ಕಡಬ ಬಿಲ್ಲವ ಸಂಘದಿಂದ ಗುರುಪೂಜೆ-ಧಾರ್ಮಿಕ ಸಭೆ, ಸನ್ಮಾನ ಕಾರ್ಯಕ್ರಮ

0

ಸಂಘಟಿತರಾಗಿ ಸಮಾಜದಲ್ಲಿ ಸ್ಥಾನಮಾನ ಪಡೆಯಬೇಕು: ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ

ಕಡಬ: ಬಿಲ್ಲವ ಸಮಾಜ ಬಾಂಧವರು ಸಂಘಟಿತರಾಗಿ ಒಗ್ಗಟ್ಟಿನಿಂದ ಮುನ್ನಡೆಯುವ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಪಡೆದುಕೊಳ್ಳಬೇಕು ಎಂದು ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮಿಜಿ ಅವರು ಹೇಳಿದರು.

ಅವರು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಕಡಬ ತಾಲೂಕು ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ವತಿಯಿಂದ ನಡೆದ ಗುರುಪೂಜೆ, ಧಾರ್ಮಿಕ ಸಭೆ, ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.


ಕಡಬ ತಾಲೂಕು ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕೆ. ಐತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮಿಜಿ ಅವರು ಆಶೀರ್ವಚನ ನೀಡಿ ಸಮಾಜ ಬಾಂಧವರು ಸಂಘಟಿತರಾಗಿ ಒಗ್ಗಟ್ಟಿನಿಂದ ಮುನ್ನಡೆಯುವ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಪಡೆದುಕೊಳ್ಳಬೇಕು. ಸಂಘಟನೆ ಬಲಿಷ್ಠವಾದಾಗ ಮಾತ್ರ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಸಮಾಜದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯ ಎಂದ ಅವರು ಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ನೀಡಿದ ತತ್ವ, ಸಂದೇಶ ಹಾಗೂ ಆದರ್ಶಗಳು ಇಂದಿಗೂ ಸಮಾಜದ ಜನರಿಗೆ ದಾರಿದೀಪವಾಗಿವೆ. ಸಮಾನತೆ, ಶಿಕ್ಷಣ, ಸಂಘಟನೆ ಹಾಗೂ ಸಾಮಾಜಿಕ ಜಾಗೃತಿಗೆ ಗುರುಗಳು ನೀಡಿದ ಮಹತ್ವ ಅಪಾರವಾಗಿದೆ. ಅವರ ವಿಚಾರಧಾರೆಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಇಡೀ ಸಮಾಜಕ್ಕೆ ಮಾರ್ಗದರ್ಶನ ನೀಡುವಂತಿವೆ. ಶ್ರೀ ನಾರಾಯಣ ಗುರುಗಳ ಪ್ರಭಾವವು ಸಮಾಜದ ವಿವಿಧ ಕ್ಷೇತ್ರಗಳಲ್ಲಿಯೂ ಕಂಡುಬಂದಿದೆ. ಮಹಾತ್ಮ ಗಾಂಧೀಜಿ ಸೇರಿದಂತೆ ಅನೇಕ ಮಹನೀಯರು ಗುರುಗಳ ವಿಚಾರಧಾರೆ ಹಾಗೂ ಆಶೀರ್ವಾದದಿಂದ ಪ್ರಭಾವಿತರಾಗಿದ್ದರು. ಗುರುಗಳ ತ್ಯಾಗ, ಸರಳತೆ, ಮಾನವೀಯತೆ ಮತ್ತು ಸಮಾಜೋದ್ಧಾರದ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸ್ವಾಮೀಜಿ ಕರೆ ನೀಡಿದರು.


ಗುರು ಸಂದೇಶ ನೀಡಿದ ಬೆಳ್ತಂಗಡಿ ಶ್ರೀ ಗುರುದೇವ ವಿವಿದ್ದೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶ್ವಥ್ ಕುಮಾರ್ ಅವರು ಮಾತನಾಡಿ, ಅಸ್ಪೃಶ್ಯತೆಯಂತಹ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ, ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಸಾಮಾಜಿಕ ಕ್ರಾಂತಿಗೆ ಕಾರಣರಾದ ಮಹಾಪುರುಷ ಶ್ರೀ ನಾರಾಯಣ ಗುರುಗಳ ತತ್ವ, ಸಂದೇಶ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಸಮಾಜ ಬಾಂಧವರ ಮೇಲಿದೆ ಕಡಬ ಬಿಲ್ಲವ ಸಂಘ ಇತ್ತೀಚೆಗಷ್ಟೇ ಆರಂಭಗೊಂಡಿದ್ದರೂ ಸಂಘಟನೆಯ ಕಾರ್ಯಚಟುವಟಿಕೆಗಳಲ್ಲಿ ಆರಂಭಶೂರತನ ತೋರದೆ ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಸಂಘಟನೆಯ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ. ಸಂಘಟನೆ ಆರಂಭಿಸುವುದಷ್ಟೇ ಮುಖ್ಯವಲ್ಲ, ಅದನ್ನು ನಿರಂತರವಾಗಿ ಮುನ್ನಡೆಸಿಕೊಂಡು ಹೋಗುವುದು ಹಾಗೂ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಮುಖ್ಯ ಎಂದು ಅವರು ಹೇಳಿದರು.

ಸಮಾಜ ಬಾಂಧವರು ಸಂಘಟಿತರಾಗುವ ಮೂಲಕ ತಮ್ಮ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗೆ ಅಗತ್ಯವಾದ ಶಕ್ತಿಯನ್ನು ರೂಪಿಸಿಕೊಳ್ಳಬೇಕು. ವಿಶೇಷವಾಗಿ ಬಿಲ್ಲವ ಸಮಾಜ ರಾಜಕೀಯವಾಗಿಯೂ ಬೆಳೆಯಬೇಕಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಸಮಾಜದ ಪ್ರಾತಿನಿಧ್ಯ ಹೆಚ್ಚಾದಾಗ ಸಮಾಜದ ವಿವಿಧ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ಹಾಗೂ ಸಮಾಜದ ಅಭಿವೃದ್ಧಿಗೆ ಅಗತ್ಯವಾದ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅಶ್ವಥ್ ಕುಮಾರ್ ಹೇಳಿದರು. ಹಿರಿಯರು ಹಲವು ವರ್ಷಗಳ ಪರಿಶ್ರಮದಿಂದ ಕಟ್ಟಿಕೊಟ್ಟಿರುವ ಸಂಘಟನೆಗಳು ಸಮಾಜದ ಅಮೂಲ್ಯ ಆಸ್ತಿಯಾಗಿವೆ. ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ಮತ್ತು ಸಂಘಟನಾ ವ್ಯವಸ್ಥೆಯನ್ನು ಯುವಜನತೆ ಮುಂದುವರಿಸಿಕೊಂಡು ಹೋಗಬೇಕು. ಸಂಘಟನೆಗಳಲ್ಲಿ ಯುವಕರ ಸಕ್ರಿಯ ಭಾಗವಹಿಸುವಿಕೆ ಹೆಚ್ಚಾದಾಗ ಸಂಘಟನೆಗೆ ಹೊಸ ಚೈತನ್ಯ ದೊರೆಯುತ್ತದೆ. ಯುವಶಕ್ತಿಯನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಿಕೊಳ್ಳುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದರು.

ಮಕ್ಕಳು ಮತ್ತು ಯುವಜನತೆ ಸಮಾಜದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪೋಷಕರು ಪ್ರೋತ್ಸಾಹಿಸಬೇಕು. ಕಾರ್ಯಕ್ರಮಗಳಿಗೆ ಕೇವಲ ಹಿರಿಯರು ಮಾತ್ರ ಆಗಮಿಸುವುದರಿಂದ ಸಾಲದು. ಮಕ್ಕಳನ್ನು ಕಾರ್ಯಕ್ರಮಗಳಿಗೆ ಕರೆತಂದು ಶ್ರೀ ನಾರಾಯಣ ಗುರುಗಳ ಜೀವನ, ಹೋರಾಟ ಹಾಗೂ ಸಂದೇಶಗಳ ಬಗ್ಗೆ ಅವರಿಗೆ ತಿಳಿಸಬೇಕು. ಬಾಲ್ಯದಿಂದಲೇ ಗುರುಗಳ ತತ್ವಗಳನ್ನು ಪರಿಚಯಿಸಿದರೆ ಮುಂದಿನ ಪೀಳಿಗೆಗೆ ಸಮಾಜದ ಇತಿಹಾಸ ಮತ್ತು ಸಂಘಟನೆಯ ಮಹತ್ವದ ಅರಿವು ಮೂಡುತ್ತದೆ. ಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿ, ಮಾನವರೆಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರಿದರು. ಶಿಕ್ಷಣ, ಸಂಘಟನೆ ಹಾಗೂ ಸಾಮಾಜಿಕ ಜಾಗೃತಿಯ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರು. ಅವರ ವಿಚಾರಧಾರೆಗಳು ಸಮಾಜದ ಪ್ರಗತಿಗೆ ಇಂದಿಗೂ ಪ್ರಸ್ತುತವಾಗಿವೆ. ಗುರುಗಳ ಜೀವನ ಮತ್ತು ತತ್ವಗಳನ್ನು ಕೇವಲ ಜಯಂತಿ ಅಥವಾ ಆಚರಣೆಗಳಿಗೆ ಸೀಮಿತಗೊಳಿಸದೆ, ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಶ್ವಥ್ ಕುಮಾರ್ ಹೇಳಿದರು. ಗುರು ಸಂದೇಶವನ್ನು ಮನೆ ಮನೆಗೆ ತಲುಪಿಸುವ ಕಾರ್ಯದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿರುವುದು ಮಹತ್ವದ್ದಾಗಿದೆ. ಪ್ರತಿಯೊಬ್ಬ ಸಮಾಜ ಬಾಂಧವರೂ ಸಂಘಟನೆಯೊಂದಿಗೆ ಕೈಜೋಡಿಸಿ, ಪರಸ್ಪರ ಸಹಕಾರದೊಂದಿಗೆ ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಶ್ರಮಿಸಬೇಕು. ಹಿರಿಯರ ಅನುಭವ, ಯುವಕರ ಶಕ್ತಿ ಹಾಗೂ ಮಕ್ಕಳಿಗೆ ನೀಡುವ ಉತ್ತಮ ಸಂಸ್ಕಾರ-ಈ ಮೂರು ಒಂದಾಗಿ ಸಾಗಿದಾಗ ಸಮಾಜದ ಸಂಘಟನೆ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಅವರು ತಿಳಿಸಿದರು.


ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ರಾಜಕೀಯವಾಗಿ ನಾವು ಬಲಾಡ್ಯರಾದಾಗ ನಮ್ಮ ಬೇಡಿಕೆ ಆಶೋತ್ತರಗಳನ್ನು ನೆರವೇರಿಸಲು ಸಹಕಾರಿಯಾಗುತ್ತದೆ, ನಮ್ಮ ಸಮುದಾಯದ ನಾಯಕರು ಅಧಿಕಾರದಲ್ಲಿ ಇದ್ದಾಗ ಕೆಲವು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದಾರೆ, ಇಂದಿನ ಎಲ್ಲ ಕಾರ್ಯಗಳು ಆಡಳಿತ ಚಟುವಟಿಕೆಗಳು ಜಾತಿ ವ್ಯವಸ್ಥೆಯನ್ನು ಗಣನೆಗೆ ತೆಗೆದುಕೊಳ್ಳುತ್ತಿರುವುದರಿಂದ ನಾವು ನಮ್ಮ ವ್ಯವಸ್ಥೆಯನ್ನು ಬಲಪಡಿಸುವ ಅನಿವಾರ್ಯತೆ ಇದೆ. ಗುರುಗಳ ಅದರ್ಶ ಹಾಗೂ ಅವರ ಅನುಗ್ರಹದಿಂದ ನಾನು ಈ ಮಟ್ಟಕ್ಕೆ ಏರಿದ್ದೆನೆ, ನಮ್ಮ ಸಮಾಜದ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಆಗ ನಮಗೆ ಶಕ್ತಿ ಬರುತ್ತದೆ ಎಂದು ಹೇಳಿದರು.ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ, ಪದ್ಮರಾಜ್ ಆರ್ ಪೂಜಾರಿ ಮಾತನಾಡಿ, ಇಂದಿನ ಕಾಲದಲ್ಲಿ ಯಾವುದೇ ಸಂಘಟನೆ ಇದ್ದರೂ ರಾಜಕೀಯವಾಗಿ ನಾವು ಬಲಾಡ್ಯರಾಗದಿದ್ದರೆ ಪ್ರಯೋಜನವಿಲ್ಲ, ನನಗೆ ಈ ಸ್ಥಾನಮಾನ ದೊರೆತಿದೆ ಎಂದಾದರೆ ಅದು ಬಿಲ್ಲವ ಸಮಾಜದ ವ್ಯಕ್ತಿ ಎನ್ನುವ ಕಾರಣಕ್ಕೆ, ಆದುದರಿಂದ ರಾಜಕೀಯ ವಿಚಾರಕ್ಕೆ ಬಂದಾಗ ನಮ್ಮ ಸಮಾಜದವರನ್ನು ಆರಿಸಿ ಕಳಿಸುವ ವ್ಯವಸ್ಥೆಯಾಗಬೇಕು ಇದಕ್ಕೆ ಸಮಾಜಭಾಂದವರು ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ ಅವರು ಶ್ರೀ ನಾರಾಯಣ ಗುರುಗಳ ಆದರ್ಶ, ತತ್ವ ಸಿದ್ದಾಂತಗಳನ್ನು ರೂಢಿಸಿಕೊಂಡರೆ ಮಾತ್ರ ನಾವು ಸಂಘಟಿತರಾಗಬಹುದು ಎಂದು ಹೇಳಿದರು.


ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ಮಾತನಾಡಿ, ಇಂದಿನ ಯುವಜನತೆ ಸಮಾಜದ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಯುವಕರು ಸಂಘಟನೆಯೊಂದಿಗೆ ಕೈಜೋಡಿಸಿದಾಗ ಸಂಘಟನೆ ಮತ್ತಷ್ಟು ಗಟ್ಟಿಯಾಗುತ್ತದೆ. ಯುವಶಕ್ತಿಯನ್ನು ಸಮಾಜದ ಅಭಿವೃದ್ಧಿ ಹಾಗೂ ಸತ್ಕಾರ್ಯಗಳಿಗೆ ಬಳಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಅವರು ತಿಳಿಸಿದರು. ಶ್ರೀ ನಾರಾಯಣ ಗುರುಗಳ ತತ್ವ ಮತ್ತು ಸಂದೇಶಗಳನ್ನು ಮನೆ ಮನೆಗೆ ಭೇಟಿ ನೀಡಿ ಜನರಿಗೆ ತಿಳಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಗಳಿಂದ ಸಮಾಜದಲ್ಲಿ ಜಾಗೃತಿ ಮೂಡುತ್ತಿದ್ದು, ಜನರು ತಮ್ಮ ಹಕ್ಕು, ಜವಾಬ್ದಾರಿ ಹಾಗೂ ಸಂಘಟನೆಯ ಮಹತ್ವವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತಿದೆ. ಗುರುಗಳ ಆದರ್ಶಗಳನ್ನು ಜನಜೀವನದಲ್ಲಿ ಅಳವಡಿಸುವ ನಿಟ್ಟಿನಲ್ಲಿ ಇಂತಹ ಜಾಗೃತಿ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದರು. ಗುರುಗಳ ತ್ಯಾಗ ಮತ್ತು ಸಮಾಜಮುಖಿ ಚಿಂತನೆಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ. ಅವರ ಜೀವನ ಮತ್ತು ಸಂದೇಶಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಸಮಾಜದ ಹಿರಿಯರು ಹಾಗೂ ಸಂಘಟನೆಗಳ ಮೇಲಿದೆ. ಸಂಘಟನೆಯ ಮೂಲಕ ಸಮಾಜದ ಪ್ರತಿಯೊಬ್ಬರನ್ನೂ ಒಗ್ಗೂಡಿಸಿ ಶಿಕ್ಷಣ, ಸಾಮಾಜಿಕ ಅಭಿವೃದ್ಧಿ ಹಾಗೂ ಪರಸ್ಪರ ಸಹಕಾರದ ಮೂಲಕ ಮುನ್ನಡೆಯಬೇಕು ಎಂದರು.


ಬ್ರಹ್ಮಶ್ರೀ ಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿಗುತ್ತು, ಎಸ್.ಎನ್.ಡಿ.ಪಿ, ಸಿದ್ದಾಪುರ ಯೂನಿಯನ್, ಜಿಲ್ಲಾ ಸದಸ್ಯ ಟಿ.ವಿ.ಉಣ್ಣಿಕೃಷ್ಣನ್, ಬಂಟ್ವಾಳ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರನಾಥ್ ಸಾಲ್ಯಾನ್, ಒರುಂಬಾಲು ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅಭಿಲಾಷ್ ಪಿ.ಕೆ ಅವರು ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕರ್ಕೆರ ಪೆಲತ್ತೋಡಿ, ಯುವ ವಾಹಿನಿ ಕಡಬ ಘಟಕದ ಅಧ್ಯಕ್ಷ ಉಮೇಶ್ ಬಳ್ಪ, ಕಡಬ ತಾಲೂಕು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಜಯಂತಿ ನಂದೋಳಿ, ಸಮಿತಿಯ ಕಾರ್ಯದರ್ಶಿ ಮಿಥುನ್ ಸುಂದರ್ ಪಲ್ಲತ್ತಡ್ಕ ಉಪಸ್ಥಿತರಿದ್ದರು. ಕಡಬ ತಾಲೂಕು ಬಿಲ್ಲವ ಸಮಿತಿಯ ಕೋಶಾಧಿಕಾರಿ ಸಂತೋಷ್ ಕುಮಾರ್ ಮರಕ್ಕಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣಪ್ಪ ಅಮೈ ವಂದನಾರ್ಪಣೆಗೈದರು, ಗಣೇಶ್ ನಡುವಾಳು, ಕೃಷ್ಣಪ್ಪ ಅಮೈ ಕಾರ್ಯಕ್ರಮ ನಿರೂಪಿಸಿದರು. ಕು| ಶ್ರೇಯಾ ವಿದ್ಯಾನಗರ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳನ್ನು ಹಾಗೂ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು. ಮಾಜಿ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಬಿಳಿನೆಲೆ, ಪ್ರಮುಖರಾದ ಸತೀಶ್ ಶೆಟ್ಟಿ ಬಿರುಕ್ಕು, ಸತೀಶ್ ನಾಕ್ ಭೂಮಿಕಾ, ವಿವೇಕಾನಂದ ವಿದ್ಯಾವರ್ಧಕ ಸಂಘದ ವೆಂಕಟ್ರಮಣ ಮಂಕುಡೆ, ಕಡಬ ಪ್ರಾ.ಕೃ.ಪ.ಸ.ಸಂ.ಅಧ್ಯಕ್ಷ ರಮೇಶ್ ಕಲ್ಪುರೆ ಪ್ರಮುಖರಾದ ದಿನೇಶ್ ಮೆದು, ಪುತ್ತೂರು ಬಿಲ್ಲವ ಸಂಘದ ಪ್ರ. ಕಾರ್ಯದರ್ಶಿ ಮಹೇಶ್ಚಂದ್ರ ಸಾಲಿಯಾನ್, ಪುತ್ತೂರು ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಪುಷ್ಪಾವತಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು, ಇವರನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಡಬ ತಾಲೂಕು ಬಿಲ್ಲವ ಸಂಘದ ಲೋಗೋ ಹಾಗೂ ಗುರು ಶ್ಲೋಕ ಅನಾವರಣಗೊಳಿಸಲಾಯಿತು.


ಸಾಧಕರಿಗೆ ಸನ್ಮಾನ:
ಮುಖ್ಯಮಂತ್ರಿ ಪದಕ ಪುರಸ್ಕೃತ ಸರ್ಕಲ್ ಇನ್ಸ್‌ಪೆಕ್ಟರ್ ಸುರೇಶ್ ಕುಮಾರ್ ಕೋಡಿಬೈಲು, ಕೃಷಿ ಕ್ಷೇತ್ರದ ಸಾಧನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ್ ಕುಮಾರ್ ಸೊರಕೆ, ಕಲಾ ಕ್ಷೇತ್ರದ ಸಾಧನೆಗೆ ಆರ್ಯಭಟ ಪ್ರಶಸ್ತಿ ಪುರಸ್ಕೃತ ದಯಾನಂದ ಅಗತ್ತಾಡಿ, ಸಹಕಾರ ಸಂಘದ ಸಾಧನ ಪ್ರಶಸ್ತಿ ಪುರಸ್ಕೃತ ಉಷಾ ಅಂಚನ್, ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಪರಮೇಶ್ವರ ಪೂಜಾರಿ ಗೆರ್ತಿಲ, 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸರಿತಾ ಜನಾರ್ಧನ್, ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕು| ಅರ್ಚನಾ ಸಂಪ್ಯಾಡಿ, ಹಿರಿಯ ಮೂರ್ತೆದಾರ ಶಶಿಕಾಂತ ಅಡ್ಡಹೊಳೆ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಮತ್ರಾಡಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.


ಕಡಬ ಪೇಟೆಯಲ್ಲಿ ಆಕರ್ಷಕ ಮೆರವಣಿಗೆ:
ಸಭಾ ಕಾರ್ಯಕ್ರಮದ ಮೊದಲು ಕಡಬ ಮೇಲಿನ ಪೇಟೆಯ ಸೈಂಟ್ ಜೋಕಿಮ್ಸ್ ಕಟ್ಟಡದ ಬಳಿಯಿಂದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸಭಾಂಗಣಕ್ಕೆ ಮೆರವಣಿಗೆ ಬರಲಾಯಿತು. ಮೆರವಣಿಗೆಯಲ್ಲಿ ಕುಣಿತ ಭಜನಾ ತಂಡಗಳಿಂದ ಕುಣಿತ ಭಜನೆ, ಚೆಂಡೆ ಬಳಗದಿಂದ ಆಕರ್ಷಕ ಚೆಂಡೆವಾದನ ಮೆರುಗು ನೀಡಿತು.


ಗುರುಪೂಜೆ
ಪುತ್ತೂರು ಹರೀಶ್ ಶಾಂತಿ ಅವರ ನೇತೃತ್ವದಲ್ಲಿ ಗುರುಪೂಜೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ತಿರ್ಲೆ ಕೊಣಾಲು ಇವರಿಂದ ಭಜನಾ ಕಾರ್ಯಕ್ರಮ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here