







ಕಡಬ: ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿ ಆರು ವರ್ಷಗಳ ಹಿಂದೆ ನಡೆದಿದ್ದ ಆಸಿಡ್ ದಾಳಿ ಪ್ರಕರಣದಲ್ಲಿ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕೋಡಿಂಬಾಳದ ಜಯಾನಂದ ಕೊಠಾರಿ (60ವ.)ಎಂಬಾತನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ರೂ.3 ಲಕ್ಷ ದಂಡ ವಿಧಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆ.25ರಂದು ತೀರ್ಪು ನೀಡಿದೆ.


2020ನೇ ಜನವರಿ 23ರಂದು, ಹಣಕಾಸು ಹಾಗೂ ಜಮೀನು ವಿಚಾರಕ್ಕೆ ಸಂಬಂಧಿಸಿದ ವಿವಾದದಲ್ಲಿ ಆರೋಪಿ ಜಯಾನಂದ ರಬ್ಬರ್ ಶೀಟ್ ತಯಾರಿಸಲು ಬಳಸುವ ಆಸಿಡನ್ನು ತನ್ನ ಅತ್ತಿಗೆ ಸ್ವಪ್ನಾ ಅವರ ಮನೆ ಕಿಟಕಿ ಮೂಲ ಎರಚಿದ್ದ. ಘಟನೆಯಲ್ಲಿ ಸ್ವಪ್ನಾ ಅವರ ಮುಖ, ಕುತ್ತಿಗೆ, ಎದೆ ಹಾಗೂ ಕೈಗಳಿಗೆ ಗಂಭೀರ ಸುಟ್ಟ ಗಾಯಗಳಾಗಿತ್ತು. ಅವರೊಂದಿಗೆ ಇದ್ದ ಪುಟ್ಟ ಮಗಳಿಗೂ ಗಾಯವಾಗಿತ್ತು. ಗಾಯಾಳುಗಳನ್ನು ಕಡಬ ಆಸ್ಪತ್ರೆಗೆ ಕರೆತಂದು ಬಳಿಕ ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.



ಘಟನೆಗೆ ಸಂಬಂಧಿಸಿ ಕಡಬ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿ ಜಯಾನಂದ ಕೊಠಾರಿಯನ್ನು ಕಡಬ ಪೊಲೀಸರು ಬಂಧಿಸಿದ್ದರು.
ತನಿಖೆ ನಡೆಸಿದ್ದ ಆಗಿನ ತನಿಖಾಧಿಕಾರಿ, ಪುತ್ತೂರು ಮಹಿಳಾ ಪೊಲೀಸ್ ಠಾಣಾ ನಿರೀಕ್ಷಕರಾಗಿರುವ ಕುಸುಮಾಧರ ಅವರು ಆರೋಪಿತನ ವಿರುದ್ಧ ಸಾಕ್ಷಿಗಳನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ರವರು ಆರೋಪಿ ಜಯಾನಂದ ಕೊಠಾರಿ ತಪ್ಪಿತಸ್ಥ ಎಂದು ಆ.24ರಂದು ಘೋಷಿಸಿ,ಶಿಕ್ಷೆಯ ಪ್ರಮಾಣವನ್ನು ಆ.25ರಂದು ಪ್ರಕಟಿಸುವುದಾಗಿ ತಿಳಿಸಿದ್ದರು.
ಶಿಕ್ಷೆಯ ವಿವರ:
ಕಲಂ 326ಎ ಐಪಿಸಿಯಡಿ ಅಪರಾಧಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 3 ಲಕ್ಷ ರೂ.ದಂಡ ವಿಽಸಲಾಗಿದೆ. ದಂಡ ತೆರಲು ತಪ್ಪಿದಲ್ಲಿ 2 ವರ್ಷಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕು. ಕಲಂ 504 ಐಪಿಸಿಯಡಿಯ ಅಪರಾಧಕ್ಕಾಗಿ 1 ವರ್ಷ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ.ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ 3 ತಿಂಗಳ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಲಾಗಿದೆ. ಆರೋಪಿಯು ಕಳೆದ ಸುಮಾರು 5 ವರ್ಷ 9 ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿದ್ದು ಈ ಅವಧಿ ಜೈಲು ಶಿಕ್ಷೆಯಿಂದ ಕಡಿತವಾಗಲಿದೆ.
ದಂಡದ ಹಣ 3 ಲಕ್ಷ ರೂ.ಗಳನ್ನು ಸಂತ್ರಸ್ತೆಗೆ ನೀಡಬೇಕು. ಹಾಗೂ ಹೆಚ್ಚುವರಿ ಪರಿಹಾರ ನೀಡುವ ಕುರಿತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ಜಯಂತಿ ಎಸ್.ಭಟ್ ಅವರು ವಾದಿಸಿದ್ದರು. ಈ ಹಿಂದೆ ಕೃಷ್ಣವೇಣಿ, ಹರೀಶ್ಚಂದ್ರ ಉದ್ಯವರ್, ಪ್ರಕಾಶ್ಚಂದ್ರ ಶೆಟ್ಟಿ ಅವರು ವಾದಿಸಿದ್ದರು.










