ರೈತರ ಹೆಸರಿನ ಮುಂದೆ ಎಫ್ಆರ್ ಪದ ಬಳಕೆಗೆ ಆದೇಶಕ್ಕೆ ಒತ್ತಾಯ‌ – ಸವಣೂರಿನಲ್ಲಿ 24 ತಾಸು ಪೊಲೀಸ್ ಗಸ್ತು ವ್ಯವಸ್ಥೆಗೆ ಆಗ್ರಹ – ಗ್ರಾಮಸಭೆಗೆ ಗೈರು ಹಾಜರಾದ ಇಲಾಖಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

0

ಪುತ್ತೂರು: ಸವಣೂರು, ಪುಣ್ಚಪ್ಪಾಡಿ ಹಾಗೂ ಪಾಲ್ತಾಡಿ ಗ್ರಾಮಗಳನ್ನು ಒಳಗೊಂಡ ಸವಣೂರು ಗ್ರಾಮ ಸಭೆ ಸೆ. 7 ರಂದು ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಭವನದಲ್ಲಿ ಜರಗಿತು.


ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಸ್. ಹುಕ್ಕೇರಿಯವರು ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದರು.ಸವಣೂರು ಗ್ರಾಮ ಪಂಚಾಯತ್ ಆಡಳಿತಾಽಕಾರಿ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಸವಣೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಽಕಾರಿ ಗುರುವ, ಲೆಕ್ಕಸಹಾಯಕರಾದ ಜಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ರೈತರ ಹೆಸರಿನ ಮುಂದೆ ಎಫ್ಆರ್ ಪದ ಬಳಕೆಗೆ ಒತ್ತಾಯ:
ರಾಜ್ಯ ಸರಕಾರ ಶಿಕ್ಷಕರ ಹೆಸರಿನ ಮುಂದೆ ಟಿಆರ್ ಗೌರವದ ಪದ ಬಳಸಿದಂತೆ ರೈತರಿಗೂ ಗೌರವ ಸಿಗಬೇಕು. ರೈತನೇ ದೇಶದ ಬೆನ್ನಲುಬು ಆಗಿದ್ದು, ರೈತನಿಗೆ ಗೌರವ ಬರಬೇಕಾದರೆ ರೈತನ ಹೆಸರಿನ ಮುಂದೆ ಎಫ್ಆರ್ ಎಂಬ ಗೌರವ ಸೂಚಕ ಪದವನ್ನು ಬಳಸಲು ಕರ್ನಾಟಕ ಸರಕಾರ ಘೋಷಣೆ ಮಾಡಬೇಕು. ಈ ಬಗ್ಗೆ ನಿರ್ಣಯಕೈಗೊಂಡು ಸರಕಾರಕ್ಕೆ ಕಳಿಸುವಂತೆ ರಾಮಪ್ರಸಾದ್ ರೈ ಕಲಾಯಿ ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ಸಭೆ ನಿರ್ಣಯಿಸಿತು.


ಸವಣೂರಿನಲ್ಲಿ 24 ತಾಸು ಪೊಲೀಸರು ಇರಬೇಕು:
ಅಪ್ರಾಪ್ತ ವಯಸ್ಕರಿಂದ ವಾಹನ ಚಾಲನೆ ತಡೆಗಟ್ಟಲು ಸವಣೂರು- ಪುಣ್ಚಪ್ಪಾಡಿ ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ಪೊಲೀಸ್ ಗಸ್ತು ಇರಬೇಕು, ಇದರಿಂದ ಈ ಭಾಗದಲ್ಲಿ ಅಪ್ರಾಪ್ತ ವಯಸ್ಕರು ದ್ವಿಚಕ್ರ ವಾಹನ ಚಾಲನೆ ಮಾಡುವುದು ತಪ್ಪುತ್ತದೆ, ಸವಣೂರು ಪೇಟೆಯಲ್ಲಿ ವಿಪರೀತ ವೇಗದಲ್ಲಿ ವಾಹನ ಸವಾರಿ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆಲ್ಲ ಕಡಿವಾಣ ಆಗಬೇಕಾದರೆ ಸವಣೂರು ಪ್ರದೇಶದಲ್ಲಿ ದಿನದ 24 ತಾಸು ನಿರಂತರವಾಗಿ ಪೊಲೀಸ್ ಗಸ್ತು ವ್ಯವಸ್ಥೆ ಆಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಮಾಂತೂರಿನಲ್ಲಿ ಪೊಲೀಸ್ ಹೊರಠಾಣೆ ನಿರ್ಮಾಣಕ್ಕೆ ಜಾಗ ಮೀಸಲಿಡಲಾಗಿದ್ದು ಇಲ್ಲಿ ಪೊಲೀಸ್ ಠಾಣೆ ನಿರ್ಮಿಸಲು ಗಿರಿಶಂಕರ್ ಸುಲಾಯ ಮತ್ತು ರಫೀಕ್ ಎಂ.ಎ ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಲು ಸಭೆ ತೀರ್ಮಾನಿಸಿತು.


ಗ್ರಾಮಸಭೆಗೆ ಗೈರುಹಾಜರಾದ ಇಲಾಖಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ:
ಪಿಡಬ್ಲೂ ಡಿ, ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಗೆ ಬಾರದೇ ಇರುವುದರ ಬಗ್ಗೆ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಯಿತು.ಎಲ್ಲಾ ಇಲಾಖೆಯ ಅಧಿಕಾರಿಗಳು ಬಂದ ಮೇಲೆಯೇ ಗ್ರಾಮ ಸಭೆ ಆರಂಭ ಮಾಡಬೇಕಿತ್ತು ಎಂದು ಗ್ರಾಮಸ್ಥರು ಹೇಳಿದಾಗ , ಚರ್ಚಾನಿಯಂತ್ರಣಾಽಕಾರಿ ಹುಕ್ಕೇರಿಯವರು ಮಾತನಾಡಿ, ಎಸ್‌ಐಆರ್‌ನಲ್ಲಿ ಭಾಗವಹಿಸಲು ಇದ್ದ ಕಾರಣ ಕೆಲವು ಇಲಾಖೆಯ ಅಧಿಕಾರಿಗಳು ಸಭೆಗೆ ಬರಲು ಆಗಲಿಲ್ಲ ಎಂದು ಉತ್ತರ ನೀಡಿದರು.


ಉಚಿತ ಬೇಡವೇ ಬೇಡ:
ಸರಕಾರ ನೀಡುವ ಉಚಿತ ಕೊಡುಗೆಗಳನ್ನು ಕೂಡಲೇ ನಿಲ್ಲಿಸಬೇಕು. ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಪರಿಪೂರ್ಣ ರೀತಿಯಲ್ಲಿ ಜಾರಿಗೆ ತರಬೇಕು ಎಂದು ಚೇತನ್ ಕುಮಾರ್ ಕೋಡಿಬೈಲು ಆಗ್ರಹಿಸಿದರು. ಸವಣೂರಿನಲ್ಲಿ ಪಶು ವೈದ್ಯಕೀಯ ಅಸ್ಪತ್ರೆಯನ್ನು ಪ್ರಾರಂಭಿಸುವಂತೆ ಗಿರಿಶಂಕರ್ ಸುಲಾಯ ಆಗ್ರಹಿಸಿದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಬರೆದುಕೊಳ್ಳಲು ಸಭೆ ತೀರ್ಮಾನಿಸಿತು.


35 ವರ್ಷಗಳ ಹಳೆಯ ವಿದ್ಯುತ್ ತಂತಿ ಬದಲಾಯಿಸಿ:
ಪರಣೆ- ಜಾರಿಗೆತಡಿ ವ್ಯಾಪ್ತಿಯಲ್ಲಿ ಇರುವ 35 ವರ್ಷಗಳ ಹಳೆಯ ವಿದ್ಯುತ್ ತಂತಿಯನ್ನು ಕೂಡಲೇ ಬದಲಾಯಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರಿಗೆ ಅಪಾಯ ಬರುತ್ತದೆ ಎಂದು ಸತೀಶ್ ಅಂಗಡಿಮೂಲೆ ಹೇಳಿದರು. ಇಡ್ಯಾಡಿ ಪ್ರದೇಶ ವ್ಯಾಪ್ತಿಯಲ್ಲಿ ಬೀದಿ ದೀಪ ಇಲ್ಲ ಎಂದು ರಾಜೇಂದ್ರ ಇಡ್ಯಾಡಿ ಹೇಳಿದರು. ಈ ಬಗ್ಗೆ ಕ್ರಮ ಕೈಗೊಳ್ಳಲು ಸಭೆ ನಿರ್ಣಯಿಸಿತು.


ಹೊರ ರಾಜ್ಯಗಳಿಂದ ಬರುವ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸುವ ಮೊದಲು ವೈದ್ಯಕೀಯ ತಪಾಸಣೆ ಮಾಡಿ:
ತೋಟ ಮತ್ತು ಇತರ ಕೆಲಸಗಳಿಗೆ ಹೊರ ರಾಜ್ಯಗಳಿಂದ ಬರುವ ಕಾರ್ಮಿಕರನ್ನು ಮೊತ್ತ ಮೊದಲಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಈಗಾಗಲೇ ಜಾರ್ಖಂಡ್ ಮೂಲದ ಕೆಲವು ಮಂದಿಗೆ ಅನಾರೋಗ್ಯ ಇದ್ದ ಪ್ರಕರಣ ಪತ್ತೆಯಾಗಿದೆ. ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿದ್ದೇವೆ ಎಂದು ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಧು ಹೇಳಿದರು.


ಮೊಟ್ಟೆಯ ಧಾರಣೆ ಏರಿಕೆಯಿಂದ ನಮಗೆ ಸಂಕಷ್ಟ:
ಮೊಟ್ಟೆಯ ಧಾರಣೆ ಏರಿಕೆ ಆಗಿರುವುದರಿಂದ ಅಂಗನವಾಡಿ ಕೇಂದ್ರದಲ್ಲಿ ಫಲಾನುಭವಿಗಳಿಗೆ ಮೊಟ್ಟೆ ವಿತರಣೆಗೆ ತುಂಬಾ ತೊಂದರೆ ಆಗುತ್ತದೆ. ಆದುದರಿಂದ ಸರಕಾರ ಮೊಟ್ಟೆ ಖರೀದಿಗೆ ನೀಡುವ ಹಣವನ್ನು ಹೆಚ್ಚು ಮಾಡುವಂತೆ ಶೇಷಮ್ಮ ಪುಣ್ಚಪ್ಪಾಡಿ ಒತ್ತಾಯಿಸಿದರು.


ಮಹಿಳಾ ಕಲ್ಯಾಣ ಇಲಾಖೆಯ ಆರತಿ, ಶಿಕ್ಷಣ ಇಲಾಖೆಯ ಸವಣೂರು ಸಿಆರ್‌ಪಿ ಜಯಂತ್ ವೈ, ಪಶು ಸಂಗೋಪನಾ ಇಲಾಖೆಯ ವೀರೇಶ್, ಮೆಸ್ಕಾಂ ಇಲಾಖೆಯ ರಾಜೇಶ್, ಕಂದಾಯ ಇಲಾಖೆಯ ರವಿಚಂದ್ರ, ಪೊಲೀಸ್ ಇಲಾಖೆಯ ಬಸವರಾಜ್, ಅರಣ್ಯ ಇಲಾಖೆಯ ದೇವಿಪ್ರಸಾದ್ ಅವರುಗಳು ಮಾಹಿತಿಗಳನ್ನು ನೀಡಿದರು.


ಸವಣೂರು ಗ್ರಾ.ಪಂ, ಮಾಜಿ ಅಧ್ಯಕ್ಷರುಗಳಾದ ರಾಜೀವಿ ವಿ. ಶೆಟ್ಟಿ, ಸುಂದರಿ, ಮಾಜಿ ಸದಸ್ಯರುಗಳಾದ ತಾರಾನಾಥ ಬೊಳಿಯಾಲ, ಭರತ್ ರೈ ಪಾಲ್ತಾಡಿ, ಹರಿಕಲಾ ರೈ, ಚಂದ್ರಾವತಿ ಸುಣ್ಣಾಜೆ, ಬಾಬು, ವಿನೋದ ರೈ, ಅಬ್ದುಲ್ ರಜಾಕ್ ಕೆನರಾ, ತೀರ್ಥರಾಮ ಕೆಡೆಂಜಿ, ಗ್ರಾಮಸ್ಥರಾದ ಯತೀಂದ್ರ ಶೆಟ್ಟಿ ಮಠ, ಶೇಷಪ್ಪ ನಾಯ್ಕ, ವಿಜಯ ಈಶ್ವರ ಗೌಡ, ಆಶ್ರ- ಜನತಾ, ಸಚಿನ್ ಸವಣೂರು, ಗಂಗಾಧರ್ ಪೆರಿಯಡ್ಕ ಹಾಗೂ ಅಂಗನವಾಡಿ ಕಾರ‍್ಯಕರ್ತೆಯರು, ಆಶಾ ಕಾರ‍್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರುಗಳು ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಪ್ರಮೋದ್ ಕುಮಾರ್ ರೈ, ದಯಾನಂದ ಮಾಲೆತ್ತಾರು, ಯತೀಶ್ ಕೊಂಬಕೆರೆ, ಜಯ ಸವಣೂರು ಹಾಗೂ ಜಯಶ್ರೀ ರವರುಗಳು ಸಹಕರಿಸಿದರು.


ಸನ್ಮಾನ:
ಸವಣೂರು ಗ್ರಾಮ ಪಂಚಾಯತ್‌ನಲ್ಲಿ ಲೆಕ್ಕಸಹಾಯಕರಾಗಿ ಮತ್ತು ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಮನ್ನಥ ಅಜಿರಂಗಳ ಅವರು ಇತ್ತೀಚಿಗೆ ಸೇವಾನಿವೃತ್ತಿ ಹೊಂದಿದ್ದರು. ಅವರನ್ನು ಸಮರ್ಥ ಸೇವಾ ಟ್ರಸ್ಟ್ ಪುಣ್ಚಪ್ಪಾಡಿ ಮತ್ತು ಸವಣೂರು ಯುವಕ ಮಂಡಲದ ವತಿಯಿಂದ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರ ಬಗ್ಗೆ ಗಿರಿಶಂಕರ್ ಸುಲಾಯ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಮನ್ಮಥ ಅಜಿರಂಗಳ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here