ಸಮಯದ ಮಿತಿ ರಾತ್ರಿ 11 ಗಂಟೆ ತನಕ ವಿಸ್ತರಿಸಲು ಆಗ್ರಹ – ಗಣೇಶೋತ್ಸವ ಪೂರ್ವಭಾವಿ ಪೊಲೀಸ್ ಶಾಂತಿ ಸಭೆ

0

ಬೇಡಿಕೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು-ಡಿವೈಎಸ್‌ಪಿ


ಪುತ್ತೂರು:ಗಣೇಶೋತ್ಸವದ ಪೂರ್ವಭಾವಿಯಾಗಿ ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ ನಡೆಯಿತು.ಗಣೇಶೋತ್ಸವ ಕಾರ್ಯಕ್ರಮಗಳಿಗೆ ಸಮಯದ ಪರಿಮಿತಿಯನ್ನು ಸಡಿಲಿಕೆ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚುವರಿ ಸಮಯಾವಕಾಶ ನೀಡಬೇಕು.ರಾತ್ರಿ ಕನಿಷ್ಠ 11 ಗಂಟೆಯ ತನಕವಾದರೂ ಅವಕಾಶ ನೀಡಬೇಕು ಎಂದು ವಿವಿಧ ಗಣೇಶೋತ್ಸವ ಕಾರ್ಯಕ್ರಮಗಳ ಆಯೋಜಕರು ಸಭೆಯಲ್ಲಿ ಆಗ್ರಹಿಸಿದರು.

ಆಯೋಜಕರ ಬೇಡಿಕೆ, ಒತ್ತಡಗಳನ್ನು ಜಿಲ್ಲಾಡಳಿತ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಉಪವಿಭಾಗದ ಪೊಲೀಸ್ ಉಪಅಽಕ್ಷಕ ಪ್ರಮೋದ್ ಕುಮಾರ್ ತಿಳಿಸಿದರು.ಸಭೆಯು ಸೆ.10ರಂದು ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.


ವಿವಿಧೆಡೆ ನಡೆಯುವ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳ ಸಂದರ್ಭ ರಾತ್ರಿ ವೇಳೆ ಧ್ವನಿವರ್ಧಕಗಳ ಬಳಕೆಗೆ 10 ಗಂಟೆಯ ತನಕ ಸಮಯದ ಮಿತಿ ನೀಡಿರುವುದರಿಂದ ಆಯೋಜಕರು ಬಹಳಷ್ಟು ಸಮಸ್ಯೆ ಎದುರಿಸಬೇಕಾಗಿದೆ.ವರ್ಷಕ್ಕೆ ಒಂದು ಬಾರಿ ನಡೆಯುವ ಗಣೇಶೋತ್ಸವದಲ್ಲಿ ಸಮಯದ ಮಿತಿಯಿಂದಾಗಿ ಬಹಳಷ್ಟು ಕಲಾವಿದರಿಗೂ ಅನ್ಯಾಯವಾಗುತ್ತಿದೆ. ಸಾರ್ವಜನಿಕರಿಗೂ ನಿರಾಶೆ ಮೂಡುವಂತಾಗಿದೆ.ಈ ನಿಟ್ಟಿನಲ್ಲಿ ಸಮಯದ ಮಿತಿಯನ್ನು ಸಡಿಲಿಕೆ ಮಾಡಿ ರಾತ್ರಿ ಕನಿಷ್ಠ 11 ಗಂಟೆಯ ತನಕವಾದರೂ ವಿಸ್ತರಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವಂತೆ ವಿವಿಧ ಗಣೇಶೋತ್ಸವ ಸಮಿತಿಗಳವರು ವಿನಂತಿಸಿದರು.ಪ್ರತಿಕ್ರಿಯಿಸಿದ ಡಿವೈಎಸ್‌ಪಿ ಪ್ರಮೋದ್ ಕುಮಾರ್ ಮಾತನಾಡಿ, ದೇವರ ಕೆಲಸ ಉತ್ತಮ ರೀತಿಯಲ್ಲಿ ಆಗಬೇಕು. ಪ್ರಜಾಪ್ರಭುತ್ವದಲ್ಲಿ ಅದು ಕಾನುನುಬದ್ದವಾಗಿ ನಡೆಯಬೇಕು.ಸಮಯದ ಮಿತಿ ನಿಯಮವನ್ನು ಪೊಲೀಸ್ ಇಲಾಖೆ ಮಾಡಿರುವುದಲ್ಲ.ಜನಪ್ರತಿನಿಽಗಳು ಮಾಡಿರುವ ಕಾನೂನು.ಅದನ್ನು ನಾವು ಪಾಲನೆ ಮಾಡುವುದು ಮಾತ್ರ.ಅಲ್ಲದೆ ರಾತ್ರಿ 10 ಗಂಟೆಯ ಬಳಿಕ ಧ್ವನಿವರ್ಧಕ ಬಳಸದಂತೆ ಸುಪ್ರೀಂ ಕೋರ್ಟ್‌ನ ಸ್ಪಷ್ಟ ಆದೇಶವಿದೆ.ಹಾಗಿದ್ದರೂ,ಇಲ್ಲಿ ಪ್ರಸ್ತಾಪವಾಗಿರುವ ಎಲ್ಲಾ ಬೇಡಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.ಆಯೋಜಕರ ಬೇಡಿಕೆ, ಆಶಯಗಳನ್ನು ಮೇಲಾಽಕಾರಿಗಳು ಹಾಗೂ ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.


ಹೆಚ್ಚುವರಿ ಸಮಯಾವಕಾಶ ನೀಡಬೇಕು-ಅಭಿಜಿತ್ ಶೆಟ್ಟಿ;
ಕಿಲ್ಲೆ ಮೈದಾನದ ಸಾರ್ವಜನಿಕ ಮಹಾಗಣೇಶೋತ್ಸವ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ ಮಾತನಾಡಿ, ಕಳೆದ ಆರು ದಶಕಗಳಿಂದ ಕಿಲ್ಲೆ ಮೈದಾನದಲ್ಲಿ ಗಣೇಶೋತ್ಸವ ಆಯೋಜಿಸಲಾಗುತ್ತಿದೆ. ಎಲ್ಲಾ ಕಾರ್ಯಕ್ರಮಗಳನ್ನು ನಿಗದಿತ ಸಮಯದಲ್ಲಿ ನಡೆಸುವುದು ಅಸಾಧ್ಯವಾಗುತ್ತಿದೆ.ಶೋಭಾಯಾತ್ರೆಯ ದಿನ ದೈವದ ಕೋಲ ನಡೆದ ಬಳಿಕ ಮೆರವಣಿಗೆ ಪ್ರಾರಂಭಗೊಳ್ಳುವ ಸಂಪ್ರದಾಯವಿದ್ದು ಪೊಲೀಸ್ ಇಲಾಖೆ ಸೂಚಿಸಿದ ಸಮಯದಲ್ಲಿ ಇದನ್ನು ಮುಗಿಸುವುದು ಅಸಾಧ್ಯ.ಹೀಗಾಗಿ ಹೆಚ್ಚುವರಿ ಸಮಯಾವಕಾಶ ನೀಡಬೇಕು ಎಂದು ವಿನಂತಿಸಿದರು.


ಮೆರವಣಿಗೆಗೆ ರಾತ್ರಿ 11.30ರ ತನಕ ಅವಕಾಶ ನೀಡಬೇಕು-ರಾಧಾಕೃಷ್ಣ ನಂದಿಲ:
ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವ ಸಮಿತಿಯ ರಾಧಾಕೃಷ್ಣ ನಂದಿಲ ಮಾತನಾಡಿ, ಸಮಯದ ಪರಿಮಿತಿಯಿಂದ ಕಳೆದ ಬಾರಿಯ ಗಣೇಶೋತ್ಸವದಲ್ಲಿ ಬಹಳಷ್ಟು ತೊಂದರೆ ಎದುರಿಸಿದ್ದೇವೆ.ಈ ಬಾರಿ ಸಭಾ ಕಾರ್ಯಕ್ರಮಗಳನ್ನು ಮೊಟಕುಗೊಳಿಸಲಾಗಿದೆ.ಮಕ್ಕಳಿಗೆ ಪುರಾಣದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮೆರವಣಿಗೆಯಲ್ಲಿ ಪೌರಾಣಿಕತೆಗೆ ಸಂಬಂಽಸಿದ ಸ್ಥಬ್ಧಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತಿದೆ.ಸ್ಥಬ್ಧಚಿತ್ರಗಳಿಗೆ ಬಹಳಷ್ಟು ಖರ್ಚು ಮಾಡಲಾಗುತ್ತಿದೆ.ನಿಗದಿತ ಸ್ಥಳಗಳಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.ಹೀಗಾಗಿ ಮೆರವಣಿಗೆಯು ವಿಳಂಬವಾಗಿ ಸಾಗುತ್ತದೆ.ಸ್ಥಬ್ದ ಚಿತ್ರಗಳು ದರ್ಬೆಯ ತನಕ ಮಾತ್ರ ಇದ್ದು ಅಲ್ಲಿ ತನಕ ಅವಕಾಶ ನೀಡಬೇಕು.ಮೆರವಣಿಗೆಗೆ ರಾತ್ರಿ 11.30ರ ತನಕ ಅವಕಾಶ ನೀಡಬೇಕು ಎಂದು ವಿನಂತಿಸಿದರು.


ಪರ್ಲಡ್ಕದಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಿ-ಅನಿಲ್ ಮುಂಡೋಡಿ:
ಪುರುಷರಕಟ್ಟೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ಮುಂಡೋಡಿ ಮಾತನಾಡಿ, ಪುರುಷರಕಟ್ಟೆಯಲ್ಲಿ ಮುಖ್ಯರಸ್ತೆಯ ಬದಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ಜನರ ಸುರಕ್ಷತೆಗಾಗಿ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಬೇಕು.ಶೋಭಾಯಾತ್ರೆ ಸಮಯದಲ್ಲಿ ಗಣೇಶ ವಿಗ್ರಹದ ಟ್ರಾಲಿಗೆ ವಿದ್ಯುತ್ ಲೈನ್ ತಾಗುತ್ತಿದ್ದು ಕ್ರಮಕೈಗೊಳ್ಳಬೇಕು.ಪ್ರಾರಂಭದ ದಿನ ಪರ್ಲಡ್ಕ ವಿಗ್ರಹ ರಚನೆ ಮಾಡುವ ಕೇಂದ್ರದಿಂದ ವಿಗ್ರಹ ಹೋಗುವ ಸಮಯದಲ್ಲಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು ಬದಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.


ಡಿಜೆಗೆ ಅನುಮತಿಯಿಲ್ಲದಿದ್ದರೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡಿ-ಸತೀಶ್ ನಾೖಕ್‌:
ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಸತೀಶ್ ನಾೖಕ್‌ ಪರ್ಲಡ್ಕ ಮಾತನಾಡಿ, ವರ್ಷಕ್ಕೆ ಒಂದು ಬಾರಿ ನಡೆಯುವ ಗಣೇಶೋತ್ಸವದಲ್ಲಿ ಬಹಳಷ್ಟು ಖರ್ಚು ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.ಸಮಯದ ಪರಿಮಿತಿಯಿಂದ ಕಲಾವಿದರಿಗೂ ತೊಂದರೆ ಉಂಟಾಗುತ್ತದೆ. ಸಾರ್ವಜನಿಕರಿಗೂ ನಿರಾಸೆ ಉಂಟಾಗುತ್ತದೆ. ಹೀಗಾಗಿ, ಡಿಜೆಗೆ ಅನುಮತಿ ನೀಡದಿದ್ದರೂ ಪರವಾಗಿಲ್ಲ.ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚುವರಿ ಸಮಯಾವಕಾಶ ನೀಡಬೇಕು ಎಂದು ವಿನಂತಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಕೊಡಿ-ಜಯಪ್ರಕಾಶ್ ಬದಿನಾರು:
ಕೋಡಿಂಬಾಡಿ ಗಣೇಶೋತ್ಸವ ಸಮಿತಿಯ ಜಯಪ್ರಕಾಶ್ ಬದಿನಾರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾರ್ವಜನಿಕರು ವಿಶೇಷ ಮಹತ್ವ ನೀಡುತ್ತಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಾತ್ರಿ 10.30ರ ತನಕ ಅವಕಾಶ ನೀಡುವಂತೆ ಮನವಿ ಮಾಡಿದರು.


ಕಾರ್ಯಕ್ರಮದ ಬಗ್ಗೆ ಸರಿಯಾದ ಪ್ಲ್ಯಾನ್ ಮಾಡಿ-ಡಿವೈಎಸ್ಪಿ:
ಗಣೇಶೋತ್ಸವದ ಆಯೋಜಕರು ಕಾರ್ಯಕ್ರಮಗಳ ಎಲ್ಲಾ ಹಂತದಲ್ಲೂ ಸರಿಯಾದ ಯೋಜನೆಗಳನ್ನು ರೂಪಿಸಿಕೊಳ್ಳಬೇಕು.ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆಗಳ ಕುರಿತು ಸಮರ್ಪಕ ಯೋಜನೆ ಮಾಡಿ ನಿರ್ದಿಷ್ಟ ಸಮಯ ರೂಪಿಸಿಕೊಂಡು ಕಾರ್ಯಕ್ರಮ ಆಯೋಜಿಸಬೇಕು.ಕಾರ್ಯಕ್ರಮದಿಂದ ಇತರರಿಗೆ ತೊಂದರೆ ಆಗಬಾರದು.ಸಮಯ ಮೀರಿ ಕಾರ್ಯಕ್ರಮ ನಡೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ ಅನಿವಾರ್ಯವಾಗಿ ಪೊಲೀಸ್ ಇಲಾಖೆ ಆಯೋಜಕರ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆ.ಹೀಗಾಗಿ ಆದಷ್ಟು 10 ಗಂಟೆಯ ಒಳಗಾಗಿ ಮುಗಿಸಲು ಪ್ರಯತ್ನಿಸಬೇಕು.ರಾತ್ರಿ 10 ಗಂಟೆಯ ಮೆರವಣಿಗೆಗೆ ಮಾತ್ರ ಅವಕಾಶ,ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ.ಡಿಜೆಗೆ ಯಾವುದೇ ಕಾರಣಕ್ಕೂ ಅನುಮತಿಯಿಲ್ಲ.ಒಂದು ವೇಳೆ ಬಳಸಿದರೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಡಿವೈಎಸ್‌ಪಿ ಪ್ರಮೋದ್ ಕುಮಾರ್ ತಿಳಿಸಿದರು.
ಅಗ್ನಿಶಾಮಕ ಇಲಾಖೆಯ ರುಕ್ಮಯ್ಯ ಗೌಡ, ನಗರ ಸಭಾ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ಮೆಸ್ಕಾಂ ಅಧಿಕಾರಿಗಳು ಕಾರ್ಯಕ್ರಮದ ಬಗ್ಗೆ ಆಯೋಜಕರಿಗೆ ನಿರ್ದೇಶನಗಳನ್ನು ನೀಡಿದರು.


ವಿವಿಧ ಗಣೇಶೋತ್ಸವ ಸಮಿತಿಗಳ ಪ್ರಮುಖರಾದ ದಿನೇಶ್ ಪಿ.ವಿ, ಪ್ರಕಾಶ್ ಮುಕ್ರಂಪಾಡಿ, ಪರಮೇಶ್ವರ ಶರ್ಮ, ಲಕ್ಷ್ಮೀಶ ಸುಬ್ರಹ್ಮಣ್ಯ, ಜಗದೀಶ್ ಕೋಟೆ ಮುಂಡುಕಾರು, ಲೋಹಿತಾಕ್ಷ ಕುದ್ಮಾರು ಮೊದಲಾದವರು ಅಭಿಪ್ರಾಯಗಳನ್ನು ತಿಳಿಸಿದರು.ವಿವಿಧ ಗಣೇಶೋತ್ಸವ ಸಮಿತಿ ಪದಾಽಕಾರಿಗಳು,ಗ್ರಾಮ ಪಂಚಾಯತ್ ಪಿಡಿಓಗಳು ಸಭೆಯಲ್ಲಿ ಭಾಗವಹಿಸಿದ್ದರು.
ಉಪ್ಪಿನಂಗಡಿ ಗ್ರಾಮಾಂತರ ಠಾಣಾ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ,ಎಸ್‌ಐಗಳಾದ ಸಂಚಾರಿ ಠಾಣೆಯ ಸುಹಾಸ್ ಆರ್.,ಸಿಟಿ ಸುರೇಶ್, ಬೆಳ್ಳಾರೆಯ ಈರಯ್ಯ ಡಿಎನ್.,ಸಂಪ್ಯದ ಸುಷ್ಮಾ ಭಂಡಾರಿ, ನಗರ ಠಾಣೆಯ ಸೇಸಮ್ಮ, ಸುಳ್ಯದ ಉದಯರವಿ, ಸುಬ್ರಹ್ಮಣ್ಯದ ರಾಮಚಂದ್ರ, ಉಪ ತಹಶೀಲ್ದಾರ್ ರವಿ ಕುಮಾರ್, ತಾ.ಪಂ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಗರ ಠಾಣೆಯ ಇನ್ಸ್‌ಪೆಕ್ಟರ್ ಜಾನ್ಸನ್ ಡಿ’ಸೋಜ ಸ್ವಾಗತಿಸಿದರು.ಮಹಿಳಾ ಠಾಣಾ ಇನ್ಸ್‌ಪೆಕ್ಟರ್ ಸುನಿಲ್ ವಂದಿಸಿದರು.


ಗಣೇಶನ ಉತ್ಸವಗಳು ವಿಘ್ನ ಇಲ್ಲದೆ ನಡೆಯಬೇಕಾದರೆ ಆಯೋಜಕರ ಪಾತ್ರ ಬಹುಮುಖ್ಯ. ಇದಕ್ಕಾಗಿ ಪ್ರಾರಂಭದಲ್ಲಿ ಸರಿಯಾದ ಯೋಜನೆ ರೂಪಿಸಿ.ಕಾರ್ಯಕ್ರಮದಲ್ಲಿ ಸಮಯ ಪಾಲನೆಯ ಬಗ್ಗೆ ಆದ್ಯತೆ ನೀಡಬೇಕು.ಕಾರ್ಯಕ್ರಮದಿಂದ ಇತರರಿಗೆ ತೊಂದರೆ ಆಗಬಾರದು.ಜನರ ಸುರಕ್ಷತೆ ಮುಖ್ಯವಾಗಿರಬೇಕು.ಭಕ್ತಾದಿಗಳಿಗೆ ಪೂರಕ ವ್ಯವಸ್ಥೆ ಮಾಡಿಕೊಡಬೇಕು.ಪೆಂಡಲ್ ಬಳಿ ಅಗ್ನಿ ಅವಘಡಗಳು ನಡೆಯಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಮಾಡಿಕೊಳ್ಳಬೇಕು. ಪಾರ್ಕಿಂಗ್ ಸೌಲಭ್ಯ ಮಾಡಿಕೊಂಡು ಜನರಿಗೆ ಸೂಚನೆ ನೀಡಬೇಕು.ರಾತ್ರಿ ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಬೇಕು.ಜಾಸ್ತಿ ಜನ ಸೇರುವಲ್ಲಿ ಸಿಸಿ ಕ್ಯಾಮರಾ ಅಳವಡಿಸಿ,ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ಮುಖ್ಯ ಪ್ರದೇಶಗಳಲ್ಲಿ ವೈನ್‌ಶಾಪ್ ಬಂದ್ ಮಾಡಲಾಗುವುದು
-ಪ್ರಮೋದ್ ಕುಮಾರ್, ಡಿವೈಎಸ್‌ಪಿ ಪುತ್ತೂರು

LEAVE A REPLY

Please enter your comment!
Please enter your name here