






ಉಪ್ಪಿನಂಗಡಿ: ಈಚರ್ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತವಾದ ಘಟನೆ ಇಲ್ಲಿನ ಗಾಂಧಿಪಾರ್ಕ್ ಬಳಿ ಸೆ.4ರಂದು ನಡೆದಿದ್ದು, ದ್ವಿಚಕ್ರ ವಾಹನ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಹಿರೇಬಂಡಾಡಿ ನಿವಾಸಿ ಹಿತೋಷ್ ಗಾಯಗೊಂಡ ದ್ವಿಚಕ್ರ ವಾಹನ ಸವಾರ. ಗಾಂಧಿಪಾರ್ಕ್ ಬಳಿಯಿರುವ ಅಂಡರ್‌ಪಾಸ್ ಒಳಗಿನಿಂದ ದ್ವಿಚಕ್ರ ವಾಹನದಲ್ಲಿ ಬಂದ ಇವರು ನೇರವಾಗಿ ಸರ್ವೀಸ್ ರಸ್ತೆಗೆ ಪ್ರವೇಶಿಸಿದ್ದು, ಈ ಸಂದರ್ಭ ಸರ್ವೀಸ್ ರಸ್ತೆಯಲ್ಲಿ ಬರುತ್ತಿದ್ದ ಈಚರ್ ಲಾರಿ ಇವರ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ.
ಅಪಾಯಕ್ಕೆ ಕಾರಣವಾಗುತ್ತಿರುವ ಅಂಡರ್‌ಪಾಸ್‌ಗಳು:
ಎತ್ತರಿಸಲ್ಪಟ್ಟ ಚತುಷ್ಪಥ ಹೆದ್ದಾರಿಯಡಿ ಉಪ್ಪಿನಂಗಡಿ ಭಾಗದಲ್ಲಿ ಗಾಂಧಿಪಾರ್ಕ್, ಉಪ್ಪಿನಂಗಡಿ, ಹಳೆಗೇಟು ಹಾಗೂ 34 ನೆಕ್ಕಿಲಾಡಿಯಲ್ಲಿ ಒಂದು ಸರ್ವೀಸ್ ರಸ್ತೆಯಿಂದ ಇನ್ನೊಂದು ಸರ್ವೀಸ್ ರಸ್ತೆಗೆ ಹೋಗಲು ಅಂಡರ್‌ಪಾಸ್‌ಗಳನ್ನು ನೀಡಲಾಗಿದ್ದು, ಈ ಅಂಡರ್‌ಪಾಸ್ ಒಳಗಿನಿಂದ ಸರ್ವೀಸ್ ರಸ್ತೆ ಪ್ರವೇಶಿಸುವ ವಾಹನಗಳಿಗೆ ಸರ್ವೀಸ್ ರಸ್ತೆಯಲ್ಲಿ ಬರುತ್ತಿರುವ ವಾಹನಗಳು ಕಾಣಿಸುತ್ತಿಲ್ಲ. ಸರ್ವೀಸ್ ರಸ್ತೆಯಲ್ಲಿ ಬರುವ ವಾಹನಗಳಿಗೆ ಅಂಡರ್‌ಪಾಸ್‌ನೊಳಗಿನಿಂದ ಬಂದು ಸರ್ವೀಸ್ ರಸ್ತೆಗೆ ಪ್ರವೇಶಿಸುವ ವಾಹನಗಳು ಅಂಡರ್‌ಪಾಸ್‌ನ ಹತ್ತಿರಕ್ಕೆ ಬರುವ ತನಕ ಕಾಣುತ್ತಿಲ್ಲ. ಸರ್ವೀಸ್ ರಸ್ತೆಗಳು ನೇರವಾಗಿದ್ದರೆ, ಅಡ್ಡಲಾಗಿ ಗುಹೆಯಂತೆ ಅಂಡರ್‌ಪಾಸ್‌ಗಳಿವೆ. ಸರ್ವೀಸ್ ರಸ್ತೆಯಲ್ಲಿ ಸಾಗುವ ವಾಹನಗಳು ವೇಗದಲ್ಲಿದ್ದರೆ ಅಂತಹ ಸಂದರ್ಭದಲ್ಲಿ ಅಂಡರ್‌ಪಾಸ್‌ನೊಳಗಿನಿಂದ ಏಕಾಏಕಿ ಸರ್ವೀಸ್ ರಸ್ತೆಗೆ ವಾಹನಗಳು ನುಗ್ಗಿದಾಗ ಅಪಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಅಂಡರ್ ಪಾಸ್ ಬಳಿ ವಾಹನಗಳ ವೇಗ ನಿಯಂತ್ರಣಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.












