ಮರ್ದಾಳ:ಹಲ್ಲೆ,ಜಾತಿ ನಿಂದನೆ ಪ್ರಕರಣ: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

0

ಪುತ್ತೂರು:ತಿಂಗಳ ಹಿಂದೆ ಕಡಬ ಮರ್ದಾಳದಲ್ಲಿ ನಡೆದ ಹಲ್ಲೆ ಹಾಗೂ ಜಾತಿ ನಿಂದನೆ ಪ್ರಕರಣದ ಆರೋಪಿಗಳಾದ ಕಡಬ ತಾಲೂಕಿನ ಮರ್ದಾಳ ಗ್ರಾಮದ ರಮೇಶ್, ಉಮೇಶ್, ಚಂದನ್, ರೋಹಿತ್ ಹಾಗೂ ದೇವಿಪ್ರಸಾದ್ ಎಂಬವರಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಆ.3ರಂದು ಮಳೆಯ ಸಲುವಾಗಿ ಶಾಲೆಗಳಿಗೆ ರಜೆ ಇದ್ದದ್ದರಿಂದ ಮಂಜುನಾಥ್ ಎಂಬವರು ತನ್ನ ತರಗತಿಯ ಸ್ನೇಹಿತರೊಂದಿಗೆ ಬಂಟ್ರ ಗ್ರಾಮದ ಕುಂಡಡ್ಕ ಫಾಲ್ಸ್‌ಗೆ ಮಧ್ಯಾಹ್ನ ಸುಮಾರು 12 ಗಂಟೆಗೆ ಬಂದಿದ್ದರು.ಅದೇ ಸಮಯದಲ್ಲಿ ರೋಹಿತ್ ಎಂಬವರು ಸ್ನೇಹಿತರಾದ ದೇವಿಪ್ರಸಾದ್ ಹಾಗೂ ಚಂದನ್ ಎಂಬವರೊಂದಿಗೆ ಕುಂಡಡ್ಕ ಫಾಲ್ಸ್‌ಗೆ ಬಂದಿದ್ದರು.

ದೂರುದಾರ ಮಂಜುನಾಥ್ ಹಾಗೂ ಆತನ ಸ್ನೇಹಿತರು ರೋಹಿತ್ ಮತ್ತವರ ಸ್ನೇಹಿತರನ್ನು ಹಿಂಬಾಲಿಸುತ್ತಿದ್ದು,ಕೆಲ ಹೊತ್ತಿನ ನಂತರ ರಮೇಶ್ ಹಾಗೂ ಉಮೇಶ್ ಅವರು ಕೂಡ ಕುಂಡಡ್ಕ ಫಾಲ್ಸ್‌ಗೆ ಬಂದಿದ್ದರು.ಅಲ್ಲಿ ದೂರುದಾರ ಮಂಜುನಾಥ್ ಮತ್ತು ಅವರ ಸ್ನೇಹಿತರು ಹಾಗೂ ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು.ಈವೇಳೆ ಆರೋಪಿಗಳು ಮಂಜುನಾಥ್ ಮತ್ತು ಅವರ ಸ್ನೇಹಿತರಿಗೆ ಹಲ್ಲೆ ಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು,ಮಂಜುನಾಥ್ ಅವರಿಗೆ ಜಾತಿನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಮಂಜುನಾಥ್ ಅವರು ರಮೇಶ್, ಉಮೇಶ್, ದೇವಿಪ್ರಸಾದ್, ರೋಹಿತ್ ಹಾಗೂ ಚಂದನ್‌ರವರ ವಿರುದ್ಧ ಕಡಬ ಪೊಲೀಸರಿಗೆ ದೂರು ನೀಡಿದ್ದರು.ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಹಾಗೂ ಎಸ್ಸಿ/ಎಸ್ಟಿ ಕಾಯ್ದೆಯ ನ್ವಯ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ಆರೋಪಿಗಳು ತಮ್ಮ ಪರ ವಕೀಲರಾದ ಮಹೇಶ್ ಕಜೆ ಅವರ ಮುಖಾಂತರ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರು ಅರ್ಜಿಯನ್ನು ಪುರಸ್ಕರಿಸಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.

LEAVE A REPLY

Please enter your comment!
Please enter your name here