







ಉಪ್ಪಿನಂಗಡಿ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್‌ನ ವತಿಯಿಂದ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಐದು ದಿನಗಳ ಕಾಲ ಆರಾದಿಸಲ್ಪಟ್ಟ ಶ್ರೀ ಗಣೇಶ ದೇವರ ಜಲಸ್ತಂಭನ ಶೋಭಾಯಾತ್ರೆಯು ಸೆ.18ರಂದು ರಾತ್ರಿ ವಿಜೃಂಭಣೆಯಿಂದ ನಡೆಯಿತು.



ಸಂಜೆ ಮಹಾಪೂಜೆಯ ನಡೆದ ಬಳಿಕ ಶ್ರೀ ಲಕ್ಷ್ಮೀವೆಂಕಟರಮಣ ಕಲ್ಯಾಣ ಮಂಟಪದೆದುರಿನಿಂದ ಶೋಭಾಯಾತ್ರೆಗೆ ಚಾಲನೆ ದೊರೆಯಿತು. ದಿಗ್ವಿಜಯ ಮತ್ತು ಭಜನಾ ಶೋಭಾಯಾತ್ರೆಗೆ ಉದ್ಯಮಿ ಮೋಹನ್ ಕುಮಾರ್, ಹಿಂದೂ ಪರ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಚಾಲನೆ ನೀಡಿದರು.




ವಿದ್ಯುದ್ದೀಪಾಲಂಕಾರಗೊಂಡಿದ್ದ ರಥಬೀದಿಯಾಗಿ ಸಾಗಿ ಬಂದ ಶೋಭಾಯಾತ್ರೆಯು ಪೇಟೆಯೊಳಗಿನಿಂದ ಬ್ಯಾಂಕ್ ರಸ್ತೆಯಾಗಿ ಗಾಂಧಿಪಾರ್ಕ್ ಮೂಲಕ ಆದಿತ್ಯ ಹೊಟೇಲ್ ತನಕ ಸಾಗಿ ಅಲ್ಲಿಂದ ಮತ್ತೆ ಗಾಂಧಿಪಾರ್ಕ್ ಮೂಲಕ ಪೇಟೆ ಪ್ರವೇಶಿಸಿ ಶೆಣೈ ಆಸ್ಪತ್ರೆ ಎದುರಿನಿಂದ ಇಂದ್ರಪ್ರಸ್ಥ ವಿದ್ಯಾಲಯದ ರಸ್ತೆಯಾಗಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರಕ್ಕೆ ಆಗಮಿಸಿತು. ಅಲ್ಲಿ ಪೂಜೆಗೊಂಡ ಶ್ರೀ ಗಣೇಶ ವಿಗ್ರಹವನ್ನು ನೇತ್ರಾವತಿ- ಕುಮಾರಧಾರ ನದಿಗಳ ಪುಣ್ಯ ಸಂಗಮ ಸ್ಥಳದಲ್ಲಿ ವಿಸರ್ಜಿಸಲಾಯಿತು. ಶೋಭಾಯಾತ್ರೆಯುದ್ದಕ್ಕೂ ಅಲ್ಲಲ್ಲಿ ಭಕ್ತರಿಂದ ಶ್ರೀ ಗಣೇಶನಿಗೆ ಪೂಜೆಗಳು ನೆರವೇರಿದವು.

ಕುಣಿತ ಭಜನಾ ತಂಡಗಳ ಸಾಥ್:
ಭಜೋರೆ ಮಾರುತಿ ಕುಣಿತ ಭಜನಾ ತರಬೇತುದಾರರ ತಂಡ ಹಾಗೂ ಇತರ ಕುಣಿತ ಭಜನಾ ತಂಡಗಳು ಸುಶ್ರಾವ್ಯ ಭಜನಾ ಪದಗಳಿಗೆ ಲಯಬದ್ಧ ತಾಳದೊಂದಿಗೆ ಶೋಭಾಯಾತ್ರೆಯುದ್ದಕ್ಕೂ ಹೆಜ್ಜೆ ಹಾಕಿದರು. ಶ್ರೀ ಆಂಜನೇಯ ಹವ್ಯಾಸಿ ವ್ಯಾಯಾಮ ಸಂಘದವರಿಂದ ವಿವಿಧ ತಾಲೀಮು ಕಸರತ್ತುಗಳು ನಡೆದವು. ಶ್ರೀರಾಮ ಲಕ್ಷ್ಮಣರೊಂದಿಗಿದ್ದ ಶ್ರೀ ಆಂಜನೇಯನ ಭವ್ಯ ಸ್ಥಬ್ಧ ಚಿತ್ರ ಹಾಗೂ ವಾಸುಕಿ- ಗರುಡನ ದೃಶ್ಯರೂಪಕದ ಸ್ತಬ್ಧ ಚಿತ್ರ ಮತ್ತು ಬಾಲಗಂಗಾಧರ ತಿಲಕ್ ಅವರ ಸ್ತಬ್ಧಚಿತ್ರ ಗಮನ ಸೆಳೆಯಿತು. ಇದರೊಂದಿಗೆ ಗೊಂಬೆ ಕುಣಿತವೂ ಶೋಭಾಯಾತ್ರೆಗೆ ಮೆರುಗು ತಂದಿತು.


ಕಾರ್ಯಕ್ರಮದಲ್ಲಿ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್, ಉದ್ಯಮಿ ಶಶಿಧರ ನಟ್ಟಿಬೈಲ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕೆ. ರಾಧಾಕೃಷ್ಣ ನಾೖಕ್, ಉಪ್ಪಿನಂಗಡಿ ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಅತ್ರೆಮಜಲು, ಶ್ರೀರಾಮ ಶಾಲಾ ಸಂಚಾಲಕ ಯು.ಜಿ.ರಾಧಾ, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಬಿಎಸ್ಸೆಫ್‌ನ ನಿವೃತ ಡೆಪ್ಯೂಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ, ಪಟ್ಲ ಫೌಂಡೇಶನ್‌ನ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಜಗದೀಶ್ ಶೆಟ್ಟಿ, ಟೀಂ ದಕ್ಷಿಣ ಕಾಶಿಯ ಅಧ್ಯಕ್ಷ ವಿದ್ಯಾಧರ ಜೈನ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ, ಕೋಶಾಧಿಕಾರಿ ಚಂದ್ರಹಾಸ ಹೆಗ್ಡೆ, ಉಪಾಧ್ಯಕ್ಷರಾದ ಯು. ಯತೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಶರತ್ ಕೋಟೆ ಕೀರ್ತನ್ ಕುಮಾರ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಅನುರಾಧ ಆರ್. ಶೆಟ್ಟಿ, ಪ್ರಮುಖರಾದ ಅಶೋಕ್ ರೈ ಅರ್ಪಿಣಿಗುತ್ತು, ಕಂಗ್ವೆ ವಿಶ್ವನಾಥ ಶೆಟ್ಟಿ, ಪುರಷೋತ್ತಮ ಮುಂಗ್ಲಿಮನೆ, ಪ್ರಸನ್ನ ಕುಮಾರ್ ಪೆರಿಯಡ್ಕ, ಅಭಿಷೇಕ್ ನಟ್ಟಿಬೈಲ್, ಜೀವನ್ ನಟ್ಟಿಬೈಲ್ ಮತ್ತಿತರರು ಉಪಸ್ಥಿತರಿದ್ದರು.










