






`ಸುದ್ದಿ ಸಂವಾದ’ದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಕಡಬ


ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿ 85ಕ್ಕೂ ಅಽಕ ವಿದ್ಯಾಸಂಸ್ಥೆಗಳಿವೆ. ಹಿರಿಯರು ದೊಡ್ಡ ಕನಸಿನೊಂದಿಗೆ ಆರಂಭಿಸಿದ ಸಂಸ್ಥೆ ಇದು. ಮುಂದಿನ ದಿನಗಳಲ್ಲಿ ಸಂಸ್ಥೆಗಳ ಗುಣಮಟ್ಟವನ್ನು ಇನ್ನಷ್ಟು ಎತ್ತರಿಸಿ ಸಂಸ್ಕಾರಕ್ಕೆ ನೀಡುತ್ತಿರುವ ಒತ್ತನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಹೊಸ ಪ್ರಯತ್ನಗಳನ್ನು ಮಾಡಬೇಕೆನ್ನುವ ಕನಸಿದೆ. ಹಿರಿಯರ ಮಾರ್ಗದರ್ಶನ, ಆಡಳಿತ ಮಂಡಳಿ ಪದಾಧಿಕಾರಿ, ನಿರ್ದೇಶಕರ ಸಹಕಾರ, ಹಿತೈಷಿಗಳು, ದಾನಿಗಳ ಪ್ರೋತ್ಸಾಹದಿಂದ ಇವೆಲ್ಲವನ್ನೂ ಸಾಧಿಸುವ ವಿಶ್ವಾಸವಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಸಾರಥಿ ಕೃಷ್ಣ ಕುಮಾರ್ ಶೆಟ್ಟಿ ಅವರು ಹೇಳಿದ್ದಾರೆ.



ಆ.19ರಂದು ಸುದ್ದಿ ಚಾನೆಲ್ ಮತ್ತು ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್ನಲ್ಲಿ ಮೂಡಿಬಂದ `ಮಾತುಕತೆ- ವಿವೇಕಾನಂದ ವಿದ್ಯಾವರ್ಧಕ ಸಂಘದ ಸಾರಥಿಯ ಜೊತೆ’ ಕಾರ್ಯಕ್ರಮದಲ್ಲಿ, ಕರಾವಳಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮುಖಂಡ ಕೃಷ್ಣಕುಮಾರ್ ಶೆಟ್ಟಿಯವರು ಭಾಗವಹಿಸಿ ಮಾತನಾಡಿದರು. ತಮಗೆ ಲಭಿಸಿರುವ ನೂತನ, ಮಹತ್ತರ ಜವಾಬ್ದಾರಿಯ ಬಗ್ಗೆ, ಮುಂದಿನ ಯೋಜನೆಗಳು, ಚಿಂತನೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಮುಂದಿನ 5 ವರ್ಷಗಳ ತಮ್ಮ ಅವಧಿಯಲ್ಲಿ ಪದವಿ ಪಡೆದು ಹೊರಬರುವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ದೃಷ್ಟಿಯಿಂದ ಸಂಸ್ಥೆಯಲ್ಲಿ ಉದ್ಯೋಗ ಮಾಹಿತಿ ಕೇಂದ್ರವನ್ನು ಆರಂಭಿಸಿದ್ದೇವೆ. ಮುಂದಕ್ಕೆ ವರ್ಷ ವರ್ಷ ಉದ್ಯೋಗ ಮೇಳಗಳನ್ನು ನಡೆಸುವ ಚಿಂತನೆಯಿದೆ. ಜೊತೆಗೆ ಉದ್ಯೋಗಮೇಳದಲ್ಲಿ ಸಂದರ್ಶನ ಎದುರಿಸುವ ಬಗ್ಗೆ ತರಬೇತಿ ನೀಡುವ ಮೂಲಕ ನಮ್ಮ ಆಸುಪಾಸಿನ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಕನಸಿದೆ. ಜೊತೆಗೆ ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗದಲ್ಲಿರುವ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಮೂಲಕವೂ ಹೊಸ ಅವಕಾಶಗಳನ್ನು ಸೃಷ್ಟಿಸುವ ಚಿಂತನೆಯಿದೆ ಎಂದು ಕೃಷ್ಣ ಶೆಟ್ಟಿ ಹೇಳಿದರು.
ಜೊತೆಗೆ ಉದ್ಯೋಗ ಸೃಷ್ಟಿಯ ಕುರಿತು ಹೇಳುವುದಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಉದ್ಯಮ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲೂ ನಮ್ಮ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ. ಪಾಲಿಟೆಕ್ನಿಕ್ ಮೂಲಕ ಸ್ವಉದ್ಯೋಗದ ತರಬೇತಿ ನೀಡುವ ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಅನೇಕರು ತಮ್ಮ ಉದ್ಯಮವನ್ನು ಆರಂಭಿಸಿದ್ದಾರೆ. ಜೊತೆಗೆ ನಮ್ಮ ರಿಸರ್ಚ್ ಸೆಂಟರ್ನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸಿ, ನಮ್ಮ ಭಾಗದ ರೈತರ ಪ್ರಮುಖ ಬೆಳೆ ಅಡಿಕೆಯ ಬಗ್ಗೆ ಸಂಶೋಧನೆಗಳನ್ನು ನಡೆಸುವ ಕನಸಿದೆ ಎಂದು ಕೃಷ್ಣಶೆಟ್ಟಿಯವರು ಹೇಳಿದರು.
ಜೊತೆಗೆ ತಮ್ಮ ಬಾಲ್ಯ, ಕಷ್ಟದ ದಿನಗಳು, ಹಿಂದೂ ಜಾಗರಣಾ ವೇದಿಕೆಯ ಮೂಲಕ ಸಾಮಾಜಿಕ ಜೀವನಕ್ಕೆ ಪಾದಾರ್ಪಣೆ, ಬಳಿಕ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧೆ, ಪಕ್ಷದ ಜವಾಬ್ದಾರಿ ನಿರ್ವಹಣೆ, ಎಪಿಎಂಸಿಯ ಕಾರ್ಯನಿರ್ವಹಣೆ, ಸಾಮಾಜಿಕ, ಧಾರ್ಮಿಕವಾಗಿ ಮಾಡಿರುವ ಕಾರ್ಯಗಳು, ಕಡಬ ಸರಸ್ವತಿ ವಿದ್ಯಾಲಯದ ಅಧ್ಯಕ್ಷರಾಗಿ ಮಾಡಿದ ಕೆಲಸಗಳು, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿ ಮಾಡಿದ ಕೆಲಸಗಳು, ನಿರ್ವಹಿಸಿದ ಜವಾಬ್ದಾರಿಗಳ ಕುರಿತು ಮಾತನಾಡಿದರು. ಸುದ್ದಿ ಪುತ್ತೂರು ಚಾನೆಲ್ ಮುಖ್ಯಸ್ಥ ಗೌತಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ. ಶಿವಾನಂದ ಅವರು ಲಂಚ-ಭ್ರಷ್ಟಾಚಾರ ವಿರೋಧಿ ಫಲಕವನ್ನು ಹಸ್ತಾಂತರಿಸಿದರು.
ಮುಂದಿನ ಐದು ವರ್ಷಗಳ ಅವಧಿಗೆ ಹೊಸ ಸಂಸ್ಥೆಗಳನ್ನು ಆರಂಭಿಸುವ ಬಗ್ಗೆ ನಾವು ಯೋಚನೆ ಮಾಡುತ್ತಿಲ್ಲ. ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರ ನೇತೃತ್ವದ ಈ ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ಸಿಬಿಎಸ್ಇ, ಇಂದ್ರಪ್ರಸ್ಥ, ಬೆಳ್ತಂಗಡಿಯ ಮುಂಡಾಜೆ, ಮೂಡುಬಿದಿರೆಯ ಸುಲ್ಕೇರಿ ಹೀಗೆ ನಾಲ್ಕೈದು ದೊಡ್ಡ ಸಂಸ್ಥೆಗಳನ್ನು ವಿದ್ಯಾವರ್ಧಕ ಸಂಘಕ್ಕೆ ತೆಗೆದುಕೊಂಡಿದ್ದೇವೆ. ಕೊಕ್ಕಡದಲ್ಲಿ ದೊಡ್ಡ ಸಂಸ್ಥೆ ಪ್ರಾರಂಭಿಸುವುದಕ್ಕೆ ಕಟ್ಟಡ ತಲೆಯೆತ್ತುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ನಮ್ಮ ಐದು ಪ್ರಕಲ್ಪಗಳನ್ನು ಗಟ್ಟಿಗೊಳಿಸುವುದು, ಎಲ್ಲಾ ಸಂಸ್ಥೆಗಳ ಗುಣಮಟ್ಟವನ್ನು ಇತ್ತೀಚಿನ ಪೋಷಕರ ಆಧುನಿಕ ಮನಸ್ಥಿತಿಗೆ ಪೂರಕವಾಗಿ ಏರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆನ್ನುವುದು ಗುರಿ. ಜೊತೆಗೆ ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಆಸ್ತಿಯನ್ನಾಗಿ ರೂಪಿಸುವ ಕೆಲಸವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಬೇಕೆನ್ನುವ ಕನಸಿದೆ ಎಂದು ಕೃಷ್ಣಶೆಟ್ಟಿಯವರು ವಿವರಿಸಿದರು.
“ವಿದ್ಯಾರ್ಥಿಗಳು ರಾಷ್ಟ್ರೀಯ ಚಿಂತನೆಗಳನ್ನು ರೂಢಿಸಿಕೊಂಡು ಸಮಾಜಮುಖಿ ವ್ಯಕ್ತಿಗಳಾಗಿ ರೂಪುಗೊಳ್ಳುವುದಕ್ಕೆ ಸಂಸ್ಥೆಯಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ವಿದ್ಯಾರ್ಥಿದೆಶೆಯಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಸಮಾಜಮುಖಿ ವ್ಯಕ್ತಿಗಳಾಗಿ ರೂಪುಗೊಳ್ಳಿ. ದಕ್ಷಿಣ ಕನ್ನಡ ಜಿಲ್ಲೆಯು ದೇಶಕ್ಕೇ ಶಕ್ತಿ ಕೊಡಬಲ್ಲ ಸಂಸ್ಕಾರ ಇರುವ ಜಿಲ್ಲೆ. ಪೋಷಕರು ನಮ್ಮ ಸಂಸ್ಥೆಗೆ ವಿಶ್ವಾಸ ಇಟ್ಟು ಕಳಿಸುವ ಮಕ್ಕಳನ್ನು ಆಸ್ತಿಯನ್ನಾಗಿಸುವ ಕೆಲಸವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಮಾಡುತ್ತಿದೆ. ಪೋಷಕರು ವಿವೇಕಾನಂದ ಸಂಸ್ಥೆಗಳಿಗೆ ಮಕ್ಕಳನ್ನು ಕಳಿಸುವುದೇ ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ಸಹಕಾರ. ಇದು ರಾಷ್ಟ್ರ ಕಟ್ಟುವ ಕಾರ್ಯ.”
ಕೃಷ್ಣಕುಮಾರ್ ಶೆಟ್ಟಿ ಕಡಬ ಅಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘ











