ರಾಮಕುಂಜ: ಕುಲಾಲ ಸಮಾಜ ಸೇವಾ ಸಂಘದಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಭಾ ಕಾರ್ಯಕ್ರಮ

0

ರಾಮಕುಂಜ: ಕುಲಾಲ ಸಮಾಜ ಸೇವಾ ಸಂಘ ರಾಮಕುಂಜ ಇದರ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಭಾ ಕಾರ್ಯಕ್ರಮ ಆ.೩೦ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಬೆಳಗ್ಗೆ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಮಂಗಳಾರತಿ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮಕುಂಜ ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಹರೀಶ್ ಹೊಸಮಣ್ಣು ಅವರು ಮಾತನಾಡಿ, ಕುಲಾಲ ಬಾಂಧವರು ಒಗ್ಗಟ್ಟಿನಿಂದ ಶ್ರಮಿಸಿ, ಪರಸ್ಪರ ಸಹಕಾರ ಹಾಗೂ ಸಹಭಾವನೆಯೊಂದಿಗೆ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು. ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸಿ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಸಹಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ, ಲೇಖಕ ವಿಶ್ವನಾಥ ಕುಲಾಲ್ ಮಿತ್ತೂರು ಮಾತನಾಡಿ, ಹಿರಿಯರನ್ನು ಗೌರವಿಸುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ಎಲೆ ಚಿಗುರು ಹಳೆಬೇರು ಸೇರಿದರೆ ಮಾತ್ರ ಕುಲಾಲ ಸಮಾಜ ಸದೃಢವಾಗಿ ಬೆಳೆಯಬಹುದು ಎಂದರು.


ಮುಖ್ಯ ಅತಿಥಿಯಾಗಿದ್ದ ಬಿ.ಸಿ.ರೋಡು ಬಂಟ್ವಾಳ ಮೂಡ ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕ ದಾಮೋದರ ಇ. ಮಾತನಾಡಿ, ಕುಲಾಲ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಮಕ್ಕಳ ಶೈಕ್ಷಣಿಕ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಸಮಾಜದ ವತಿಯಿಂದ ಅಗತ್ಯ ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು. ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಎಂ. ಶೇಷಪ್ಪ ಕುಲಾಲ್, ಪುತ್ತೂರು ತಾಲೂಕು ಭೂಮಾಪಕರಾದ ಮೋಹನ್ ಕೆ. ಶುಭಹಾರೈಸಿದರು.


ರಾಮಕುಂಜ ಕುಲಾಲ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಚಂದ್ರಶೇಖರ ಕುಂಡಡ್ಕ, ಆಶಾ ಕಾರ್ಯಕರ್ತೆ ಪ್ರೇಮಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಜಯೇಂದ್ರ ಬಂದ್ಯಾನ್ ಸ್ವಾಗತಿಸಿದರು. ಶಶಿಕಲಾ ನಯನ ಕಜೆ, ಚಿತ್ರಹರೀಶ್, ಕೃತಿಕ ರಾಕೇಶ್ ನಿರೂಪಿಸಿದರು. ಲಕ್ಷ್ಯ ಕುಂತೂರು ವಂದಿಸಿದರು. ಪ್ರಜ್ಞಾ ಪ್ರಾರ್ಥಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here