ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ- ಗುರುವಂದನೆ

0

ನಿವೃತ್ತ ಶಿಕ್ಷಕರಿಗೆ ಗುರುವಂಧನೆ, ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಅಭಿನಂದನೆ
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತಾಗ ದೇಶದ ಅಭಿವೃದ್ದಿ-ಅಶೋಕ್ ಕುಮಾರ್ ರೈ


ಪುತ್ತೂರು: ಎಸಿ ರೂಮಿನಲ್ಲಿ ಕುಳಿತು ಆದೇಶ ಮಾಡುವ ಅಧಿಕಾರಿಗಳಿಂದಾಗಲೀ ಅಥವಾ ಕೇವಲ ಭಾಷಣ ಮಾಡುವ ಜನಪ್ರತಿನಿಧಿಗಳಿಂದಾಗಲೀ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಬದುಕಿಗೆ ಮಾರ್ಗದರ್ಶನ ಮಾಡುವ ನಾಗರಿಕ ಸಮಾಜವನ್ನು ನಿರ್ಮಾಣ ಮಾಡುವ ಶಿಕ್ಷಕರಿಂದ ದೇಶ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಸೆ.5 ರಂದು ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ಅಂಗವಾಗಿ ಶಿಕ್ಷಕರ ದಿನಾಚರಣೆ-ಗುರುವಂದನಾ ಸಮಾರಂಭಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ರೂ.3600 ಕೋಟಿ ವೆಚ್ಚದಲ್ಲಿ ಕೆಪಿಎಸ್ ಸ್ಕೂಲ್ ಗಳನ್ನು ರಾಜ್ಯದಾದ್ಯಂತ ನಿರ್ಮಾಣ ಮಾಡುತ್ತಿದೆ. ಪುತ್ತೂರಿನಲ್ಲಿಯೂ 19 ಶಾಲೆಗಳನ್ನು ಗುರುತಿಸಲಾಗಿದೆ. ಬಸ್ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ವಿಷಯವಾರು ಶಿಕ್ಷಕ ನೇಮಕಾತಿ ಆಗಲಿದೆ. ಕೆಪಿಎಸ್ ಸ್ಕೂಲ್‌ನ ಸುತ್ತ ಮುತ್ತಲಿನಲ್ಲಿ ಇರುವ ಶಾಲೆಗಳಲ್ಲಿ ಕಡಿಮೆ ಮಕ್ಕಳನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ಬಂದ್ ಮಾಡುವುದಿಲ್ಲ. ಆದರೆ ಆ ಮಕ್ಕಳನ್ನು ಕೆಪಿಎಸ್ ಸ್ಕೂಲಿನಂತಹ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳಿಗೆ ಕಳಿಸುವುದು ಪೋಷಕರ ಜವಾಬ್ದಾರಿ ಎಂದು ಹೇಳಿದ ಅವರು ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಗುರುಭವನಕ್ಕೆ ಸರ್ಕಾರದಿಂದ ರೂ.5ಕೋಟಿ ಅನುದಾನ ತರುವ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.


ಶಿಕ್ಷಕರ ಕೊರತೆ ನೀಗಿಸಲು ಶಿಕ್ಷಕರು ಹಕ್ಕೊತ್ತಾಯ ಮಂಡಿಸಬೇಕು-ರಾಜೇಂದ್ರಭಟ್ ದಿಕ್ಸೂಚಿ ಭಾಷಣ ಮಾಡಿದ ಕಾರ್ಕಳ ಇನ್ನಾ ಎಂ.ವಿ ಶಾಸ್ತ್ರೀ ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಜೇಂದ್ರ ಭಟ್ ಮಾತನಾಡಿ, ನಮ್ಮ ಕಾಲದಲ್ಲಿ ಶಿಕ್ಷಕರ ಕೊರತೆ ಇರಲಿಲ್ಲ. ಈಗ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ತಾಲೂಕು ಕಚೇರಿಯಲ್ಲಿ ಒಬ್ಬ ಸಿಬ್ಬಂದಿ ಇಲ್ಲದಿದ್ದರೆ ನಮ್ಮ ಕಡತ ಒಂದೆರಡು ದಿನ ತಡವಾಗುವುದರಿಂದ ದೊಡ್ಡ ಸಮಸ್ಯೆಯಿಲ್ಲ. ಆದರೆ ಒಬ್ಬ ಶಿಕ್ಷಕ ಇಲ್ಲದಿದ್ದರೆ ಇಡೀ ಶಾಲೆಯ ವಿದ್ಯಾರ್ಥಿಗಳು ತೊಂದರೆ ಎದರಿಸಬೇಕಾಗುತ್ತದೆ. ಹೀಗಾಗಿ ಸರಕಾರ ಆದ್ಯತೆಯಲ್ಲಿ ಶಿಕ್ಷಕರ ನೇಮಕ ಮಾಡಬೇಕು. ಶಾಲೆಯಲ್ಲಿ ಒಂದು ದಿನ ಪಾಠ ಮಾಡಿದವರೂ ಶಿಕ್ಷಕರೇ ಅಗಿರುತ್ತಾರೆ. ಒಂದೇ ಕಚೇರಿಯಲ್ಲಿ ಕುಳಿತುಕೊಳ್ಳುವ, ಒಂದೇ ಕೊಠಡಿಯಲ್ಲಿ ಪಾಠ ಮಾಡುವ ಶಿಕ್ಷಕರಲ್ಲಿ ಗೌರವ ಶಿಕ್ಷಕಿ, ಅತಿಥಿ ಶಿಕ್ಷಕರು ಎಂಬ ವರ್ಗೀಕರಣ ಮಾಡುವುದು ಸರಿಯಲ್ಲ. ಇದಕ್ಕಾಗಿ ಎಲ್ಲಾ ಶಿಕ್ಷಕರು ಹಕ್ಕೊತ್ತಾಯ ಮಂಡಿಸಬೇಕು ಎಂದು ಹೇಳಿದರು.

ಸ್ವಸ್ತ್ಯ ಸಮಾಜದ ನಿರ್ಮಾಣದಲ್ಲಿ ಶಿಕ್ಷಕ ಪಾತ್ರವಿದೆ-ಹೇಮನಾಥ ಶೆಟ್ಟಿ ಕಾವು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆ ಟ್ಟಿ ಮಾತನಾಡಿ, ಶಿಕ್ಷಕರು ವೃತ್ತಿಯಲ್ಲಿದ್ದರೂ ನಿವೃತ್ತಿಯಾದರೂ ಅವರು ಶಿಕ್ಷಕರೇ. ಸಮಾಜಕ್ಕೆ ಮಾದರಿಯಾಗುವ ವೃತ್ತಿ ಶಿಕ್ಷಕರದ್ದು. ಭ್ರಷ್ಟಾಚಾರ ಅವಕಾಶ ಇಲ್ಲದ ಕ್ಷೇತ್ರವೆಂದರೆ ಅದು ಶಿಕ್ಷಕ ವೃತ್ತಿ ಮಾತ್ರ. ಸ್ವಸ್ತ್ಯ ಸಮಾಜದ ನಿರ್ಮಾಣದಲ್ಲಿ ಶಿಕ್ಷಕ ಪಾತ್ರವಿದೆ. ಇಂತಹ ಶಿಕ್ಷಕರಿಗೆ ಯಾವುದೇ ಸಮಸ್ಯೆ ಬಂದರೂ ಅದನ್ನು ನಿವಾರಿಸುವಲ್ಲಿ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಸಮಾಜದಲ್ಲಿ ಬದಲಾವಣೆ ಮಾಡುವ ವೃತ್ತಿ-ಉಮಾನಾಥ ಶೆಟ್ಟಿ
ಪುತ್ತೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಶಿಕ್ಷಕ ವೃತ್ತಿ ಸಮಾಜದಲ್ಲಿ ಗೌರವಯುತವಾದ ಹುದ್ದೆ. ಸಮಾಜದಲ್ಲಿ ಇನ್ನೊಬ್ಬರ ಬೆಳವಣಿಗೆ, ಬದಲಾವಣೆ ಮಾಡುವ ಕ್ಷೇತ್ರವೇ ಶಿಕ್ಷಕ ವೃತ್ತಿ. ಇಂತಹ ಶಿಕ್ಷಕರಲ್ಲಿ ಯಾರೇ ಒಬ್ಬರೂ ತಪ್ಪು ಮಾಡಿದರೂ ಅದು ಶಿಕ್ಷಕ ಕುಲಕ್ಕೆ ಕಲಂಕ. ಹೀಗಾಗಿ ಶಿಕ್ಷಕರು ಬಹಳಷ್ಟು ಜವಾಬ್ದಾರಿಯಿಂದ ನಿರ್ವಹಿಸಬೇಕಾದ ಹೊಣೆ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಪುತ್ತೂರಿನಲ್ಲಿ ಜಿಲ್ಲಾ ಗುರುಭವನ-ರಾಮಕೃಷ್ಣ ಮಲ್ಲಾರ
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಮಾತನಾಡಿ, ಪುತ್ತೂರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೊಸ ಕಟ್ಟಡ ನಿರ್ಮಾಣ ಗೊಂಡಿದೆ. ಗುರು ಭವನ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಜಿಲ್ಲಾ ಕೇಂದ್ರವಾಗುತ್ತಿರುವ ಪುತ್ತೂರಿನಲ್ಲಿ ಜಿಲ್ಲಾ ಗುರುಭವನ ನಿರ್ಮಿಸುವ ಯೋಜನೆ ಇದೆ. ಇದಕ್ಕಾಗಿ ಶಾಸಕರ ಗೌರವ ಅಧ್ಯಕ್ಷತೆಯಲ್ಲಿ ಕಟ್ಟಡ ಸಮಿತಿ ರಚಿಸಿಕೊಂಡು ನೀಲನಕಾಶೆ ತಯಾರಿಸಲಾಗಿದೆ. ಸುಮಾರು 6-7ಕೋಟಿ ವೆಚ್ಚದಲ್ಲಿ ಮೂರು ಅಂತಸ್ತಿನ ಗುರುಭವನ ನಿರ್ಮಾಣ ಗೊಳ್ಳಲಿದೆ. ಶಾಸಕರು ಅನುದಾನ ಒದಗಿಸುವ ಭರವಸೆ ನೀಡಿದ್ದು ನಿಮ್ಮೆಲ್ಲರ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.

ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ಯಾಮಲಾ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸಿಲ್ವಿಯಾ ಅಸುಂಪ್ತಾ ಕ್ಯಾಸ್ಟಲೀನಾ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಪುತ್ತೂರು ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ., ಕಡಬ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಾಂತರಾಮ ಓಡ್ಲ, ಪುತ್ತೂರು ತಾಲೂಕು ಗ್ರೇಡ್-1 ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಚಕ್ರಪಾಣಿ, ಕಡಬ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್, ನಿವೃತ್ತ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಪಾಪೆಮಜಲು ಪ್ರೌಢಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಕೆ., ರಾಷ್ಟçಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ನಾರಾಯಣ ಭಟ್ ರಾಮಕುಂಜ ಹಾಗೂ ಐತ್ತಪ್ಪ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕರಿಗೆ ಸನ್ಮಾನ:
ನಿವೃತ್ತ ಪ್ರಾಥಮಕ ಶಾಲಾ ಶಿಕ್ಷಕರಾದ ಸೀತಾರಾಮ ಭಟ್, ಗೀತಾ ಕುಮಾರಿ, ಪ್ರಮೀಳಾ ಎಚ್.ಆರ್., ಶೆಲ್ಮಿ ಫೌಲ್, ಮೇದಪ್ಪ ಗೌಡ, ಕಮಲಾಕ್ಷಿ ಕೆ, ಕಾತ್ಯಾಯಿನಿ, ರಾಜೀವಿ ಬಿ.ಕೆ., ಲೀಲಾವತಿ ಎಂ., ದಾಮೋದರ ಕೆ., ಸೀತಾರಾಮ ಕೆ.ಜಿ., ಗ್ರೆಟ್ಟಾ ಮಸ್ಕರೇನಸ್, ಚರುಂಬ ಯು.ಬಿ., ಸೂಸಮ್ಮ ಮತಾಯಿ, ಗುಲಾಬಿ ಎಸ್, ಸುಚೇತಾ ಕುಮಾರಿ, ವಸಂತಿ ಎಂ., ಬಿ.ಎಲ್ ಭವಾನಿ, ಬಾಲಕೃಷ್ಣ ಎನ್., ಜಗನ್ನಾಥ ಎಸ್., ಶಾಂತಪ್ಪ ಗೌಡ ವೈ., ಲಿಂಗಮ್ಮ, ಗಂಗಾಧರ ನಾಯ್ಕ, ಜಯಂತಿ ಪಿ., ಪರಮೇಶ್ವರಿ, ಹನುಂತಯ್ಯ, ಪದ್ಮಯ್ಯ ಗೌಡ, ಪ್ರೇಮಲತಾ ಕೆ.ಎಸ್., ತುಳಸಿ ಹೆಚ್, ಪದ್ಮ, ಅನುದಾನಿ ಪ್ರಾಥಮಿಕ ಶಾಲಾ ಶಿಕ್ಷಕರಾದ ಶಿನಾನಂದಪ್ಪ ಟಿ., ರಾಮಚಂದ್ರಪ್ಪ ಕೆ., ರಾಜಶೇಖರಪ್ಪ ಆರ್., ಎನ್ ನರೇಂದ್ರ ಭಟ್, ಸರಕಾರಿ ಪ್ರೌಢಶಾಲಾ ವಸಂತ ಮೂಲ್ಯ, ವಿಷ್ಣುಪ್ರಸಾದ್ ಸಿ., ನಾರಾಯಣ ನಾಯ್ಕ, ರಘುರಾಮ ಎ., ಲಿಸ್ಕಿಂ ಎಂ,ಪಿ, ಶ್ರೀಧರ ಭಟ್, ಅನುದಾನಿ ಪ್ರೌಢಶಾಲಾ ವಿಭಾಗದಲ್ಲಿ ಶಕುಂತಳಾ ಕೆ., ರಮೇಶ್ ಮಯ್ಯ, ಸತೀಶ್ ಭಟ್, ಮೋನಪ್ಪ ಪಟ್ಟೆ ಅವರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಜಗನ್ನಾಥ, ತಾರಾನಾಥ ಸವಣೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಮೇಶ್ ಉಳಯ ಹಾಗೂ ಬಾಲಕೃಷ್ಣ ರೈ ಪೊರ್ದಾಲ್ ಅವನ್ನು ಸನ್ಮಾನಿಸಲಾಯಿತು. ಸಹಪಠ್ಯ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಅಭಿನಂದಿಸಲಾಯಿತು. ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿರುವ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಮುಖ್ಯ ಶಿಕ್ಷಕಿ ಗಾಯತ್ರಿಯವರನ್ನು ಸನ್ಮಾನಿಸಲಾಯಿತು.

ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ:
2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ ಕೆಯ್ಯೂರು ಕೆಪಿಎಸ್‌ನ ಸಪ್ನಾ ಶೆರಿನ್, ಕೊಂಬೆಟ್ಟು ಸರಕಾರಿ ಪ್ರೌಢಶಾಲಾ ಶಿಲ್ಪಾ ವಿಧಾಕ್ತಿ ನಂದೇರಾ, ಪಾಣಾಜೆ ಸುಭೋದ ಪ್ರೌಢಶಾಲೆಯ ದೀಪಕ್ ಪಿ.ಎಸ್., ಸೈಂಟ್ ವಿಕ್ರ‍್ಸ್ನ ಯಶ್ಮಿತಾ, ಉಪ್ಪಿನಂಗಡಿ ಶ್ರೀರಾಮ ಪ್ರೌಢಶಾಲೆಯ ತುಷಾರ್ ಡಿ. ದೇವಾಡಿಗ, ಈಶ್ವರಮಂಗಲ ಗಜಾನನ ಆಂಗ್ಲ ಮಾಧ್ಯಮ ಶಾಲಾ ಅನನ್ಯ, ವಿಶೇಷ ಚೇತನಾ ವಿದ್ಯಾರ್ಥಿಗಳಾದ ತೆಂಕಿಲ ವಿವೇಕಾನಂದದ ಅಭಿನವಕೃಷ್ಣ, ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಪೃಥ್ವಿ ಕೆ. ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಾಲಾ ತಪಾಸಣಾಧಿಕಾರಿ ದಿ. ಡಿಂಬ್ರಿಗುತ್ತು ಸಾಂತಪ್ಪ ರೈ ಅವರ ಸ್ಮರಣಾರ್ಥ ಅವರ ಪತ್ನಿ ಸರಳಾ ಎಸ್ ರೈಯವರು ನೀಡುವ ಪ್ರತಿಭಾ ಪುರಸ್ಕಾರವನ್ನು ಕೆಯ್ಯೂರು ಕೆಪಿಎಸ್‌ನ ಸಪ್ನಾ ಶೆರಿನ್, ಇರ್ದೆ ಉಪ್ಪಳಿಗೆ ಪ್ರೌಢಶಾಲೆಯ ಪ್ರಾಪ್ತಿ ಹಾಗೂ ಬಿಳಿಯೂರುಕಟ್ಟೆಯ ಲಿಖಿತಾ ಡಿ.ಬಿಯವರಿಗೆ ನೀಡಿ ಗೌರವಿಸಲಾಯತು.

ಗುರುಭವನದ ನೀಲ ನಕಾಶೆ ಅನಾವರಣ, ಅನುದಾನಕ್ಕೆ ಮನವಿ:
ಪುತ್ತೂರಿನಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಜಿಲ್ಲಾ ಗುರುಭವನದ ನೀಲ ನಕಾಶೆಯನ್ನು ಶಾಸಕ ಅಶೋಕ್ ಕುಮಾರ್ ರೈಯವರು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಗುರುಭವನ ನಿರ್ಮಾಣಕ್ಕೆ ಗರೀಷ್ಠ ಅನುದಾನ ಒದಗಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್ ಸ್ವಾಗತಿಸಿದರು. ಸಿಆರ್‌ಪಿ ಗಣೇಶ್ ಹಾಗೂ ವಳಾಲು ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿ, ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ಸ್ಟಿಫನ್ ವೇಗಸ್ ವಂದಿಸಿದರು. ಶಿಕ್ಷಕರಾದ ಶ್ಯಾಮಲಾ, ಶ್ರೀಲತಾ, ವಿಜಯ ಕುಮಾರ್, ಅಬ್ರಹಾಂ, ಮೋಹನಚಂದ್ರ, ವಿನೋದ್ ಕುಮಾರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನಾಡಗೀತೆ, ಒಂದೇ ಮಾತರಂ ಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ ಗುರುನಮನ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮ ಪ್ರಾರಂಭದಲ್ಲಿ ಉಪಹಾರ ಹಾಗೂ ಕೊನೆಯಲ್ಲಿ ಅನ್ನಸಂತರ್ಪಣೆ ನೆರವೇರಿತು.

ವ್ಯಕ್ತಿಯ ಅನುಭವಗಳು ಸಮಾಜಕ್ಕೆ ಕೊಡುಗೆಯಾಗುತ್ತವೆ. ಹಾಗಾಗಿ ನಿವೃತ್ತ ಶಿಕ್ಷಕರು ತಮ್ಮ ಅನುಭವಗಳನ್ನು ಮಕ್ಕಳಿಗೆ ಧಾರೆ ಎರೆಯಬೇಕು. ಕನಿಷ್ಟ ದಿನಕ್ಕೊಂದು ಗಂಟೆಯಾದರೂ ಮಕ್ಕಳಿಗೆ ಪಾಠ ಮಾಡುವ ಕ್ರಿಯೆಯಲ್ಲಿ ಈ ನಿವೃತ್ತ ಶಿಕ್ಷಕರೂ ಭಾಗಿಯಾದರೆ ಉತ್ತಮ. ಇದು ನಿಜವಾದ ದೇಶಸೇವೆಯಾಗುತ್ತದೆ ಎಂದ ಅವರು ಮನೆಗಿಂತಲೂ ಶಾಲೆಯನ್ನು ಪ್ರೀತಿಸುವ ಶಿಕ್ಷಕರು ಪುತ್ತೂರಿನಲ್ಲಿ ಸಾಕಷ್ಟಿದ್ದಾರೆ. ಮಕ್ಕಳಲ್ಲಿ ಸಂಸ್ಕೃತಿ ಆಚಾರ-ವಿಚಾರಗಳನ್ನು ತುಂಬಿಸಿ ಸಮಾಜಕ್ಕೆ ಆಸ್ತಿಯನ್ನಾಗಿಸುವ ಇಂತಹ ಶಿಕ್ಷಕರಿಂದ ನಿಜವಾದ ನಾಗರಿಕ ಸಮಾಜ ನಿರ್ಮಾಣವಾಗುತ್ತದೆ. ಮಕ್ಕಳನ್ನು ತಿದ್ದುವವರು ಶಿಕ್ಷಕರಾಗಿದ್ದು ನನ್ನಿಂದ ತಪ್ಪುಗಳಾದರೂ ನನ್ನನ್ನು ತಿದ್ದುವ ಕೆಲಸ ಶಿಕ್ಷಕರು ಮಾಡಬೇಕು
-ಅಶೋಕ್ ಕುಮಾರ್ ರೈ, ಶಾಸಕರು

LEAVE A REPLY

Please enter your comment!
Please enter your name here