






ಪುತ್ತೂರು: ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಆರ್.ಸಿ. ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಕುಂಬ್ರದ ಅಕ್ಷಯ್ ಆರ್ಕೇಡ್ನ ಮಿನಿ ಸಭಾಂಗಣದಲ್ಲಿ ಜರುಗಿತು.



ಮಹಾಸಭೆಯಲ್ಲಿ ಸಂಘದ ಸಾಧನೆಗಳು ಹಾಗೂ ವಾರ್ಷಿಕ ಲೆಕ್ಕಪತ್ರಗಳ ವಿವರಗಳನ್ನು ಮಂಡಿಸಲಾಯಿತು.



ವ್ಯವಹಾರ ಮತ್ತು ಲಾಭ:
2025-26ನೇ ಸಾಲಿನಲ್ಲಿ ಸಂಘವು ರೂ.38,94,12,077.74 ವ್ಯವಹಾರ ನಡೆಸಿದ್ದು, ನಿರಂತರ ಲಾಭ ಗಳಿಸಿ ಆಡಿಟ್ ವರದಿಯಲ್ಲಿ ‘ಎ’ ತರಗತಿಯನ್ನು ಪಡೆದುಕೊಂಡಿದೆ.
ಡಿವಿಡೆಂಡ್ ಘೋಷಣೆ:
ಸಂಘದ ಅಧ್ಯಕ್ಷರು ಸದಸ್ಯರಿಗೆ ಶೇ. 9ರಷ್ಟು (9%) ಡಿವಿಡೆಂಡ್ ಘೋಷಣೆ ಮಾಡಿದರು.

ವರದಿ ಮತ್ತು ಬಜೆಟ್ ಮಂಡನೆ:
2025-26ನೇ ಸಾಲಿನ ವರದಿಯನ್ನು ಸಂಘದ ಸಿಬ್ಬಂದಿ ಪ್ರಮೀತ ಎಸ್. ವಾಚಿಸಿದರು. ಲೆಕ್ಕಪರಿಶೋಧನಾ ಲೆಕ್ಕ ಪತ್ರ ಹಾಗೂ ಅಂದಾಜು ಬಜೆಟ್ ಅನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಕಂಪ ಮಂಡಿಸಿದರು.
ಹಿರಿಯರು ಹಾಗೂ ವೆಂಡರುದಾರರಿಗೆ ಸನ್ಮಾನ:
ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಹಿರಿಯ ಮೂರ್ತೆದಾರರಾದ ತ್ಯಾಂಪಣ್ಣ ಪೂಜಾರಿ ಆನಡ್ಕ (ಬೆಟ್ಟಂಪಾಡಿ ಗ್ರಾಮ) ಮತ್ತು ಶೀನಪ್ಪ ಪೂಜಾರಿ ಸೀಮುಂಜ (ಮಾಡನ್ನೂರು ಗ್ರಾಮ, ಕಾವು ಅಂಚೆ) ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಅಲ್ಲದೆ, ಸಂಘದ ವೆಂಡರುದಾರರಾದ ವಿಠಲ ಪೂಜಾರಿ (ಈಶ್ವರಮಂಗಲ ಮಾರಾಟ ಕೇಂದ್ರ), ನಾರಾಯಣ ಪೂಜಾರಿ (ಮುಡಿಪಿನಡ್ಕ ಮಾರಾಟ ಕೇಂದ್ರ), ಕೆ. ಮೋನಪ್ಪ ಪೂಜಾರಿ (ಕೆರೆಮಾರು ಕಾವು ಮಾರಾಟ ಕೇಂದ್ರ), ಚಂದ್ರಶೇಖರ ಪೂಜಾರಿ (ಕಣಿಯಾರು ಮಾಡಾವು ಮಾರಾಟ ಕೇಂದ್ರ) ಹಾಗೂ ದಾಮೋದರ ಪೂಜಾರಿ (ಕೆಂಗುಡೇಲು ದೇಲಂಪಾಡಿ ಮಾರಾಟ ಕೇಂದ್ರ) ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಆರ್.ಸಿ. ನಾರಾಯಣ ಅವರು ಮಾತನಾಡಿ, “ಎಲ್ಲಾ ಸದಸ್ಯರು ಸಂಘದೊಂದಿಗೆ ಹೆಚ್ಚಿನ ವ್ಯವಹಾರ ನಡೆಸುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಬೇಕು” ಎಂದು ಕೋರಿದರು ಹಾಗೂ ಎಲ್ಲಾ ಠೇವಣಿದಾರರಿಗೆ, ಕೃಪ್ತ ಸಮಯದಲ್ಲಿ ಸಾಲ ಮರುಪಾವತಿಸಿದ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ಬಿ.ಸಿ. ರೋಡ್ನ ಅಧ್ಯಕ್ಷರಾದ ಸಂಜೀವ ಪೂಜಾರಿ ಮಾತನಾಡಿ, ಸಂಘವು ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸಿ ನಿರಂತರ ಲಾಭ ಗಳಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಮಹಾಮಂಡಲದ ಸುಳ್ಯ ಶಾಖೆಯು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದ್ದು, ಎಲ್ಲರೂ ಸಹಕರಿಸಬೇಕೆಂದು ಕೋರಿ ಸಂಘಕ್ಕೆ ಶುಭ ಹಾರೈಸಿದರು.
ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ಪ್ರೋತ್ಸಾಹಧನ:
ಮೂರ್ತೆದಾರರ ಮಕ್ಕಳಿಗೆ ಒಟ್ಟು ರೂ.30,500 ವಿದ್ಯಾರ್ಥಿ ಪ್ರೋತ್ಸಾಹಧನ ನೀಡಲಾಯಿತು. ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ಸನ್ನಿಧಿ ಎಸ್. ಕುರಿಕ್ಕಾರ, ದೀಪ್ತಿ ಕೆ.ಸಿ. ಕಣಿಯಾರು ಮತ್ತು ಪೃಥ್ವಿ ವಿ.ಡಿ. ದರ್ಬೆತ್ತಡ್ಕ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇತ್ತೀಚೆಗೆ ನಿವೃತ್ತರಾದ ಕೆ.ಎಸ್.ಆರ್.ಟಿ.ಸಿ. ಸಂಚಾರ ನಿಯಂತ್ರಕ ಹಾಗೂ ಸಂಘದ ಸದಸ್ಯ ಕೋಚಣ್ಣ ಪೂಜಾರಿ ಎಂಡೆಸಾಲು ಅವರನ್ನು ಗೌರವಿಸಲಾಯಿತು. ಸಂಘದ ಅಗಲಿದ ಮೂರ್ತೆದಾರ ಸದಸ್ಯ ದಿವಂಗತ ರಾಜು ಪೂಜಾರಿ ಪಿಲಿಪಂಜರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಾತ್ವಿಕ ದರ್ಬೆತ್ತಡ್ಕ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ನಿತೀಶ್ ಕುಮಾರ್ ಶಾಂತಿಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಧನಂಜಯ ಪೂಜಾರಿ ಪಟ್ಲ ಮತ್ತು ನಿರ್ದೇಶಕ ವಸಂತ ಪೂಜಾರಿ ಬಂಬಿಲ ಮೂರ್ತೆದಾರರ ಸನ್ಮಾನ ಪತ್ರವನ್ನು ವಾಚಿಸಿದರು.
ನಿರ್ದೇಶಕಿ ತ್ರಿವೇಣಿ ಪಲ್ಲತ್ತಾರು ಮಹಾಸಭೆಯ ತಿಳುವಳಿಕೆ ಪತ್ರವನ್ನು ಹಾಗೂ ನಿರ್ದೇಶಕಿ ಸುಷ್ಮಾ ಕುಮಾರಿ ವೆಂಡರುದಾರರ ಸನ್ಮಾನ ಪತ್ರವನ್ನು ವಾಚಿಸಿದರು. ನಿರ್ದೇಶಕ ನಾರಾಯಣ ಪೂಜಾರಿ ಕುರಿಕ್ಕಾರ ವಿದ್ಯಾರ್ಥಿವೇತನದ ಪಟ್ಟಿ ಮತ್ತು ಸಿಬ್ಬಂದಿ ಶ್ರುತಿ ಕೆ. ಪ್ರತಿಭಾ ಪುರಸ್ಕಾರದ ಪಟ್ಟಿಯನ್ನು ವಾಚಿಸಿದರು. ನಿರ್ದೇಶಕರಾದ ವಿಜಯ ಪೂಜಾರಿ ಆನಡ್ಕ ಮತ್ತು ರಾಮಣ್ಣ ಪೂಜಾರಿ ಕನರೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತೀಶ್ ಕೋಡಿಬೈಲು ವಂದಿಸಿದರು. ಪಿಗ್ಮಿ ಸಂಗ್ರಾಹಕ ಸುದೇಂದ್ರನ್ ಪಿ. ಸಹಕರಿಸಿದರು.










