ಸರಣಿ ಅಪಘಾತ: ಮದ್ಯದ ಲೋಡ್ ತುಂಬಿದ್ದ ಲಾರಿ ಪಲ್ಟಿ – ಪ್ರಕರಣ ದಾಖಲು

0

ನೆಲ್ಯಾಡಿ: ಚಾಲಕನ ದುಡುಕು ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಸರಣಿ ಅಪಘಾತ ಸಂಭವಿಸಿ ಮದ್ಯ ತುಂಬಿದ್ದ ಲಾರಿ ಪಲ್ಟಿಯಾದ ಘಟನೆ ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಬೆಥನಿ ಕಾಲೇಜು ಬಳಿ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಸೆ.20ರ ಮುಂಜಾನೆ ನಡೆದಿದೆ.

ಸಕಲೇಶಪುರ ಕಡೆಯಿಂದ ಮಂಗಳೂರು ಕಡೆಗೆ ಶಮೀರ್ ಎಂಬವರು ಲಾರಿ ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಮುಂದೆ ಸಾಗುತ್ತಿದ್ದ ಬೆಂಗಳೂರು ನೆಲಮಂಗಲ ನಿವಾಸಿ ರಾಜ್ ಎಂ. (56) ಅವರಿಗೆ ಸೇರಿದ ಮದ್ಯದ ಲೋಡ್ ತುಂಬಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ಗ್ಯಾಸ್ ಟ್ಯಾಂಕರ್‌ಗೆ ಉಜ್ಜಿಕೊಂಡು ರಸ್ತೆಯ ಎಡಬದಿಗೆ ಮಗುಚಿ ಬಿದ್ದಿದೆ.

ಘಟನೆಯಲ್ಲಿ ಮೂರು ವಾಹನಗಳು ಜಖಂಗೊಂಡಿದ್ದು, ಮದ್ಯದ ಲೋಡ್‌ಗೂ ಹಾನಿಯಾಗಿದೆ. ಲಾರಿ ಚಾಲಕ ಸಣ್ಣಪುಟ್ಟ ಗಾಯಗೊಂಡಿದ್ದಾರೆ.

ನೆಲ್ಯಾಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಲಾರಿ ಮಾಲೀಕ ರಾಜ್ ಎಂ. ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here