






4.13 ಕೋ.ರೂ. ನಿವ್ವಳ ಲಾಭ: ಶೇ.16.05 ಡಿವಿಡೆಂಡ್ ಘೋಷಣೆ


ಉಪ್ಪಿನಂಗಡಿ: ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾಗಿರುವ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘವು 2025-26ನೇ ಸಾಲಿನಲ್ಲಿ 564 ಕೋಟಿ ರೂ. ವ್ಯವಹಾರ ನಡೆಸಿ, 4,13,34,556.62 ಕೋಟಿ ರೂ. ಲಾಭ ಗಳಿಸಿದೆ. ಬಂದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.16.05 ಡಿವಿಡೆಂಡ್ ನೀಡಲು ನಿರ್ಧರಿಸಿರುವುದಾಗಿ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ಘೋಷಿಸಿದರು.




ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ನೇತ್ರಾವತಿ ಸಮುದಾಯ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸುವರ್ಣ ಸಂಗಮ ನಿಧಿ’ ಯೋಜನೆಯಂತೆ ವರದಿ ಸಾಲಿನಲ್ಲಿ ಮೃತಪಟ್ಟ 37 ಸದಸ್ಯರ ವಾರೀಸುದಾರರಿಗೆ 20ಸಾವಿರ ರೂ. ಮತ್ತು 9 ಸದಸ್ಯರ ವಾರೀಸುದಾರರಿಗೆ 25 ಸಾವಿರ ರೂ.ವನ್ನು ನೀಡಲಾಗಿದ್ದು, ಅದಕ್ಕಾಗಿ ಒಟ್ಟು 9,65,000 ರೂ.ವನ್ನು ವಿನಿಯೋಗಿಸಲಾಗಿದೆ. ಸಂಘದ ಕೃಷಿ ಸಾಲಗಾರರನ್ನು ಪಾಯಸ್’ ವೈಯಕ್ತಿಕ ಅಪಘಾತ ವಿಮೆ) ಮತ್ತು ಹವಾಮಾನ ಆಧಾರಿತ ಫಸಲ್ ಬಿಮಾ ಯೋಜನೆಗೆ ಒಳಪಡಿಸಲಾಗಿದ್ದು, ಎಲ್ಲಾ ರೈತರ ಕೃಷಿ ಸಾಲಗಳ ಮೇಲೆ ಸಂಪೂರ್ಣ ಅಮೃತ ವಿಮಾ ಸೌಲಭ್ಯವನ್ನು 50:50 ಅನುಪಾತದಲ್ಲಿ ವಿಮಾ ಕಂತು ಪಾವತಿಯೊಂದಿಗೆ ನೂತನ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ಎಲ್ಲಾ ಗೊಬ್ಬರ ಉತ್ಪಾದಕ ಕಂಪೆನಿಗಳ ಡೀಲರ್ಶಿಪ್ ಪಡೆದುಕೊಂಡು ರಖಂ ನೆಲೆಯಲ್ಲಿ ಜಿಲ್ಲೆಯಾದ್ಯಂತ ರಸಾಯನಿಕ ಗೊಬ್ಬರ, ಸಾವಯವ ಗೊಬ್ಬರ ಹಾಗೂ ಕೀಟನಾಶಕವನ್ನು ಸ್ಪರ್ಧಾತ್ಮಕ ದರದಲ್ಲಿ ಸರಬರಾಜು ಮಾಡುತ್ತಿರುವ ಏಕೈಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವೆಂಬ ಹೆಗ್ಗಳಿಕೆಗೆ ನಮ್ಮ ಸಂಘ ಪಾತ್ರವಾಗಿದ್ದು, ರಸಾಯನಿಕ ಗೊಬ್ಬರದೊಂದಿಗೆ ರಬ್ಬರ್ ತಯಾರಿಕ ಪರಿಕರಗಳ ವಿಭಾಗವೂ ಇದ್ದು, ಕೃಷಿಕರ ಬೇಡಿಕೆಯನ್ನು ಪೂರೈಸಲಾಗುತ್ತಿದೆ. ಇದರೊಂದಿಗೆ ಉತ್ತಮ ಗುಣಮಟ್ಟದ ಮಿತಬೆಲೆಯ ದಿನ ಬಳಕೆ ಸಾಮಗ್ರಿಗಳು ಹೊಂದಿರುವ ಅಮೃತ ಸಹಕಾರಿ ಮಾರ್ಟ್’ ಮಳಿಗೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರಿಂದ ಇನ್ನೂ ಹೆಚ್ಚಿನ ಬೆಂಬಲದೊಂದಿಗೆ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ. ಸದಸ್ಯರೆಲ್ಲರೂ ತಮ್ಮ ಮನೆಗೆ ಬೇಕಾದ ದಿನಬಳಕೆ ಸಾಮಗ್ರಿಗಳನ್ನು ಇಲ್ಲಿಂದಲೇ ಖರೀದಿಸಿ ಸಹಕಾರ ನೀಡಬೇಕೆಂದು ತಿಳಿಸಿದರು.

2025-26ನೇ ಸಾಲಿನಲ್ಲಿ ಸಂಘವು ಸಾಧಿಸಿದ ಗಣನೀಯ ಪ್ರಗತಿಗಾಗಿ ಸತತ 6ನೇ ಬಾರಿಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಪ್ರಶಸ್ತಿಯನ್ನು ಸಂಘವು ಪಡೆದಿರುತ್ತದೆ. ಅಡಿಟ್ ವರ್ಗೀಕರಣದಲ್ಲಿ ಸತತವಾಗಿ `ಎ’ ಗ್ರೇಡ್ ಅನ್ನು ಸಂಘವು ಪಡೆಯುತ್ತಾ ಬಂದಿರುತ್ತದೆ. ಸಂಘದ ಈ ಅಭಿವೃದ್ಧಿಗೆ ಸದಸ್ಯರ, ಠೇವಣಿದಾರರ, ಗ್ರಾಹಕರ ಮತ್ತು ಆಡಳಿತ ಮಂಡಳಿ ನಿರ್ದೇಶಕರ ಸಹಕಾರ, ಸಿಬ್ಬಂದಿ ವರ್ಗದವರ ಸೇವೆಯ ಫಲವೇ ಕಾರಣವಾಗಿದ್ದು, ಇವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಸುನೀಲ್ ಕುಮಾರ್ ದಡ್ಡು ತಿಳಿಸಿದರು.
ಪ್ರಾಕೃತಿಕ ವಿಕೋಪದಿಂದ ಸಂಕಷ್ಠಕ್ಕೆ ತುತ್ತಾಗುವ ರೈತರಿಗೆ ತಕ್ಷಣಕ್ಕೆ ಸಿಗುವ ರೀತಿಯಲ್ಲಿ ಸಂಘದಿಂದ ರೈತ ನಿಧಿ ಯೋಜನೆಯೊಂದನ್ನು ರೂಪಿಸುವ ಬಗ್ಗೆ ಮಹಾ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ಬಡ್ಡಿ ರಹಿತ ಸಾಲದ ಮಿತಿಯನ್ನು ಮೂರು ಲಕ್ಷದಿಂದ 5 ಲಕ್ಷಕ್ಕೆ ಏರಿಸುವ ಬಗ್ಗೆ ಸರಕಾರದಿಂದ ಆದೇಶ ಹೊರಡಿಸಿರುವ ಬಗ್ಗೆ ಸದಸ್ಯರು ಪ್ರಸ್ತಾಪ ವ್ಯಕ್ತಪಡಿಸಿದರಾದರೂ, ಹಣಕಾಸಿನ ಸ್ಪಂದನ ನಬಾರ್ಡ್ ನಿಂದ ದೊರಕಿ ಅದು ಅಪೆಕ್ಸ್ ಬ್ಯಾಂಕ್ ಮೂಲಕ ಡಿಸಿಸಿ ಬ್ಯಾಂಕ್ ನಿಂದ ದೊರೆಯಬೇಕಾಗಿರುವುದರಿಂದ ಸಾಲ ಮಿತಿ ಹೆಚ್ಚಳಕ್ಕೆ ನಾವು ಅಸಹಾಯಕರೆಂದು ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ಈ ಸಂದರ್ಭ ತಿಳಿಸಿದರು.
ಕಳೆದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ವಿದ್ಯಾಶ್ರೀ ಯೋಜನೆಯಡಿ ಈ ಸಂದರ್ಭ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ದಯಾನಂದ ಸರೋಳಿ, ನಿರ್ದೇಶಕರಾದ ರಾಜೇಶ್, ವಸಂತ ಪಿ., ಶ್ರೀರಾಮ, ಪ್ರಕಾಶ್ ರೈ ಬಿ., ಸುಬ್ರಹ್ಮಣ್ಯ ಕುಮಾರ್ ಅಗರ್ತ, ಶ್ರೀಮತಿ ಉಷಾ, ಶ್ರೀಮತಿ ಸಂಧ್ಯಾ, ಸುಂದರ ಕೆ., ರಾಘವ ನಾಯ್ಕ, ಗೀತಾ, ದ.ಕ. ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಶರತ್ ಡಿ. ಉಪಸ್ಥಿತರಿದ್ದರು.

ಸದಸ್ಯರಾದ ಪೆಲಪ್ಪಾರು ವೆಂಕಟರಮಣ ಭಟ್, ಇಸುಬು ಪೆದಮಲೆ , ಕೆ.ವಿ. ಪ್ರಸಾದ, ರಾಮಚಂದ್ರ ಮಣಿಯಾಣಿ, ಕೇಶವ ಭಟ್ ಪಲ್ಲದಕೋಡಿ, ಚಂದಪ್ಪ ಮೂಲ್ಯ, ಗಣೇಶ್ ಕುಲಾಲ್, ಕೈಲಾರ್ ರಾಜಗೋಪಾಲ್ ಭಟ್, ಎಂ.ಜಿ. ಭಟ್, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಸುರೇಶ್ ಅತ್ರಮಜಲು, ಚಂದ್ರಶೇಖರ ತಾಳ್ತಜೆ, ಅಜೀಜ್ ಬಸ್ತಿಕಾರ್ , ರೂಪೇಶ್ ರೈ, ಹರಿರಾಮಚಂದ್ರ, ಶೌಕತ್ ಅಲಿ, ಬಾಲಚಂದ್ರ ಗೌಡ, ಜಯಂತ ಪೊರೋಳಿ, ಯತೀಶ್ ಶೆಟ್ಟಿ, ಯಶವಂತ ಜಿ., ಮತ್ತಿತರರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು.
ಸಭೆಗೆ ಸಂಘದ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪರಾಜ ಶೆಟ್ಟಿ ಪೂರಕ ಮಾಹಿತಿ ನೀಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ. ವರದಿ ಮಂಡಿಸಿದರು.
ಕಾಳು ಮೆಣಸಿನ ಗಿಡ ವಿತರಣೆ
ಸಭೆಗೆ ಬಂದ ಪ್ರತಿ ಸದಸ್ಯರಿಗೆ ತಲಾ ಎರಡರಂತೆ ಕಸಿ ಕಾಳು ಮೆಣಸಿನ ಗಿಡಗಳನ್ನು ವಿತರಿಸಲಾಯಿತು.










