್ತೂರು ಬಸ್ ನಿಲ್ದಾಣದಿಂದ ರಾತ್ರಿ ಬೆಂಗಳೂರಿನತ್ತ ತೆರಳುತ್ತಿತ್ತು. ಸೇಡಿಯಾಪು ಬಳಿ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಎದುರಿನಿಂದ ಬಂದ ವಾಹನಕ್ಕೆ ದಾರಿ ಮಾಡಿಕೊಡಲು ಬಸ್‌ನ್ನು ಬದಿಗೆ ಸರಿಸಿದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.ರಸ್ತೆ ಬದಿಗೆ ತೆರಳಿದ ಬಸ್‌ ಚಕ್ರಗಳು ಗಟ್ಟಿಯಾಗಿರದ ಮಣ್ಣಿನಲ್ಲಿ ಹೂತುಹೋಗಿದ್ದು, ಬಸ್‌ ಒಂದು ಬದಿಗೆ ವಾಲಿ ನಿಂತಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

ಮುನ್ಸೂಚನಾ ಫಲಕ, ರಿಫ್ಲೆಕ್ಟರ್ ಇಲ್ಲ:
ಸೇಡಿಯಾಪು ಬಳಿ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದ್ದರೂ, ರಾತ್ರಿ ವೇಳೆ ವಾಹನ ಸವಾರರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಸೂಕ್ತ ಮುನ್ಸೂಚನಾ ಫಲಕಗಳು ಹಾಗೂ ರಿಫ್ಲೆಕ್ಟರ್‌ಗಳನ್ನು ಅಳವಡಿಸಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

ರಸ್ತೆ ಬದಿಯಲ್ಲಿ ಗಟ್ಟಿಯಾದ ಮಣ್ಣು ಹಾಕದೆ ಕಾಮಗಾರಿ ನಡೆಸಿರುವುದರಿಂದ ಎದುರಿನಿಂದ ವಾಹನಗಳು ಬಂದಾಗ ಸೈಡ್ ನೀಡುವ ಸಂದರ್ಭದಲ್ಲಿ ವಾಹನಗಳು ಮಣ್ಣಿನಲ್ಲಿ ಹೂತುಹೋಗುವ ಅಥವಾ ಅಪಘಾತಕ್ಕೀಡಾಗುವ ಸಾಧ್ಯತೆ ಇದೆ. ಕಾಮಗಾರಿ ಸ್ಥಳದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ರಾತ್ರಿ ವೇಳೆ ಇಂತಹ ಘಟನೆಗಳು ಮರುಕಳಿಸುವ ಆತಂಕವಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ರಾತ್ರಿ ಸಂಚಾರಕ್ಕೆ ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಸೂಕ್ತ ಸೂಚನಾ ಫಲಕ ಹಾಗೂ ರಿಫ್ಲೆಕ್ಟರ್‌ಗಳನ್ನು ಅಳವಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here