ಪುತ್ತೂರಿನಲ್ಲಿ ರಾಷ್ಟ್ರೀಯ ಲೋಕ ಅದಾಲತ್ – 515 ಪ್ರಕರಣ ಇತ್ಯರ್ಥ : ವಿರಸ ಮರೆತು ಮತ್ತೆ ಒಂದಾದ ದಂಪತಿಗಳು

0

ಪುತ್ತೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸೆ.19ರಂದು ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಪುತ್ತೂರಿನಲ್ಲೂ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 515 ಪ್ರಕರಣ ಇತ್ಯರ್ಥ ಆಗಿದೆ. ದಾಂಪತ್ಯದಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯಗಳಿಂದ ಬೇಸತ್ತು ನ್ಯಾಯಾಲಯದ ಮೆಟ್ಟಲೇರಿದ್ದ ಮೂರು ಕುಟುಂಬಗಳನ್ನು ರಾಜಿ ಸಂಧಾನದ ಮೂಲಕ ಮತ್ತೆ ಒಂದು ಮಾಡಿಸಿದ ಘಟನೆಯೂ ಈ ಲೋಕ ಅದಾಲತ್‌ನಲ್ಲಿ ನಡೆದಿದೆ.


ಸೆ.19ರಂದು ಪುತ್ತೂರಿನ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 9200 ಪ್ರಕರಣಗಳಲ್ಲಿ 897 ಪ್ರಕರಣಗಳನ್ನು ರಾಜಿ ಸಂದಾನಕ್ಕೆ ಪ್ರಯತ್ನಿಸಲಾಗಿದ್ದು ಈ ಪೈಕಿ 515 ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿ ಫಲಾನುಭವಿಗಳಿಗೆ ರೂ. 7,04,25,673 ಪರಿಹಾರ ಮೊತ್ತವನ್ನು ವಿತರಿಸಲು ಆದೇಶಿಸಲಾಗಿತ್ತು. ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ, ಜನನ ಮರಣ ನೋಂದಾಣೆ ಸಹಿತ ಚೆಕ್ ಬೌನ್ಸ್, ವಿಮಾ ಹಣದ ಪ್ರಕರಣ, ಬ್ಯಾಂಕ್ ಹಾಗೂ ಇತರ ಕಂಪನಿಗಳೊಂದಿಗೆ ಇರುವ ವ್ಯಾಜ್ಯಗಳಲ್ಲಿ ಕಕ್ಷಿದಾರರು ಒಪ್ಪುವ ರೀತಿಯಲ್ಲಿ ಇತ್ಯರ್ಥ ಮಾಡುವ ಪ್ರಯತ್ನ ನಡೆಯಿತು.


ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅವರ ನ್ಯಾಯಾಲಯದಲ್ಲಿ 59 ಪ್ರಕರಣಗಳಲ್ಲಿ 7 ಇತ್ಯರ್ಥಗೊಂಡಿದ್ದು ರೂ.10,64,424 ಪರಿಹಾರ ವಿತರಣೆಗೆ ಆದೇಶ ಆಗಿದೆ. ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶೆ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಪ್ರಕೃತಿ ಕಲ್ಯಾಣಪುರ ಅವರ ನ್ಯಾಯಾಲಯದಲ್ಲಿ 304 ಪ್ರಕರಣಗಳಲ್ಲಿ 204 ಇತ್ಯರ್ಥಗೊಂಡಿದ್ದು ರೂ.16,05,050 ಪರಿಹಾರ ವಿತರಣೆಗೆ ಆದೇಶ ಆಗಿದೆ. ಅಪರ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಮತ್ತು ಜೆಎಮ್‌ಎ-ಸಿಯೂ ಆಗಿರುವ ದೇವರಾಜ್ ವೈ ಹೆಚ್ ಅವರ ನ್ಯಾಯಾಲಯದಲ್ಲಿ 199 ಪ್ರಕರಣಗಳಲ್ಲಿ 110 ಇತ್ಯರ್ಥಗೊಂಡಿದ್ದು, ರೂ.16,20,000 ವಿತರಣೆಗೆ ಆದೇಶ ಆಗಿದೆ. 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಜೆಎಂಎ-ಸಿ ನ್ಯಾಯಾಲಯದಲ್ಲಿ ಚಾರ್ಜ್ನಲ್ಲಿರುವ ನ್ಯಾಯಾಧೀಶ ದೇವರಾಜ್ ವೈ ಹೆಚ್ ಅವರು ಅದಾಲತ್ ನಡೆಸಿದರು. ಈ ನ್ಯಾಯಾಲಯದಲ್ಲಿ 325 ಪ್ರಕರಣಗಳಲ್ಲಿ 186 ಇತ್ಯರ್ಥಗೊಂಡಿದ್ದು, ರೂ. 31,32,499 ವಿತರಣೆಗೆ ಆದೇಶವಾಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಽಶೆ ಅವರ ನ್ಯಾಯಾಲಯದಲ್ಲಿ 98 ಪ್ರಕರಣಗಳಲ್ಲಿ 71 ಇತ್ಯರ್ಥಗೊಂಡಿದ್ದು, ರೂ.3,700 ವಿತರಣೆಗೆ ಆದೇಶವಾಗಿದೆ.

2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲೂ ಚಾರ್ಜ್ನಲ್ಲಿರುವ ನ್ಯಾಯಾಧೀಶೆ ರಮ್ಯ ಅವರು ಅದಾಲತ್ ನಡೆಸಿದರು. ಈ ನ್ಯಾಯಾಲಯದಲ್ಲಿ 12 ಪ್ರಕರಣಗಳಲ್ಲಿ 2 ಇತ್ಯರ್ಥಗೊಂಡಿದ್ದು, ಯಾವುದೇ ಪರಿಹಾರ ಇರಲಿಲ್ಲ. ಕಡಬ ಕೋರ್ಟ್ನಲ್ಲಿ ಪ್ರಥಮ ಬಾರಿಗೆ ಅದಾಲತ್ ನಡೆದಿದ್ದು, ಸಿವಿಲ್ ನ್ಯಾಯಾಽಶೆ ಶ್ವೇತಾ ಜೆ ಅವರು ಅದಾಲತ್ ನಡೆಸಿದರು. ಪ್ರಕರಣಗಳ ಇತ್ಯರ್ಥಕ್ಕೆ ಸಂಧಾನಕಾರರಾಗಿ ನ್ಯಾಯವಾದಿಗಳಾದ ಚಂದ್ರಾವತಿ ಟಿ., ತೇಜಸ್ ಯು., ಶಾಕೀರ್, ಚಂದ್ರಹಾಸ, ಕೃಷ್ಣಪ್ಪ ಗೌಡ ಸಹಕರಿಸಿದರು. ಸದ್ರಿ ವ್ಯಾಜ್ಯಗಳಲ್ಲಿ ಸಂಧಾನಕಾರ ವಕೀಲರನ್ನು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಅವರು ನೇಮಕ ಮಾಡಿದ್ದರು. ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ, ಚೆಕ್ ಬೌನ್ಸ್, ವಿಮಾ ಹಣದ ಪ್ರಕರಣ, ಬ್ಯಾಂಕ್ ಹಾಗೂ ಇತರ ಕಂಪನಿಗಳೊಂದಿಗೆ ಇರುವ ವ್ಯಾಜ್ಯಗಳಲ್ಲಿ ಕಕ್ಷಿದಾರರು ಒಪ್ಪುವ ರೀತಿಯಲ್ಲಿ ಇತ್ಯರ್ಥ ಮಾಡುವ ಪ್ರಯತ್ನ ನಡೆಯಿತು.

ವಿರಸ ಮರೆತು ಮತ್ತೆ ಒಂದಾದ ದಂಪತಿಗಳು
ದಾಂಪತ್ಯದಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯಗಳಿಂದ ಬೇಸತ್ತು ನ್ಯಾಯಾಲಯದ ಮೆಟ್ಟಲೇರಿದ್ದ ದಿನೇಶ್-ವತ್ಸಲಾ, ಸಂದೀಪ್-ಲತಾ, ಶುಭಗೌರಿ-ಸೂರ್ಯಪ್ರಕಾಶ್ ದಂಪತಿಗಳು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಒಂದಾಗಿ ಮತ್ತೆ ಹೊಸ ಜೀವನಕ್ಕೆ ಕಾಲಿಟ್ಟರು. ಪುತ್ತೂರು ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ. ಒಂದು ಪ್ರಕರಣದಲ್ಲಿ ಜೀವನಾಂಶವಿದ್ದು ಇನ್ನೆರಡು ಪ್ರಕರಣ ಡೈವರ್ಸ್ ಹಂತದಲ್ಲಿತ್ತು. ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ್ ಮತ್ತು ರಮ್ಯಾ ಆರ್ ಅವರು ಈ ಪ್ರಕರಣ ಇತ್ಯರ್ಥಪಡಿಸಿದ್ದಾರೆ. 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಽಶ ಸದಾನಂದ ನಾಗಪ್ಪ ನಾಯ್ಕ್ ಅವರು ದಂಪತಿಗಳಿಗೆ ಮಾರ್ಗದರ್ಶನ ನೀಡಿದರು. ಶುಭಗೌರಿ ಅವರ ಪರ ಜಿಲ್ಲಾ ಅಭಿರಕ್ಷಕಿ ಅಶ್ವಿನಿ ಕೆ, ಸೂರ್ಯ ಪ್ರಕಾಶ್ ಅವರ ಪರ ವಕೀಲ ಜಯಾನಂದ ಕೆ, ಸಂದೀಪ್ ಅವರ ಪರ ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕೆ, ವಕೀಲ ರಾಕೇಶ್ ಮಸ್ಕರೇನಸ್, ಲತಾ ಅವರ ಪರ ವಕೀಲರಾದ ಯತೀಶ್ ಶೆಟ್ಟಿ, ಅಕ್ಷಿತ್ ಎಂ ಹಾಗೂ ಮಧ್ಯಸ್ಥಿಕೆಯಾಗಿ ವಕೀಲ ಎಸ್ ಪ್ರವೀಣ್ ಕುಮಾರ್ ಸಹಕರಿಸಿದರು.

LEAVE A REPLY

Please enter your comment!
Please enter your name here