







ಪುತ್ತೂರು : ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘ ಮತ್ತು ಆದಿದ್ರಾವಿಡ ಯುವ ವೇದಿಕೆ ಜಂಟಿ ಆಶ್ರಯದಲ್ಲಿ ಆಟಿಡೊಂಜಿ ದಿನ ಆಚರಣೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಟಿಡೊಂಜಿ ದಿನ ಕಾರ್ಯಕ್ರಮ ಸಂತ ಫಿಲೋಮಿನಾ ಕಾಲೇಜಿನ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ಅ.16ರಂದು ನಡೆಯಿತು.


ಆದಿದ್ರಾವಿಡ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಜಯ ಜಿ ಕೆ ಕಾರೆಕಾಡ್ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು. ಶಾಸಕ ಅಶೋಕ್ ಕುಮಾರ್ ರೈಯವರು ತೆಂಗಿನ ಹಿಂಗಾರ ಅರಳಿಸೋ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ , ನಾನು ಯಾವುದೇ ಕಾರ್ಯಕ್ರಮದಲ್ಲಿ ಇದ್ದರೂ ನಿಮ್ಮ ಸಮಾಜದ ಕಾರ್ಯಕ್ರಮವನ್ನು ಮಿಸ್ ಮಾಡಿಲ್ಲವೆಂದರೇ , ನೀವುಗಳು ನನ್ನ ಬೆನ್ನಿಗೆ ನಿಂತಿರುವುದು ಕಾರಣ ಎಂದರು. ಆಟಿದ ಪುದರ್ಡ್ ಸಮಾಜನ್ ಒಟ್ಟು ಸೇರವುನ ಕೆಲಸ ಮಲ್ತಿನೆಕ್ ಅಭಿನಂದನೆಲು ಎಂದು ಹೇಳಿದ ಅವರು , ಯೇಪೊ ಮುಟ್ಟ ಜೋಕುಲೆಗ್ ಯೆಡ್ಡೆ ಶಿಕ್ಷಣ ಕೊರ್ಪುಜರಾ , ಅಡೆಮುಟ್ಟ ಕುಟುಂಬ ಅಭಿವೃದ್ಧಿ ಅಪುಜಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.




ಸರ್ಕಾರ ಕೆ ಪಿ ಎಸ್ ಮಾದರಿ ಶಾಲೆ ಮೂಲಕ ಯು ಕೆ ಜಿ ಯಿಂದ ಪಿಯು ವರೆಗೂ ಇಂಗ್ಲಿಷ್ ಶಿಕ್ಷಣ ಆರಂಭಿಸಿದ್ದು ,ಈಗಾಗಲೇ ನಾಲ್ಕು ಶಾಲೆಗಳು ಕಾರ್ಯಾರಂಭಿಸಿವೆ. ಈಗಿನ ಕಾಲಕ್ಕೆ ಇಂಗ್ಲೀಷ್ ಶಿಕ್ಷಣದ ಅವಶ್ಯಕತೆ ತುಂಬಾನೇ ಇದೆ. ಡಾಕ್ಟರ್ ,ಇಂಜಿನಿಯರ್ , ಲಾಯರ್ ಆಗಲು ಶಿಕ್ಷಣ ಸಾಲ ಕೂಡ ತ್ವರಿತವಾಗಿ ಲಭ್ಯವಿದೆ ಜೊತೆಗೆ ಮಕ್ಕಳಿಗೆ ಶಿಕ್ಷಣ ನೀಡಿದಾಗ ಅವರ ದಿನಚರಿ ,ಚಟುವಟಿಕೆ ಇವೆಲ್ಲವೂ ಬದಲಾಗಿ ಮಾದರಿ ವ್ಯಕ್ತಿಯಾಗಿ ಮಾರ್ಪಾಡುತ್ತಾರೆ ಎಂದು ಕಿವಿಮಾತು ಹೇಳಿದರು. ಸಮುದಾಯಕ್ಕೆ ಸಿಗುತ್ತಿರುವ ಸರಕಾರಿ ಸವಲತ್ತುಗಳನ್ನು ವಿವರಿಸಿದ , ಬಡವರ ಸೇವೆ ನನ್ನ ಪ್ರಥಮ ಕರ್ತವ್ಯ ಜೊತೆಗೆ ಯಾವುದೇ ಸಂದಿಗ್ಧ ಪರಿಸ್ಥಿಯಲ್ಲೂ ನಿಮ್ಮ ಶಾಸಕರು, ಜೊತೆಯಲ್ಲಿ ಇರುವೆನೆಂದು ಭರವಸೆ ಕೊಟ್ಟರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ , ಈ ಮಣ್ಣಿನ ಆಚಾರ ವಿಚಾರ ವನ್ನೆಲ್ಲಾ ಉಳಿಸಿಕೊಂಡಿರುವ ಸಮಾಜ ಆದಿದ್ರಾವಿಡ ಸಮಾಜ. ಇಲ್ಲಿನ ಆಚರಣೆ ,ಆಹಾರ ಕ್ರಮ , ವೇಷಭೂಷಣ ಉಳಿದರೆ ಅಸ್ತಿತ್ವ ಉಳಿಯಲು ಸಾಧ್ಯ. ಸಮಾಜದ ಯುವ ಜನತೆಯಲ್ಲಿರೋ ದುಶ್ಚಟ್ಟ ದೂರವಾಗಿ ಸುಂದರ ,ಸಧೃಢ ಸಮಾಜದ ರಚನೆಯಾಗಲಿಯೆಂದು ಹಾರೈಸಿದರು.
ಸಮಾಜದ ಪ್ರತಿಭಾವಂತ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಸಮುದಾಯ ವಿದ್ಯಾರ್ಥಿಗಳಾದ ದೀಪಿಕಾ ,ಸಿಂಚನಾ ,ಭೂಮಿಕಾ ,ನಂದಿತಾ ,ಪ್ರಣಾಮ್ಯ ,ನಿಶಾಂತ್ ಹಾಗೂ ಮಧುಶ್ರೀ ಮತ್ತು ನಂದಿತಾರವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸತ್ಯಸಾರಮಣಿ ಮೂಲಕ್ಷೇತ್ರ ಅಲೇರಿ ಇದರ ಅಧ್ಯಕ್ಷ ಶಿವರಾಜ್ ಪಿಬಿ, ಸಂಘದ ರಾಜ್ಯ ಕೋಶಾಧಿಕಾರಿ ರಾಜ ಚೆಂಡ್ತಿಮಾರ್, ಆದಿ ದ್ರಾವಿಡ ಸಮಾಜಸೇವಾ ಸಂಘ ಸುಳ್ಯ ಘಟಕದ ಸ್ಥಾಪಕಾಧ್ಯಕ್ಷ ಬಾಬು ಕೆ.ಎಂ, ರಾಜ್ಯ ವಕ್ತಾರ ಪ್ರೇಮನಾಥ್ ಪಿಬಿ ಬಲ್ಲಾಳ್ಭಾಗ್ ,ಆದಿ ದ್ರಾವಿಡ ಸಮಾಜ ಸೇವಾ ಸಂಘ ಸುಳ್ಯ ಘಟಕದ ಅಧ್ಯಕ್ಷ ಬಾಲಕೃಷ್ಣ ದೊಡ್ಡೇರಿ , ಪರಮೇಶ್ವರ ಸಾಲ್ಯಾನ್, ಸಂಘದ ಅಧ್ಯಕ್ಷ ಬಾಬು ಮರಿಕೆ, ಸಂಘದ ಸ್ಥಾಪಕ ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ, ಯುವ ವೇದಿಕೆ ಅಧ್ಯಕ್ಷ ಮಹೇಶ್ ಮರಿಕೆ, ಸತ್ಯ ಸಾರಮಾನಿ ಮೂಲಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಅನಿಲ್ ಕಂಕನಾಡಿ, ಪುತ್ತೂರು ತಾ. ಯುವ ವೇದಿಕೆ ಗೌರವಾಧ್ಯಕ್ಷ ಸುರೇಶ್ ಸಂಪ್ಯ ಹಾಗೂ ಪುತ್ತೂರು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಲೋಹಿತ್ ಅಮ್ಚಿನಡ್ಕ ಮತ್ತು ಯುವ ವೇದಿಕೆ ಗೌರವಾಧ್ಯಕ್ಷ ಸಾಂತಪ್ಪ ಸಜಂಕಾಡಿ ಶುಭ ಹಾರೈಸಿದರು. ಸಂಘದ ಗೌರವ ಸಲಹೆಗಾರ ಅಣ್ಣಪ್ಪ ಕಾರೆಕಾಡ್, ಸಂಘಟನಾ ಕಾರ್ಯದರ್ಶಿ ಶಶಿ ಕೆರೆಮೂಲೆ, ನಿಕಟಪೂರ್ವ ಪ್ರ. ಕಾರ್ಯದರ್ಶಿ ಅಣ್ಣು ತಿಂಗಳಾಡಿ ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಅಮ್ಚಿನಡ್ಕ ಸಹಕಾರ ನೀಡಿದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಯುವ ವೇದಿಕೆಯ ಪದಾಽಕಾರಿಗಳು, ಸಂಘದ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಯುವಕರು, ಯುವತಿಯರು ವಿವಿಧ ನೃತ್ಯ, ಹಾಡು, ನಾಟಕ ಸೇರಿದಂತೆ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ನೀಡಿ, ನೆರೆದಿದ್ದವರ ಗಮನ ಸೆಳೆದರು. ಕಾರ್ಯಕ್ರಮವು ಸಮಾಜದ ಒಗ್ಗಟ್ಟು, ಪ್ರತಿಭೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವಂತಿತ್ತು. ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಲಾಯಿತು. ಪ್ರಧಾನ ಕಾರ್ಯದರ್ಶಿ ಕೆ.ಕೆ.ಮಾಸ್ಟರ್ ಸ್ವಾಗತಿಸಿ, ಪಲ್ಲವಿ, ರಮ್ಯಾ ಮತ್ತು ಲಕ್ಷೀಕಾಂತ ಪ್ರಾರ್ಥನೆ ನೆರವೇರಿಸಿದರು. ಚಂದ್ರಶೇಖರ ಮಲೆತ್ತೋಡಿ ಹಾಗೂ ನಿಕ್ಷೀತಾ ಅಮ್ಚಿನಡ್ಕ ನಿರೂಪಿಸಿದರು.

ಸಮುದಾಯ ಭವನ ನಿರ್ಮಾಣಕ್ಕೆ ಜಾಗ ,ಅನುದಾನಕ್ಕೆ ಮನವಿ…
ಸಂಘದ ರಾಜ್ಯ ಉಪಾಧ್ಯಕ್ಷ ಮೋಹನ್ ನೆಲ್ಲಿಗುಂಡಿ ಪ್ರಾಸ್ತಾವಿಕ ಮಾತನಾಡಿ, 2002ರಲ್ಲಿ ಸ್ಥಾಪನೆಯಾಗಿರುವ ಸಂಘಟನೆಯಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ಜರುಗಿದೆ. ಆಶಕ್ತ ಸಮಾಜ ಬಾಂಧವರಿಗೆ ಸಹಾಯ , ಸವಲತ್ತುಗಳನ್ನು ಒದಗಿಸುವ ಕಾರ್ಯವನ್ನು ಸಂಘಟನೆಯ ಮುಖಾಂತರ ಕೈಗೊಂಡಿದ್ದೇವೆ. ಬೇರೆ ಸಮಾಜಕ್ಕೆ ಹೋಲಿಕೆ ಮಾಡಿದರೆ, ಅತ್ಯಽಕ ಬಂಧುಗಳಿರುವುದು ಆದಿದ್ರಾವಿಡ ಸಮಾಜದಲ್ಲಿ. ಆದರಿಂದ ನಮ್ಮ ಸಂಘಕ್ಕೂ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಮಾಡಿ ಕೊಡಿ ಎಂದು ಶಾಸಕರಲ್ಲಿ ಮನವಿ ಮಾಡಿದ ಸಂಘಟನೆಯ ಪ್ರಮುಖರು, ನಾವು ಬಾಡಿಗೆ ಕಟ್ಟಡದಲ್ಲಿದ್ದೇವೆ. ನಮ್ಮಲ್ಲೊಂದು ಕರುಣೆ ತೋರಿ , ಅಲೇರಿ ದೇವಾಲಯದ ಜೀರ್ಣೋದ್ಧಾರಕ್ಕೂ ಸಹಕಾರ ನೀಡಿಯೆಂದು ವಿನಂತಿಸಿದರು. ಸಂಘದ ಅಧ್ಯಕ್ಷ ಬಾಬು ಮರಿಕೆ ಮಾತನಾಡಿ, ಸಂಘಕ್ಕೊಂದು ನಿವೇಶನ ಜೊತೆಗೆ ಅನುದಾನವನ್ನು ನೀಡಿಯೆಂದು ಶಾಸಕರಲ್ಲಿ ಮನವಿ ಮಾಡ್ತೇವೆ, ನಾವು ಈ ಮಣ್ಣಿನ ಮೂಲ ನಿವಾಸಿಗಳು, ಎಲ್ಲದರಲ್ಲೂ ಮುಂದುವರಿಸಿದ್ದೇವೆ. ಆದಿದ್ರಾವಿಡ ಸಮಾಜ ಹೆಚ್ಚು ಸಂಖ್ಯೆಯಲ್ಲಿ ಇದ್ದೇವೆ. ತಾಲೂಕಿನ ಎಲ್ಲಾ ಸಮಾಜಕ್ಕೂ ಸಮುದಾಯ ಭವನ ನಿರ್ಮಾಣ ಮಾಡಿದ ಹಾಗೇ, ನಮಗೂ ಒಂದು ಅವಕಾಶ ನೀಡಿ, ಮುಂದಿನ ದಿನಗಳಲ್ಲಿ ನಿಮ್ಮ ಪರವಾಗಿದ್ದೇವೆ ಎಂದು ಹೇಳಿ , ಸಂಘದ ಪದಾಽಕಾರಿಗಳ ಜೊತೆ ಸೇರಿ ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿಗೆ ಧನಾತ್ಮಕ ಭರವಸೆ ನೀಡಿರುವ ಶಾಸಕರು, ಯಾವುದೇ ಸರಕಾರಿ ಖಾಲಿ ಜಾಗ ಇದ್ದರೆ ಮಾಹಿತಿ ಕೊಡಿ ,ಖಂಡಿತವಾಗಿ ಒದಗಿಸಿ ಕೊಡುವ ಕಾರ್ಯವನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.










