ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರು 111ನೇ ಜನ್ಮದಿನಾಚರಣೆ

0

ಪುತ್ತೂರು: ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗ, ದಲಿತರ ಏಳಿಗೆಗಾಗಿ ಕ್ರಾಂತಿಕಾರಿ ಬದಲಾವಣೆ ತಂದವರು. ಭೂ ಸುಧಾರಣೆ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಮಾಡಿರುವ ಜೀತ ಪದ್ದತಿ ನಿರ್ಮೂಲನೆ, ಗರೀಬಿ ಹಟಾವೋ ಸೇರಿದಂತೆ ಹಲವು ಯೋಜನೆಗಳು ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದು ದೇವರಾಜು ಅರಸು ಅವರು ಸೂರ್ಯ-ಚಂದ್ರರು ಇರುವಷ್ಟು ಕಾಲ ಮರೆಯಲಾಗದ ವ್ಯಕ್ತಿಯಾಗಿದ್ದಾರೆ ಎಂದು ನಗರ ಯೋಜನಾ ಪ್ರಾಧೀಕಾರದ ಅಧ್ಯಕ್ಷ ಅಮಳ ರಾಮಚಂದ್ರ ಹೇಳಿದರು.


ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಆ.20ರಂದು ತಾ.ಪಂ ಸಭಾಂಗಣದಲ್ಲಿ ನಡೆದ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು 111ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹುಣಸೂರಿನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅರಸು ಅವರು ೧೯೭೦ರಲ್ಲಿ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದಲ್ಲಿ ಬಹುತೇಕ ಎಲ್ಲರ ಬದುಕ ಹಸನು ಮಾಡಿದವರು. ೧೯೭೯ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂದಿಯವರ ಪ್ರೇರಣೆಯಂತೆ ಪ್ರಬಲ ವಿರೋಧವನ್ನು ಮೆಟ್ಟಿನಿಂತು ಭೂ ಸುಧಾರಣೆಯನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿ ಮಾಡಿದವರು. ಈ ಯೋಜನೆಯಿಂದಾಗಿ ಹಿಂದುಳಿದ ವರ್ಗದವರು, ದಲಿತರು ಸೇರಿದಂತೆ ಲಕ್ಷಾಂತರ ಮಂದಿ ಗೇಣಿದಾರರನ್ನು ಭೂಮಿಯ ಒಡೆಯರಾಗುವಂತೆ ಮಾಡಿದ ಕೀರ್ತಿ ದೇವರಾಜು ಅರಸು ಅವರಿಗೆ ಸಲ್ಲುತ್ತದೆ. ಹಿಂದುಳಿದ ವರ್ಗದವರಿಗೆ ರಾಜಕೀಯ ಶಕ್ತಿ ನೀಡಿರುವುದರ ಫಲವಾಗಿ ಬಂಗಾರಪ್ಪರಿಂದ ಪ್ರಾರಂಭಿಸಿ, ವೀರಪ್ಪ ಮೊಯಿಲಿ, ಸಿದ್ದರಾಮಯ್ಯ ಅವರಂತಹ ಕೆಲ ಜಾತಿಯವರೂ ರಾಜ್ಯದ ಮುಖ್ಯ ಮಂತ್ರಿಯನ್ನಾಗಿ ರಾಜ್ಯದಲ್ಲಿ ಕಾಣುವಂತ ಸ್ಮರಣೀಯ ಕೊಡುಗೆ ನೀಡಿದವರು ಎಂದು ಹೇಳಿದರು.


ಮುಖ್ಯ ಭಾಷಣ ಮಾಡಿದ ಉಜಿರೆಯ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಪ್ರಿಯಾ ಮಾತನಾಡಿ, ಮೌನವಾಗಿಯೇ ಅಸಾಧಾರವಾದ ಸಾದನೆ ಮಾಡಿದ ದೇವರಾಜ ಅರಸು ಅವರು ಕ್ರಾಂತಿಕಾರಿ ಸಾಧನೆ ಮಾಡಿದವರು. ಹಿಂದುಳಿದ ವರ್ಗದವರ ವಿದ್ಯಾಭ್ಯಾಸ ಅನುಕೂಲಕ್ಕಾಗಿ ವಸತಿ ನಿಲಯದ ಯೋಜನೆಯನ್ನು ಸಾಕಾರಗೊಳಿಸಿದ ಅರಸು ಅವರ ಕೊಡುಗೆಯಿಂದಾಗಿ ಇಂದಿಗೂ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಲ್ಲಿ ವಸತಿ ನಿಲಯ ಯೋಜನೆ ಬಹುದೊಡ್ಡ ಕೊಡುಗೆ ನೀಡಿದೆ. ನಿರುದ್ಯೋಗ ನಿವಾರಣೆಗಾಗಿ ಸ್ಟೈಫಂಡ್ ಯೋಜನೆ, ಹಳ್ಳಿಗಳಿಗೆ ಭಾಗ್ಯ ಜ್ಯೋತಿ ಯೋಜನೆಯ ಮೂಲಕ ವಿದ್ಯುತ್ ಸೌಲಭ್ಯ ನೀಡಿದವರು. ಸಣ್ಣ ಪುಟ್ಟ ಜಾತಿಯವರನ್ನೂ ರಾಜಕೀಯವಾಗಿ ಬೆಳೆಸಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು.


ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಶ್ರೀಮಂತರ ಮಕ್ಕಳಂತೆ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾಭ್ಯಾಸ ಪಡೆಯಲು ಕಾರಣಿಕರ್ತರಾದ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಆಚರಣೆ ಸೀಮಿತವಾಗಿರದೆ ಅವರ ಯೋಜನೆ, ಸಾಧನೆಗಳನ್ನು ನೆನಪಿಸಿ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಎಸ್.ಬಿ ಕೂಡಲಗಿ ಮಾತನಾಡಿ, ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯ ಮಂತ್ರಿಯಾಗಿದ್ದ ದೇವರಾಜು ಅರಸು ಅವರು, ಹಿಂದುಳಿದ ವರ್ಗದವರು, ಧೀನ ದಲಿತರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮುಂದುವರಿಯಲು ಸಹಕಾರಿಯಾಗಿದೆ. ಹೀಗಾಗಿ ಅವರು ಇಂದಿಗೂ ಜನಮನದಲ್ಲಿ ಅಚ್ಚಲಿಯದೆ ನಿಂತಿದ್ದಾರೆ. ಅವರ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಮುಂದುವರಿಸಬೇಕಾದ ಹೊಣೆ ವಿದ್ಯಾರ್ಥಿಗಳಲ್ಲಿದೆ ಎಂದು ಹೇಳಿದರು.


ಸನ್ಮಾನ:
೨೦೨೫-೨೬ನೇ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಎಸ್‌ಎಸ್‌ಎಲ್‌ಸಿಯಲ್ಲಿ ಚಿರಾಗ್, ಶಮಂತ್, ದ್ವಿತೀಯ ಪಿಯುಸಿಯಲ್ಲಿ ತನುಜಾ, ವಿಕಾಶ್ ಎ.ವಿ., ಅಪೇಕ್ಷಾ ಪಿ.ಆರ್., ಸಂಧ್ಯಾ,
ರಾಷ್ಟ್ರದ ಮಟ್ಟದ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದ ದೀಕ್ಷಿತಾ ಗೌಡ, ಎತ್ತರ ಜಿಗಿತದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಜಿ.ಎಂ ಕೀರ್ತಿ ಅವರನ್ನು ಸನ್ಮಾನಿಸಲಾಯಿತು. ದೇವರಾಜ ಅರಸು ಜನ್ಮ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರು ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.


ತಾಲೂಕು ಹಿಂದುಳಿದ ಕಲ್ಯಾಣಾಧಿಕಾರಿ ಜೋಸೆಫ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿ ರಕ್ಷಾ ಕಾರ್ಯಕ್ರಮ ನಿರೂಪಿಸಿ, ಬನ್ನೂರು ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ನಂದೀಶ್ ವಂದಿಸಿದರು. ನಿವೇದಿತಾ ಸದ್ಭಾವನಾ ಪ್ರತಿಜ್ಞೆ ಬೋಧಿಸಿದರು. ದೀಪ ಸನ್ಮಾನಿತರ ಪರಿಚಯ ಮಾಡಿದರು. ವಿದ್ಯಾರ್ಥಿ ಹರ್ಷ ಅರಸು ಗೀತೆ ಹಾಡಿದರು. ನರಿಮೊಗರು ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ವಂದೇ ಮಾತರಂ ಹಾಗೂ ಬನ್ನೂರು ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.

LEAVE A REPLY

Please enter your comment!
Please enter your name here