ಆ.31ರ ಚಲೋಗೆ ಅನುಮತಿ ನೀಡಬಾರದು : ಅನ್ವರ್ ಸಾದತ್

0

ಪುತ್ತೂರಿನ ಶಾಂತಿ, ಸಾಮರಸ್ಯ ಕದಡುವ ಪ್ರಯತ್ನಕ್ಕೆ ಅವಕಾಶ ನೀಡಬೇಡಿ

ಪುತ್ತೂರು: ಬಿಜೆಪಿ ಹಾಗೂ ಸಂಘಪರಿವಾರದವರು ಆ.31ರಂದು ಹಮ್ಮಿಕೊಂಡಿರುವ ಚಲೋ ಕಾರ್ಯಕ್ರಮಕ್ಕೆ ಸರಕಾ ಹಾಗೂ ಪೊಲೀಸ್ ಇಲಾಖೆ ಅನುಮತಿ ನೀಡಬಾರದು. ಇದು ಒಳ್ಳೆಯ ಉದ್ದೇಶದಿಂದ ನಡೆಯುವ ಚಳುವಳಿಯಲ್ಲ. ಈಗಾಗಲೇ ಬಂದ್‌ಗೆ ಕರೆ ನೀಡಿ ಪುತ್ತೂರಿನಲ್ಲಿ ಗೊಂದಲದ ವಾತಾವರಣ ಸೃಷ್ಟಿಸಲಾಗಿದ್ದು, ಇದೀಗ ಚಲೋ ಮೂಲಕ ಮತ್ತೆ ಜನರಲ್ಲಿ ಭಯದ ವಾತಾವರಣ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಆರೋಪಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಪುತ್ತೂರು ದರ್ಬೆಯಲ್ಲಿ ನಡೆದ ಸೈಬರ್ ಅಂಗಡಿ ಘಟನೆಯನ್ನು ಮುಂದಿಟ್ಟುಕೊಂಡು ಸಂಘಪರಿವಾರ ಹಾಗೂ ಬಿಜೆಪಿ ಮುಖಂಡರು ದಿನಕ್ಕೊಬ್ಬರಂತೆ ಪುತ್ತೂರಿಗೆ ಆಗಮಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಣ್ಣ ಘಟನೆಯೊಂದನ್ನು ದೊಡ್ಡ ವಿವಾದವಾಗಿ ಪರಿವರ್ತಿಸಿ, ಶಾಂತಿ ಮತ್ತು ಸಾಮರಸ್ಯದಿಂದ ಇರುವ ಪುತ್ತೂರಿನಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗುವ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ದೂರಿದರು. ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸವನ್ನು ಗಮನಿಸಿದರೆ ಸಂಘಪರಿವಾರದ ಮುಖಂಡರು ವಿವಿಧ ಸಭೆ, ಸಮಾಜೋತ್ಸವ ಹಾಗೂ ಹಿಂದೂ ಸಮಾವೇಶಗಳ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ನಡೆಸಿದ ಬಳಿಕ ಕೆಲವು ಕಡೆಗಳಲ್ಲಿ ಕೋಮು ಸಂಘರ್ಷಗಳು ನಡೆದಿರುವ ಉದಾಹರಣೆಗಳಿವೆ. ಇದೇ ರೀತಿಯ ಪರಿಸ್ಥಿತಿ ಪುತ್ತೂರಿನಲ್ಲಿ ನಿರ್ಮಾಣವಾಗಲು ಅವಕಾಶ ನೀಡಬಾರದು. ಪುತ್ತೂರಿನ ಜನರು ಪ್ರಜ್ಞಾವಂತರಾಗಿದ್ದು, ಶಾಂತಿ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ರಾಜಕೀಯ ಮೈಲೇಜ್‌ಗಾಗಿ ಈ ಘಟನೆಯನ್ನು ಬಳಸಿಕೊಂಡು ಬೆಂಕಿ ಹಚ್ಚುವ ಪ್ರಯತ್ನ ಮಾಡಬಾರದು ಎಂದರು. ಈದ್ ಮಿಲಾದ್ ದಿನದಂದು ಬಂದ್‌ಗೆ ಕರೆ ನೀಡಿರುವುದನ್ನೂ ಪ್ರಶ್ನಿಸಿದ ಅವರು, ಬಲವಂತದ ಬಂದ್‌ಗೆ ಕಾನೂನಿನಲ್ಲಿ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಿದ ವಿಚಾರದಲ್ಲಿಯೂ ಕ್ರಮ ಕೈಗೊಳ್ಳಬೇಕು. ಇದೀಗ ಅದರ ಮುಂದುವರಿದ ಭಾಗವಾಗಿ ಆ.31ರಂದು ಚಲೋ ಆಯೋಜಿಸಲಾಗಿದೆ. ಚಲೋ ನಡೆಸುವುದಕ್ಕೆ ತಮ್ಮ ವಿರೋಧವಿಲ್ಲ, ಆದರೆ ಜನರ ಸಮಸ್ಯೆಗಳಿಗೆ ಸಂಬಂಧಿಸಿದ ಹಾಗೂ ಒಳ್ಳೆಯ ಉದ್ದೇಶದ ವಿಚಾರಗಳಿಗಾಗಿ ಚಲೋ ನಡೆಸಲಿ. ಜನಜೀವನ ಅಸ್ತವ್ಯಸ್ತಗೊಳಿಸುವ ಹಾಗೂ ಕೋಮು ಭಾವನೆ ಕೆರಳಿಸುವ ಉದ್ದೇಶದ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.

ಪುತ್ತೂರಿಗೆ ಆಗಮಿಸಿ ಹೇಳಿಕೆ ನೀಡುತ್ತಿರುವ ಕೆಲ ಮುಖಂಡರ ಭಾಷಣಗಳು ಹಾಗೂ ಹೇಳಿಕೆಗಳ ಬಗ್ಗೆಯೂ ಪೊಲೀಸರು ಗಮನಹರಿಸಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜಕೀಯ ಮುಖಂಡರು ಶಾಂತಿ ಕಾಪಾಡುವ ಸಂದೇಶ ನೀಡುವ ಬದಲು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಇಂತಹ ಹೇಳಿಕೆಗಳಿಂದ ಎರಡು ಸಮುದಾಯಗಳ ನಡುವೆ ಅಂತರ ಹೆಚ್ಚಾಗುವ ಸಾಧ್ಯತೆ ಇದೆ. ಪುತ್ತೂರಿನ ಜನರು ಶಾಂತಿ ಹಾಗೂ ಸಾಮರಸ್ಯವನ್ನು ಬಯಸುತ್ತಿದ್ದಾರೆ. ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷದವರು ನಗರದ ನೆಮ್ಮದಿಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳಬಾರದು. ಪುತ್ತೂರಿಗೆ ಬಂದು ಬೆಂಕಿ ಹಚ್ಚುವಂತಹ ಪ್ರಯತ್ನವನ್ನು ಯಾರೇ ಮಾಡಿದರೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅನ್ವರ್ ಸಾದತ್ ಹೇಳಿದರು.


ಶಾಸಕರ ಮೌನಕ್ಕೆ ಪ್ರಶ್ನೆ
ಪುತ್ತೂರಿನಲ್ಲಿ ಪ್ರತಿದಿನವೂ ಒಂದಲ್ಲೊಂದು ಹೇಳಿಕೆಗಳು ಹೊರಬರುತ್ತಿದ್ದು, ಮುಸ್ಲಿಮರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸ್ಪಷ್ಟವಾಗಿ ಮಾತನಾಡಬೇಕು. ಶಾಂತಿ ಮತ್ತು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಶಾಸಕರು ತಮ್ಮ ನಿಲುವು ಪ್ರಕಟಿಸಬೇಕು. ನಮ್ಮ ಶಾಸಕರು ದಿನಕ್ಕೊಂದರಂತೆ ಹೇಳಿಕೆ ಕೊಡ್ತಾ ಇದ್ದಾರೆ. ಆದರೆ ಈ ಘಟನೆಯಲ್ಲಿ ನಮ್ಮ ಶಾಸಕರು ಏನು ಮಾಡ್ತಾ ಇದ್ದಾರೆ ? ಎಲ್ಲಿದ್ದಾರೆ ? ಅವರು ಬಾಕಿ ಸಮಯದಲ್ಲಿ ಮೀಡಿಯಾ ಟೀಮ್‌ನ್ನು ಮತ್ತು ಕ್ಯಾಮೆರಾ ಮ್ಯಾನ್ ಅನ್ನು ಕರ್ಕೊಂಡು ಹೋಗಿ, ಅಂಗಿಗೆ ಮೂರುನಾಲ್ಕು ಮೈಕ್‌ನ್ನು ಸಿಕ್ಕಿಸಿಕೊಂಡು ಬೈಟ್ ಕೊಡ್ತಾ ಇದ್ದಾರಲ್ಲ. ಇವಾಗ ಏನು, ಅವರ ಕ್ಯಾಮೆರಾ ಮ್ಯಾನ್ ಇಲ್ಲವಾ ? ಇವಾಗ ಅವರ ಕ್ಯಾಮೆರಾದ ಬ್ಯಾಟರಿ ಮುಗಿದು ಹೋಯ್ತಾ ? ಏನು ಅವರು ಮಾತನಾಡ್ತಾ ಇಲ್ಲ ? ಯಾಕೆ ಪುತ್ತೂರು ಶಾಸಕರು ಮಾತನಾಡ್ತಾ ಇಲ್ಲ ? ನಿನ್ನೆ ಒಬ್ಬರು ಕಾಂಗ್ರೆಸ್ ಮುಖಂಡರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ “ಶಾಸಕರು ಅವರ ಬಳಿಗೆ ಹೋದರು, ಇವರ ಬಳಿಗೆ ಹೋದರು.” ಶಾಸಕರಾದವರು ಎಲ್ಲರ ಬಳಿಗೆ ಹೋಗಲಿ. ಈಪುತ್ತೂರಿಗೆ, ಬೆಂಕಿ ಹಚ್ಚಲು ಬಿಜೆಪಿಯವರು ಪ್ರಯತ್ನ ಪಡ್ತಾ ಇರುವಾಗ ಮತ್ತು ಮುಸಲ್ಮಾನರ ವಿರುದ್ಧ ಹೇಳಿಕೆ ಕೊಡ್ತಾ ಇರುವಾಗ, ಯಾಕೆ ಈ ಶಾಸಕರು ಮಾತನಾಡ್ತಾ ಇಲ್ಲ ? ಇವರಿಗೆ ಸಿಕ್ಕಿದಂತಹ ೬೬,೦೦೦ ಮತಗಳಲ್ಲಿ ಶೇ.೮೮ ಕ್ಕೂ ಹೆಚ್ಚು ಮತ ಮುಸಲ್ಮಾನರ ವೋಟಾಗಿದೆ. ಆ ಮುಸಲ್ಮಾನರನ್ನು ಇವತ್ತು ಆರೋಪಿ ಸ್ಥಾನದಲ್ಲಿ ನಿಲ್ಲಿಸುವಾಗ, ಇವರು ಯಾಕೆ ಇವರ ಬಾಯಿ ಬಂದಾಗಿದೆ ? ಇವರು ಸಂಘ-ಪರಿವಾರದ ಪರವಾಗಿದ್ದಾರಾ ? ನಮಗೆ ಅರ್ಥ ಆಗಬೇಕು. ಅವರು ಹಳೆಯ ಸಂಘದೊಂದಿಗೆ ನಿಷ್ಠೆ ತೋರಿಸ್ತಾ ಇದ್ದಾರಾ ? ಅವರು ಡಿಜಿಪಿಗೆ ಪತ್ರ ಬರೆಯಬಹುದಿತ್ತು. ಎಸ್ಪಿ ಮೇಲೆ ಒತ್ತಡ ಹೇರಬಹುದಿತ್ತು. ಸರಕಾರ ಅವರದ್ದೇ ಇದೆ. ಹೋಂ ಮಿನಿಸ್ಟರ್‌ಗೆ ತಿಳಿಸಬಹುದಿತ್ತು. ಎಲ್ಲಿಯೂ ಅವರನ್ನು ಕಾಣ್ತಾ ಇಲ್ಲ. ಇದು ಕೂಡ ಒಂದು ಪ್ರಶ್ನಾರ್ಥಕ ಚಿಹ್ನೆ. ನಮಗೆ ಪುತ್ತೂರು ಶಾಸಕರ ನಡೆಯ ಬಗ್ಗೆ ಸಂಶಯವಿದೆ, ಅದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಅನ್ವರ್ ಸಾದತ್ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಶಾಕೀರ್ ಅಳಕೆಮಜಲು, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಎ. ಹಾಗೂ ಉಪಾಧ್ಯಕ್ಷ ಅಬ್ದುಲ್ ಕಲಾಂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here