ಉಪ್ಪಿನಂಗಡಿ: ಹೈವೋಲ್ಟೇಜ್‌ನಿಂದ 8 ಲಕ್ಷ ನಷ್ಟ -ಸೂಕ್ತ ಪರಿಹಾರಕ್ಕೆ ಆಗ್ರಹ: ಅಧಿಕಾರಿಗಳಿಗೆ ಮನವಿ

0

ಉಪ್ಪಿನಂಗಡಿ: ಹೈವೋಲ್ಟೇಜ್ ವಿದ್ಯುತ್ ಹರಿದು ಬಂದ ಪರಿಣಾಮ 34 ನೆಕ್ಕಿಲಾಡಿಯ ಎಸ್.ಎಂ. ಮೊಹಮ್ಮದ್ ರಫೀಕ್ ಎಂಬವರಿಗೆ ಸೇರಿದ ಪಾಪ್ಯುಲರ್ ಪ್ಲಾಸ್ಟಿಕ್ ಇಂಡಸ್ಟ್ರಿಯ ಯಂತ್ರೋಪಕರಣಗಳು ಹಾಗೂ ಅವರ ಮನೆಯ ವಿದ್ಯುತ್ ಚಾಲಿತ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದ್ದು, ಸುಮಾರು ಎಂಟು ಲಕ್ಷಕ್ಕೂ ಅಧಿಕ ನಷ್ಟವುಂಟಾದ ಘಟನೆ ನಡೆದಿದೆ.

ಆದ್ದರಿಂದ ವಿದ್ಯುತ್ ಸರಬರಾಜಿನಲ್ಲಾದ ಲೋಪದಿಂದ ಆದ ನಷ್ಟಕ್ಕೆ ಮೆಸ್ಕಾಂ ಸೂಕ್ತ ಪರಿಹಾರ ನೀಡಬೇಕೆಂದು ಎಸ್.ಎಂ. ಮೊಹಮ್ಮದ್ ರಫೀಕ್ ಆಗ್ರಹಿಸಿದ್ದಾರೆ.
34 ನೆಕ್ಕಿಲಾಡಿ ಸಂತೆಕಟ್ಟೆಯ ಬಳಿ ಕಳೆದ 43 ವರ್ಷದಿಂದ ಪಾಪ್ಯುಲರ್ ಪ್ಲಾಸ್ಟಿಕ್ ಇಂಡಸ್ಟ್ರೀ ಕಾರ್ಯಾಚರಿಸುತ್ತಿದ್ದು, ಯುಡಿವೈ ಪವರ್ 43ರಲ್ಲಿ ಮೆಸ್ಕಾಂ ಮೀಟರ್ ಸಂಖ್ಯೆ ಹೊಂದಿರುವ ಇದಕ್ಕೆ ಆ.27ರಂದು ಮಧ್ಯಾಹ್ನ ಸುಮಾರು ೧೨ರ ವೇಳೆಗೆ ಹಠಾತ್ ಆಗಿ ಹೈವೋಲ್ಟೇಜ್ ವಿದ್ಯುತ್ ಹರಿದು ಬಂತು. ಇದರಿಂದಾಗಿ ಈ ವರ್ಕ್‌ಶಾಪ್‌ನಲ್ಲಿದ್ದ ಮೆಷಿನ್‌ನ ಕಂಟ್ರೋಲ್ ಪ್ಯಾನಲ್ ಬೋರ್ಡ್ ಮತ್ತು ಸಾಪ್ಟ್‌ವೇರ್ ಸಿಸ್ಟಮ್ ಉಪಕರಣಗಳು ಸುಟ್ಟುಹೋಗಿ ಸುಮಾರು ಏಳು ಲಕ್ಷದಷ್ಟು ನಷ್ಟವುಂಟಾಗಿದೆ. ಅಲ್ಲದೇ, ಅದರ ಬಳಿಯಲ್ಲಿಯೇ ಇರುವ ಅವರ ವಾಸ್ತವ್ಯದ ಮನೆಯ ಯುಡಿವೈ ಎಇಎಚ್ ೩೮೧೩ ಮೆಸ್ಕಾಂ ಮೀಟರ್ ಸಂಖ್ಯೆ ಹೊಂದಿರುವ ವಿದ್ಯುತ್ ಸಂಪರ್ಕದಲ್ಲೂ ಹೈವೋಲ್ಟೇಜ್ ವಿದ್ಯುತ್ ಹರಿದು ಬಂದಿದ್ದು, ಮನೆಯಲ್ಲಿದ್ದ ಎರಡು ಹವಾನಿಯಂತ್ರಿತ ಯಂತ್ರಗಳು ಕೆಟ್ಟು ಹೋಗಿದೆ. ಇದರಿಂದಾಗಿ ಸುಮಾರು ಒಂದು ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಎಸ್.ಎಂ. ಮೊಹಮ್ಮದ್ ರಫೀಕ್ ದೂರಿದ್ದಾರೆ.


ಹೈವೋಲ್ಟೇಜ್ ಸಮಸ್ಯೆಯಿಂದ ಯಂತ್ರೋಪಕರಣಗಳು ಹಾನಿಯಾಗಿದ್ದರಿಂದಾಗಿ ಇದೀಗ ಉದ್ಯಮವನ್ನು ಮುಚ್ಚುವ ಸ್ಥಿತಿ ಉಂಟಾಗಿದ್ದು, ಆರ್ಥಿಕವಾಗಿ ತೀರಾ ನಷ್ಟ ಸಂಭವಿಸಿದೆ. ಹೈವೋಲ್ಟೇಜ್ ಸಮಸ್ಯೆಯಿಂದಾಗಿ ತನ್ನ ಉದ್ಯಮದ ಯಂತ್ರೋಪಕರಣಗಳು ಹಾಗೂ ಮನೆಯ ಹವಾನಿಯಂತ್ರಿತ ಯಂತ್ರಗಳಿಗೆ ಹಾನಿಯುಂಟಾದ ಬಗ್ಗೆ ಉಪ್ಪಿನಂಗಡಿ ಮೆಸ್ಕಾ ಎಇ, ಪುತ್ತೂರು ಮೆಸ್ಕಾಂನ ಎಇಇ ಮತ್ತು ಮಂಗಳೂರು ಮೆಸ್ಕಾಂನ ಸೂಪರಿಡೆಂಟ್ ಎಂಜಿನಿಯರ್ ಅವರಿಗೆ ದೂರವಾಣಿ ಮೂಲಕ ದೂರು ಕೊಡಲಾಗಿದ್ದು, ಆದರೆ ಅವರು ಇಲ್ಲಿಗೆ ಭೇಟಿ ನೀಡಿ ನಷ್ಟದ ಮಹಜರು ಹಾಗೂ ತನಿಖೆಯನ್ನು ಕೂಡಾ ನಡೆಸಿಲ್ಲ. ಆದ್ದರಿಂದ ತಾವುಗಳು ಈ ಬಗ್ಗೆ ತಕ್ಷಣ ಗಮನಹರಿಸಿ ನನಗಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಎಸ್.ಎಂ. ಮೊಹಮ್ಮದ್ ರಫೀಕ್ ಅವರು ಮೆಸ್ಕಾಂ ಅಧಿಕಾರಿಗಳಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here