







ನೆಲ್ಯಾಡಿ: 2026-27ನೇ ಸಾಲಿನ ದ.ಕ.ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಹೊಸ್ತೋಟ ಸರಕಾರಿ ಕಿ.ಪ್ರಾ.ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಮಾಲತಿ ಆಯ್ಕೆಗೊಂಡಿದ್ದಾರೆ.
ಮಾಲತಿ ಅವರು ಕಳೆದ 24 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1-8-2002ರಲ್ಲಿ ಸವಣೂರು ಗ್ರಾಮದ ಕುಮಾರಮಂಗಲ ಸರಕಾರಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದರು. ಇಲ್ಲಿ 7 ವರ್ಷ ಕರ್ತವ್ಯ ನಿರ್ವಹಿಸಿ ಹೊಸ್ತೋಟ ಸರಕಾರಿ ಕಿ.ಪ್ರಾ.ಶಾಲೆಗೆ ವಗಾವಣೆಗೊಂಡಿದ್ದರು. 29-6-2009ರಿಂದ ಹೊಸ್ತೋಟ ಸರಕಾರಿ ಕಿ.ಪ್ರಾ.ಶಾಲೆಯಲ್ಲಿ ಪ್ರಭಾರ ಮುಖ್ಯಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಕಳೆದ 17 ವರ್ಷಗಳಿಂದ ಶಾಲೆಯ ಶೈಕ್ಷಣಿಕ, ಆಡಳಿತಾತ್ಮಕ, ಅಕ್ಷರ ದಾಸೋಹ ಸೇರಿದಂತೆ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬಂದಿದ್ದಾರೆ. ಶಾಲಾ ದಾಖಲಾತಿಯನ್ನು ಹೆಚ್ಚಿಸುವಲ್ಲಿ ಸಮುದಾಯದ ನೆರವಿನೊಂದಿಗೆ ಪ್ರಯತ್ನಿಸಿದ್ದಾರೆ. ಅಲ್ಲದೇ ಪ್ರತಿಭಾ ಕಾರಂಜಿ, ಕಲಿಕ ಹಬ್ಬಗಳಲ್ಲಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ.
ಹಳೆವಿದ್ಯಾರ್ಥಿಗಳ ಸಹಕಾರದೊಂದಿಗೆ ಶಾಲೆಯಲ್ಲಿ ಔಷಧಿ ಗಿಡಗಳ ಪರಿಚಯ, ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ, ಸಮುದಾಯ ದೀಪ ಕಾರ್ಯಕ್ರಮ, ಅರಣ್ಯ ಇಲಾಖೆ ಸಹಕಾರದೊಂದಿಗೆ ಪರಿಸರ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಅಲ್ಲದೇ ನಾಗರಿಕ ಸೌಕರ್ಯ ಸಮಿತಿ ಇಲಾಖೆಯ ಮೂಲಕ ಶಾಲೆಗೆ ಶೌಚಾಲಯ ನಿರ್ಮಾಣ (ರೂ.3ಲಕ್ಷ), ಬಾವಿಗೆ ಜಾಲರಿ ಜೋಡಣೆ (ರೂ.10ಸಾವಿರ), ಶಾಲಾ ಕಂಪೌಂಡ್ ನಿರ್ಮಾಣ (3 ಲಕ್ಷ ರೂ.), ಹಳೆವಿದ್ಯಾರ್ಥಿಗಳು ಮತ್ತು ಪೋಷಕರ ಸಹಕಾರದಿಂದ ಕಂಪ್ಯೂಟರ್ (ರೂ.66ಸಾವಿರ ). ಹಳೆವಿದ್ಯಾರ್ಥಿಗಳ ಸಹಕಾರದಿಂದ ಟಿ.ವಿ. (ರೂ.18,500) ಕರಿಹಲಗೆ( ರೂ.6ಸಾವಿರ ರೂ.) ಮುಖ್ಯಗುರುಗಳು, ಪೋಷಕರು, ಎಸ್ಡಿಎಂಸಿ ಸಹಕಾರದೊಂದಿಗೆ ಶಾಲಾ ಮೆಟ್ಟಿಲಿನ ನಿರ್ಮಾಣ (20ಸಾವಿರ ರೂ.), ಮುಖ್ಯಗುರುಗಳಿಂದ ಶಾಲಾಗೇಟ್ ಹಾಗೂ ದ್ವಾರ(30ಸಾವಿರ ರೂ.), ಎಸ್ಡಿಎಂಸಿ, ಹಳೆವಿದ್ಯಾರ್ಥಿಗಳು, ಮುಖ್ಯಶಿಕ್ಷಕರ ಸಹಕಾರದಲ್ಲಿ ಗೌರವ ಶಿಕ್ಷಕರ ಸಂಭಾವನೆ(1.20ಲಕ್ಷ ರೂ.), ಶಾಲಾ ಸಿಬ್ಬಂದಿ ವರ್ಗ, ಪೋಷಕರ ಸಹಕಾರದೊಂದಿಗೆ ಶಾಲಾ ಅಡಿಕೆ ತೋಟ (10ಸಾವಿರ ರೂ.) ನಿರ್ಮಾಣ ಮಾಡಿದ್ದಾರೆ.
ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದಾಗ ಸ್ವಂತ ಖರ್ಚಿನಿಂದ ವಾಹನದ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲು ಮಾಡಿಕೊಂಡಿದ್ದಾರೆ. ವಿದ್ಯಾರ್ಜನೆಯ ಗುಣಮಟ್ಟ ಉಳಿಸಿಕೊಳ್ಳಲು ಸ್ವಂತ ಖರ್ಚಿನಿಂದ ಗೌರವ ಶಿಕ್ಷಕರ ಸಭಾವನೆ(ವರ್ಷಕ್ಕೆ 60 ಸಾವಿರ)ನೀಡುತ್ತಿದ್ದಾರೆ. 30 ಸಾವಿರ ರೂ.ವೆಚ್ಚದಲ್ಲಿ ಶಾಲೆಗೆ ಗೇಟಿನ ದ್ವಾರ ನಿರ್ಮಾಣ ಮಾಡಿದ್ದಾರೆ. 2023ರಲ್ಲಿ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶಾಲಾ ಜಗಲಿಯ ಕೆಲಸವನ್ನು ನವೀಕರಿಸಲು ಕೆಂಪುಕಲ್ಲು ಖರೀದಿಗೆ 18,500 ನೀಡಿ ಶಾಲೆ ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ.
ಇಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಂಡ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 2024-25ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜೇತ್ ಶೆಟ್ಟಿ 612, ದಿವಾ ಕೆ.ಎಸ್.610, ಶ್ರವಂತ್ 568, 2025-26ರಲ್ಲಿ ಮಾನಸ ಪಿ.598, ಕಿಶೋರ್ 591, ಧನ್ವಿಕ್ಷಾ 589, ತೇಜಶ್ರೀ 553 ಅಂಕ ಪಡೆದುಕೊಂಡಿದ್ದಾರೆ. ಪ್ರತಿಭಾ ಕಾರಂಜಿ, ಕಲಿಕಾ ಹಬ್ಬಗಳಲ್ಲಿ ಈ ಶಾಲೆಯ ಮಕ್ಕಳು ತಾಲೂಕು ಮಟ್ಟವನ್ನು ಪ್ರತಿನಿಧಿಸಿದ್ದಾರೆ. ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾಗಿ ಪ್ರತೀ ವರ್ಷವೂ ಪೋಷಕರ ನೆರವಿನೊಂದಿಗೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಮುಚ್ಚಿಹೋಗುವ ಭೀತಿಯಲ್ಲಿದ್ದ ಶಾಲೆಯನ್ನು ಉಳಿಸಲು ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ.
ಮಾಲತಿ ಅವರು ಬಂಟ್ವಾಳ ತಾಲೂಕಿನ ನಡುಮೊಗರು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಕ್ಕೆಪದವು ಪಂಚದುರ್ಗಾ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಬಂಟ್ವಾಳ ತಾಲೂಕು ಮಣಿನಾಲ್ಕೂರು ಸರಕಾರಿ ಪ.ಪೂ.ಕಾಲೇಜಿನಲ್ಲಿ ಪಿಯುಸಿ ಹಾಗೂ ಚಿಕ್ಕಬಳ್ಳಾಪುರ ಮುನ್ಸಿಪಾಲಿಟಿ ಎಜುಕೇಷನ್ ಟ್ರೈನಿಂಗ್ ಸೆಂಟರ್ನಲ್ಲಿ ಟಿಸಿಹೆಚ್ ಮಾಡಿದ್ದಾರೆ. ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಓಟ್ಲದಲ್ಲಿ ವಾಸ್ತವ್ಯವಿದ್ದು ಇವರ ಪತಿ ಚಿದಾನಂದ ಕೆ.ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕಬಳ್ಳಾಪುರ ಜಿಲ್ಲಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರಿ ಅನುಜ್ಞಾ ಕೆ.ಎಸ್. ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಇಂಜಿನಿಯರಿಂಗ್ ಹಾಗೂ ಇನ್ನೋರ್ವ ಪುತ್ರಿ ದಿಶಾ ಕೆ.ಎಸ್. ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.















