ಬೆಟ್ಟಂಪಾಡಿ ಸರ್ಕಾರಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ

0

“ಓದು ಬದುಕನ್ನು ಬದಲಾಯಿಸಬಲ್ಲದು” – ಡಾ. ಗೋವಿಂದ ಪ್ರಸಾದ್ ಕಜೆ.

ನಿಡ್ಪಳ್ಳಿ; ಬೆಟ್ಟಂಪಾಡಿ ಸರ್ಕಾರಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಆಗಸ್ಟ್ 12 ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ವಿದ್ಯಾರ್ಥಿಗಳು ಪುಷ್ಪನಮನ ಸಲ್ಲಿಸಿದರು.

   ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ಗೋವಿಂದ ಪ್ರಸಾದ್ ಕಜೆ ಅವರು “ಓದು ಬದುಕನ್ನು ಬದಲಾಯಿಸಬಲ್ಲದು” ಎಂಬ ವಿಷಯದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಓದಿನತ್ತ ತಮ್ಮ ಮನಸ್ಸನ್ನು ಕೇಂದ್ರೀಕರಿಸಿದರೆ, ಅದು ಅವರ ಜೀವನದ ದಿಕ್ಕನ್ನೇ ಬದಲಾಯಿಸಬಲ್ಲದು. ಪ್ರತಿಯೊಬ್ಬರ ಜೀವನದಲ್ಲಿ ಒಂದು ಗುರಿ ಇರುತ್ತದೆ. ಆ ಗುರಿಯನ್ನು ಸಾಧಿಸುವಲ್ಲಿ ಓದು ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಂಡು ನಿರಂತರವಾಗಿ ಜ್ಞಾನಾರ್ಜನೆಯಲ್ಲಿ ತೊಡಗಿದರೆ, ತಮ್ಮ ಗುರಿ ಈಡೇರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ತಿಳಿಸಿದರು.

  ಮುಖ್ಯ ಅತಿಥಿಗಳಾಗಿ ಆಗಮಿಸಿದ ನಳಂದ  ಕಾಲೇಜು, ಪೆರ್ಲ ಇಲ್ಲಿನ ಹಿರಿಯ ಗ್ರಂಥಪಾಲಕಿ  ರೇಣುಕಾ ಪಿ ಅವರು ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಗೆ ವಿದ್ಯಾರ್ಥಿಗಳು ದಾಸರಾಗಬಾರದು. ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆಗೆ ಮಿತಿ ವಿಧಿಸಿ, ಪುಸ್ತಕ ಓದುವಿಕೆಯತ್ತ ಹೆಜ್ಜೆ ಹಾಕಬೇಕು. ಪುಸ್ತಕಗಳು ನೀಡುವ ಜ್ಞಾನ ಮತ್ತು ಅನುಭವವು ಜೀವನದ ಪ್ರತಿಯೊಂದು ಹಂತದಲ್ಲಿಯೂ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.

  ಕಾಲೇಜಿನ ಪ್ರಾಂಶುಪಾಲ ಫ್ರೊ.ದಾಮೋದರ ಕಣಜಾಲು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೈಯಕ್ತಿಕ ಬೆಳವಣಿಗೆಯಲ್ಲಿ ಗ್ರಂಥಾಲಯದ ಮಹತ್ವವನ್ನು ವಿವರಿಸಿದರು. ಗ್ರಂಥಾಲಯವು ಕೇವಲ ಪುಸ್ತಕಗಳ ಸಂಗ್ರಹದ ಸ್ಥಳವಲ್ಲ; ಅದು ಜ್ಞಾನ, ಚಿಂತನೆ, ಸಂಶೋಧನೆ ಹಾಗೂ ವ್ಯಕ್ತಿತ್ವ ವಿಕಸನದ ಕೇಂದ್ರವಾಗಿದೆ. ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗ ಪಡೆದುಕೊಂಡು ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

  ಕಾಲೇಜಿನ ಗ್ರಂಥಪಾಲಕ ರಾಮ ಕೆ. ಅವರು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ, ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದು, ಗ್ರಂಥಾಲಯದ ಸದ್ಬಳಕೆಯ ಬಗ್ಗೆ ಅರಿವು ಮೂಡಿಸುವುದು ಹಾಗೂ ಪುಸ್ತಕಗಳೊಂದಿಗೆ ವಿದ್ಯಾರ್ಥಿಗಳ ನಂಟನ್ನು ಗಟ್ಟಿಗೊಳಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಫಲಾನಾಧಿಕಾರಿ ಡಾ. ಸುಬ್ರಮಣ್ಯ ಕೆ, IQAC ಸಂಚಾಲಕ ಪ್ರೊ. ರಾಮಚಂದ್ರ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಕಾಲೇಜಿನ ಗ್ರಂಥಾಲಯದಲ್ಲಿ ವಿವಿಧ ವಿಷಯಗಳ ಪುಸ್ತಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

   ದ್ವಿತೀಯ ಬಿ. ಕಾಂ ವಿದ್ಯಾರ್ಥಿನಿಯರಾದ ಅನಿತಾ, ಅಕ್ಷತಾ ಹಾಗೂ ತನುಶ್ರೀ ಅವರು ಪ್ರಾರ್ಥಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಹರ್ಷಿತಾ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರೊ. ರಾಮಚಂದ್ರ ಡಿ. ಅವರು ವಂದಿಸಿದರು.

  ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿಭಾಗಗಳ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

“ಇಂದು ಓದುಗ – ನಾಳೆ ನಾಯಕ” ಎಂಬ ಆಶಯದೊಂದಿಗೆ ನಡೆದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯು ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ, ಜ್ಞಾನಾರ್ಜನೆಯ ಆಸಕ್ತಿ ಹಾಗೂ ಗ್ರಂಥಾಲಯದ ಸದ್ಬಳಕೆಯ ಕುರಿತು ಹೊಸ ಚೈತನ್ಯ ಮೂಡಿಸುವ ಮೂಲಕ ಯಶಸ್ವಿಯಾಗಿ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here