






ನೆಲ್ಯಾಡಿ:ಅಪ್ರಾಪ್ತೆಯೊಂದಿಗೆ ಹಾಸನ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಕಳ ಮೂಲದ ವ್ಯಕ್ತಿಯೊಬ್ಬರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಆ.11ರಂದು ರಾತ್ರಿ ನಡೆದಿದೆ.ಘಟನೆಗೆ ಸಂಬಂಧಿಸಿ ಹಲ್ಲೆಗೊಳಗಾದ ವ್ಯಕ್ತಿ ನೀಡಿದ ದೂರಿನ ಮೇರೆಗೆ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಪ್ರತಿದೂರು ದಾಖಲಾಗಿದೆ.


-ಬ್ರಿಕೇಶನ್ ಕೆಲಸ ಮಾಡುತ್ತಿದ್ದ ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರು ನಿವಾಸಿ ಶೈಕ್ ಮುಕ್ತಾರ್ (50ವ.)ಎಂಬವರು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ ನಡೆಯುತ್ತಿದ್ದ ಕೆಲಸವನ್ನು ವೀಕ್ಷಿಸಲೆಂದು ಆ.11ರಂದು ರಾತ್ರಿ ಸುಮಾರು 9 ಗಂಟೆಗೆ ಹೊಸ್ಮಾರಿನಿಂದ ಕಾರಿನಲ್ಲಿ ಹೊರಟಿದ್ದು,ಅವರ ಜೊತೆಗೆ ಪರಿಚಯದ ಬಾಲಕಿಯೊಬ್ಬರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.ಕಾರು ರಾತ್ರಿ ಸುಮಾರು 11 ಗಂಟೆ ವೇಳೆಗೆ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿಗೆ ತಲುಪಿದಾಗ ಅಪರಿಚಿತ ವ್ಯಕ್ತಿಗಳ ಗುಂಪೊಂದು ಕಾರನ್ನು ತಡೆದು ನಿಲ್ಲಿಸಿ ಕಾರಿನಲ್ಲಿದ್ದ ಬಾಲಕಿಯ ಕುರಿತು ವಿಚಾರಿಸಿ, ಶೈಕ್ ಮುಕ್ತಾರ್ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಘಟನೆ ಕುರಿತು ಶೇಕ್ ಮುಕ್ತಾರ್ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



“ ಆ.11ರಂದು ರಾತ್ರಿ ತನ್ನ ಪರಿಚಯಸ್ಥರೊಬ್ಬರ ಅಪ್ರಾಪ್ತ ಪ್ರಾಯದ ಮಗಳನ್ನು ಕರೆದುಕೊಂಡು ಹಾಸನ ಕಡೆಗೆ ಕಾರಿನಲ್ಲಿ ತೆರಳುತ್ತಾ, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕೊಕ್ಕಡ ಕಾಪಿನಬಾಗಿಲು ಎಂಬಲ್ಲಿಗೆ ತಲುಪಿದಾಗ, ಅಲ್ಲಿ ಸೇರಿದ್ದ ಕೆಲವು ಜನರ ಗುಂಪು ತನ್ನ ಕಾರನ್ನು ತಡೆದು ನಿಲ್ಲಿಸಿ, ಕಾರಿನಲ್ಲಿದ್ದ ಅಪ್ರಾಪ್ತ ಬಾಲಕಿಯ ಬಗ್ಗೆ ವಿಚಾರಿಸಿ, ನನಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿರುತ್ತಾರೆ” ಎಂಬುದಾಗಿ ಆರೋಪಿಸಿ ಶೈಕ್ ಮುಕ್ತಾರ್ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 189(2), 191(2), 126(2), 353(2), 352, 115(2) ಜೊತೆಗೆ 190 BNS ರಂತೆ ಪ್ರಕರಣ(ಅ.ಕ್ರ.106/2026) ದಾಖಲಿಸಿಕೊಂಡಿದ್ದಾರೆ.ಘಟನೆಗೆ ಸಂಬಂಧಿಸಿ ಆರೋಪಿಗಳಾದ ಧನುಷ್ ಕೊಕ್ಕಡ (23ವ),ದಿನೇಶ್ ಚಾರ್ಮಾಡಿ (45ವ),ಪೂರ್ಣಕ್ಷ ಬಿ ಪುದುವೆಟ್ಟು (40ವ),ಸೂರಜ್ ಕೊಕ್ಕಡ (25ವ) ಮತ್ತು ರಂಜಿತ್ ಬಂಡಾರಿ ಕೊಕ್ಕಡ (29ವ) ಎಂಬವರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಲಕಿ ತಾಯಿಯಿಂದ ಪ್ರತಿದೂರು:
ಸದ್ರಿ ಘಟನೆಗೆ ಸಂಬಂಧಿಸಿದಂತೆ, ತನ್ನ ಮಗಳನ್ನು ಆರೋಪಿ ಶೇಕ್ ಮುಕ್ತಾರ್ (52ವ.)ಎಂಬಾತ ಬಲವಂತವಾಗಿ ಆತನ ಕಾರಿನಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗಿರುತ್ತಾನೆ ಎಂಬುದಾಗಿ ಆರೋಪಿಸಿ ಅಪ್ರಾಪ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 137(2)ಬಿಎನ್ಎಸ್ರಂತೆ ಪ್ರಕರಣ( ಅ.ಕ್ರ.ಝೀರೋ ಎಫ್ಐಆರ್ 03/2026)ದಾಖಲಿಸಿಕೊಳ್ಳಲಾಗಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.










