ಸೆ.18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ -ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರ – ಕರಾವಳಿಯ ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ನಿರೀಕ್ಷೆ

0

ಮಂಗಳೂರು:ಕರ್ನಾಟಕ ಸರ್ಕಾರವು ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸುವ ಮಹತ್ವದ ಮತ್ತು ಐತಿಹಾಸಿಕ ನಿರ್ಧಾರ ಕೈಗೊಂಡಿದೆ.
ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಈ ಸಭೆಯಲ್ಲಿ ವಿಶೇಷ ಪ್ರಾಶಸ್ತ್ಯ ನೀಡಲಾಗುವುದು.ಆದ್ದರಿಂದ ಕರಾವಳಿ ಭಾಗದ ವಿಶೇಷ ಪ್ರಸ್ತಾವನೆಗಳನ್ನು ತಕ್ಷಣ ಸಿದ್ಧಪಡಿಸಿ ಸಚಿವ ಸಂಪುಟದ ಮುಂದೆ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ|ಶಾಲಿನಿ ರಜನೀಶ್ ಅವರು ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.ಶೀಘ್ರದಲ್ಲೇ ಸಭೆ ನಡೆಯುವ ಸ್ಥಳ ನಿಗದಿಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ಐತಿಹಾಸಿಕ ಸಭೆ ಮಂಗಳೂರಿನಲ್ಲಿ ನಡೆಯಲು ಕರಾವಳಿ ಭಾಗದ ಜನಪ್ರತಿನಿಽಗಳು, ವಿವಿಧ ಸಂಸ್ಥೆಗಳ ನಿರಂತರ ಪ್ರಯತ್ನ ಹಾಗೂ ಒತ್ತಡವೇ ಪ್ರಮುಖ ಕಾರಣ.ಕರಾವಳಿ ಜಿಲ್ಲೆಗಳ ಪ್ರಮುಖ ಸಮಸ್ಯೆಗಳನ್ನು ಸರ್ಕಾರದ ಉನ್ನತ ಮಟ್ಟದ ಗಮನಕ್ಕೆ ತರಲು ಸ್ಥಳೀಯ ಸಚಿವರು ಮತ್ತು ಶಾಸಕರು, ಮುಖ್ಯಮಂತ್ರಿ ಜತೆ ಸಭೆಗಳನ್ನು ನಡೆಸಿ ಮನವಿ ಸಲ್ಲಿಸಿದ್ದರು.ಈ ನಿರಂತರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಇದೀಗ ಹಸಿರು ನಿಶಾನೆ ತೋರಿದೆ.ಈ ಮೂಲಕ ಕರಾವಳಿ ಜನತೆಯ ಆಶೋತ್ತರಗಳಿಗೆ ಸರ್ಕಾರದ ಮಟ್ಟದಲ್ಲಿ ಸೂಕ್ತ ಸ್ಪಂದನೆ ಸಿಗುವ ನಿರೀಕ್ಷೆಯ ಕಾಲ ಹತ್ತಿರವಾಗಿದೆ.


ಸಮಸ್ಯೆಗಳು ಹಲವು
ಕರಾವಳಿ ಕರ್ನಾಟಕವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ದಶಕಗಳಿಂದ ಕೆಲವು ಪ್ರಮುಖ ಬೇಡಿಕೆಗಳು ನನೆಗುದಿಗೆ ಬಿದ್ದಿವೆ.ಕಡಲ್ಕೊರೆತ ತಡೆಗಟ್ಟುವ ಶಾಶ್ವತ ವೈಜ್ಞಾನಿಕ ಯೋಜನೆಗಳು, ಮೀನುಗಾರಿಕಾ ವಲಯದ ಸವಾಲುಗಳು, ಕರಾವಳಿ ನಿಯಂತ್ರಣ ವಲಯದ ಕಠಿಣ ನಿಯಮಗಳಿಂದ ಪ್ರವಾಸೋದ್ಯಮ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಎದುರಾಗಿರುವ ತೊಡಕುಗಳು, ಬಂದರುಗಳ ಆಧುನೀಕರಣ, ಅರಣ್ಯದಂಚಿನ ನಿವಾಸಿಗಳಿಗೆ ಕಸ್ತೂರಿ ರಂಗನ್ ವರದಿ ಜಾರಿಯ ತೂಗುಗತ್ತಿ, ಕಾಡುಪ್ರಾಣಿ- ಮಾನವ ಸಂಘರ್ಷ ಇತ್ಯಾದಿ ಅನೇಕ ದೀರ್ಘಕಾಲಿಕ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಈ ವಿಶೇಷ ಸಭೆ ವೇದಿಕೆಯಾಗುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here