







ವೈಭವದ ಶೋಭಾಯಾತ್ರೆಯಲ್ಲಿ ವಯೋಲಿನ್ ವಾದನದೊಂದಿಗೆ ಚೆಂಡೆ ಕುಣಿತದ ವಿಶೇಷ ಆಕರ್ಷಣೆ


ಪುತ್ತೂರು: ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 39ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ. 14ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು.



ಅರ್ಚಕ ಶ್ರೀಕಾಂತ್ ಭಟ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ಬಿಂಬಶುದ್ಧಿ ಹಾಗೂ ಗಣಪತಿ ವಿಗ್ರಹ ಪ್ರತಿಷ್ಠೆಯೊಂದಿಗೆ ಗಣೇಶೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಬಳಿಕ ಗಣಪತಿ ಹೋಮ, ವಿವಿಧ ಸೇವಾ ಪೂಜೆಗಳು ನೆರವೇರಿದವು. ಮದಗ ಶ್ರೀ ಭಜನಾ ಮಂಡಳಿಯವರಿಂದ ಭಜನೆ ಹಾಗೂ ಕುಣಿತ ಭಜನೆ ನಡೆಯಿತು.
ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಗಣೇಶೋತ್ಸವ ಸಮಿತಿ ಸ್ಥಾಪಕ ಅಧ್ಯಕ್ಷ ಬಾಲಕೃಷ್ಣ ಜೋಯಿಷ ಯರ್ಮುಂಜ ಮಾತನಾಡಿ, ದೇವಸ್ಥಾನದಲ್ಲಿ 38 ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ಗಣೇಶೋತ್ಸವವು ನಿರಂತರವಾಗಿ ಗಣೇಶೋತ್ಸವ ನಡೆಯುತ್ತಿದ್ದು ಇಂದು 39ರ ಸಂಭ್ರಮದಲ್ಲಿದೆ. ಧಾರ್ಮಿಕ ಕಾರ್ಯಕ್ರಮದ ಮೂಲಕ ಊರಿನ ಜನತೆಯನ್ನು ಒಗ್ಗೂಡಿಸುವ ಕಾರ್ಯವನ್ನು ಈ ಗಣೇಶೋತ್ಸವ ಕಾರ್ಯಕ್ರಮ ಮಾಡುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ಮಾತನಾಡಿ, ಗ್ರಾಮದ ದೇವಸ್ಥಾನದ ಜೀರ್ಣೋದ್ಧಾರದ ಕಾಮಗಾರಿಗಳು ಈಗಾಗಲೇ ಪ್ರಾರಂಭಗೊಂಡಿದ್ದು ಊರಿನ ಭಕ್ತಾದಿಗಳು ಸರ್ವ ರೀತಿಯಲ್ಲಿ ಸಹಕರಿಸುವಂತೆ ವಿನಂತಿಸಿದರು.

ಸನ್ಮಾನ, ಬಹುಮಾನ ವಿತರಣೆ:
ಸಿಇಟಿ, ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತ ವಿಶಾಲ್ ಪಿ. ಕುಂಜಾರು ಇವರನ್ನು ಸನ್ಮಾನಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಗ್ರಾಮಸ್ಥರಿಗೆ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಬನ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ರಮಣಿ ಡಿ ಗಾಣಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ರೀಧರ ಕುಂಜಾರು ಸ್ವಾಗತಿಸಿದರು. ಸಾವಿತ್ರಿ ಮುಂಡಾಜೆ ಸನ್ಮಾನಿತರ ಪರಿಚಯ ಮಾಡಿದರು. ಜಗದೀಶ್ ಆಟಿಕ್ಕು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಗಣೇಶೋತ್ಸವ ಸಮಿತಿ ಗೌರವ ಸಲಹೆಗಾರ ಪೂವಪ್ಪ ದೇಂತಡ್ಕ ಕಾರ್ಯಕ್ರಮ ನಿರೂಪಿಸಿ, ಯಶೋಧರ ಕುಂಜಾರು ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಜ್ಯೂನಿಯರ್ ರಾಜ್ಕುಮಾರ್ ಖ್ಯಾತಿಯ ಗಾಯಕ ಜಗದೀಶ್ ಶಿವಪುರ ಅವರಿಂದ ಸ್ವರಕಂಠೀರವ ಮನೋರಂಜನಾ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.

ವೈಭವದ ಶೋಭಾಯಾತ್ರೆ:
ಸಂಜೆ ಶ್ರೀ ದೇವರಿಗೆ ವಿಶೇಷ ರಂಗಪೂಜೆ, ಮಹಾಪೂಜೆ ನಡೆದ ಬಳಿಕ ಶ್ರೀ ಗಣೇಶನ ವಿಗ್ರಹದ ಭವ್ಯ ಶೋಭಾಯಾತ್ರೆಗೆ ಚಾಲನೆ ದೊರೆಯಿತು. ದೇವಸ್ಥಾನದ ಬಳಿಯಿಂದ ಹೊರಟ ಶೋಭಾಯಾತ್ರೆಯು ಮತಾವು, ಯರ್ಮುಂಜಪಳ್ಳ ಮಾರ್ಗವಾಗಿ ಕಡವ ತನಕ ಸಾಗಿ ಅಲ್ಲಿಂದ ಹಿಂತಿರುಗಿ ಪಂಜಿಗುಡ್ಡೆ ಜುಮಾದಿಪಲ್ಕೆ ಮುಂಡಾಜೆ, ಹಾರಕರೆ ಪಡೀಲು ರಸ್ತೆಯಲ್ಲಿ ಸಾಗಿ ದೇವರಗುಂಡಿಯಲ್ಲಿ ಗಣೇಶನ ವಿಗ್ರಹದ ಜಲಸಂಭನದೊಂದಿಗೆ ೩೯ನೇ ವರ್ಷದ ಗಣೇಶೋತ್ಸವವು ಸಂಪನ್ನಗೊಂಡಿತ್ತು. ಕುಂಜಾರು ಸಹೋದರರ ಪ್ರಾಯೋಜಕತ್ವದಲ್ಲಿ ಮೂಕಾಂಬಿಕಾ ಚೆಂಡೆ ಬಳಗದವರಿಂದ ವಯೋಲಿನ್ ವಾದನದೊಂದಿಗೆ ನಡೆದ ಚೆಂಡೆ ಕುಣಿತ ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು.










