






ಪುತ್ತೂರು : ‘ನಾವು ಪೊಲೀಸ್, ಗಾಂಜಾ ಹಿಡಿಯೋಕೆ ಬಂದಿದ್ದೀವಿ, ಐಫೋನ್ ಸಿಗುತ್ತೆ…’ ಎಂದೆಲ್ಲ ನಂಬಿಸಿ, ಒಡ್ಡಿದ ಬಲೆಯೊಳಗೆ ಅಂಗಡಿ ಕೆಲಸದಾಕೆಯನ್ನು ಕೆಡವಿ, ಭರ್ಜರಿ ರೂ.3,500 ನಗದು ಪೀಕಿ ವಂಚಕನೊಬ್ಬ ಪರಾರಿಯಾದ ಸ್ವಾರಸ್ಯಕರ ಹಾಗೂ ಖದೀಮ ಘಟನೆ ಆ. 30ರ ರವಿವಾರ ಬೆಳಿಗ್ಗೆ ಕುಂಬ್ರದ ಜ್ಯೂಸ್ ಮತ್ತು ಚಾಟ್ಸ್ ಅಂಗಡಿಯೊಂದರಲ್ಲಿ ನಡೆದಿದೆ.


ಖದೀಮ ಹೆಣೆದ ‘ಖಾಕಿ’ ಕಥೆ!
ರವಿವಾರ ಬೆಳಿಗ್ಗೆ ವಾಹನದಲ್ಲಿ ಜ್ಯೂಸ್ ಅಂಗಡಿಗೆ ಎಂಟ್ರಿ ಕೊಟ್ಟ ಆ ಅನಾಮಧೇಯ ವ್ಯಕ್ತಿ, ತಾನು ಪೊಲೀಸ್ ಇಲಾಖೆಯವನೆಂದು ಅಂಗಡಿಯಲ್ಲಿದ್ದ ಯುವತಿಗೆ ಪರಿಚಯಿಸಿಕೊಂಡಿದ್ದಾನೆ. “ಕುಂಬ್ರ ಕಟ್ಟೆಯ ಹತ್ತಿರ ನಮ್ಮ ಪೊಲೀಸ್ ಜೀಪು ನಿಂತಿದೆ. ನಾವಿಲ್ಲಿ ಗಾಂಜಾ ದಂಧೆಕೋರರನ್ನು ಹಿಡಿಯಲು ಬಂದಿದ್ದೇವೆ. ಈ ಕಾರ್ಯಾಚರಣೆಯಲ್ಲಿ ಗಾಂಜಾ ಸಿಕ್ಕರೆ ನಮಗೆ ಭಾರಿ ಹಣ ಮತ್ತು ಆಕರ್ಷಕ ಐಫೋನ್ ಮೊಬೈಲ್ಗಳು ಸಿಗುತ್ತವೆ” ಎಂದು ಸಿನೆಮಾ ಶೈಲಿಯಲ್ಲಿ ಕಥೆ ಹೆಣೆದಿದ್ದಾನೆ.



ಪರಿಚಿತನಂತೆ ನಟಿಸಿ ಆಮಿಷ!
ಇಷ್ಟಕ್ಕೇ ನಿಲ್ಲಿಸದ ಆಸಾಮಿ, ಯುವತಿಯ ಮನೆ ಎಲ್ಲಿದೆ ಎಂದು ವಿಚಾರಿಸಿದ್ದಾನೆ. ಆಕೆ ತನ್ನ ಊರು-ಮನೆಯ ವಿಳಾಸ ಹೇಳುತ್ತಿದ್ದಂತೆ, “ಓಹ್ ಹೌದಾ! ನಿನ್ನ ಅಪ್ಪ, ಬಾವ ಎಲ್ಲ ನಂಗೆ ಚೆನ್ನಾಗಿ ಗೊತ್ತು!” ಎಂದು ಪರಿಚಿತನಂತೆ ನಟಿಸಿ ನಂಬಿಕೆ ಗಿಟ್ಟಿಸಿಕೊಂಡಿದ್ದಾನೆ. ಬಳಿಕ ಯುವತಿಯ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು, “ನಮ್ಮ ಹತ್ತಿರ ವಶಪಡಿಸಿಕೊಂಡ ಐಫೋನ್ ಇದೆ, ನಿನಗೂ ಒಂದು ಐಫೋನ್ ಬೇಕಾ?” ಎಂದು ಆಮಿಷ ಒಡ್ಡಿದ್ದಾನೆ.
‘ಗೂಗಲ್ ಪೇ ಬೇಡ, ಕ್ಯಾಶ್ ಬೇಕು!’
ಸಾಲದ್ದಕ್ಕೆ, ಮಾತುಕತೆಯ ನಡುವೆಯೇ ಯುವತಿಯ ಬಳಿ, “ನನಗೆ ತುರ್ತಾಗಿ ರೂ. 3,500 ಹಣ ಬೇಕು, ತಕ್ಷಣ ಕೊಡ್ತೀಯಾ?” ಎಂದು ಕೇಳಿದ್ದಾನೆ. ಆಕೆ “ಗೂಗಲ್ ಪೇ ಮಾಡಲಾ?” ಎಂದಾಗ, ಚಾಲಾಕಿ ವಂಚಕ “ಇಲ್ಲ ಇಲ್ಲ, ನಂಗೆ ನಗದಾಗಿಯೇ ಬೇಕು” ಎಂದಿದ್ದಾನೆ. ಆತನ ಮಾತುಗಳನ್ನು ಸತ್ಯವೆಂದು ನಂಬಿದ ಯುವತಿ, ತಡಮಾಡದೇ ರೂ.3,500 ನಗದನ್ನು ಆತನ ಕೈಗಿಟ್ಟಿದ್ದಾಳೆ. ಹಣ ಕೈಸೇರುತ್ತಿದ್ದಂತೆ “ಈಗಲೇ ಜೀಪ್ ಹತ್ತಿರ ಹೋಗಿ ಬರ್ತೇನೆ” ಎಂದು ಹೇಳಿದ ಆ ಖದೀಮ ಅಲ್ಲಿಂದ ಬೈಕ್ ಏರಿ ಪರಾರಿಯಾಗಿದ್ದಾನೆ.
ಕಾಯ್ದು ಕಾಯ್ದು ಸಾಕಾದ ಯುವತಿ:
ಹಣ ಪಡೆದು ಹೋದ ‘ಪೊಲೀಸ್’ ಎಷ್ಟು ಹೊತ್ತಾದರೂ ಹಿಂತಿರುಗದಿದ್ದಾಗ ಅನುಮಾನಗೊಂಡ ಯುವತಿ, ಕುಂಬ್ರ ಕಟ್ಟೆಯ ಬಳಿ ಹೋಗಿ ನೋಡಿದಾಗ ಅಸಲಿ ಕಥೆ ಬೆಳಕಿಗೆ ಬಂದಿದೆ! ಅಲ್ಲಿ ಪೊಲೀಸ್ ಜೀಪೂ ಇರಲಿಲ್ಲ, ಆ ವ್ಯಕ್ತಿಯೂ ಇರಲಿಲ್ಲ. ತಾನು ಕಥೆ ನಂಬಿ ಸಂಪೂರ್ಣವಾಗಿ ಮೋಸ ಹೋಗಿರುವುದನ್ನು ಅರಿತ ಯುವತಿ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಖಾಕಿ ಹೆಸರು ಹೇಳಿ ಮುಗ್ಧ ಯುವತಿಗೆ ನಾಮ ಹಾಕಿದ ಈ ಚಾಲಾಕಿ ವಂಚಕನ ಪತ್ತೆಗೆ ಸ್ಥಳೀಯರು ಆಗ್ರಹಿಸಿದ್ದು, ಸಾರ್ವಜನಿಕರು ಇಂತಹ ಅಪರಿಚಿತರ ಮಾತಿಗೆ ಮರುಳಾಗದಂತೆ ಜಾಗೃತರಾಗಿರಬೇಕಿದೆ.










