






ಉಪ್ಪಿನಂಗಡಿ: ರಸ್ತೆಯಲ್ಲಿ ಬಿದ್ದು ಸಿಕ್ಕಿದ ಬರೋಬ್ಬರಿ 5 ಪವನ್ ತೂಕದ ಚಿನ್ನದ ಸರವನ್ನು ಹೆತ್ತವರ ಮೂಲಕ ಪೊಲೀಸರಿಗೊಪ್ಪಿಸಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿಯೋರ್ವರು ಪ್ರಾಮಾಣಿಕತೆ ಮರೆದರೆ, ಪೊಲೀಸರು ಚಿನ್ನಾಭರಣದ ಮಾಲಕರನ್ನು ಪತ್ತೆ ಹಚ್ಚಿ ಪ್ರಮಾಣಿಕತೆ ಮೆರೆದವರ ಕೈಯಿಂದಲೇ ಅವರಿಗೆ ಹಿಂದುರಿಗಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.


ಇಂದ್ರಪ್ರಸ್ಥ ವಿದ್ಯಾಲಯದ 7 ನೇ ತರಗತಿಯ ವಿದ್ಯಾರ್ಥಿನಿ ಸಮೀಕ್ಷಾ ಎಂಬಾಕೆಗೆ ಉಪ್ಪಿನಂಗಡಿಯ ಅಂಡರ್ ಪಾಸ್ ಬಳಿ ರಸ್ತೆಯಲ್ಲಿ 5 ಪವನ್ ತೂಕದ ಚಿನ್ನದ ಕರಿಮಣಿ ಸರವೊಂದು ಗುರುವಾರದಂದು ಬಿದ್ದು ಸಿಕ್ಕಿತ್ತು. ಅದನ್ನು ಆಕೆಯ ಹೆತ್ತವರಾದ ಹಿರೇಬಂಡಾಡಿ ಗ್ರಾಮದ ಕರೆಂಕಿ ಮನೆ ನಿವಾಸಿ ಸಂಜೀವ ಮತು ವಿಜಯಲಕ್ಷ್ಮಿ ರವರೊಂದಿಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತಂದೊಪ್ಪಿಸಿದ್ದರು. ಈ ಮಧ್ಯೆ ಇಲ್ಲಿನ ರಾಮನಗರ ನಿವಾಸಿ ನಾರಾಯಣ ಕೆ. ಎಂಬವರ ಪತ್ನಿ ಭವ್ಯ ಕುಮಾರಿ ಎಂಬವರು ರಸ್ತೆಯುದ್ದಕ್ಕೂ ಹುಡುಕಾಟ ನಡೆಸುತ್ತಿರುವುದನ್ನು ಗಮನಿಸಿದ ಪೊಲೀಸರು ವಿಚಾರಿಸಿದಾಗ ತನ್ನ ಐದು ಪವನ್ ತೂಕದ ಕರಿಮಣಿ ಸರ ಕಳೆದುಹೋಗಿರುವುದಾಗಿ ,ಅದನ್ನು ಹುಡುಕಾಟ ನಡೆಸುತ್ತಿದ್ದೇನೆಂದು ತಿಳಿಸಿದರು. ಭವ್ಯ ಕುಮಾರಿ ತಿಳಿಸಿದ ಚಿನ್ನಾಭರಣದ ಮಾಹಿತಿಗೂ ಪೊಲೀಸರಿಗೆ ವಿದ್ಯಾರ್ಥಿನಿ ತಂದೊಪ್ಪಿಸಿದ ಚಿನ್ನಾಭರಣಕ್ಕೂ ಸಾಮ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ತಾಯಿ ವಿಜಯಲಕ್ಷ್ಮಿಯ ಕೈಯಿಂದಲೇ ಶುಕ್ರವಾರದಂದು ಠಾಣೆಯಲ್ಲಿ ಭವ್ಯ ಕುಮಾರಿಯವರಿಗೆ ಕರಿಮಣಿ ಸರವನ್ನು ಹಸ್ತಾಂತರಿಸಲಾಯಿತು.



ತನ್ನಲ್ಲದ ಸೊತ್ತು ಅದೆಷ್ಟೇ ಬೆಲೆಬಾಳಲಿ ಅದು ತನಗೆ ಸೇರಿದ್ದಲ್ಲವೆಂದು ತಿಳಿದು ಅದನ್ನು ಅದರ ವಾರಸುದಾರರಿಗೆ ತಲುಪಿಸುವ ನಿಟ್ಟಿನಲ್ಲಿ ತನ್ನ ಹೆತ್ತವರೊಂದಿಗೆ ಪೊಲೀಸ್ ಠಾಣೆಗೆ ತಂದೊಪ್ಪಿಸಿದ ವಿದ್ಯಾರ್ಥಿ ಸಮೀಕ್ಷಾಳ ಗುಣ ಶ್ರೇಷ್ಠ ಸಂಸ್ಕಾರದಿಂದ ಕೂಡಿದೆ. ಆಕೆಯ ಇಂತಹ ಗುಣದಿಂದಾಗಿ ಇಂದಿನ ಮಾರುಕಟ್ಟೆ ದರ ಸುಮಾರು 6.5 ಲಕ್ಷಕ್ಕೂ ಮಿಗಿಲಾದ ಮೌಲ್ಯದ ಚಿನ್ನಾಭರಣ ಅದರ ನೈಜ ವಾರೀಸುದಾರರ ಕೈಗೆ ಸೇರುವಂತಾಗಿದೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿ ಸುತೇಶ್ ವಿದ್ಯಾರ್ಥಿನಿಯ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದಾರೆ.










