






ಉತ್ತಮ ಸಂವಹನ ಕೌಶಲ್ಯಗಳು ವೃತ್ತಿ ಜೀವನವನ್ನು ಉತ್ತಮಗೊಳಿಸುತ್ತವೆ – ನೀಮಾ.


ಪುತ್ತೂರು: ಆ. 21: ಆತ್ಮವಿಶ್ವಾಸ, ಹೊಂದಿಕೊಳ್ಳುವಿಕೆ, ಜವಾಬ್ದಾರಿತನ, ಶ್ರೇಷ್ಠತೆ, ಉದ್ಯೋಗಾರ್ಹತೆ ಕೌಶಲ್ಯಗಳು ಹಾಗೂ ಸವಾಲುಗಳನ್ನು ಎದುರಿಸುವುದು ಪ್ರತಿಯೊಬ್ಬರ ವೃತ್ತಿಜೀವನದಲ್ಲಿ ಮುಖ್ಯ ಅಂಶಗಳಾಗಿವೆ. ಸಂವಹನ ಕೌಶಲ್ಯಗಳು ನಮ್ಮ ಜೀವನವನ್ನು ಉತ್ತಮಗೊಳಿಸುತ್ತವೆ ಜೊತೆಗೆ ತಾಂತ್ರಿಕ ಕೌಶಲ್ಯಗಳು, ನಿರಂತರ ಅಭ್ಯಾಸ ವೃತ್ತಿ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಯಾವುದೇ ಕಂಪನಿಗಳಾದರೂ ಉದ್ಯೋಗಿಯ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಆತ್ಮಶಿಸ್ತು ಮತ್ತು ಜವಾಬ್ದಾರಿಯುತ ನಡವಳಿಕೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತವೆ. ವಿಶೇಷವಾಗಿ ಅಂತಹ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮಾತನಾಡುವುದು, ಪ್ರಸ್ತುತೀಕರಣ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಮತ್ತು ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಅತ್ಯಗತ್ಯ.
ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಪಡೆಯಲು ಪಠ್ಯಕ್ರಮದ ಜೊತೆಗೆ ಕೌಶಲ್ಯ ಆಧಾರಿತ ಕಲಿಕೆಗೆ ಹೆಚ್ಚಿನ ಪ್ರಯತ್ನವನ್ನು ಮಾಡಬೇಕು. ಹಾಗಾಗಿ ತಮ್ಮ ಸಾಮರ್ಥ್ಯಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳುವುದು ಮುಖ್ಯ. ಸ್ವಯಂ ಹಾಗೂ ಇತರ ಆನ್ಲೈನ್ ಕಲಿಕಾ ವೇದಿಕೆಗಳ ಮೂಲಕ ಹೆಚ್ಚುವರಿ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಕುತೂಹಲವನ್ನು ಹೆಚ್ಚಿಸಿಕೊಂಡು, ಉಪಯುಕ್ತ ಮಾಹಿತಿಯನ್ನು ಸಂಗ್ರಹಿಸಿ, ಅದರ ಮಹತ್ವವನ್ನು ಅರಿತುಕೊಳ್ಳುವುದರಿಂದ ಈ ಕಾರ್ಯಾಗಾರವು ಯಶಸ್ಸಿನ ಜೊತೆಗೆ ಕ್ಯಾಂಪಸ್ ಪ್ಲೇಸ್ಮೆಂಟ್ ಪಡೆಯಲು ನೆರವಾಗುತ್ತವೆ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ ನೀಮಾ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ಗಣಕ ಶಾಸ್ತ್ರ ವಿಭಾಗ, ಐಕ್ಯೂಎಸಿ ಘಟಕ ಹಾಗೂ ಟ್ರೈನಿಂಗ್ ಆಂಡ್ ಪ್ಲೇಸ್ಮೆಂಟ್ ಘಟಕ ಆಯೋಜಿಸಿದ ಬಿ.ಸಿ.ಎ ನಂತರದ ವೃತ್ತಿ ಅವಕಾಶಗಳು, ಉದ್ಯೋಗ ಮತ್ತು ಉನ್ನತ ಶಿಕ್ಷಣ ಎಂಬ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಮಾತನಾಡಿ, ಅಂತಿಮ ವರ್ಷದ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು ಒಂದು ಉತ್ತಮ ಅವಕಾಶ. ಉದ್ಯೋಗಾವಕಾಶಗಳು ಮತ್ತು ಪ್ಲೇಸ್ಮೆಂಟ್ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ. ಕೃಷ್ಣ ಗಣರಾಜ್ ಭಟ್ ಸಂಪನ್ಮೂಲ ವ್ಯಕ್ತಿ ನೀಮಾರವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಮತ್ತು ಕಾರ್ಡಿನೇಟರ್ ದೀಪಿಕಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ತೃತೀಯ ಬಿ.ಸಿ.ಎ ವಿಭಾಗದ ವಿದ್ಯಾರ್ಥಿನಿ ಕೆ. ದೀಪಿಕಾ ಪ್ರಭು ಸ್ವಾಗತಿಸಿ, ನಿರೂಪಿಸಿದರು.













