






ಮಂಗಳೂರು:ರಾಜ್ಯದಲ್ಲಿ ತಂಬಾಕು ನಿಷೇಧ ಜಾರಿ ಹಿನ್ನೆಲೆಯಲ್ಲಿ, ಅಡಕೆ ಬೆಳೆಗಾರರು ಬಲಿಪಶು ಆಗದಂತೆ ತಂಬಾಕು ನಿಷೇಧ ಜಾರಿಯಲ್ಲಿ ಸ್ಪಷ್ಟ ಚೌಕಟ್ಟು ರಚಿಸುವಂತೆ ಅಂತರ್ರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೋ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.


ಸಾರ್ವಜನಿಕ ಆರೋಗ್ಯ ಸಂರಕ್ಷಣೆಯ ಸರ್ಕಾರದ ಉದ್ದೇಶವನ್ನು ಕ್ಯಾಂಪ್ಕೊ ಗೌರವಿಸುತ್ತದೆ ಹಾಗೂ ನಿಷೇಧಿತ ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ವಿರುದ್ಧ ಪರಿಣಾಮಕಾರಿ ಜಾರಿ ಕ್ರಮದ ಅಗತ್ಯವನ್ನೂ ಒಪ್ಪಿಕೊಳ್ಳುತ್ತದೆ.ಆದರೆ ಅದೇ ಸಮಯದಲ್ಲಿ, ಈ ಅಧಿಸೂಚನೆಯ ಜಾರಿಯು ಅಡಕೆ ಬೆಳೆಗಾರರ ಹಾಗೂ ಕಾನೂನುಬದ್ಧ ಅಡಕೆ ವ್ಯಾಪಾರದ ಹಿತಾಸಕ್ತಿಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆ ಉಂಟು ಮಾಡದಂತೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಕ್ಯಾಂಪ್ಕೊ ಸಂಸ್ಥೆಯು ಆಗ್ರಹಿಸಿದೆ.
ಈ ಕುರಿತು ಮಾತನಾಡಿದ ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು, ಅಡಕೆಯು ಕರ್ನಾಟಕ ಮತ್ತು ದೇಶದ ಇತರ ಭಾಗಗಳ ಅಸಂಖ್ಯಾತ ರೈತರ ಜೀವನೋಪಾಯಕ್ಕೆ ಆಧಾರವಾಗಿರುವ ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ.ಸರ್ಕಾರದ ಸಾರ್ವಜನಿಕ ಆರೋಗ್ಯ ಉದ್ದೇಶ ಹಾಗೂ ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ವಿರುದ್ಧದ ಕ್ರಮವನ್ನು ಕ್ಯಾಂಪ್ಕೊ ಗೌರವಿಸುತ್ತದೆ.ಆದರೆ, ಒಂದು ಕೃಷಿ ಉತ್ಪನ್ನವಾಗಿ ಅಡಕೆ ಹಾಗೂ ತಂಬಾಕು-ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ನಡುವೆ ಸ್ಪಷ್ಟ ವ್ಯತ್ಯಾಸವಿರಬೇಕು.ಈ ಅಽಸೂಚನೆಯ ಜಾರಿ ಕ್ರಮವು ನಿಷೇಽತ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿರತಕ್ಕದ್ದೇ ಹೊರತು, ಅಡಕೆ ಬೆಳೆಗಾರರಿಗೆ ಅಥವಾ ಕಾನೂನುಬದ್ಧ ಅಡಕೆ ವ್ಯಾಪಾರಕ್ಕೆ ಯಾವುದೇ ಅನಪೇಕ್ಷಿತ ಪರಿಣಾಮ ಬೀರಬಾರದು ಎಂದು ಆಗ್ರಹಿಸಿದ್ದಾರೆ.



ಅಡಕೆ ಬೆಳೆಗಾರರು ತಮ್ಮ ಕೃಷಿ ಉತ್ಪನ್ನದ ದುರ್ಬಳಕೆ ಅಥವಾ ಇತರರಿಂದ ಆಗುವ ಬಳಕೆಯ ಪರಿಣಾಮಗಳಿಗೆ ಹೊಣೆಗಾರರಾಗಬಾರದು ಎಂದು ಅವರು ಸ್ಪಷ್ಟಪಡಿಸಿದರು.
ಅಡಕೆ ವಲಯವು ಕರ್ನಾಟಕದ ಆರ್ಥಿಕತೆಗೆ ನೀಡುತ್ತಿರುವ ಗಣನೀಯ ಕೊಡುಗೆಯು ಸಂಸತ್ತಿನ ಮುಂದೆ ಮಂಡಿಸಲಾದ ಮಾಹಿತಿಯಲ್ಲಿಯೂ ಪ್ರತಿಫಲಿಸುತ್ತದೆ.ಸಂಸದ ಬಿ.ವೈ.ರಾಘವೇಂದ್ರ ಅವರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ಈ ಅಂಕಿ-ಅಂಶಗಳು ಒಳಗೊಂಡಿರುವ ಅವಧಿಯಲ್ಲಿ ಅಡಕೆ ಮತ್ತು ಅಡಕೆ ಆಧಾರಿತ ಉತ್ಪನ್ನಗಳ ಮಾರಾಟದಿಂದ ರಾಜ್ಯವಾರು ಅತೀ ಹೆಚ್ಚು ಜಿಎಸ್ಟಿ ಸಂಗ್ರಹಿಸಿದ ರಾಜ್ಯ ಕರ್ನಾಟಕವಾಗಿದೆ ಎಂದು ತಿಳಿಸಿದ್ದಾರೆ.ಹಣಕಾಸು ಸಚಿವಾಲಯ ನೀಡಿರುವ ವರದಿಯ ಪ್ರಕಾರ, ಕರ್ನಾಟಕದಲ್ಲಿ ಅಡಕೆ ಸಂಬಂಽತ ಜಿಎಸ್ಟಿ ಸಂಗ್ರಹ 2021-22ನೇ ಹಣಕಾಸು ವರ್ಷದಲ್ಲಿ ರೂ.172.62 ಕೋಟಿ, 2022-23ನೇ ಸಾಲಿನಲ್ಲಿ ರೂ.266.82 ಕೋಟಿ, 2023-24ನೇ ಸಾಲಿನಲ್ಲಿ ರೂ.326.57 ಕೋಟಿ, 2024-25ನೇ ಸಾಲಿನಲ್ಲಿ ರೂ.313.16 ಕೋಟಿ ಹಾಗೂ 2025-26ನೇ ಸಾಲಿನಲ್ಲಿ ರೂ.379.34 ಕೋಟಿಗಳಷ್ಟಿತ್ತು.ಇದಲ್ಲದೆ, 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕರ್ನಾಟಕ ರೂ.90.21 ಕೋಟಿ ಅಡಕೆ ಸಂಬಂಧಿತ ಜಿಎಸ್ಟಿ ಸಂಗ್ರಹಿಸಿದೆ.
ಈ ಅಂಕಿ-ಅಂಶಗಳು ಕರ್ನಾಟಕದಲ್ಲಿ ಅಡಕೆ ಹಾಗೂ ಅಡಕೆ ಆಧಾರಿತ ವ್ಯಾಪಾರದ ಗಣನೀಯ ಆರ್ಥಿಕ ಮಹತ್ವವನ್ನು ಒತ್ತಿಹೇಳುತ್ತವೆ ಹಾಗೂ ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ವಿರುದ್ಧದ ಜಾರಿ ಕ್ರಮಗಳು ಕಾನೂನುಬದ್ಧ ಅಡಕೆ ವ್ಯಾಪಾರ ಅಥವಾ ಅಡಕೆ ಬೆಳೆಗಾರರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಬಲಪಡಿಸುತ್ತವೆ.ಅಡಕೆಯ ಕೃಷಿ ಹಾಗೂ ಅದರ ಕಾನೂನುಬದ್ಧ ಮಾರುಕಟ್ಟೆ ಚಟುವಟಿಕೆಯಲ್ಲಿ ತೊಡಗಿರುವ ರೈತರ ಹಿತಾಸಕ್ತಿಗಳನ್ನು, ಸಾರ್ವಜನಿಕ ಆರೋಗ್ಯ ಕ್ರಮಗಳ ಅನುಷ್ಠಾನದ ಸಂದರ್ಭದಲ್ಲಿಯೂ ಸಮರ್ಪಕವಾಗಿ ಸಂರಕ್ಷಿಸಬೇಕಿದೆ.ಈ ನಿಟ್ಟಿನಲ್ಲಿ, ನಿಷೇಧದ ಜಾರಿಯು ಅಧಿಸೂಚನೆಯಲ್ಲಿ ಒಳಗೊಂಡಿರುವ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿರಬೇಕು ಹಾಗೂ ಅಡಕೆಯ ಕೃಷಿ ಉತ್ಪನ್ನದ ಸ್ಥಾನಮಾನ,ಅದರ ಕಾನೂನುಬದ್ಧ ಬೆಳೆಯುವಿಕೆ, ಸಂಗ್ರಹಣೆ,ಸಂಸ್ಕರಣೆ ಮತ್ತು ವ್ಯಾಪಾರದ ಮೇಲೆ ಯಾವುದೇ ಪರೋಕ್ಷ ನಿರ್ಬಂಧ ಉಂಟಾಗದಂತೆ ಖಚಿತಪಡಿಸಿಕೊಳ್ಳಬೇಕೆಂದು ಕ್ಯಾಂಪ್ಕೊ ಸಂಸ್ಥೆಯು ಸರ್ಕಾರ ಹಾಗೂ ಜಾರಿ ಅಧಿಕಾರಿಗಳನ್ನು ಒತ್ತಾಯಿಸಿದೆ.
ಅಽಸೂಚನೆಯ ಅನುಷ್ಠಾನದ ಸಂದರ್ಭದಲ್ಲಿ ಕಾನೂನುಬದ್ಧ ವ್ಯಾಪಾರಸ್ಥರಿಗೆ ಹಾಗೂ ಅಡಕೆ ಬೆಳೆಗಾರರಿಗೆ ಅನಗತ್ಯ ತೊಂದರೆ ಅಥವಾ ಗೊಂದಲ ಉಂಟಾಗದಂತೆ, ಸ್ಪಷ್ಟ ಮತ್ತು ನಿಸ್ಸಂದಿಗ್ಧ ಜಾರಿ ಚೌಕಟ್ಟನ್ನು ರೂಪಿಸಬೇಕೆಂದೂ ಕ್ಯಾಂಪ್ಕೊ ಸಂಸ್ಥೆಯು ಸರ್ಕಾರವನ್ನು ಒತ್ತಾಯಿಸಿದೆ.










