






ಸ್ಥಳ ವೀಕ್ಷಣೆ ನಡೆಸಿದ ಶಾಸಕ ಅಶೋಕ್ ರೈ


ಪುತ್ತೂರು: ಪುತ್ತೂರು ತಾಲೂಕು ನಗರಸಭಾ ವ್ಯಾಪ್ತಿಯ ಕಸಬಾ ಗ್ರಾಮದ ಪಾಂಗಳಾಯಿಯಲ್ಲಿ ರಸ್ತೆ ಅಭಿವೃದ್ಧಿ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಕಾಮಗಾರಿಗಳಿಗೆ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರು ಅನುದಾನ ಒದಗಿಸಿ, ಶಿಲಾನ್ಯಾಸ ನೆರವೇರಿಸಿದ್ದಾರೆ.



ರಸ್ತೆ ಅಭಿವೃದ್ಧಿಗೆ ರೂ.7 ಲಕ್ಷ, ತಡೆಗೋಡೆ ನಿರ್ಮಾಣಕ್ಕೆ ರೂ.12.5 ಲಕ್ಷ:
ಆ. 8ರಂದು ಶಾಸಕ ಅಶೋಕ್ ರೈ ಅವರು ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಗಳ ಸ್ಥಳ ವೀಕ್ಷಣೆ ನಡೆಸಿ ಶಿಲಾನ್ಯಾಸ ನೆರವೇರಿಸಿದರು. ಪುತ್ತೂರು-ದರ್ಬೆ-ಪಾಂಗಳಾಯಿ ರಸ್ತೆ ಅಭಿವೃದ್ಧಿಯಾಗದೆ ಹಲವು ವರ್ಷಗಳಿಂದ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ಈ ಹಿಂದೆ ಹಲವು ಶಾಸಕರಿಗೆ ಮನವಿ ಸಲ್ಲಿಸಿದ್ದರೂ, ಸಮಸ್ಯೆಗೆ ಸೂಕ್ತ ಪರಿಹಾರ ದೊರೆತಿರಲಿಲ್ಲ. ಈ ಹಿನ್ನಲೆಯಲ್ಲಿ ದರ್ಬೆ-ಪಾಂಗಳಾಯಿ ನಿವಾಸಿಗಳು ಒಗ್ಗಟ್ಟಾಗಿ ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಿದ್ದರು. ಮನವಿ ಸಲ್ಲಿಸಿದ ಬಳಿಕ ಶಾಸಕರು ತಮ್ಮ ಆಪ್ತ ಸಹಾಯಕರವರನ್ನು ಸ್ಥಳಕ್ಕೆ ಕಳುಹಿಸಿ ಪರಿಸ್ಥಿತಿಯ ಕುರಿತು ವರದಿ ಪಡೆದುಕೊಂಡು, ರಸ್ತೆ ಅಭಿವೃದ್ಧಿಗೆ ರೂ.7 ಲಕ್ಷ ಹಾಗೂ ತಡೆಗೋಡೆ ನರ‍್ಮಾಣಕ್ಕೆ ರೂ.12.5 ಲಕ್ಷ ಅನುದಾನ ಒದಗಿಸಿದ್ದಾರೆ.
ದೀರ್ಘಕಾಲದಿಂದ ಇದ್ದ ಬೇಡಿಕೆ ಇನ್ನೂ ಕೆಲವೇ ತಿಂಗಳಲ್ಲಿ ಸುಸಜ್ಜಿತ ರಸ್ತೆಯಾಗಿ ರೂಪುಗೊಳ್ಳುವ ನಿರೀಕ್ಷೆ ಇದೆ. ಈ ಮೂಲಕ ಸ್ಥಳೀಯ ನಿವಾಸಿಗಳ ಬಹುಕಾಲದ ರಸ್ತೆ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಶಾಸಕರ ಸ್ಥಳ ಭೇಟಿಯ ಸಂದರ್ಭ ಸ್ಥಳೀಯ ನಿವಾಸಿಗಳು ತಮ್ಮ ಪ್ರದೇಶದ ಅಭಿವೃದ್ಧಿ ಸಮಸ್ಯೆಗಳು ಹಾಗೂ ಜನರ ಅಗತ್ಯಗಳನ್ನು ನೇರವಾಗಿ ಶಾಸಕರ ಗಮನಕ್ಕೆ ತರುವ ಅವಕಾಶವೂ ದೊರೆಯಿತು.
ಮುಂದುವರಿದ ರಸ್ತೆಯ ಅಭಿವೃದ್ಧಿಗಾಗಿ ಸಲ್ಲಿಸುವಂತೆ ತಿಳಿಸಿರುವ ಶಾಸಕ ಅಶೋಕ್ ರೈ, ಮುಂದಿನ ಹಂತದಲ್ಲಿ ರೂ.10 ಲಕ್ಷ ಅನುದಾನ ಒದಗಿಸಿ, ರಸ್ತೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದಾರೆ.










