ಕಾವಿನಲ್ಲಿ ಓಮ್ನಿ ಕಳ್ಳತನ ಪ್ರಕರಣ – ಅಂತರ್ರಾಜ್ಯ ಗ್ಯಾಂಗ್‌ನ 4 ಮಂದಿ ಅರೆಸ್ಟ್: ಕದ್ದ ಕಾರು ತಮಿಳುನಾಡಲ್ಲಿ ಆಂಬುಲೆನ್ಸ್ ಆಗಿತ್ತು!

0

ಪುತ್ತೂರು:ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವು ಎಂಬಲ್ಲಿ ಎರಡು ತಿಂಗಳ ಹಿಂದೆ ನಡೆದಿದ್ದ ಮಾರುತಿ ಓಮ್ನಿ ಕಾರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂತರ್ರಾಜ್ಯ ಕಳ್ಳರ ಜಾಲವನ್ನು ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಕಾಸರಗೋಡು ಬಾಯಾರ ಗ್ರಾಮದ ಚಿಪ್ಪಾರ ಅಬ್ದುಲ್ ಸಾಯಿಲ್ ಜೆ (25 ವ.),ಮಂಜೇಶ್ವರ ಕಜೆ ರಸ್ತೆ ಮೊಹಮ್ಮದ್ ಆಸೀಕ್ (25 ವ.), ಉಪ್ಪಳದ ಮೊಹಮ್ಮದ್ ಸಿರಾಜ್ (28 ವ.)ಹಾಗೂ ತಮಿಳ್ನಾಡಿನ ಕರೂರು ಜಿಲ್ಲೆಯ ಶಕ್ತಿವೇಲು ಜಿ (24 ವ.)ಬಂಧಿತ ಆರೋಪಿಗಳು.


ಮಾಡ್ನೂರು ಗ್ರಾಮದ ಕಾವು ಎಂಬಲ್ಲಿ ‘ಶ್ರೇಯಾ ರಿಂಗ್’ ಘಟಕವನ್ನು ನಡೆಸಿಕೊಂಡಿರುವ ಕೇರಳ ಮೂಲದ ಪ್ರಮೋದ್ ಎಸ್.ಎಂಬವರ ಮಾರುತಿ ಒಮ್ನಿ ಕಾರನ್ನು(ಕೆ.ಎ.21 ಪಿ.1640)ಅವರ ಚಾಲಕ ಬಶೀರ್ ಎಂಬವರು ಕೆಲಸದ ನಿಮಿತ್ತ ಕಳೆದ ಜೂ.19ರಂದು ತೆಗೆದುಕೊಂಡು ಹೋದವರು ಮಧ್ಯಾಹ್ನ ಕಾವಿನಲ್ಲಿರುವ ಶ್ರೇಯಾ ರಿಂಗ್ ಯೂನಿಟ್‌ನ ಶೆಡ್‌ನಲ್ಲಿಟ್ಟು, ಕೀಯನ್ನು ಚಾಲಕನ ಸೀಟಿನ ಮೇಲಿನ ಸನ್ ಸೆಡ್‌ನ ಒಳಗೆ ಇಟ್ಟು ಹೋಗಿದ್ದರು. ಮರು ದಿನ ಬೆಳಿಗ್ಗೆ ಬಂದು ನೋಡಿದಾಗ ಒಮ್ನಿ ಕಳವಾಗಿತ್ತು.ಈ ಕುರಿತು ಪ್ರಮೋದ್ ಅವರು ಪುತ್ತೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು.ಕಳವಾದ ಒಮ್ನಿಯ ಮೌಲ್ಯ ಸುಮಾರು 1.6 ಲಕ್ಷ ರೂ.ಎಂದು ದೂರಿನಲ್ಲಿ ತಿಳಿಸಿದ್ದರು.ಪೊಲೀಸರು ಈ ಕುರಿತು ಕಲಂ 303(2) ಬಿಎನ್‌ ಎಸ್ ಅಡಿಯಲ್ಲಿ ಪ್ರಕರಣ(94/2026)ದಾಖಲಿಸಿಕೊಂಡಿದ್ದರು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.


ಕಳವಾಗಿದ್ದ ಓಮ್ನಿ ಕಾರ್(ಅಂದಾಜು ಮೌಲ್ಯ ರೂ.2.5ಲಕ್ಷ)ಮತ್ತು ಕೃತ್ಯಕ್ಕೆ ಬಳಸಿದ್ದ ಕೆಟಿಎಂ ಬೈಕ್(ಅಂದಾಜು ಮೌಲ್ಯ ರೂ.1 ಲಕ್ಷ)ಸೇರಿ 3.5 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಪೊಲೀಸರು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ.


ನ್ಯಾಯಾಂಗ ಬಂಧನ:
ಬಂಧಿತ ಆರೋಪಿಗಳನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


ಪೊಲೀಸ್ ತಂಡದ ಭರ್ಜರಿ ಕಾರ್ಯಾಚರಣೆ:
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧಿಕ್ಷಕ ಡಾ.ಅರುಣ್ ಕೆ, ಹೆಚ್ಚುವರಿ ಪೊಲೀಸ್ ಅಽಕ್ಷಕ ಅನಿಲ್ ಕುಮಾರ್ ಎಸ್.ಭೂಮರೆಡ್ಡಿ ಅವರ ಆದೇಶದಂತೆ, ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಪ್ರಮೋದ್ ಕುಮಾರ್ ಅವರ ನಿರ್ದೇಶನ ಹಾಗೂ ಪ್ರಭಾರ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಗುಣಪಾಲ ಜೆ ಮತ್ತು ಸುಷ್ಮಾ ಜಿ ಭಂಡಾರಿ ಅವರ ನೇತೃತ್ವದ ತಂಡದಲ್ಲಿ ಪ್ರೊಬೇಷನರಿ ಪಿಎಸ್‌ಐ ಅರುಣ್, ಹೆಚ್‌ಸಿಗಳಾದ ರಮೇಶ್, ಸುಬ್ರಹ್ಮಣ್ಯ, ನಾಗರಾಜ, ಅಪರಾಧ ವಿಭಾಗದ ಸಿಬ್ಬಂದಿಗಳಾದ ಶರಣಪ್ಪ ಪಾಟೀಲ್, ಈರಣ್ಣ, ಅವಿನಾಶ್, ಮಹಿಳಾ ಸಿಬ್ಬಂದಿ ದಾಕ್ಷಾಯಣಿ, ಹೋಂ ಗಾರ್ಡ್ ಹರಿಪ್ರಸಾದ್ ಹಾಗೂ ಜಿಲ್ಲಾ ಸಿಡಿಆರ್ ವಿಭಾಗದ ಸಂಪತ್ ಮತ್ತು ದಿವಾಕರ್ ಭಾಗವಹಿಸಿದ್ದರು.

ತಮಿಳ್‌ನಾಡಲ್ಲಿ ಆಂಬುಲೆನ್ಸ್ ಆಗಿ ಓಡಾಟ
ಆರೋಪಿಗಳು ಕಾವುನಿಂದ ಒಮ್ನಿ ಕಾರನ್ನು ಕದ್ದು ಕೇರಳಕ್ಕೆ ತೆಗೆದುಕೊಂಡು ಹೋಗಿ, ಬಳಿಕ ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದರು.ಅಷ್ಟೇ ಅಲ್ಲದೆ,ಕದ್ದ ಕಾರನ್ನು ಮಾಡಿಫಿಕೇಶನ್ ಮಾಡಿ ತಮಿಳುನಾಡಿನಲ್ಲಿ ಆಂಬುಲೆನ್ಸ್ ಆಗಿ ಪರಿವರ್ತಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ.ಬಂಧಿತರು ಈ ಹಿಂದೆ ಕೇರಳದ ಬದಿಯಡ್ಕ ಹಾಗೂ ವಿದ್ಯಾನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹೌಸ್ ಬ್ರೇಕಿಂಗ್ , ಅಡಿಕೆ ಕ ಳ್ಳತನ ಹಾಗೂ ಕಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಹಳೆಯ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here