







ಪುತ್ತೂರು: ಬಡವರ ಮನೆ ಬಾಗಿಲಿಗೆ ಸರಕಾರ ಹೋಗಬೇಕು. ಅವರ ಸಮಸ್ಯೆಗಳಿಗೆ ಸ್ಪಂಧನೆ ನೀಡುವುದು ಮುಖ್ಯಮಂತ್ರಿಗಳ ಕನಸು. ಇದಕ್ಕಾಗಿ ಪ್ರಜಾಸೇವೆ ಇಲಾಖೆ ಸ್ಥಾಪಿಸಿ ಅದರ ಮೂಲಕ ಈಗ ಸರಕಾರ ಜನರ ಬಳಿಗೆ ಬರುತ್ತಿದೆ. ಗ್ರಾಮೀಣ ಭಾಗದ ಜನರ ವಿವಿಧ ಅಹವಾಲುಗಳಿಗೆ ಇಲಾಖೆಗಳ ಅಧಿಕಾರಿಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂಧನೆ ನೀಡಲಾಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದರು.


ಆರ್ಯಾಪು ಗ್ರಾ.ಪಂ ಸಭಾಂಗಣದಲ್ಲಿ ಸೆ.19ರಂದು ನಡೆದ ಪುತ್ತೂರು ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಹಿಂದೆ ಜನರು ಸರಕಾರಿ ಕಚೇರಿ ಬಳಿ ತಮ್ಮ ಅಹವಾಲುಗಳನ್ನು ಹಿಡಿದು ಬರುತ್ತಿದ್ದರು. ಈಗ ಸರಕಾರವೇ ಜನರ ಬಳಿಗೆ ಬರುತ್ತಿದೆ. ಪ್ರಜಾಸೇವೆಯಲ್ಲಿ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ ಗ್ರಾಮೀಣ ಜನರ ಸಮಸ್ಯೆ, ಅಹವಾಲುಗಳನ್ನು ಸ್ವೀಕರಿಸಿ, ಶೇ.80ರಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ತಾಲೂಕು ಮಟ್ಟದಲ್ಲಿ ಪರಿಹಾರ ಆಗುವಂತೆ ಸಮಸ್ಯೆಗಳ ಪರಿಹರಿಸಲಾಗುತ್ತಿದೆ. ಹಿಂದೆ ಸಲ್ಲಿಸಿ, ಪರಿಹಾರವಾಗದಿರುವ ಸಮಸ್ಯೆಗಳನ್ನು ಪರಿಶೀಲಿಸಿ, ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.




‘ಬಡವರ ಕೆಲಸ ದೇವರ ಕೆಲಸ’:
ಬಡವರು ಶಿಕ್ಷಿತರಲ್ಲ. ಬಡವರು ಕಚೇರಿಗೆ ಬಂದಾಗ ಅಧಿಕಾರಿಗಳು ಸ್ಪಂಧನೆ ನೀಡಬೇಕು. ಅವರ ಸಮಸ್ಯೆಗಳಿಗೆ ಸಹಕಾರ ಕೊಡಬೇಕು. ಅಧಿಕಾರಿಗಳು ಅವರಲ್ಲಿ ತಾಳ್ಮೆಯಿಂದ ಕೆಲಸ ಮಾಡಬೇಕು. ತಪ್ಪ ಮಾಡಿದರೆ ಎಷ್ಟೇ ದೊಡ್ಡ ಅಧಿಕಾರಿಯಾದರೂ ಬಿಡುವ ಪ್ರಶ್ನೆಯಿಲ್ಲ. ಬಡವರ ಸೇವೆಯಲ್ಲಿ ಅಧಿಕಾರಿಗಳು ನಮ್ಮ ಜೊತೆಗೆ ಸಹಕಾರ ನೀಡಿದರೆ ನಿಮ್ಮನ್ನು ಕಾಪಾಡುವ ಕೆಲಸ ಮಾಡಲಾಗುವುದು. ಮೇಲಾಧಿಕಾರಿಗಳು ಕೆಳಗಿನ ಹಂತದ ಅಧಿಕಾರಿಗಳ ಮೇಲೆ ದರ್ಪ ತೋರಿಸಬಾರರದು. ಶಾಸಕಾಂಗ ಒಂದೇ ಕೆಲಸ ಮಾಡಿದರೆ ಸಾಧ್ಯವಿಲ್ಲ. ಕಾರ್ಯಾಂಗವಾಗಿ ಅಧಿಕಾರಿಗಳೂ ಕೆಲಸ ಮಾಡಬೇಕು. ಪುತ್ತೂರಿನಲ್ಲಿ ಉತ್ತಮ ಅಧಿಕಾರಿಗಳಿದ್ದು ಉತ್ತಮವಾಗಿ ಕೆಲಸ ಮಾಡಬೇಕು, ನನಗೆ ವೈಯಕ್ತಿಕವಾಗಿ ಯಾರ ಮೇಲೂ ಧ್ವೇಷವಿಲ್ಲ. ಬಡವರ ಕೆಲಸ ದೇವರ ಕೆಲಸ. ಬಡವರ ಸೇವೆ ಮಾಡಿದರೆ ದೇವಸ್ಥಾನಕ್ಕೆ ಹೋದಷ್ಟೇ ಸಮಾನ ಎಂದು ಶಾಸಕರು ಹೇಳಿದರು.
ತಹಶೀಲ್ದಾರ್ ಎಸ್.ಬಿ ಕೂಡಲಗಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನಯೆಯಾಗಿರುವ ಪ್ರಜಾಸೇವಾ ಆಂದೋಲನದ ಮೂಲಕ ಸಾರ್ವಜನಿಕರ ಸಮಸ್ಯೆ, ಅಹವಾಲುಗಳನ್ನು ಗ್ರಾಮ ಮಟ್ಟದಲ್ಲಿ ಸ್ವೀಕರಿಸಿ, ಪರಿಹಾರ ಕಂಡುಕೊಳ್ಳವುದೇ ಯೋಜನೆಯ ಉದ್ದೇಶವಾಗಿದೆ. ತಾಲೂಕು ಮಟ್ಟದಲ್ಲಿ ಪರಿಹರಿಸುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು. ಜಿಲ್ಲೆ, ರಾಜ್ಯ ಮಟ್ಟದಲ್ಲಿ ಪರಿಹರಿಸುವ ಸಮಸ್ಯೆಗಳನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಹಿಂಬರಹ ನೀಡಲಾಗುವುದು. ಈ ಯೋಜನೆಯ ಮೂಲಕ ಜನರು ಅಹವಾಲು ಸಲ್ಲಿಸಿ, ೨೧ ದಿನಗಳಲ್ಲಿ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
ಪಂಚ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಆರ್ಯಾಪು ಗ್ರಾ.ಪಂ ಆಡಳಿತಾಧಿಕಾರಿಯಾಗಿರುವ ತಾಲೂಕು ಆರೋಗ್ಯಾಧಿಕಾರಿ ಡಾ.,ದೀಪಕರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರ್ಯಾಪು ಗ್ರಾ.ಪಂ ಪಿಡಿಓ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿದರು. ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಉಪ ತಹಶೀಲ್ದಾರ್ ರವಿಕುಮಾರ್ ವಂದೇ ಮಾತರಂ, ನಾಡಗೀತೆ ಹಾಡಿದರು. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ್, ನರಿಮೊಗರು ಪಿಡಿಓ ಆಶಾ, ಆರ್ಯಾಪು ಗ್ರಾ.ಪಂ ಕಾರ್ಯದರ್ಶಿ ಮೋನಪ್ಪ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಪುತ್ತೂರು ಹೋಬಳಿ ವಿವಿಧ ಗ್ರಾ.ಪಂಗಳ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿಗಳಿಗೆ ಕರಾವಳಿಗೆ ಹಬ್ಬ…!
ಮುಖ್ಯ ಮಂತ್ರಿಗಳು ದ.ಕ ಜಿಲ್ಲೆಗೆ ಬಂದು ಕರಾವಳಿಯಲ್ಲಿ ಹಬ್ಬವನ್ನೇ ಮಾಡಿಹೋಗಿದ್ದಾರೆ. ತುಳು ಭಾಷೆ ಮಾನ್ಯತೆ ನೀಡುವ ಜೊತೆಗೆ ಪುತ್ತೂರಿನ ಸರಕಾರಿ ಮೆಡಿಕಲ್ ಕಾಲೇಜಿಗೆ ರೂ.550 ಕೋಟಿ, ನಗರ ಸಭೆಯ ಕುಡಿಯುವ ನೀರಿಗೆ ರೂ.22ಕೋಟಿ, ವಿಟ್ಲ ಪಟ್ಟಣ ಪಂಚಾಯತ್ಗೆ ಕುಡಿಯುವ ನೀರಿಗೆ ರೂ.100ಕೋಟಿ, ಮಾಣಿಲ ಡ್ಯಾಂಗೆ ರೂ.26ಕೋಟಿ, ಉಪ್ಪಿನಂಗಡಿ ಡ್ಯಾಂಗೆ ರೂ.252ಕೋಟಿ, ಕಠಾರ ಡ್ಯಾಂಗೆ ರೂ.150ಕೋಟಿ ಸೇರಿದಂತೆ ಪುತ್ತೂರಿಗೆ ರೂ.1200ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಅಂತರ್ಜಲ ವೃದ್ಧಿಸಲು ಇನ್ನಷ್ಟು ಡ್ಯಾಂಗಳನ್ನು ನಿರ್ಮಿಸುವ ಯೋಜನೆಗಳಿದ್ದು ಶಾಂತಿಗೋಡಿನಲ್ಲಿ ಡ್ಯಾಂಗೆ ರೂ.40ಕೋಟಿಗೆ ಪ್ರಸ್ತಾವಣೆ ಕಳುಹಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

7 ಅರ್ಜಿಗಳ ಸ್ವೀಕಾರ
ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕರಿಂದ ಒಟ್ಟು 7 ಅಹವಾಲುಗಳನ್ನು ಸ್ವೀಕರಿಸಿಸಲಾಗಿದೆ. ಮುಂಡೂರಿನಲ್ಲಿ ಅಂಬೇಡ್ಕರ್ ಭವನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆಗೆ, ಹಿರೇಬಂಡಾಡಿಯಲ್ಲಿ ರಸ್ತೆ ಕಾಂಕ್ರಿಟೀಕರಣ ಮಾಡುವಂತೆ ಪಂಚಾಯತ್ರಾಜ್ ಇಂಜಿನಿಯರಿಂಗ್ ಇಲಾಖೆ, ಕುರಿಯದಲ್ಲಿ ಪ್ಲಾಟಿಂಗ್ ಮಾಡುವಂತೆ ಭೂ ಮಾಪನಾ ಇಲಾಖೆ, ಗೃಹಲಕ್ಷ್ಮೀ ಮೊತ್ತ ಪಾವತಿಯಾಗದಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರ್ಯಾಪುನಲ್ಲಿ ರಸ್ತೆ ಕಾಂಕ್ರಿಟೀಕರಣ ಮತ್ತು ತಡೆಗೋಡೆ, ಕುರಿಯದಲ್ಲಿ ಧರೆ ಅಗೆದು ಅಪಾಯದಲ್ಲಿರುವ ಬಗ್ಗೆ ಹಾಗೂ ಆರ್ಯಾಪು ಗ್ರಾ.ಪಂಗೆ ಖಾಯಂ ಪಿಡಿಓ ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವಂತೆ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಅಹವಾಲುಗಳು ಸಲ್ಲಿಕೆಯಾಗಿದೆ.










