ಉತ್ತಮ ಸೇವೆಗೆ ಪುರಸ್ಕಾರ, ರಕ್ಷಣೆ ಯಾಕೆ ಮಾಡಬೇಕು? -ವಾರದ ಮಾತುಕಥೆಯಲ್ಲಿ ಡಾ. ಯು.ಪಿ.ಶಿವಾನಂದರು ಹೇಳಿದ್ದೇನು?

0

ಲಂಚ ಭ್ರಷ್ಟಾಚಾರ ಮಾಡುವ ಅಧಿಕಾರಿಗಳಿಗೆ ಬಹಿಷ್ಕಾರ ಹೇಳುವುದರ ಜೊತೆಗೆ ಉತ್ತಮ ಸೇವೆ ಮಾಡುವ ಅಧಿಕಾರಿಗಳಿಗೆ ಪುರಸ್ಕಾರವನ್ನು ಮಾಡಬೇಕು. ಉತ್ತಮ ಸೇವೆಗೆ ಪುರಸ್ಕಾರ ಮಾಡಿದಾಗ ಅಂತಹ ಅಧಿಕಾರಿಗಳು ಹೆಚ್ಚುತ್ತಾರೆ. ಪುರಸ್ಕಾರದ ಜೊತೆಗೆ ಅಂತಹ ಅಧಿಕಾರಿಗಳ ರಕ್ಷಣೆಯು ನಮ್ಮ ಜವಾಬ್ದಾರಿಯೆಂದು ಸುದ್ದಿ ಸಮೂಹ ಸಂಸ್ಥೆಗಳ ಮಾಲಕ, ಲಂಚ ಭ್ರಷ್ಟಾಚಾರ ವಿರೋಧಿ ಅಭಿಯಾನದ ರೂವಾರಿ ಡಾ. ಯು.ಪಿ.ಶಿವಾನಂದರು ಹೇಳಿದ್ದಾರೆ. ಸುದ್ದಿ ಚಾನೆಲ್ ವಾರದ ಮಾತುಕತೆಯಲ್ಲಿ ಅವರು ಈ ರೀತಿ ಅಭಿಪ್ರಾಯ ಪಟ್ಟರು.


ಆಂದೋಲನದ ಪರಿಣಾಮ ಸುದ್ದಿಬಿಡುಗಡೆ ಪ್ರಾರಂಭ
ಸುದ್ದಿ ಬಿಡುಗಡೆ ಪತ್ರಿಕೆ ಆರಂಭವಾದದ್ದೆ ಲಂಚ, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಹಿನ್ನೆಲೆಯಲ್ಲಿ. ಆದರೆ ಈಗಲೂ ಲಂಚ, ಭ್ರಷ್ಟಾಚಾರ ನಿರ್ಮೂಲನೆ ಆಯಿತೇ? ಈ 41 ವರ್ಷಗಳ ಬಳಿಕವೂ ಕೂಡಾ ಲಂಚ, ಭ್ರಷ್ಟಾಚಾರ ನಿರ್ಮೂಲನೆ ಆಗಿಲ್ಲ, ಅದಕ್ಕಿಂತಲೂ ಜಾಸ್ತಿಯಾಗಿದೆ ಎಂಬ ಅಭಿಪ್ರಾಯ ಜನರಲ್ಲೂ ಇದೆ, ನಮ್ಮಲ್ಲೂ ಇದೆ. ಹಾಗಾಗಿ ನಮ್ಮ ಹೋರಾಟದ ದಿಕ್ಕನ್ನು ಈಗ ಸ್ವಲ್ಪ ಬದಲಿಸಿದ್ದೇವೆ. ಈಗ ನಮ್ಮ ಪ್ರಥಮ ಆದ್ಯತೆ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರವಲ್ಲ, ಬದಲಾಗಿ ಉತ್ತಮ ಸೇವೆಗೆ ಪುರಸ್ಕಾರ. ಉತ್ತಮ ಸೇವೆಗೆ ಪುರಸ್ಕಾರ ಮಾಡುತ್ತಾ ಹೋದ ಹಾಗೆ ಸ್ವಾಭಾವಿಕವಾಗಿ ಲಂಚ, ಭ್ರಷ್ಟಾಚಾರ ಕಡಿಮೆ ಆಗುತ್ತದೆ. ಈ ಕುರಿತು ಹಿಂದೆ ನಾವು ಮಾಡಿದ ಈ ಆಂದೋಲನದಿಂದ ಸ್ವಲ್ಪ ಪರಿಣಾಮ ಆಗಿದೆ ಎಂದು ಡಾ. ಯು.ಪಿ.ಶಿವಾನಂದರು ಹೇಳಿದರು.


ಎಲ್ಲರಿಗೂ ಒಳ್ಳೆಯ ಅಧಿಕಾರಿಗಳೇ ಆಗಬೇಕು ಎಂಬ ಮನಸ್ಸಿರುತ್ತದೆ
ಎಲ್ಲ ಅಧಿಕಾರಿಗಳಿಗೂ ತಾನು ಒಳ್ಳೆಯ ಕೆಲಸಗಾರ ಅನಿಸಿಕೊಳ್ಳಬೇಕೆಂದು ಇದ್ದೇ ಇರುತ್ತದೆ. ತಾನು ಒಳ್ಳೆಯವ ಎಂದು ಗುರುತಿಸುವುದು ಮಾನವನ ಸಹಜ ಸ್ವಭಾವ. ಆ ಸ್ವಭಾವಕ್ಕೆ ನಾವು ಉತ್ತೇಜನ ಮಾಡಬೇಕು. ಯಾವುದೇ ಅಧಿಕಾರಿ ಆ ಸ್ಥಾನಕ್ಕೆ ಬಂದಾಗ ಅವರಿಗೆ, ತಾನು ಸಮಾಜದಲ್ಲಿ ಕೆಲಸ ಮಾಡುವುದಕ್ಕೆ ಸಂಬಳ ತೆಗೆದುಕೊಳ್ಳುತ್ತಿದ್ದೇನೆ, ಆ ಕೆಲಸ ಜನಗಳಿಗೆ ಪ್ರಯೋಜನವಾಗಿದೆ . ಹಾಗಾಗಿ ನನಗೆ ಪ್ರೋತ್ಸಾಹ ಕೊಡಲಿ ಎಂಬ ಮನೋಭಾವ ಖಂಡಿತ ಇರುತ್ತದೆ. ಆ ಮನೋಭಾವಕ್ಕೆ ಪ್ರೋತ್ಸಾಹ ಇಲ್ಲದಿದ್ದಾಗ ಲಂಚ, ಭ್ರಷ್ಟಾಚಾರ ಮಾಡಿ ಕಾರು, ಬಂಗಲೆ ತೆಗೆದುಕೊಳ್ಳುತ್ತಾನೆ. ಅದರಿಂದಲೇ ನನಗೆ ಹೆಸರು ಬರುತ್ತದೆ ಎಂದು ತಿಳಿದುಕೊಂಡಾಗ ಆತ ಒಳ್ಳೆಯ ಕೆಲಸವನ್ನು ಕಡೆಗಣಿಸುತ್ತಾನೆ. ನನಗೆ ಇದರಿಂದ ಕೆಟ್ಟ ಹೆಸರು ಬರುತ್ತದೆ ಎಂದು ಆತನಿಗೆ ಗೊತ್ತಿರುವುದಿಲ್ಲ. ದುಡ್ಡು ಸಂಪಾದನೆಯಾದರೂ ಹೆಸರು ಕಳೆದುಕೊಳ್ಳುತ್ತೇನೆಂದು ಅರಿವಿರುವುದಿಲ್ಲ. ಎಷ್ಟೇ ದೊಡ್ಡ ದರೋಡೆಕೋರರೇ ಆಗಿರಲಿ ಅವನಿಗೆ ತಾನು ದರೋಡೆಕೋರ ಆಗಬೇಕೆಂದು ಇರುವುದಿಲ್ಲ. ತಾನು ಒಳ್ಳೆಯ ಮನುಷ್ಯ ಅಂತ ಕಾಣಬೇಕೆಂದೇ ಇರುತ್ತದೆ. ಈ ಪರಿಸ್ಥಿತಿಯಲ್ಲಿ ನಾವು ಯೋಚಿಸಿ ಚಿಂತನೆ ಬದಲಿಸಿದ್ದೇವೆ ಎಂದವರು ಹೇಳಿದರು.


ಸೇವೆಗೆ ಗೌರವ, ಹಣಕ್ಕಲ್ಲ ಎಂದಾಗ ಉತ್ತಮ ಸೇವೆ ನೀಡುತ್ತಾರೆ.
ಯಾರೇ ಆಗಲಿ, ತಾನು ಒಳ್ಳೆಯ ಸೇವೆ ಮಾಡುತ್ತೇನೆ ಎಂದು ಭಾವಿಸಿದಾಗ ಅದಕ್ಕಾಗಿ ತ್ಯಾಗ ಮಾಡುವವರು ಇರುತ್ತಾರೆ. ಪೊಲೀಸ್ ಇಲಾಖೆಯಲ್ಲಿ , ಮಿಲಿಟರಿಯಲ್ಲಿ ಇಂತ ಉದಾಹರಣೆಗಳನ್ನು ನಾವು ನೋಡಬಹುದು. ಅವರು ಸೇವೆ ಸಲ್ಲಿಸಿ ಊರಿಗೆ ಬಂದಾಗ ಅವರ ತ್ಯಾಗಕ್ಕೆ ಬೆಲೆ ಸಿಗುತ್ತದೆ. ಗೌರವ ಸಿಗುತ್ತದೆ. ಮನ್ನಣೆ ಸಿಗುತ್ತದೆ. ಅವರೆಷ್ಟು ಹಣ ಮಾಡಿದ್ದಾರೆಂದು ಯಾರೂ ಕೇಳುವುದಿಲ್ಲ. ಬದಲು ಅವರೆಷ್ಟು ಹೆಸರು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಗೌರವ ಕೊಡುತ್ತೇವೆ. ಇದೇ ರೀತಿ ನಮ್ಮ ಅಧಿಕಾರಿಗಳೂ ಯಾಕಾಗಬಾರದು ? ಎಂದು ಪ್ರಶ್ನಿಸಿದ ಡಾ. ಶಿವಾನಂದರು ಒಂದು ಅಧಿಕಾರಿಗೆ ನಮ್ಮಲ್ಲಿ ಅಧಿಕಾರ ಇದೆ, ಸಂಪಾದನೆ ಇದೆ, ಸಾಕಷ್ಟು ಸೌಕರ್ಯವಿದೆ. ಅಧಿಕಾರಿ ಯಾಕೆ ಅದನ್ನು ಯೋಚನೆ ಮಾಡುವುದಿಲ್ಲ ? ನಾನು ಅದನ್ನು ಉತ್ತಮ ಸೇವೆ ಕೊಟ್ಟರೆ ಜನ ನನಗೆ ಗೌರವ ಕೊಡುತ್ತಾರೆ, ನನ್ನನ್ನು ಪುರಸ್ಕರಿಸುತ್ತಾರೆ ಎಂದು ಕೊಂಡರೆ ಜನರೂ ಹಾಗೆಯೇ ಮಾಡುತ್ತಾರೆ. ಹಾಗೆಯೇ ಲಂಚ , ಭ್ರಷ್ಟಾಚಾರ ಮಾಡುತ್ತಾ ಹೋದರೆ ಹಣ ಆಗುತ್ತದೆ, ಚಿನ್ನ ಬರುತ್ತದೆ ನಿಜ. ಆದರೆ ಜನ ನನ್ನನ್ನು ಬಹಿಷ್ಕರಿಸುತ್ತಾರೆ, ತಿರಸ್ಕರಿಸುತ್ತಾರೆ ಎಂದು ಗೊತ್ತಾದರೆ ಅವರಿಗೆ ಬೆಲೆ ಬರುವುದಿಲ್ಲ. ಕಾರ್ಯಕ್ರಮಕ್ಕೆ ಹೋದಾಗ ಜನ ಗೌರವ ಕೊಡುವುದಿಲ್ಲ. ಅವನ ಸಂಪತ್ತಿಗೆ ಬೆಲೆ ಇರುವುದಿಲ್ಲ. ಅವರು ಒಳ್ಳೆಯ ಕೆಲಸ ಮಾಡಿ ಖಂಡಿತವಾಗಿಯೂ ಅವರ ಸೇವೆಗೆ ಜನ ಬೆಲೆ ಕೊಡುವಂತಾಗಬೇಕು ಎಂಬುದು ನಮ್ಮ ಮೂಲ ಉದ್ದೇಶ ಎಂದರು.


ಇಲಾಖೆಗಳು ನಮ್ಮದೇ ಆಗಿರಲಿ, ಆಗ ಭ್ರಷ್ಟಾಚಾರ ಸಹಿಸುವುದಿಲ್ಲ. ಸೇವೆಗೆ ಗೌರವ ಕೊಡುತ್ತೇವೆ.
ಪ್ರಜಾಪ್ರಭುತ್ವದಲ್ಲಿ ಆಡಳಿತ ನಮ್ಮಿಂದಲೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ದೇಶ ನಮ್ಮದು, ಈ ಊರು ನಮ್ಮದು, ಇಲಾಖೆಗಳು ನಮ್ಮದು ಅಂತ ಸುಳ್ಯದ ಜನರು ಮಾತನಾಡಲು ತೊಡಗಿದರೆ ಭ್ರಷ್ಟಾಚಾರ ಹೇಗೆ ನಡೆಯಲು ಸಾಧ್ಯ? ನಮ್ಮ ಊರನ್ನು ಹಾಳು ಮಾಡಲು ನಾವು ತಯಾರಿದ್ದೇವೆಯೇ? ನಮ್ಮ ರಸ್ತೆ, ನಮ್ಮ ಶಾಲೆ ಹಾಳು ಮಾಡಲು ನಾವು ಯೋಚನೆ ಮಾಡುತ್ತೇವೆಯೇ? ಯಾವುದಾದರೂ ನಮ್ಮದು ಅಂತ ಆದಾಗ ನಾವು ಅದನ್ನು ಚೆನ್ನಾಗಿಟ್ಟುಕೊಳ್ಳುತ್ತೇವೆ. ಜನರಿಗೆ ಇದು ನಮ್ಮದು ಅಂತ ಗೊತ್ತಾದಾಗ ಜನ ಅದನ್ನು ಉಳಿಸಿಕೊಳ್ಳಲು ಕಾರಣರಾಗುತ್ತಾರೆ. ಅದಕ್ಕೆ ಯಾರು ತೊಂದರೆ ಕೊಡುತ್ತಾರೆ ಅವನ ಮೇಲೆ ನಿಜವಾಗಿ ಸಿಟ್ಟು ಬರುತ್ತದೆ. ನಮಗಾಗಿ ಇರುವ ಅಧಿಕಾರಿಗಳು ನಮಗೆ ತೊಂದರೆ ಕೊಡುತ್ತಾರೆ, ನಮ್ಮವರಿಗೆ ತೊಂದರೆ ಕೊಡುತ್ತಾರೆ, ಅನ್ಯಾಯ ಮಾಡುತ್ತಿದ್ದಾರೆ, ಭ್ರಷ್ಟಾಚಾರ ಮಾಡಿ ಹಣ ಮಾಡುತ್ತಿದ್ದಾರೆ ಅಂತ ನಮ್ಮ ಮನಸ್ಸಿಗೆ ಕಂಡರೆ ಖಂಡಿತ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ. ಈ ಎರಡು ವಿಚಾರಗಳನ್ನು 41 ವರ್ಷಗಳಲ್ಲಿ ಸಾಕಷ್ಟು ಬಾರಿ ಜನರ ಮುಂದಿಟ್ಟಿದ್ದೇವೆ. ಉತ್ತಮ ಸೇವೆಗೆ ಪುರಸ್ಕಾರ ಅಂತ ಹಿಂದೆ ಮಾಡಿದಾಗ ಜನ ಯಾವ ರೀತಿ ಸ್ವೀಕರಿಸುತ್ತಾರೆಂದು ನಮಗೂ ಗೊತ್ತಿರಲಿಲ್ಲ. ತುಂಬಾ ಜನರ ಮನಸ್ಸಿನಲ್ಲಿ ಇದು ಆಗಲಿಕ್ಕಿಲ್ಲ ಎಂಬ ಭಾವನೆಯಿದೆ. ಈ ಅಧಿಕಾರಿಗಳು ಕೂಡಾ ತಮ್ಮ ಮೇಲಾಧಿಕಾರಿಗಳಿಗೆ, ನಾಯಕರಿಗೆ ಲಂಚ ಕೊಡಬೇಕೆಂಬ ಭಾವನೆ ಜನರಲ್ಲಿ ಇರುತ್ತದೆ. ಇಲ್ಲಿ ದುಡ್ಡು ಮಾಡಲಿಕ್ಕೆ ಆಗುತ್ತದೆ ಎಂಬ ಕಾರಣಕ್ಕಾಗಿಯೇ ಅವರು ಮೇಲಿನವರಿಗೆ ದುಡ್ಡು ಕೊಟ್ಟು ಬರುವುದಲ್ಲವೇ? ನಾವು ಹಣ ಕೊಡುವುದಿಲ್ಲ ಅಂತ ಕಂಡರೆ ಅವರು ಯಾಕೆ ದುಡ್ಡು ಕೊಟ್ಟು ಬರುತ್ತಾರೆ?.


ಇಲ್ಲಿ ಲಂಚ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂದಾದರೆ ಉತ್ತಮ ಅಧಿಕಾರಿಗಳೇ ಬರುತ್ತಾರೆ, ಉತ್ತಮ ಸೇವೆ ದೊರಕುತ್ತದೆ.
ಮೇಲಿನಿಂದ ಭ್ರಷ್ಟಾಚಾರ ನಡೆಯುತ್ತದೆ ಎನ್ನುವುದು ನಮಗೆ ಖಂಡಿತ ಗೊತ್ತಿದೆ. ಮಂತ್ರಿಗಳಾಗಲಿ, ಉನ್ನತ ಅಧಿಕಾರಿಗಳಾಗಲಿ ಇವರ ಮೂಲಕ ಸುಲಿಗೆ ಮಾಡುತ್ತಾರೆ. ಅವರು ಸಂಪಾದನೆ ಮಾಡುವುದು ಇವರ ಕಪ್ಪದ ಮೂಲಕ. ಇವರು ಹಣ ವಸೂಲಿ ಮಾಡಿ ಮೇಲಿನವರಿಗೆ ಕೊಡುತ್ತಾರೆ. ಅವರನ್ನು ಓಟಿನ ಮೂಲಕ ಬದಲಿಸಬಹುದೇನೋ ನಿಜ. ಆದರೆ ಇಲ್ಲಿ ನಮಗೆ ದುಡ್ಡು ಮಾಡಲು ಸಾಧ್ಯವಿಲ್ಲ. ಇಲ್ಲಿ ಬರುವ ಅಧಿಕಾರಿಗಳು ಲಂಚ , ಭ್ರಷ್ಟಾಚಾರ ನಡೆಸುವುದಿಲ್ಲವೆಂದಾದರೆ ಅವರಿಗೆ ಖಂಡಿತ ಜನ ಬೆಂಬಲ ಸಿಗಬೇಕು. ಯಾರು ಇಂತಹ ಕೆಲಸ ಮಾಡುತ್ತಾರೋ ಅಂತವರಿಗೆ ಜನ ರಕ್ಷಣೆ ನೀಡಬೇಕು. ಅಂತವರನ್ನು ಉಳಿಸಿಕೊಳ್ಳುವುದು ಕೂಡಾ ನಮ್ಮ ಕರ್ತವ್ಯ ಆಗುತ್ತದೆ. ಈ ಎಲ್ಲಾ ಮುಖಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ಸಾಧ್ಯತೆ ಇದೆಯೇ ಎಂಬುದರ ಬಗ್ಗೆ ಕಳೆದ ವಾರದ ಪತ್ರಿಕೆಯಲ್ಲಿ ಬೆಳಕು ಚೆಲ್ಲಿದ್ದೇನೆ. ತಹಶೀಲ್ದಾರ್ ಪೊಟೋ ಹಾಕಿ ಬರೆದಿದ್ದೇನೆ. ಈ ಲೇಖನದಲ್ಲಿ ಎಲ್ಲೂ ಕೂಡಾ ನಮ್ಮ ಅಧಿಕಾರಿಯನ್ನು ನಾವು ಭ್ರಷ್ಟಾಚಾರಿಯೆಂದು ಬರೆದಿಲ್ಲ. ಒಳ್ಳೆಯ ಕೆಲಸ ಮಾಡುತ್ತಾರೆಂದೂ ಬರೆದಿಲ್ಲ. ತಹಶಿಲ್ದಾರ್ ಒಳ್ಳೆಯ ಕೆಲಸ ಮಾಡಿದರೆ ಅವರಿಗೆ ರಕ್ಷಣೆ ಕೊಡಬೇಕಾದುದು ನಮ್ಮ ಕರ್ತವ್ಯ. ಲಂಚ, ಭ್ರಷ್ಟಾಚಾರ ಮಾಡುತ್ತಿದ್ದಾರೆಂದಾರೆ ಅದರ ನಿರ್ಮೂಲನೆ ಮಾಡಬೇಕಾದುದು ನಮ್ಮ ಜವಾಬ್ದಾರಿ. ಇದು ಪ್ರಜಾಪ್ರಭುತ್ವದ ಜವಾಬ್ದಾರಿ ಎನ್ನುವುದನ್ನು ಹೇಳಿ ಜನಗಳ ಮುಂದೆ ಇದನ್ನು ಇಟ್ಟಿದ್ದೇವೆ.ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಬೇಕಾದರೆ ಅದಕ್ಕೆ ಕಾರಣ ನಮ್ಮ ಜನ. ಸುಳ್ಯದ ಜನ ಹೇಗೆ ಇದನ್ನು ತೆಗೆದುಕೊಳ್ಳುತ್ತಾರೆ ಎನ್ನುವ ಆಧಾರದಲ್ಲಿ ಸುಳ್ಯದಲ್ಲಿ ಲಂಚ , ಭ್ರಷ್ಟಾಚಾರ ನಿಲ್ಲುತ್ತದೆ ಎಂದವರು ಹೇಳಿದರು.


ಅಭಿಯಾನ ರಾಜ್ಯಕ್ಕೆ ವಿಸ್ತರಣೆ, ಚುನಾವಣೆ ಸಂದರ್ಭದಲ್ಲಿ ನಮ್ಮ ಊರು ನಮ್ಮ ಹೆಮ್ಮೆ ಎಂಬ ಅಭಿಮಾನದ, ಲಂಚ, ಭ್ರಷ್ಟಾಚಾರ ವಿರೋಧದ ಅಭ್ಯರ್ಥಿಗಳು ಮುನ್ನಲೆಗೆ ಬರಲಿ.
ನಾನು ಈ ರೀತಿಯೇ ಮಾಡಿ ಎಂದು ಹೇಳುವುದಿಲ್ಲ. ಆದರೆ ನಿಮ್ಮ ಊರು, ನಿಮ್ಮ ಇಲಾಖೆ ಅಂದುಕೊಂಡಾಗ ನೀವೇನು ಮಾಡುತ್ತೀರೋ ಅದನ್ನು ಮಾಡಿ. ಉದಾಹರಣೆಗೆ ತುಂಬ ಶಾಲೆಗಳು ಇಂದು ಅಭಿವೃದ್ಧಿಯಾಗಿದೆ. ಯಾಕೆಂದರೆ ಇದು ನಮ್ಮ ಶಾಲೆಯೆಂದು ಜನ ಭಾವಿಸುತ್ತಾರೆ. ಅದೇ ರೂಪವನ್ನು ಪ್ರತೀ ಇಲಾಖೆಗಳಿಗೂ ನೀಡಬೇಕು. ಅಲ್ಲಿ ಭ್ರಷ್ಟಾಚಾರವಾದರೆ ಜನಗಳಿಗೆ ತೊಂದರೆ ಎನ್ನುವ ಅರಿವು ನಮ್ಮಲ್ಲಿ ಬೇಕು. ಇನ್ನು ಗ್ರಾಮ ಪಂಚಾಯತ್ ಚುನಾವಣೆಗಳು ಬರುತ್ತವೆ. ನಮ್ಮ ಪಂಚಾಯತ್ ಅನ್ನು ಆಡಳಿತ ಮಾಡುವ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತೇವೆ. ಹಾಗೆಯೇ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳು ಬರುತ್ತವೆ. ಆ ಬಳಿಕ ವಿಧಾನ ಸಭಾ, ಲೋಕಸಭಾ ಚುನಾವಣೆಗಳು ಬರುತ್ತವೆ. ನಾಳೆ ಈ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ನಮ್ಮೂರಿನಲ್ಲಿ ಲಂಚ, ಭ್ರಷ್ಠಾಚಾರ ಆಗುವುದಕ್ಕೆ ಅನುವು ಮಾಡಿಕೊಡುವುದಿಲ್ಲ, ಇದು ನಮ್ಮ ಊರು ಎಂದರೆ ಅವರು ಚುನಾವಣೆಯಲ್ಲಿ ಗೆಲ್ಲುತ್ತಾರೆ. ನಾವು ಲಂಚ, ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತೇವೆ ಎಂದರೆ ಖಂಡಿತವಾಗಿಯೂ ಅವರು ಗೆಲ್ಲುವುದಿಲ್ಲ ಎಂದ ಡಾ. ಶಿವಾನಂದರು ಮಾಧ್ಯಮವಾಗಿ ನಮಗೆ ಇದನ್ನು ಜನರ ಮುಂದಿಡುವ ಜವಾಬ್ದಾರಿ ಇದೆ. ಇದು ಕೇವಲ ತಹಶೀಲ್ದಾರ್ ಒಳ್ಳೆಯ ಕೆಲಸಕ್ಕೆ ಮಾತ್ರ ಇದು ಸೀಮಿತವಲ್ಲ. ಜನರಿಗೂ, ಜನ ಪ್ರತಿನಿಧಿಗಳಿಗೂ ಅನ್ವಯವಾಗುತ್ತದೆ. ಇದು ಪ್ರಜಾಪ್ರಭುತ್ವದ ಮೂಲ ಆಶಯ. ಈ ಆಂದೋಲನ ಸುಳ್ಯದಲ್ಲಿ ಪ್ರಾರಂಭವಾಗಿದ್ದು ಇದನ್ನು ಪುತ್ತೂರು, ಬೆಳ್ತಂಗಡಿಗೆ, ಮಂಗಳೂರು, ಆ ಮೂಲಕ ರಾಜ್ಯಕ್ಕೆ ವಿಸ್ತರಿಸುತ್ತೇವೆ ಎಂದು ಹೇಳಿದರು.


*ಪುತ್ತೂರಿನ ಜನರ ಧ್ವನಿ, ಸುದ್ದಿಮಾಧ್ಯಮದ ವೇದಿಕೆಯ ಮೂಲಕ ಅಧಿಕಾರಿಗಳ ಉತ್ತಮ ಸೇವೆಗೆ, ಲಂಚ, ಭ್ರಷ್ಟಾಚಾರದ ನಿವಾರಣೆಗೆ, ನಮ್ಮ ಊರನ್ನು, ತಾಲೂಕನ್ನು
ಹೆಮ್ಮೆಯ ತಾಲೂಕನ್ನಾಗಿ ಮಾಡಲು ಕಾರಣವಾಗಲಿ
*ಮುಂದಿನ ಚುನಾವಣೆಯಲ್ಲಿ ಅದು ಅಭ್ಯರ್ಥಿಗಳ ಘೋಷ ವಾಕ್ಯವಾಗಲಿ
ಪುತ್ತೂರು ಉತ್ತಮ ಸೇವೆಯ ಲಂಚ, ಭ್ರಷ್ಟಾಚಾರ ರಹಿತ ಊರಾಗಬೇಕು, ತಾಲೂಕಾಗಬೇಕು. ಅದಕ್ಕೆ ಜನತೆ ಏನು ಮಾಡಬೇಕು ಎಂಬ ವಿಷಯದ ಬಗ್ಗೆ ತಿಳಿಯಲಿಕ್ಕಾಗಿ ಮತ್ತು ಪುತ್ತೂರು ಜನರು ರಾಜರುಗಳಾಗಿ ತಮ್ಮ ಊರನ್ನು ಹೆಮ್ಮೆಯ ಊರನ್ನಾಗಿ, ತಾಲೂಕನ್ನಾಗಿ ಮಾಡುವುದು ಹೇಗೆ ಎಂಬ ಬಗ್ಗೆ ಜನರ ಅಭಿಪ್ರಾಯಕ್ಕಾಗಿ ಜನಾಭಿಪ್ರಾಯದ ರೂಪಿಸಲಿಕ್ಕಾಗಿ ಸುದ್ದಿ ಮಾಧ್ಯಮ ಜನರ ಬಳಿಗೆ ಬರಲಿದೆ, ವೇದಿಕೆಯಾಗಲಿದೆ. ಮುಂದಿನ ಗ್ರಾ.ಪಂ, ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಅದು ಜನರ ಅಭಿಪ್ರಾಯವಾಗಿ ಅಭ್ಯರ್ಥಿಗಳ ಘೋಷವಾಕ್ಯವಾಗಲಿ.

LEAVE A REPLY

Please enter your comment!
Please enter your name here