







ಪುತ್ತೂರು: ಹಿಂದೂ ಜಾಗರಣ ವೇದಿಕೆಯ ಮುಂದಾಳು ಅಜಿತ್ ರೈ ಹೊಸಮನೆ ವಿರುದ್ಧ ಮನೀಶ್ ಕುಲಾಲ್ ಅವರ ತಂದೆ ಆನಂದ್ ಎಸ್. ಎಂಬವರು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ಅವರ ಪೀಠ ಈ ಆದೇಶ ನೀಡಿದ್ದು ಹಿರಿಯ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ಅವರು ಅಜಿತ್ ರೈ ಪರ ವಾದ ಮಂಡಿಸಿದ್ದರು.


ದೂರಿನಲ್ಲಿ ಏನಿತ್ತು?:
ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿರುವ ಮನೀಷ್ ಕುಲಾಲ್ ಅವರ ತಂದೆ ಆನಂದ್ ಎಸ್. ಅವರು ಅಜಿತ್ ರೈ ಹೊಸಮನೆ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ಈ ಹಿಂದೆ ದೂರು ನೀಡಿದ್ದರು. ನನ್ನ ಮನೆಗೆ ಅಜಿತ್ ರೈ ಹೊಸಮನೆ ಎಂಬ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಮಧ್ಯಾಹ್ನ ಹೊತ್ತಿನಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ನನ್ನ ಮಗನ ಮೇಲೆ ಹಲ್ಲೆ ಮಾಡಲು ಪ್ರಯತ್ನ ಮಾಡಿ ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು ಮಗನಿಗೆ ಜೀವ ಬೆದರಿಕೆ ಒಡ್ಡಿದ್ದಾರೆ. ನನ್ನ ಗಮನಕ್ಕೆ ತಡವಾಗಿ ಈ ವಿಷಯ ಬಂದಿದೆ. ಈ ವಿಷಯವನ್ನು ದೊಡ್ಡದು ಮಾಡುವುದು ಬೇಡ ಎಂಬ ಕಾರಕ್ಕಾಗಿ ನನ್ನ ಮಕ್ಕಳು ನನಗೆ ವಿಷಯ ತಿಳಿಸಿರಲಿಲ್ಲ. ಆದರೆ ಈ ದಿನ ಮತ್ತೆ ಅವನ ಮೇಲೆ ಹಲ್ಲೆ ಮಾಡಿ ಹತ್ಯೆಯ ಸಂಚು ಮಾಡಿರುವುದು ನನ್ನಲ್ಲಿ ಆತಂಕ ಸೃಷ್ಟಿ ಮಾಡಿದೆ. ಈ ಕೃತ್ಯದ ಹಿಂದೆ ಅಜಿತ್ ರೈ ಕೈವಾಡವಿರುವುದು ಕಂಡು ಬರುತ್ತಿದೆ. ಅಕ್ರಮವಾಗಿ ಮನೆಗೆ ಪ್ರವೇಶಿಸಿ ಅವಾಚ್ಯ ಶಬ್ದದಿಂದ ನಿಂದಿಸಿ ನಮಗೆ ತೊಂದರೆ ನೀಡುತ್ತಿರುವ ಅಜಿತ್ ರೈ ಹೊಸಮನೆ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಅವರಿಂದ ನನ್ನ ಮಗನಿಗೆ ಜೀವ ಭಯವಿದ್ದು ಕಾನೂನು ರೀತಿಯ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದರು.



2023ರ ನವೆಂಬರ್ 10ರಂದು ದೂರು ನೀಡಿದ್ದು 11ರಂದು ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ:. 109/2023ರಂತೆ ಐಪಿಸಿ 447, 504 ಮತ್ತು 506ರಡಿ ಪ್ರಕರಣ ದಾಖಲಾಗಿತ್ತು. ಬಳಿಕ ಅಜಿತ್ ರೈ ಅವರು ಈ ಪ್ರಕರಣ ರದ್ದು ಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಈ ಪ್ರಕರಣ ರದ್ದುಗೊಳಿಸಿ ಆದೇಶ ನೀಡಿದೆ.










