






ಮಂಗಳೂರು:ಯಶವಂತಪುರ- ಮಂಗಳೂರು ಸೆಂಟ್ರಲ್ ನಡುವಣ ಪ್ರಸ್ತಾವಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ 16 ಬೋಗಿಗಳ 2ನೇ ಪ್ರಾಯೋಗಿಕ ಸಂಚಾರ ಸೆ.10ರಂದು ನಡೆಯಿತು.


ಸೆ.5ರಂದು ಮೊದಲ ಪ್ರಾಯೋಗಿಕ ಸಂಚಾರ ನಡೆಸಿದ್ದ ವಂದೇ ಭಾರತ್ ಇದೀಗ ಸೆ.10ರಂದು ಎರಡನೇ ಸುತ್ತಿನ ಪ್ರಾಯೋಗಿಕ ಸಂಚಾರ ನಡೆಸಿದೆ.ಬೆಂಗಳೂರಿನ ಯಶವಂತಪುರದಿಂದ ಹೊರಟ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಗಳೂರು ಜಂಕ್ಷನ್‌ವರೆಗೆ ಸಂಚರಿಸಿದೆ.ಅಲ್ಲಿಂದ ಹಿಂತಿರುಗಿ ಮಂಗಳೂರಿನಿಂದ ಯಶವಂತಪುರಕ್ಕೆ ವಂದೇ ಭಾರತ್ ಖಾಲಿ ರೈಲನ್ನು ಓಡಿಸಿ ಸಂಚಾರ ಸಮಯವನ್ನು ಪರಿಶೀಲಿಸಿದರು.ಐಸಿ2015 ಸಂಖ್ಯೆಯ 16 ಬೋಗಿಗಳ ವಂದೇ ಭಾರತ್ ರೈಲನ್ನು ಪ್ರಯೋಗಾರ್ಥವಾಗಿ ಸಂಚಾರಕ್ಕೆ ಬಳಸಲಾಗಿತ್ತು.
ಯಶವಂತಪುರದಿಂದ ಬೆಳಗ್ಗೆ 6 ಗಂಟೆಗೆ ಹೊರಟ ರೈಲು ಮಧ್ಯಾಹ್ನ 1.30ಕ್ಕೆ ಕಬಕ ಪುತ್ತೂರು ನಿಲ್ದಾಣದ ಮೂಲಕ ಹಾದುಹೋಗಿದೆ.ನಂತರ ಮಂಗಳೂರು ಜಂಕ್ಷನ್‌ನಿಂದ ಅಪರಾಹ್ನ 2 ಗಂಟೆಗೆ ಹೊರಟ ರೈಲು 3.5ಕ್ಕೆ ಕಬಕ ಪುತ್ತೂರು ನಿಲ್ದಾಣದ ಮೂಲಕ ಬೆಂಗಳೂರು ಯಶವಂತರಪುರಕ್ಕೆ ಹಾದುಹೋಗಿದೆ.



ಪುತ್ತೂರಿನಲ್ಲಿ ನಿಲ್ಲದ ವಂದೇ ಭಾರತ್- ಸ್ವಾಗತಿಸಲು ಕಾದವರಿಗೆ ನಿರಾಶೆ:
ಎರಡನೇ ಪ್ರಾಯೋಗಿಕ ರೈಲು ಓಡಾಟದ ಮಧ್ಯೆ ಪುತ್ತೂರು ಕಬಕ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಯಾಗುವ ನಿರೀಕ್ಷೆ ಹೊಂದಲಾಗಿತ್ತು.ಆದರೆ ರೈಲು ಕಬಕ ಪುತ್ತೂರು ನಿಲ್ದಾಣದಲ್ಲಿ ನಿಲುಗಡೆಯಾಗದೆ ನೇರವಾಗಿ ಮಂಗಳೂರಿಗೆ ಪ್ರಯಾಣಿಸಿದೆ.ಬೆಂಗಳೂರಿನಿಂದ ಮಂಗಳೂರಿಗೆ ಬಂದ ಈ ರೈಲನ್ನು ಸ್ವಾಗತಿಸಲು ಪುತ್ತೂರು ಆಸುಪಾಸಿನ ಜನ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರೂ, ರೈಲು ಮಾತ್ರ ಒಂದೇ ವೇಗದಲ್ಲಿ ನೇರವಾಗಿ ಸುಬ್ರಹ್ಮಣ್ಯ ರೈಲು ನಿಲ್ದಾಣದತ್ತ ಸಂಚರಿಸಿದೆ.ಅಪರಾಹ್ನ ಬೆಂಗಳೂರಿಗೆ ಹಿಂತಿರುಗುವ ಸಮಯದಲ್ಲಿಯೂ ಸಾಕಷ್ಟು ಜನರು ಜಮಾಯಿಸಿದ್ದರೂ ರೈಲು ಮಾತ್ರ ನಿಲ್ಲಿಸದೇ ನೇರವಾಗಿ ಪ್ರಯಾಣಿಸಿದ್ದು ನೆರೆದಿದ್ದ ಸಾರ್ವಜನಿಕರಲ್ಲಿ ನಿರಾಶೆ ಮೂಡಿಸಿತ್ತು.
ಪುತ್ತೂರು ನಿಲ್ದಾಣದಲ್ಲಿ ನಿಲುಗಡೆಗೆ ರೈಲ್ವೇ ಸಚಿವರಿಗೆ ಮನವಿ ಸಲ್ಲಿಸಿದ್ದರು:
ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು ಎಂದು ಕೇಂದ್ರ ರೈಲ್ವೇ ಸಚಿವರಿಗೆ ಹಲವರು ಮನವಿ ಸಲ್ಲಿಸಿದ್ದರು.ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದವರು ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈಯವರನ್ನು ಭೇಟಿ ಮಾಡಿ ಈ ಕುರಿತು ಕ್ರಮಕ್ಕೆ ಆಗ್ರಹಿಸಿದ್ದರು ಮಾತ್ರವಲ್ಲದೆ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ್ದರು.ಹೈಕೋರ್ಟ್‌ನ ಹಿರಿಯ ವಕೀಲ ಡಾ|ಅರುಣ್‌ಶ್ಯಾಂ ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನಿವೈಷ್ಣವ್ ಅವರಿಗೆ ಪತ್ರ ಬರೆದು,ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪುತ್ತೂರು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು.ಆದರೆ ಎರಡನೇ ಪ್ರಾಯೋಗಿಕ ಸಂಚಾರದಲ್ಲೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪುತ್ತೂರುನಲ್ಲಿ ನಿಲುಗಡೆಯಾಗಿಲ್ಲ.ರೈಲ್ವೆ ಮಂಡಳಿ ಸೆ.3ರಂದು ಹೊರಡಿಸಿರುವ ಅಧಿಸೂಚನೆಯಲ್ಲಿಯೂ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ನಿಲುಗಡೆ ಕುರಿತ ಪ್ರಸ್ತಾವನೆಯಿಲ್ಲ.ಮುಂದೆ ಖಾಯಂ ರೈಲು ಓಡಾಟ ಆರಂಭಗೊಂಡ ಬಳಿಕ ಪುತ್ತೂರುನಲ್ಲಿ ನಿಲುಗಡೆ ಭಾಗ್ಯ ದೊರೆಯುವುದೇ ಎಂದು ಕಾದು ನೋಡಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.










