ವೈರಸ್‌ಗಿಂತ ವೇಗವಾಗಿ ಹರಡಬೇಕಾಗಿರುವುದು ಭಯವಲ್ಲ, ಜಾಗೃತಿ

0

ಬರಹ: ಡಾ. ವರ್ಷಿಣಿ ಶೆಣೈ

“ಅಮ್ಮ, ನಿನ್ನೆ ರಾತ್ರಿ ಜ್ವರ ಬಂದಿತ್ತು, ಬಹಳವಾಗಿ ಕೆಮ್ಮಿತ್ತು, ಸಣ್ಣದಾಗಿ ತಲೆನೋವು ಮತ್ತು ಮೈಕೈ ನೋವಿದೆ, ನಿನ್ನೆ ಸರಿಯಾಗಿ ನಿದ್ದೆ ಆಗಿಲ್ಲ” ಬೆಳಿಗ್ಗೆ ಎದ್ದು ಒಂದು ಜ್ವರದ ಮಾತ್ರೆ ತೊಗೊಂಡಿದ್ದೀನಿ, ಆಫೀಸ್‌ನಲ್ಲಿ ಬಹಳ ಕೆಲಸ ಬಾಕಿ ಇದೆ, ಆಫೀಸಿಗೆ ಹೋಗಿಬರಲಾ?” “ಹೋಗಿ ಬಾ, ಸಾಮಾನ್ಯ ಜ್ವರ ಇರಬಹುದು. ಎರಡು ದಿನದಲ್ಲಿ ಸರಿಹೋಗುತ್ತದೆ!”
ಕೆಲವರ ಮನೆಗಳಲ್ಲಿ ಇಂತಹ ಮಾತುಕತೆಗಳು ಸಾಮಾನ್ಯ. ಜ್ವರ, ನೆಗಡಿ, ಕೆಮ್ಮು ಬಂದರೆ “ವಾತಾವರಣದ ಬದಲಾವಣೆ ಇರಬೇಕು” “ಸಾಮಾನ್ಯ ವೈರಲ್ ಅಷ್ಟೇ” ಎಂದುಕೊಂಡು ಕೆಲಸ, ಶಾಲೆ, ಕಾಲೇಜು, ಪ್ರಯಾಣ ಎಲ್ಲವನ್ನೂ ಯಥಾಪ್ರಕಾರ ಮುಂದುವರಿಸುತ್ತೇವೆ. ಆದರೆ ಕೆಲವೊಮ್ಮೆ ನಮ್ಮ ದೇಹ ಹೇಳುವ ಸಣ್ಣ ಸೂಚನೆಗಳನ್ನು ನಿರ್ಲಕ್ಷಿಸುವುದು ದೊಡ್ಡ ಸಮಸ್ಯೆಗೆ ಕಾರಣವಾಗಬಹುದು.
ಇತ್ತೀಚಿನ ದಿನಗಳಲ್ಲಿ H1N1 ಸೇರಿದಂತೆ influenza ಸೋಂಕಿನ ಬಗ್ಗೆ ಮತ್ತೆ ಚರ್ಚೆ ಹೆಚ್ಚಾಗಿದೆ. H1N1 ಎಂಬ ಹೆಸರು ಕೇಳಿದ ಕೂಡಲೇ ಭಯಪಡುವ ಅಗತ್ಯವಿಲ್ಲ. ಆದರೆ ಸೋಂಕು ಹೇಗೆ ಹರಡುತ್ತದೆ, ಯಾರಿಗೆ ಹೆಚ್ಚಿನ ಅಪಾಯವಿದೆ ಮತ್ತು ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು ಎಂಬ ಕನಿಷ್ಠ ಅರಿವು ಪ್ರತಿಯೊಬ್ಬರಿಗೂ ಇರಲೇಬೇಕು.

H1N1 ಎಂದರೇನು?:
H1N1 ಎನ್ನುವುದು influenza ವೈರಸ್‌ನ ಒಂದು ಉಪಪ್ರಕಾರ (subtype) 2009ರಲ್ಲಿ ಈ ವೈರಸ್ ಜಾಗತಿಕವಾಗಿ ವ್ಯಾಪಕವಾಗಿ ಹರಡಿದಾಗ “Swine Flu” ಎಂಬ ಹೆಸರು ಹೆಚ್ಚು ಪ್ರಚಲಿತಕ್ಕೆ ಬಂದಿತು. ಈಗ H1N1 ಅನ್ನು seasonal influenzaಯ ಒಂದು ಭಾಗವಾಗಿ ನೋಡಲಾಗುತ್ತದೆ. ಇದು ಮುಖ್ಯವಾಗಿ ನಮ್ಮ ಉಸಿರಾಟದ ವ್ಯವಸ್ಥೆಯನ್ನು ಬಾಧಿಸುತ್ತದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅಥವಾ ಮಾತನಾಡಿದಾಗ ಹೊರಬರುವ ಉಸಿರಾಟದ ಹನಿಗಳು ಮತ್ತು ಕಣಗಳ ಮೂಲಕ ಇತರರಿಗೆ ಸೋಂಕು ಹರಡುತ್ತದೆ. ಅದಕ್ಕಾಗಿಯೇ ಶಾಲೆ, ಕಚೇರಿ, ಬಸ್, ರೈಲು, ಮಾರುಕಟ್ಟೆ, ಆಸ್ಪತ್ರೆ ಮುಂತಾದ ಜನಸಂದಣಿ ಇರುವ ಸ್ಥಳಗಳಲ್ಲಿ ಎಚ್ಚರಿಕೆ ಮುಖ್ಯ.

H1N1 ಲಕ್ಷಣಗಳೇನು?:
H1N1 ಮತ್ತು ಇತರ ಉಸಿರಾಟಕ್ಕೆ ಸಂಬಂಧಿಸಿದ ವೈರಲ್ ಜ್ವರಗಳ ಲಕ್ಷಣಗಳು ಬಹುತೇಕ ಒಂದೇ ರೀತಿಯದ್ದಾಗಿರುತ್ತದೆ. ಕೇವಲ ಲಕ್ಷಣಗಳನ್ನು ನೋಡಿ H1N1 ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ, ಹಠಾತ್ತನೆ ಜ್ವರ, ಕೆಮ್ಮು, ಗಂಟಲು ನೋವು, ತಲೆನೋವು, ಮೈಕೈ ನೋವು, ಸ್ನಾಯುಗಳಲ್ಲಿ ನೋವು, ಅತಿಯಾದ ಸುಸ್ತು, ಮೂಗು ಸೋರುವುದು ಅಥವಾ ಮೂಗು ಕಟ್ಟಿಕೊಳ್ಳುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲವರಿಗೆ ಜ್ವರ ಕಡಿಮೆಯಾದ ನಂತರವೂ ಕೆಮ್ಮು ಮತ್ತು ನಿತ್ರಾಣ ಕೆಲವು ದಿನಗಳವರೆಗೆ ಮುಂದುವರಿಯಬಹುದು. ಹೀಗಾಗಿ “ಜ್ವರ ಕಡಿಮೆಯಾಗಿದೆ, ಅಂದರೆ ಸಂಪೂರ್ಣ ಗುಣವಾಗಿದೆ” ಎಂದು ತಕ್ಷಣ ನಿರ್ಧರಿಸುವಂತಿಲ್ಲ.

ಯಾರಿಗೆ ಹೆಚ್ಚು ಎಚ್ಚರಿಕೆ ಬೇಕು?:
ಆರೋಗ್ಯವಂತ ವ್ಯಕ್ತಿಗಳಲ್ಲಿ influenza ಸೋಂಕು ಸಾಮಾನ್ಯವಾಗಿ ಗಂಭೀರವಾಗದೆ ಗುಣಮುಖವಾಗುತ್ತದೆ. ಆದರೆ ಕೆಲವರಲ್ಲಿ ತೊಂದರೆ ಹೆಚ್ಚಾಗಬಹುದು. ಚಿಕ್ಕ ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ಅಸ್ತಮಾ, ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆ ಇರುವವರು, ಮಧುಮೇಹ ಮುಂತಾದ ದೀರ್ಘಕಾಲದ ಸಮಸ್ಯೆಗಳಿಂದ ಬಳಲುತ್ತಿರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಇಂತಹ ವ್ಯಕ್ತಿಗಳಿಗೆ ಜ್ವರ ಬಂದಾಗ “ಇನ್ನೆರಡು ದಿನ ನೋಡೋಣ” ಎಂದು ಕಾಯುವುದಕ್ಕಿಂತ ತಕ್ಷಣ ವೈದ್ಯರ ಸಲಹೆ ಪಡೆಯುವುದು ಉತ್ತಮ.

‘ಸಾಮಾನ್ಯ ಜ್ವರ’ ಗಂಭೀರತೆಗೆ ತಿರುಗಿದಾಗ..:
ಹೆಚ್ಚಿನ ತಾಪಮಾನದ ಜ್ವರ, ಉಸಿರಾಟಕ್ಕೆ ತೊಂದರೆ, ಉಸಿರಾಟದ ವೇಗ ಹೆಚ್ಚಾಗುವುದು, ಎದೆ ನೋವು, ಅತಿಯಾದ ನಿಶ್ಶಕ್ತಿ, ಗೊಂದಲ ಅಥವಾ ಅರೆ ಪ್ರಜ್ಞಾವಸ್ಥೆ, ನೀರು ಕುಡಿಯಲು ಸಾಧ್ಯವಾಗದಿರುವುದು, ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುವುದು ಮುಂತಾದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಸಾಮಾನ್ಯವಾಗಿ ಮಕ್ಕಳಲ್ಲಿ ಅತೀವ ಜ್ವರದಿಂದ ಅಪಸ್ಮಾರದಂತಹ ಸೆಳತ(fits)ಉಂಟಾಗುವ ಸಾಧ್ಯತೆ ಹೆಚ್ಚಿರುವುದರಿಂದ ವಿಳಂಬಿಸದೆ ವೈದ್ಯರ ಸಲಹೆ ಪಡೆಯಬೇಕು.

ಅನುಸರಿಸಬೇಕಾದ ಕ್ರಮಗಳು:.
ಜ್ವರ ಮತ್ತು ಕೆಮ್ಮು ಇರುವವರು ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಬೇಕು. ಅಗತ್ಯವಿಲ್ಲದೆ ಶಾಲೆ, ಕಚೇರಿ ಅಥವಾ ಜನಸಂದಣಿ ಇರುವ ಸ್ಥಳಗಳಿಗೆ ಹೋಗಬಾರದು. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಕೈಗಳನ್ನು ಸಾಬೂನಿನಿಂದ ಆಗಾಗ್ಗೆ ತೊಳೆಯಬೇಕು. ವಾಸಿಸುವ ಕೋಣೆಗಳಲ್ಲಿ ಉತ್ತಮ ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಬೇಕು. ಅನಾರೋಗ್ಯದಲ್ಲಿರುವ ವ್ಯಕ್ತಿ ಇತರರೊಂದಿಗೆ ಹತ್ತಿರ ಸಂಪರ್ಕ ಹೊಂದಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾಸ್ಕ್ ಬಳಸುವುದು ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ಹೋಮಿಯೋಪಥಿ ಚಿಕಿತ್ಸೆಯ ಮಹತ್ವ:
ಹೋಮಿಯೋಪಥಿಯ ಮೂಲ ತತ್ವದ ಪ್ರಕಾರ, ಕೇವಲ “H1N1 ” ಎಂಬ ರೋಗದ ಹೆಸರನ್ನು ಆಧರಿಸಿ ಎಲ್ಲರಿಗೂ ಒಂದೇ ಔಷಧಿಯನ್ನು ನೀಡುವುದಿಲ್ಲ. ರೋಗಿಯ ಒಟ್ಟಾರೆ ಲಕ್ಷಣಗಳು, ಜ್ವರದ ಸ್ವರೂಪ, ಬಾಯಾರಿಕೆ, ಬೆವರು, ಚಳಿ-ಬಿಸಿ ಸಹಿಸುವಿಕೆ, ಕೆಮ್ಮಿನ ಸ್ವರೂಪ, ದೇಹದ ನೋವು, ನಿದ್ರೆ ಹಾಗೂ ಇತರ ವೈಯಕ್ತಿಕ ಲಕ್ಷಣಗಳನ್ನು ಪರಿಗಣಿಸಿ ಔಷಧಿಯನ್ನು ಆಯ್ಕೆ ಮಾಡಲಾಗುತ್ತದೆ.
ಉದಾಹರಣೆಗೆ, ಒಬ್ಬರಿಗೆ ತೀವ್ರ ಮೈಕೈ ನೋವಿನೊಂದಿಗೆ ಜ್ವರ ಮತ್ತು ಅತಿಯಾದ ಸುಸ್ತು ಇರಬಹುದು; ಮತ್ತೊಬ್ಬರಿಗೆ ಗಂಟಲು ನೋವು ಮತ್ತು ಒಣ ಕೆಮ್ಮು ಮುಖ್ಯವಾಗಿರಬಹುದು. ಇನ್ನೊಬ್ಬರಿಗೆ ಮೂಗು ಸೋರುವುದು, ಭೇದಿ, ಹೊಟ್ಟೆನೋವು, ಚಳಿ ಮತ್ತು ಸುಸ್ತು ಹೆಚ್ಚು ಇರಬಹುದು. ರೋಗದ ಹೆಸರು ಒಂದೇ ಇದ್ದರೂ ವ್ಯಕ್ತಿಯ ಲಕ್ಷಣಚಿತ್ರ ವಿಭಿನ್ನವಾಗಿರುತ್ತದೆ. ಈ ವಿಭಿನ್ನತೆ ಗಳನ್ನು ಆಧರಿಸಿಯೇ ರೋಗಿಗೆ ಹೊಂದುವ ಹೋಮಿಯೋಪಥಿ ಔಷಧಿಯನ್ನು ನಿರ್ಧರಿಸಲಾಗುತ್ತದೆ. ಔಷಧಿಯನ್ನು ಕೇವಲ ರೋಗಕ್ಕಲ್ಲದೆ, ರೋಗದಿಂದ ಬಳಲುತ್ತಿರುವ ರೋಗಿಗೆ ನೀಡಿದಾಗ, ಆ ವ್ಯಕ್ತಿಯು ಶೀಘ್ರವಾಗಿ, ಯಾವುದೇ ಅಡ್ಡಪರಿಣಾಮಗಳಿಲ್ಲದೆ ಗುಣಮುಖರಾಗಬಲ್ಲರು.
ಆದ್ದರಿಂದ “H1N1 ಗೆ ಈ ಒಂದು ಹೋಮಿಯೋಪಥಿ ಔಷಧಿ ಸಾಕು” ಎಂಬ ರೀತಿಯ ಸ್ವಯಂ ಔಷಧೋಪಚಾರವನ್ನು ಮಾಡುವುದು ಸೂಕ್ತವಲ್ಲ. ಅರ್ಹ ವೈದ್ಯರ ಸಲಹೆಯೊಂದಿಗೆ ಚಿಕಿತ್ಸೆ ಪಡೆಯುವುದು ಉತ್ತಮ.

LEAVE A REPLY

Please enter your comment!
Please enter your name here