







ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಪೆರ್ನೆಯ ಮೈರಕಟ್ಟೆಯಲ್ಲಿ ಇಬ್ಬರು ಮಕ್ಕಳನ್ನು ಬಾವಿಗೆಸೆದು ಓರ್ವ ಕಂದನ ಸಾವಿಗೆ ಕಾರಣವಾದ ಆರೋಪಿತೆ ಮಹಿಳೆಗೆ ಪುತ್ತೂರು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.


ಮೈರಕಟ್ಟೆ ನಿವಾಸಿಗಳಾದ ಸಿನಾನ್ ಹಾಗೂ ಅವರ ಪತ್ನಿ ನೂರುನ್ನಿಸಾ ಎಂಬವರ ಮಧ್ಯೆ ಫೋನ್‌ನಲ್ಲಿ ವೈವಾಹಿಕ ಕಲಹ ನಡೆದಿತ್ತು. ಇದರಿಂದ ಕೋಪಗೊಂಡ ಆರೋಪಿ ನೂರುನ್ನಿಸಾ ಮನೆಯಲ್ಲಿದ್ದ ಆಕೆಯ ಮೂರುವರೆ ವರ್ಷದ ಹೆಣ್ಣು ಮಗು ಹಾಗೂ ಆಕೆಯ ಗಂಡನ ತಂಗಿಯ ಸುಮಾರು ಮೂರು ವರ್ಷದ ಗಂಡು ಮಗುವನ್ನು ಮನೆ ಸಮೀಪದ ಬಾವಿಗೆಸೆದಿದ್ದಳು. ಈ ವೇಳೆ ಸ್ಥಳೀಯರು ಆಗಮಿಸಿ ಮಕ್ಕಳನ್ನು ಮೇಲಕ್ಕೆತ್ತಿದ್ದು, ಈ ಪೈಕಿ ನೂರುನ್ನಿಸಾಳ ಗಂಡನ ತಂಗಿಯ ಮಗು ರಬೀಹ್ ಮೃತಪಟ್ಟಿದ್ದ. ನೂರುನ್ನಿಸಾಳ ಹೆಣ್ಣು ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಕೃತ್ಯ ನಡೆಸಿ ಮನೆಯಲ್ಲಿಯೇ ಇದ್ದ ನೂರುನ್ನಿಸಾಳನ್ನು ಬಂಧಿಸಿದ್ದರು. ಸೆ. ೨೦ ಈಕೆಯನ್ನು ಪುತ್ತೂರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆಕೆಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.













