







ರೂ.220 ಕೋಟಿ ವ್ಯವಹಾರ, ರೂ.1.50 ಕೋಟಿ ನಿವ್ವಳ ಲಾಭ, ಶೇ.7 ಡಿವಿಡೆಂಡ್ ಘೋಷಣೆ


ಪುತ್ತೂರು: ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತುರವರ ಅಧ್ಯಕ್ಷತೆಯಲ್ಲಿ ಆ.29 ರಂದು ತಿಂಗಳಾಡಿ ಕೇಂದ್ರ ಕಛೇರಿಯ ವಠಾರದಲ್ಲಿ ನಡೆಯಿತು.



ಸಂಘವು 2025-26 ನೇ ಸಾಲಿನ ವರದಿ ವರ್ಷದಲ್ಲಿ ಒಟ್ಟು ರೂ.220.62 ಕೋಟಿ ವ್ಯವಹಾರ ನಡೆಸಿ ರೂ.1 ಕೋಟಿ 50 ಲಕ್ಷದ 59 ಸಾವಿರ ನಿವ್ವಳ ಲಾಭ ಗಳಿಸಿದೆ. ಇದರಲ್ಲಿ ಸಂಘದ ಸದಸ್ಯರಿಗೆ ಶೇ.07 ಡಿವಿಡೆಂಡ್ ನೀಡುವುದಾಗಿ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತುರವರು ತಿಳಿಸಿದರು. ಸಂಘವು ತನ್ನ 68 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಅತೀ ಹೆಚ್ಚು ಲಾಭವನ್ನು ಪಡೆದುಕೊಂಡಿದ್ದು ಇದು ಸರ್ವ ಸದಸ್ಯರುಗಳ ಸಹಕಾರದಿಂದ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮೆಲ್ಲ ಸದಸ್ಯ ಬಾಂಧವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು. ಸಂಘದ ನೂತನ ಕಛೇರಿ ಕಟ್ಟಡವು ತಿಂಗಳಾಡಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು ಈಗಾಗಲೇ ಕಟ್ಟಡದ ಕಾಮಗಾರಿ ಬಹುತೇಕ ಮುಗಿದಿದ್ದು ಮುಂದಿನ ನಾಲ್ಕು ತಿಂಗಳೊಳಗೆ ಕಾಮಗಾರಿ ಪೂರ್ತಿಯಾಗಿ ಕಟ್ಟಡ ಲೋಕಾರ್ಪಣೆಯಾಗಲಿದೆ. ಈ ನಿಟ್ಟಿನಲ್ಲಿ ಲಾಭಾಂಶದಲ್ಲಿ ಕಛೇರಿ ಕಟ್ಟಡ ನಿರ್ಮಾಣಕ್ಕೆ ಒಂದಂಶವನ್ನು ಕಾಯ್ದಿರಿಸುವ ಬಗ್ಗೆ ಸದಸ್ಯರ ಅಭಿಪ್ರಾಯ ಪಡೆದರು. ಇದಲ್ಲದೆ ಮುಂದಿನ ಹಂತದಲ್ಲಿ ಸುಮಾರು 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಯ್ಯೂರಿನಲ್ಲೂ ದಾಸ್ತಾನು ಕಟ್ಟಡ ನಿರ್ಮಾಣದ ಬಗ್ಗೆಯೂ ತಿಳಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ರೈ ದೇರ್ಲರವರು 2025-26 ನೇ ಸಾಲಿನ ಆಡಳಿತ ವರದಿಯನ್ನು ಮಂಡಿಸಿದರು.ಸದಸ್ಯತನ ಮತ್ತು ಪಾಲು ಬಂಡವಾಳ: ವರದಿ ಸಾಲಿನಲ್ಲಿ 2490 ಸದಸ್ಯರಿದ್ದು ರೂ. 3,55,76,290-00 ಪಾಲು ಬಂಡವಾಳ ಹೊಂದಿರುತ್ತೇವೆ. ವರದಿ ವರ್ಷದ ಆರಂಭದಲ್ಲಿ ರೂ.21.15 ಕೋಟಿ ವಿವಿಧ ರೀತಿಯ ಠೇವಣಿಗಳು ಇದ್ದು, ರೂ.66.42 ಕೋಟಿ ಜಮೆಯಾಗಿ ರೂ.64.74 ಕೋಟಿ ಖರ್ಚಾಗಿ ವರ್ಷಾಂತ್ಯದಲ್ಲಿ ರೂ.22.83 ಕೋಟಿ ಠೇವಣಿ ಇರುತ್ತದೆ.ನಿಧಿಗಳು: ಕ್ಷೇಮನಿಧಿ, ಕಟ್ಟಡ ನಿಧಿ, ಸವಕಳಿನಿಧಿ, ಹಾಗೂ ಇತರ ನಿಧಿಗಳು ಸೇರಿ ಒಟ್ಟು ಮೊತ್ತ ರೂ.6.66 ಕೋಟಿ ಇರುತ್ತದೆ. ಪಡೆದ ಸಾಲಗಳಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿAದ ಪಡಕೊಂಡ ಸಾಲ ವರ್ಷಾರಂಭದಲ್ಲಿ ರೂ.18.70 ಕೋಟಿ ಇದ್ದು, ರೂ.21.30 ಕೋಟಿ ಪಡಕೊಂಡು, ರೂ.20.59 ಕೋಟಿ ಮರುಪಾವತಿಸಲಾಗಿದೆ. ವರ್ಷಾಂತ್ಯಕ್ಕೆ ರೂ. 19.41 ಕೋಟಿ ಹೊರಬಾಕಿ ಇದ್ದು ಯಾವುದೇ ಸುಸ್ತಿ ಇರುವುದಿಲ್ಲ ಎಂದು ತಿಳಿಸಿದರು. ಸದಸ್ಯರಿಗೆ ನೀಡಿದ ಸಾಲಗಳಲ್ಲಿ ವರ್ಷಾರಂಭದಲ್ಲಿ ರೂ.32.07 ಕೋಟಿ ಸಾಲ ಇದ್ದು ರೂ.33.32 ಕೋಟಿ ವಿತರಿಸಿ, ರೂ.29.91 ಕೋಟಿ ವಸೂಲಾಗಿದ್ದು, ವರ್ಷಾಂತ್ಯಕ್ಕೆ ರೂ.35.48 ಕೋಟಿ ಹೊರಬಾಕಿ ಇರುತ್ತದೆ. ವರದಿ ವರ್ಷದಲ್ಲಿ ವಸೂಲಾತಿ ಶೇಕಡಾ 99.14% ಆಗಿರುತ್ತದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ರೈ ದೇರ್ಲ ತಿಳಿಸಿದರು. ದಿನಾಂಕ 31.03.2026 ಕ್ಕೆ ರೂ.26.03 ಲಕ್ಷ ಸುಸ್ತಿ ಸಾಲ ಇರುತ್ತದೆ. ವಾಯಿದೆ ದಾಟಿದ ಸಾಲಗಳ ವಸೂಲಾತಿಗೆ ಕಾನೂನು ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಸುಸ್ತಿದಾರ ಸದಸ್ಯರು ಕೂಡಲೇ ಸಾಲ ಮರುಪಾವತಿಸಿ ಸಹಕರಿಸಬೇಕಾಗಿ ವಿನಂತಿ ಮಾಡಿಕೊಂಡರು. ಬೆಳೆಸಾಲ ಪಡೆಯಲು ಇಚ್ಚಿಸುವ ಸದಸ್ಯರು ತಮ್ಮ ಸ್ವಾದೀನದ ಪಹಣಿಪತ್ರಗಳನ್ನು ಬೆಳೆ ವಿವರಗಳೊಂದಿಗೆ ಸಂಘಕ್ಕೆ ನೀಡಿ ಮಿತಿ ನಿಗದಿಪಡಿಸಿಕೊಳ್ಳುವುದು ಅವಶ್ಯವಾಗಿದೆ.
ಬೆಳೆ ಸಾಲ ಪಡೆದ ರೈತರು ಸಂಘದ ಮುಖಾಂತರ ಅಡಿಕೆ ಮಾರಾಟ ಮಾಡಬೇಕಾಗಿರುವುದರಿಂದ ಸಂಘದ ಮುಖಾಂತರ ಅಡಿಕೆ ಮಾರಾಟ ಮಾಡಬೇಕಾಗಿ ತಿಳಿಸಿದರು. ವರದಿ ವರ್ಷದಲ್ಲಿ ಸರಕಾರದ ಯೋಜನೆಯಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಅಡಿಯಲ್ಲಿ ಒಟ್ಟು 918 ಸದಸ್ಯರು ನೊಂದಣಿಯಾಗಿದ್ದು ರೂ.48,14,520.00 ಪ್ರೀಮಿಯಂ ಮೊತ್ತ ಪಾವತಿಸಲಾಗಿದೆ.
ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಡಿಯಲ್ಲಿ 1199 ಸದಸ್ಯರು ನೊಂದಯಿಸಲ್ಪಟ್ಟಿರುತ್ತಾರೆ ಎಂದು ಸಭೆಗೆ ತಿಳಿಸಿದರು.ವರದಿ ಸಾಲಿನಲ್ಲಿ ಮೃತಪಟ್ಟ 12 ಜನ ಸದಸ್ಯರಿಗೆ ಸದಸ್ಯರ ಕ್ಷೇಮನಿಧಿಯಿಂದ ಜುಮ್ಲಾ ರೂ.120,000 ನೀಡಲಾಗಿದೆ.ವ್ಯಾಪಾರ ವಹಿವಾಟುಗಳಲ್ಲಿ ಕ್ಯಾಂಪ್ಕೋ ನೆರವಿನೊಂದಿಗೆ ವಾರದ 3 ದಿನಗಳಲ್ಲಿ ಅಡಿಕೆ ಖರೀದಿಸುತ್ತಿದ್ದು 2025-26 ನೇ ಸಾಲಿನಲ್ಲಿ ರೂ.2.81 ಕೋಟಿ ಮೌಲ್ಯದ ಅಡಿಕೆಯನ್ನು ಖರೀದಿಸಿದ್ದು ರೂ.1,52,113 ಕಮೀಷನ್ ಬಂದಿರುತ್ತದೆ. ಪಡಿತರ ಸಾಮಾಗ್ರಿ ವಿತರಣೆಯೊಂದಿಗೆ ಕೃಷಿಕರಿಗೆ ರಾಸಾಯನಿಕ ಗೊಬ್ಬರ, ಮೈಲುತುತ್ತು, ಸುಣ್ಣ ಒದಗಿಸುತ್ತಿದ್ದು, ರೂ.127.76 ಲಕ್ಷ ಮೊತ್ತದ ಸಾಮಾಗ್ರಿಗಳನ್ನು ಮಾರಾಟ ಮಾಡಿರುತ್ತೇವೆ. ಎಲ್ಲಾ ಕೃಷಿಕ ಸದಸ್ಯರು ಸಂಘದಲ್ಲಿರುವ ರಸಗೊಬ್ಬರಗಳನ್ನು ಖರೀದಿಸಿ ಸಂಘದ ವ್ಯವಹಾರವನ್ನು ಹೆಚ್ಚಿಸುವಲ್ಲಿ ಸಹಕರಿಸಬೇಕಾಗಿ ವಿನಂತಿ ಮಾಡಿಕೊಂಡರು. ಸದಸ್ಯರ ವ್ಯವಹಾರದ ಅನುಕೂಲತೆಗಾಗಿ ಸಂಘದ ಮೂಲಕ ಐಸಿಐಸಿಐ ಬ್ಯಾಂಕ್ ಸಹಯೋಗದೊಂದಿಗೆ ನೆಫ್ಟ್/ಆರ್.ಟಿ.ಜಿ.ಎಸ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಹಾಗೂ ಸಂಘದಲ್ಲಿ ಸಾಲ ಮರುಪಾವತಿ ಮತ್ತು ಗೊಬ್ಬರ ಖರೀದಿಗಾಗಿ ಕ್ಯಾಸ್ ಲೆಸ್ ಸೌಲಭ್ಯವನ್ನು ಅಳವಡಿಸಲಾಗಿದೆ.ಕೃಷಿ ಯಂತ್ರೋಪಕರಣಗಳ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು, ಸಂಘದ ಸದಸ್ಯರ ಅನುಕೂಲಕ್ಕಾಗಿ ದಿನಬಳಕೆ ವಸ್ತುಗಳ ಮಾರಾಟ ಮಳಿಗೆಯಾದ ಸಹಕಾರಿ ಮಾರ್ಟ್ನ್ನು ಆರಂಭಿಸಿದ್ದು 2025-26 ಅವಧಿಯಲ್ಲಿ ರೂ 2.95 ಕೋಟಿ ಮೌಲ್ಯದ ಗೃಹಬಳಕೆ ವಸ್ತುಗಳ ಮಾರಾಟ ಮಾಡಿ ರೂ. 11 ಲಕ್ಷದ 89 ಸಾವಿರ ಲಾಭ ಗಳಿಸಿದೆ ಎಂದು ತಮ್ಮ ವರದಿಯ ಮೂಲಕ ಸಭೆಗೆ ತಿಳಿಸಿದರು.ಲಾಭ ನಷ್ಟದಲ್ಲಿ ವರದಿ ಸಾಲಿನಲ್ಲಿ ಒಟ್ಟು ರೂ.220.62 ಕೋಟಿ ವ್ಯವಹಾರ ನಡೆಸಿ, ನಮ್ಮ ಸಂಘವು 68 ವರ್ಷಗಳ ಸುದೀರ್ಘ ಪಯಣದಲ್ಲಿ ಅತೀ ಹೆಚ್ಚು ರೂ.1,50,59,177.13 ಲಾಭ ಬಂದಿರುತ್ತದೆ ಹಾಗೂ ಸಂಘವು ನಿರಂತರವಾಗಿ 9 ವರ್ಷಗಳಿಂದ ಅಡಿಟ್ ವರ್ಗೀಕರಣ “ಎ” ತರಗತಿಯಲ್ಲಿರುತ್ತದೆ. ಸಂಘದ ಪ್ರಗತಿಯನ್ನು ಗಮನಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2017 ರಿಂದ ಸತತವಾಗಿ ಇಲ್ಲಿಯವರೆಗೆ ಪ್ರೋತ್ಸಾಹಕ ಬಹುಮಾನವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.

ಸಭೆಯ ಆರಂಭದಲ್ಲಿ ಸಂಘದ ಬೆನ್ನೆಲುಬು ಆಗಿ ಸಂಘವನ್ನು ಮುನ್ನಡೆಸಿದ ಸಂಘದ ಅಧ್ಯಕ್ಷರಾಗಿದ್ದ ಶಶಿಧರ ರಾವ್ ಬೊಳಿಕ್ಕಲ ಹಾಗೂ ಅಗಲಿದ ಸಂಘದ ಸದಸ್ಯರುಗಳಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಸಭೆಯಲ್ಲಿ ಹಲವು ಮಂದಿ ಸದಸ್ಯರುಗಳು ವಿವಿಧ ಸಲಹೆಗಳನ್ನು ನೀಡಿದರು. ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಮಾತನಾಡಿ, ಸಂಘವು ತನ್ನ 68 ವರ್ಷಗಳ ಪಯಣದಲ್ಲಿ ಈ ವರ್ಷ ಅತೀ ಹೆಚ್ಚು ಲಾಭ ಗಳಿಸಿದ್ದು ಖುಷಿ ತಂದಿದೆ ಈ ನಿಟ್ಟಿನಲ್ಲಿಲ ಸಂಘಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಮೋಹನ ಆಳ್ವ ಮುಂಡಾಳಗುತ್ತುರವರು ಕೂಡ ಸಂಘದ ಬೆಳವಣಿಗೆಗೆ ಅಭಿನಂದನೆಗಳನ್ನು ಸಲ್ಲಿಸಿ ಡಿವಿಡೆಂಡ್ ಅನ್ನು ತ್ಯಾಗ ಮಾಡಿದರೆ ಕಟ್ಟಡ ಬೇಗ ಪೂರ್ತಿಯಾಗಬಹುದು ಎಂದು ತಿಳಿಸಿದರು. ಎ.ಕೆ ಜಯರಾಮ ರೈ ಮಾತನಾಡಿ, ಸರಕಾರ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದ್ದೂ ಕೂಡ ಬೆಳವಣಿಗೆಗೆ ಕಾರಣವಾಗಿದೆ.ಕಟ್ಟಡ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಆದಷ್ಟು ಬೇಗ ಕಟ್ಟಡ ಪೂರ್ಣಗೊಳಿಸಬಹುದು, ರೈತರಿಗೆ ಸಿಗುವ ಡಿವಿಡೆಂಡ್ ಅನ್ನು ಕೊಡುವುದು ಒಳ್ಳೆಯದು ಎಂದು ತಿಳಿಸಿದರು. ಸದಾಶಿವ ಭಟ್ ಕೆಯ್ಯೂರುರವರು ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಸಂಘದ ಬೆಳವಣಿಗೆಗೆ ವಿವಿಧ ಸಲಹೆಗಳನ್ನು ನೀಡಿದರು. ರಾಘವ ಗೌಡ ಕೆರೆಮೂಲೆಯವರು ಸಂಘದ ಬೆಳವಣಿಗೆಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಸಹಕಾರಿ ಮಾರ್ಟ್ನ ಮಾರ್ಜಿನ್ ಅನ್ನು ಕಡಿಮೆ ಇಟ್ಟುಕೊಳ್ಳುವುದು ಒಳ್ಳೆಯದು ಏಕೆಂದರೆ ಇದರಿಂದ ಖರೀದಿ ಮಾಡುವವರು ರೈತ ಸದಸ್ಯರುಗಳೇ ಆಗಿದ್ದಾರೆ ಎಂದರು. ಕಟ್ಟಡದ ಬಗ್ಗೆ ಮಾತನಾಡಿ ಕಟ್ಟಡ ನಿರ್ಮಾಣದ ಸಮಯದಲ್ಲಿ ಸರಿಯಾದ ಪ್ಲಾನ್ ಮಾಡಿಕೊಳ್ಳುವುದು ಒಳಿತು, ನೂತನ ಕಟ್ಟಡದಲ್ಲಿ ಸಭಾ ಭವನ ಆಗುತ್ತಿರುವುದ ಖುಷಿಯ ವಿಚಾರವಾಗಿದೆ ಎಂದು ಅವರು ತಿಳಿಸಿದರು. ಕೋಚಣ್ಣ ಪೂಜಾರಿ, ವಿಶ್ವನಾಥ ಪೂಜಾರಿ ಕೆಂಗುಡೇಲು ಮತ್ತಿತರರು ವಿವಿಧ ಸಲಹೆಗಳನ್ನು ನೀಡಿದರು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ತಾರಾನಾಥ ಕಂಪ, ಜನಾರ್ದನ ರೈ ಕೊಡಂಕೀರಿ, ರಿತೇಶ್ ಮೇರ್ಲ, ಸೀತಾರಾಮ ಗೌಡ ಇದ್ಯಪೆ, ಪುಷ್ಪಲತಾ ಜೆ ರೈ ತಿಂಗಳಾಡಿ, ಜಯಂತಿ, ಲೋಕೇಶ್ ಬೋಳೋಡಿ, ಪ್ರವೀಣ ಕಣಿಯಾರು, ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕರಾದ ಶರತ್ ಡಿ ಉಪಸ್ಥಿತರಿದ್ದರು. ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿದೇಶಕ ಹಾಗೇ ಸಂಘದ ನಿರ್ದೇಶಕರಾದ ಎಸ್.ಬಿ.ಜಯರಾಮ ರೈ ಬಳಜ್ಜರವರು ಕೆಯ್ಯೂರಿನಲ್ಲಿ ಸುಮಾರು 1.50 ಕೋಟಿ ರೂಪಾಯಿ ವೆಚ್ಚದಲ್ಲಿ ದಾಸ್ತಾನು ಕಟ್ಟಡ ನಿರ್ಮಾಣಕ್ಕೆ ನೀಲಿ ನಕಾಶೆ ಸಿದ್ದವಾಗಿದೆ ಹಾಗೇ ತಿಂಗಳಾಡಿಯಲ್ಲಿ ನೂತನ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸಂಘದ ಬೆಳವಣಿಗೆ ಸರ್ವ ರೀತಿಯಲ್ಲಿ ಸಹಕರಿಸುತ್ತಿರುವ ನಮ್ಮೆಲ್ಲ ರೈತ ಸದಸ್ಯರುಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ಮಾಡಲು ಸಂಘ ಸಿದ್ದವಿದೆ ಅದೇ ರೀತಿ ಕೇಂದ್ರ ಸಹಕಾರಿ ಬ್ಯಾಂಕ್ನಿAದ ಸಿಗುವ ಸಾಲ ಸೌಲಭ್ಯ, ಯೋಜನೆಗಳನ್ನು ಕೂಡ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ತಿಳಿಸಿದರು. ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸೂರಜ್ ಕುಮಾರ್ ಕೆರವರು ವಿವಿಧ ವರದಿಗಳನ್ನು ಸಭೆಯ ಮುಂದಿಟ್ಟರು. ಸಂಘದ ಸಿಬ್ಬಂದಿ ಅಣ್ಣು ತಿಂಗಳಾಡಿ ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಸಂತೋಷ್ ಕುಮಾರ್ ರೈ ಕೋರಂಗ ವಂದಿಸಿದರು. ಸಿಬ್ಬಂದಿ ಪ್ರೀತಮ್ ಪಿ.ರೈ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಕೆಯ್ಯೂರು ಶಾಖೆಯ ಶಾಖಾಧಿಕಾರಿ ನಿರುಪಮ ಪಿ.ಶೆಟ್ಟಿ, ಕೌಶಲ್ಯ ಎಂ, ಭವ್ಯಶ್ರೀ ಬಿ, ದುರ್ಗಾಕಿರಣ್, ಚರಣ್ರಾಜ್ ಬಿ, ಐತ್ತಪ್ಪ ನಾಯ್ಕ, ಪ್ರದೀಪ್, ಕೊರಗಪ್ಪ ತಿಂಗಳಾಡಿ, ಸುಜಾತ ಮುಳಿಗದ್ದೆ ಸಹಕರಿಸಿದ್ದರು.

ಸಂಘದ ಹಿರಿಯ 10 ಮಂದಿ ಸದಸ್ಯರಿಗೆ ಗೌರವಾರ್ಪಣೆ
ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅತ್ಯಂತ ಹಿರಿಯ 10 ಮಂದಿ ಸದಸ್ಯರನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು. ಹಿರಿಯ ಸದಸ್ಯರುಗಳಾದ ಹರಿಕೃಷ್ಣ ಭಟ್ ಹರ್ತ್ಯಡ್ಕ, ಬಾಬು ರೈ ಸಾಗು, ಶ್ರೀಧರ ರೈ ಕೆದಂಬಾಡಿಗುತ್ತು, ಮಹಮ್ಮದ್ ಕುಂಞ ಕಟ್ಟೀಜಿರ್, ರಾಜೀವ ರೈ ಕೋರಂಗ, ಸಾಬು ಗಟ್ಟಮನೆ, ಕೃಷ್ಣಪ್ಪ ಪೂಜಾರಿ ಕಣಿಯಾರೋಡಿ, ಆನಂದ ರೈ ಬೊಳಿಕ್ಕಲ, ವಿಶ್ವನಾಥ ರೈ ದೇರ್ಲ ಮತ್ತು ಲಕ್ಷ್ಮೀ ರಾಮಯ್ಯ ರೈ ತಿಂಗಳಾಡಿರವರುಗಳನ್ನು ಶಾಲು, ಸ್ಮರಣಿಕೆ, ಫಲಪುಷ್ಪಗಳೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಸಂಘದ ಸಾಲಗಾರ ಸದಸ್ಯರ ಮಕ್ಕಳು ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ 95% ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಪಲ್ಲವಿ, ಸನ್ನಿಧಿ ಎನ್ ಕುರಿಕ್ಕಾರ, ಅನನ್ಯ ಜೆ.ಶೆಟ್ಟಿ, ಅಭೀಕ್ಷಾ ಇಳಂತಾಜೆ, ದೀಪ್ತಿ ಕೆ.ಸಿ ಕಣಿಯಾರು, ತೃಷಾ ಕೆ.ಆರ್, ನಿಧಿ ಜೆ.ಶೆಟ್ಟಿ, ಮನ್ಮಿತ್, ಆಯಿಷಾ ಕಟ್ಟತ್ತಾರು, ಸಾನ್ವಿ ರೈ ಮತ್ತು ಧನ್ಯಶ್ರೀ ಪಿ.ಸಿರವರುಗಳನ್ನು ಈ ಸಂದರ್ಭದಲ್ಲಿ ಶಾಲು,ಸ್ಮರಣಿಕೆ, ನಗದು ನೀಡಿ ಅಭಿನಂದಿಸಲಾಯಿತು.

ಬಹುಮಾನ ವಿತರಣೆ
ಸಂಘದಲ್ಲಿ ಹೆಚ್ಚು ಮೊತ್ತದ ಗೊಬ್ಬರ ಖರೀದಿಸಿದ ಮೂರು ಜನ ಸದಸ್ಯರುಗಳಾದ ರವಿನಾರಾಯಣ ಭಟ್ ಎಲಿಯ, ಸುಬ್ರಾಯ ಭಟ್ ಪಲ್ಲತ್ತಡ್ಕ, ಸಂತೋಷ್ ಕುಮಾರ್ ರೈ ಇಳಂತಾಜೆ ಹಾಗೂ ಸಹಕಾರಿ ಮಾರ್ಟ್ನಲ್ಲಿ ಹೆಚ್ಚು ಮೊತ್ತದ ಸಾಮಾಗ್ರಿ ಖರೀದಿಸುವ ಸದಸ್ಯರನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿ ಒಟ್ಟು ಒಂಭತ್ತು ಸದಸ್ಯರಿಗೆ ಬಹುಮಾನ ವಿತರಣೆ ಮಾಡಲಾಯಿತು. ಇದರಲ್ಲಿ ಧಾರ್ಮಿಕ ವಿಭಾಗದಿಂದ ಪ್ರಥಮ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ, ದ್ವಿತೀಯ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಇದರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉದಯ ರೈ ಬಾಕುಡ ಹಾಗೂ ತೃತೀಯ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರ ಇದರ ಆಡಳಿತ ಸಮಿತಿ ಅಧ್ಯಕ್ಷ ರಾಘವ ಗೌಡ ಕೆರೆಮೂಲೆರವರುಗಳು ಬಹುಮಾನ ಸ್ವೀಕರಿಸಿದರು. ಮಳಿಗೆಯ ವಿಭಾಗದಲ್ಲಿ ಜನನಿ ಎಂಟರ್ಪ್ರೈಸಸ್ ಕಲ್ಲರ್ಪೆ, ಸಂತೋಷ್ ಕಾಂಪ್ಲೆಕ್ಸ್ ಮಾಡಾವು,ಶ್ರೀ ಗಣೇಶ್ ಸ್ಟೋರ್ ತೆಗ್ಗು ಇದರ ಮಾಲಕರು ಬಹುಮಾನ ಸ್ವೀಕರಿಸಿದರು. ವೈಯುಕ್ತಿಕ ವಿಭಾಗದಲ್ಲಿ ಭಾಸ್ಕರ ಬಲ್ಲಾಳ್ ಕೆದಂಬಾಡಿಬೀಡು, ನಾರಾಯಣ ನಾಯ್ಕ, ಡೊಂಬಯ್ಯ ಗೌಡ ಕೋಡಂಬುರವರುಗಳು ಬಹುಮಾನ ಪಡೆದುಕೊಂಡರು.
ನೂತನ ಕಟ್ಟಡದಲ್ಲಿ ಸುಸಜ್ಜಿತ ಸಭಾಂಗಣ
ತಿಂಗಳಾಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕಛೇರಿ ಕಟ್ಟಡ ಮೇಲಂತಸ್ತಿನಲ್ಲಿ ಸುಸಜ್ಜಿತವಾದ ಸುಮಾರು 5800 ಚದರ ಅಡಿಯ ಸಭಾಂಗಣದ ನಿರ್ಮಾಣ ಮಾಡುತ್ತಿದ್ದೇವೆ. ಇದರಲ್ಲಿ ಗ್ರೀನ್ ರೂಮ್, ಶೌಚಾಲಯ ಸೇರಿದಂತೆ ಶುಭ ಕಾರ್ಯಕ್ರಮ, ಸಭೆ ನಡೆಸಲು ಅನುಕೂಲವಾಗುವ ಎಲ್ಲಾ ಸೌಕರ್ಯಗಳನ್ನು ಮಾಡಲಾಗುತ್ತಿದೆ ಎಂದು ಅಧ್ಯಕ್ಷ ಕೃಷ್ಣಕುಮಾರ್ ರೈ ತಿಳಿಸಿದರು.

ಅಧ್ಯಕ್ಷರ ಮಾತು
ಸಂಘದ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತುರವರು ಮಾತನಾಡಿ, ಸಂಘದ ತನ್ನ 68 ವರ್ಷಗಳ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ರೂ.1 ಕೋಟಿ 50 ಲಕ್ಷ ನಿವ್ವಳ ಲಾಭವನ್ನು ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಮೊದಲಾಗಿ ನಮ್ಮೆಲ್ಲ ರೈತ ಸದಸ್ಯರುಗಳಿಗೆ, ಗ್ರಾಹಕ ಬಂಧುಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರದಿಂದ ಇದು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಆಡಳಿತ ಮಂಡಳಿ, ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ಈಗಾಗಲೇ ಸುಮಾರು ಎರಡೂವರೆ ಕೋಟಿಗೂ ಅಧಿಕ ವೆಚ್ಚದಲ್ಲಿ ನೂತನ ಕಛೇರಿ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಮುಂದಿನ ನಾಲ್ಕು ತಿಂಗಳಲ್ಲಿ ಕಟ್ಟಡ ಕಾಮಗಾರಿ ಪೂರ್ತಿಗೊಂಡು ಲೋಕಾರ್ಪಣೆ ಮಾಡುವ ಕಾರ್ಯಕ್ರಮ ಕೂಡ ನಡೆಯಲಿದೆ. ಅದೇ ರೀತಿ ಮುಂದಿನ ಹಂತದಲ್ಲಿ ಕೆಯ್ಯೂರಿನಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ದಾಸ್ತಾನು ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಈಗಾಗಲೇ ನೀಲಿ ನಕಾಶೆ ತಯಾರಿಸಲಾಗಿದೆ ಎಂಬ ವಿಚಾರವನ್ನು ಸಭೆಯ ಮುಂದಿಟ್ಟರು. ಈ ವರದಿ ವರ್ಷದಲ್ಲಿ ಸದಸ್ಯರುಗಳಿಗೆ ಶೇ.07 ಡಿವಿಡೆಂಡ್ ನೀಡಲಾಗುತ್ತಿದ್ದು ಉಳಿಕೆಯನ್ನು ಸದಸ್ಯರ ಅನುಮತಿ ಪಡೆದುಕೊಂಡು ಕಟ್ಟಡ ನಿಧಿಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು. ರೈತ ಬಾಂಧವರ ಕಲ್ಯಾಣದ ದೃಷ್ಟಿಯಿಂದ ಸಂಘವು ಎಲ್ಲಾ ರೀತಿಯಲ್ಲಿ ಸರ್ವೀಸ್ ನೀಡುತ್ತಿದ್ದು ರೈತ ಬಾಂಧವರ ಸಹಕಾರ ಅತೀ ಅಗತ್ಯ ಎಂದರು. ರಸಗೊಬ್ಬರ ಖರೀದಿಗೂ ಸಾಲವನ್ನು ನೀಡುತ್ತಿದ್ದೇವೆ ಹಾಗೇ ವಾಹನ ಖರೀದಿಸುವವರಿಗೆ ಅದರಲ್ಲೂ ಇವಿ ವಾಹನ ಖರೀದಿಸುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದ್ದೇವೆ ಎಂಬ ವಿಚಾರವನ್ನು ಅಧ್ಯಕ್ಷರು ಸಭೆಯ ಮುಂದಿಟ್ಟರು. ಮುಂದಿನ ಎಲ್ಲಾ ಕಾರ್ಯಕ್ಕೂ ಸರ್ವರ ಸಹಕಾರವನ್ನು ಕೇಳುವ ಮೂಲಕ ಸಹರಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದರು.










