







ಉಪ್ಪಿನಂಗಡಿ: ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಉಪ್ಪಿನಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ ಸುಮಾರು 8 ಲಕ್ಷ ರೂ. ವೆಚ್ಚದಲ್ಲಿ ಕಜೆಕ್ಕಾರಿನ ಅಂಬೇಡ್ಕರ್ ಕಾಲನಿಯ ಬಡ ಮಹಿಳೆ ಬಾಗಿಯವರಿಗೆ ನಿರ್ಮಿಸಿಕೊಟ್ಟಿರುವ ‘ಶ್ರೀ ಗಣೇಶ’ ಹೆಸರಿನ ಆರ್ಸಿಸಿ ಮನೆಯ ಹಸ್ತಾಂತರ ಕಾರ್ಯಕ್ರಮ ದೀಪ ಬೆಳಗಿಸುವ ಮೂಲಕ ದಾನಿಗಳ ಉಪಸ್ಥಿತಿಯಲ್ಲಿ ಸೆ.10ರಂದು ನಡೆಯಿತು.


ಉದ್ಯಮಿ ಮೋಹನ್ ಕುಮಾರ್ ಮಾತನಾಡಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಉಪ್ಪಿನಂಗಡಿಯ ಗಣೇಶೋತ್ಸವ ಸಮಿತಿಯಿಂದ ಮನೆ ನಿರ್ಮಾಣದಂತಹ ಕಾರ್ಯ ನಡೆದಿದ್ದು, ಈ ಮೊದಲು ಟರ್ಪಾಲ್ನ ಜೋಪಡಿಯಲ್ಲಿದ್ದ ಬಾಗಿಯವರಿಗೆ ಮನೆಯ ಭಾಗ್ಯ ದೊರಕಿದೆ. ಪ್ರತಿದಿನ ದೇವರಿಗೆ ದೀಪ ಉರಿಸುವವಾಗ ಈ ಸಮಿತಿಯವರಿಗೂ ನಿಮ್ಮದೊಂದು ಪ್ರಾರ್ಥನೆ ಇರಲಿ. ಇನ್ನು ಮುಂದಕ್ಕೆ ಮನೆಯನ್ನು ಅಚ್ಚಕಟ್ಟಾಗಿ ಇಟ್ಟುಕೊಂಡು ಇವರು ನೀಡಿದ ಕೊಡುಗೆಯನ್ನು ಅಷ್ಟೇ ಜೋಪಾನವಾಗಿ ಕಾಪಾಡಿಕೊಂಡು ಬರುವ ಜವಾಬ್ದಾರಿ ಬಾಗಿಯವರದ್ದಾಗಿದೆ. ಹೀಗೆ ಪ್ರತಿಯೋರ್ವರು ತಮ್ಮ ದುಡಿಮೆಯ ಸ್ವಲ್ಪ ಹಣವನ್ನು ಇಂತಹ ಸಮಾಜಮುಖಿ ಕಾರ್ಯಗಳಿಗೆ ಮೀಸಲಿಟ್ಟಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಶ್ರೀ ರಾಮ ಶಾಲಾ ಸಂಚಾಲಕ ಯು.ಜಿ. ರಾಧಾ ಮಾತನಾಡಿ, ಬಡವರ ಸೇವೆಯೆನ್ನುವುದು ದೇವರ ಕಾರ್ಯವಿದ್ದಂತೆ. ಸಮಾಜಮುಖಿಯಾಗಿ ಚಿಂತಿಸುವ ಇಂತಹ ಸಂಘಟನೆಗಳಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.



ಬಿಎಸ್ಸೆಫ್ನ ನಿವೃತ ಡೆಪ್ಯೂಟಿ ಕಮಾಡೆಂಟ್ ಚಂದಪ್ಪ ಮೂಲ್ಯ ಮಾತನಾಡಿ, ದೇವರಿಗೆ ಬೇಕಾಗಿರುವುದು ಭಕ್ತಿ. ಆಡಂಬರದ ಆಚರಣೆಯಲ್ಲ. ಆಡಂಬರದ ದೇವರ ಆಚರಣೆಗಳಿಗಿಂತ ಇಂತಹ ಮಾನವೀಯ ಕಾರ್ಯಕ್ಕೆ ಅದಕ್ಕೆ ದೇವನೊಲಿಯಲು ಸಾಧ್ಯ. ಧಾರ್ಮಿಕ ವಿದ್ಯಾಭ್ಯಾಸ, ಹಿಂದೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದರಿಂದ ಹಿಂದೂ ಸಮಾಜ ಇನ್ನಷ್ಟು ಬಲಿಷ್ಟಗೊಳ್ಳಲು ಸಾಧ್ಯ ಎಂದರು.
ಬನ್ನೆಂಗಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗುಣಕರ ಅಗ್ನಾಡಿ, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಉಪ್ಪಿನಂಗಡಿ ಸಾರ್ವಜನಿಕ ಮೊಸರು ಕುಡಿಕೆ ಸಮಿತಿಯ ಅಧ್ಯಕ್ಷ ಸುರೇಶ್ ಅತ್ರೆಮಜಲು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಡಾ. ರಮ್ಯ ರಾಜಾರಾಂ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಅಧ್ಯಕ್ಷ ಶ್ರೀರಾಮ ಪಾತಾಳ, ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪಟ್ಲ ಫೌಂಡೇಶನ್ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕೆ. ಜಗದೀಶ್ ಶೆಟ್ಟಿ, ಉದ್ಯಮಿ ಸುಜೀರ್ ಗಣಪತಿ ನಾಯಕ್, ಉಪ್ಪಿನಂಗಡಿ ಟೀಂ ದಕ್ಷಿಣ ಕಾಶಿಯ ಅಧ್ಯಕ್ಷ ವಿದ್ಯಾಧರ ಜೈನ್, ಮನೆಯ ಮಾಲಕಿ ಬಾಗಿ, ಪ್ರಮುಖರಾದ ಅಶೋಕ್ ರೈ ಅರ್ಪಿಣಿಗುತ್ತು, ಗೋಪಾಲ ಹೆಗ್ಡೆ, ಜಯಂತ ಪೊರೋಳಿ, ಮಹಾಲಿಂಗ ಕಜೆಕ್ಕಾರ್, ಹರೀಶ್ ನಾಯಕ್ ನಟ್ಟಿಬೈಲು, ಚಿದಾನಂದ ಪಂಚೇರು, ಗಿರೀಶ್ ಆರ್ತಿಲ, ಐ. ಪುಷ್ಪಾಕರ್ ನಾಯಕ್, ವಿಶ್ವನಾಥ ಶೆಟ್ಟಿ ಕಂಗ್ವೆ, ಉಷಾ ಮುಳಿಯ, ವನಿತಾ ಆರ್ತಿಲ, ಭಾರತಿ ಕಜೆಕ್ಕಾರು, ಶ್ರೀ ಗಣೇಶೋತ್ಸವ ಸಮಿತಿಯ ಕೋಶಾಧಿಕಾರಿ ಚಂದ್ರಹಾಸ ಹೆಗ್ಡೆ, ಮಹಿಳಾ ವಿಭಾಗದ ಅಧ್ಯಕ್ಷೆ ಅನುರಾಧ ಆರ್. ಶೆಟ್ಟಿ, ಉಪಾಧ್ಯಕ್ಷ ಯು. ಯತೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಕೀರ್ತನ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.










