







ವಿಟ್ಲ: ದಾಖಲೆಗಳಿಲ್ಲದೆ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸೆ. 14 ರಂದುರಾತ್ರಿ ಕರೋಪಾಡಿ ಭಾಗದಿಂದ ಪರವಾನಗೆ ಇಲ್ಲದೆ ಲಾರಿಗಳಲ್ಲಿ ಕೆಂಪುಕಲ್ಲು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣರವರ ನೇತೃತ್ವದ ಪೊಲೀಸರ ತಂಡ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ನೆಲ್ಲಿಕಟ್ಟೆ ಜಂಕ್ಷನ್ ಬಳಿ ಕೇರಳ ಕಡೆಯಿಂದ ಕನ್ಯಾನ ಕಡೆಗೆ ಕೆಂಪು ಕಲ್ಲುಗಳನ್ನು ಹೊತ್ತು ಸಾಗುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಕ ತಪಾಸಣೆ ನಡೆಸಿದಾಗ ಯಾವುದೇ ಪರವಾನಗಿ ಇಲ್ಲದೆ ಕೆಂಪು ಕಲ್ಲು ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ, ವೀರಕಂಭ ನಿವಾಸಿ ಮಹಮ್ಮದ್ ತೌಕಿರ್ (26ವ.), ಲಾರಿ ಮಾಲಿಕ ಮೊಹಮ್ಮದ್ ಸಿಮ್ರಾನ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಸಜೀರ್ ವಿರುದ್ಧ ವಿಟ್ಲ ಠಾಣೆಯಲ್ಲಿ ಬಿಎನ್ಎಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಲಾರಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.



ಅದೇ ದಿನ ತಡರಾತ್ರಿ ಕುದ್ದುಪದವು ಮಾರ್ಗವಾಗಿ ಕಲ್ಲಡ್ಕ-ಕಾಂಞಗಾಡ್ ಅಂತರ ರಾಜ್ಯ ಹೆದ್ದಾರಿಯಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಪಿಎಸ್ಐ ರಾಮಕೃಷ್ಣ ಅವರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ನಿವಾಸಿ ಚಂದ್ರೇಶ್ (40 ವ.) ರವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.










