






ಬೆಟ್ಟಂಪಾಡಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿ ಕಳವುಗೈದಿರುವ ಘಟನೆ ಆ.24ರಂದು ರಾತ್ರಿ ನಡೆದಿದೆ.


ರಾತ್ರಿ ಸುಮಾರು 11.30 ರ ವೇಳೆಗೆ ದೇವಸ್ಥಾನ ಪ್ರವೇಶಿಸಿರುವ ಕಳ್ಳರು ನೇರವಾಗಿ ದೇವಸ್ಥಾನದ ಮುಖ್ಯದ್ವಾರದ ಬಳಿಯಿದ್ದ ಕಾಣಿಕೆ ಡಬ್ಬಿಯನ್ನು ದೋಚಿದ್ದಾರೆ. ಈ ಬಗ್ಗೆ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕಳವುಗೈದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದರ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.



ಎರಡು ತಿಂಗಳಲ್ಲಿ ಮತ್ತೆ ಕಳ್ಳತನ
ಸುಮಾರು ಎರಡು ತಿಂಗಳ ಹಿಂದೆ ಅಂದರೆ ಜೂ.9ರಂದು ಇದೇ ದೇವಸ್ಥಾನಕ್ಕೆ ಹಾಡಹಗಲೇ ಕಳ್ಳನೋರ್ವ ಪ್ರವೇಶಿಸಿ, ಕಾಣಿಕೆ ಡಬ್ಬಿ ಒಡೆಯಲು ಯತ್ನಿಸಿದ್ದು ಮತ್ತು ಕಚೇರಿಯ ಒಳಗಡೆ ಇದ್ದ ಕ್ಯಾಶ್ ನ್ನು ಎಗರಿಸಲು ಪ್ರಯತ್ನಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಿಂದ ಬೆಳಕಿಗೆ ಬಂದಿತ್ತು. ಪೊಲೀಸರಿಗೆ ಈ ಬಗ್ಹೆ ಮೌಖಿಕ ದೂರು ನೀಡಲಾಗಿತ್ತು. ಸಿಸಿಟಿವಿ ದೃಶ್ಯಗಳೂ ಇದ್ದವು. ಆದರೆ ಆ ಪ್ರಕರಣದ ಬಗ್ಗೆ ಯಾವುದೇ ಕಾನೂನಾತ್ಮಕ ಪ್ರಕ್ರಿಯೆಗಳು ನಡೆದು ಕಳ್ಳನ ಪತ್ತೆಯಾಗಿರಲಿಲ್ಲ. ಒಂದು ವಾರದ ಅವಧಿಯಲ್ಲಿ ಮತ್ತೆ ಲಿಖಿತ ದೂರು ನೀಡಿದ ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಟ್ಟಿದ್ದರು ಎನ್ನಲಾಗಿದೆ. ಇದೀಗ ಮತ್ತೆ ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ಕಳ್ಳತನ ನಡೆದಿರುವುದು ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ.
ನೆಟ್ಟಣಿಗೆ ದೇವಸ್ಥಾನದಲ್ಲೂ ಕಳ್ಳತನ
ಬೆಟ್ಟಂಪಾಡಿ ಗೆ ಸಮೀಪದ ಕೇರಳದ ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಕಾಣಿಕೆ ಡಬ್ಬಿ ಕಳವುಗೈದಿರುವ ಘಟನೆ ನಡೆದಿದ್ದು, ಒಂದೇ ಗುಂಪು ಎರಡೂ ದೇವಸ್ಥಾನಗಳಲ್ಲೂ ಕಳ್ಳತನ ಮಾಡಿರಬಹುದೆಂದು ಶಂಕಿಸಲಾಗಿದೆ. ಅಲ್ಲದೇ ಬೆಟ್ಟಂಪಾಡಿಯ ಕಕ್ಕೂರು ಎಂಬಲ್ಲಿ ಬೈಕ್ ಒಂದನ್ನು ಕಳವುಗೈಯಲು ಕಳ್ಳರು ಪ್ರಯತ್ಬಿಸಿದ್ದಾರೆ ಎಂದು ತಿಳಿದುಬಂದಿದೆ.










