ಪ್ರೀತಿಸುವಂತೆ ಒತ್ತಾಯಿಸಿ ವಿದ್ಯಾರ್ಥಿನಿಗೆ ಕಿರುಕುಳ: ಕಡಬದಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲು

0

ಕಡಬ: ಪ್ರೀತಿಸುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ನಿರಂತರವಾಗಿ ಹಿಂಬಾಲಿಸಿ ಕಿರುಕುಳ ನೀಡಿದ್ದಲ್ಲದೆ, ಆಕೆಯ ಮನೆಯವರಿಗೆ ಕೊಲೆ ಬೆದರಿಕೆ ಹಾಗೂ ಆಕೆಯ ಸಹಪಾಠಿಯೊಬ್ಬರಿಗೂ ಹತ್ಯೆ ಬೆದರಿಕೆ ಹಾಕಿದ್ದ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ವಾಕ ಗ್ರಾಮದಲ್ಲಿ ಸಂಭವಿಸಿದ್ದು, ಆರೋಪಿಯ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಪದ್ಮನಾಭ ಎಂಬಾತನೇ ಪ್ರಕರಣದ ಆರೋಪಿಯಾಗಿದ್ದಾನೆ.


18 ವರ್ಷದ ಯುವತಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ಮನೆಗೆ ಬರುವ ಮಾರ್ಗದಲ್ಲಿ ಪದ್ಮನಾಭ ಎಂಬಾತ ನಿರಂತರವಾಗಿ ಹಿಂಬಾಲಿಸಿಕೊಂಡು ಬರುತ್ತಿದ್ದನು. ಈ ಕುರಿತು ಯುವತಿಯ ಮನೆಯವರು ಆರೋಪಿಗೆ ಎಚ್ಚರಿಕೆ ನೀಡಿದರೂ, ಆತ ತನ್ನ ವರ್ತನೆಯನ್ನು ಮುಂದುವರಿಸಿದ್ದಾನೆ ಎನ್ನಲಾಗಿದೆ. ಜುಲೈ 29ರಂದು ಯುವತಿ ಕಾಲೇಜಿನಿಂದ ಮನೆಗೆ ಬರುತ್ತಿದ್ದ ವೇಳೆ ಆರೋಪಿ ಮತ್ತೆ ಆಕೆಯನ್ನು ಹಿಂಬಾಲಿಸಿ, “ನಾನು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ, ನಾನು ಸಾಯುತ್ತೇನೆ” ಎಂದು ಯುವತಿಯ ತಾಯಿ ಹಾಗೂ ಅಕ್ಕನಿಗೆ ಕೇಳಿಸುವಂತೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಆಗಸ್ಟ್ 10ರಂದು ಮತ್ತೆ ಯುವತಿಯನ್ನು ಹಿಂಬಾಲಿಸಿ, ಆಕೆಯ ಅಕ್ಕನಿಗೆ ಕರೆ ಮಾಡಿ “ಆಕೆ ನನ್ನೊಂದಿಗೆ ಮಾತನಾಡದಿದ್ದರೆ ನಾನು ಸತ್ತು ಹೋಗುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.


BNS ಕಾಯ್ದೆಯಡಿ ಪ್ರಕರಣ
ಪ್ರೀತಿಸುವಂತೆ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಆರೋಪದ ಕುರಿತು ಯುವತಿಯ ಆಗಸ್ಟ್ 11ರಂದು ಕಡಬ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ದೂರಿನ ಆಧಾರದ ಮೇಲೆ ಕಡಬ ಪೊಲೀಸರು ಅಪರಾಧ ಸಂಖ್ಯೆ 96/2026ರಲ್ಲಿ BNS 2023ರ ಕಲಂ 78(2) ಹಾಗೂ 351(2)ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here