ಗೋಳಿತ್ತೊಟ್ಟು ಗ್ರಾ.ಪಂ.; ಕಸ್ತೂರಿ ರಂಗನ್ ವರದಿ ಕುರಿತ ವಿಶೇಷ ಗ್ರಾಮಸಭೆ

0

ಕರಡು ಅಧಿಸೂಚನೆಗೆ ಗ್ರಾಮಸ್ಥರಿಂದ ವಿರೋಧ-ನಿರ್ಣಯ

ನೆಲ್ಯಾಡಿ: ಕಸ್ತೂರಿ ರಂಗನ್ ವರದಿ ಕುರಿತಂತೆ ಗ್ರಾಮಸ್ಥರ ಸಲಹೆ, ಸೂಚನೆ, ಅಭಿಪ್ರಾಯ ಸಂಗ್ರಹಕ್ಕೆ ಸಂಬಂಧಿಸಿ ಗೋಳಿತ್ತೊಟ್ಟು ಗ್ರಾ.ಪಂ.ನ ವಿಶೇಷ ಗ್ರಾಮಸಭೆ ಸೆ.22ರಂದು ಬೆಳಗ್ಗೆ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆಗೆ ಗ್ರಾಮಸ್ಥರು ವಿರೋಧ ವ್ಕಕ್ತಪಡಿಸಿದ್ದು, ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.


ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಲಲಿತಾ ಜಿ.ಡಿ.ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಗೋಳಿತ್ತೊಟ್ಟು ಗ್ರಾ.ಪಂ.ವ್ಯಾಪ್ತಿಯ ಗೋಳಿತ್ತೊಟ್ಟು ಹಾಗೂ ಆಲಂತಾಯ ಗ್ರಾಮಗಳು ಕಸ್ತೂರಿ ರಂಗನ್ ವರದಿಯಂತೆ ಪಶ್ಚಿಮ ವಲಯ ಸೂಕ್ಷ್ಮ ಪ್ರದೇಶಗಳ ಪಟ್ಟಿಯಲ್ಲಿ ಸೇರಿಕೊಂಡಿವೆ. ಆದ್ದರಿಂದ ಕಸ್ತೂರಿ ರಂಗನ್ ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಪ್ರದೇಶಗಳು ಹಾಗೂ ಅದರ ಪರಿಣಾಮಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರಿಂದ ಆಕ್ಷೇಪಣೆ, ಸಲಹೆ ಸೂಚನೆ, ಅಭಿಪ್ರಾಯ ಪಡೆಯುವ ಉದ್ದೇಶಕ್ಕೆ ಸರಕಾರ, ಜಿಲ್ಲಾಧಿಕಾರಿ ಹಾಗೂ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ನಿರ್ದೇಶನದಂತೆ ಈ ವಿಶೇಷ ಗ್ರಾಮಸಭೆ ಕರೆಯಲಾಗಿದೆ. ಗ್ರಾಮಸ್ಥರ ಅಭಿಪ್ರಾಯ ದಾಖಲಿಸಿಕೊಂಡು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.


ಬಳಿಕ ಅಭಿಪ್ರಾಯ ತಿಳಿಸಿದ ಗ್ರಾಮಸ್ಥರು, ಕೇಂದ್ರ ಸರಕಾರ ಪ್ರಕಟಿಸಿರುವ ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆ ಜಾರಿಗೆ ವಿರೋಧವಿದೆ. ಸೆಟ್‌ಲೈಟ್ ಮೂಲಕ ಪಶ್ಚಿಮ ಘಟ್ಟ ಪ್ರದೇಶದ ಸರ್ವೆ ಮಾಡಲಾಗಿದೆ. ಆದ್ದರಿಂದ ಈ ವರದಿ ಜಾರಿಗೆ ಮೊದಲು ಜನವಸತಿ ಪ್ರದೇಶ ಬಿಟ್ಟು ಪಶ್ಚಿಮ ಘಟ್ಟ ಪ್ರದೇಶದ ಸರ್ವೆ ನಡೆಸಬೇಕೆಂದು ಆಗ್ರಹಿಸಿದರು. ಅಲ್ಲದೇ ಕರಡು ಅಧಿಸೂಚನೆಯ ವರದಿಯ ಪ್ರತಿಯನ್ನು ಗ್ರಾಮ ಪಂಚಾಯತ್‌ಗಳಿಗೆ ನೀಡಬೇಕೆಂದೂ ಆಗ್ರಹಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಕೃಷಿಕರ ಸ್ವಾಧೀನದಲ್ಲಿರುವ ಕುಮ್ಕಿ ಹಾಗೂ ಖಾಲಿ ಜಾಗದಲ್ಲಿ ಕೃಷಿ ಅಥವಾ ಇತರೇ ಚಟುವಟಿಕೆಗಳಿಗೆ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ಆದ್ದರಿಂದ ಇಂತಹ ಜಾಗವನ್ನು ಕಂದಾಯ ಹಾಗೂ ಅರಣ್ಯ ಇಲಾಖೆಯವರು ಜಂಟಿ ಸರ್ವೆ ನಡೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಗೋಳಿತ್ತೊಟ್ಟಿನಲ್ಲಿರುವ ಮಿಲಿಟರಿ ಜಾಗವನ್ನು ಸಾರ್ವಜನಿಕ ಆಟದ ಮೈದಾನಕ್ಕೆ ಬಳಕೆಗೆ ಅವಕಾಶ ಮಾಡಿಕೊಡುವಂತೆ ಗ್ರಾಮಸ್ಥರ ಮನವಿಯಂತೆ ಜಿಲ್ಲಾಧಿಕಾರಿಯವರಿಗೆ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.


ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸದಸ್ಯ ಕುಶಾಲಪ್ಪ ಗೌಡ ಅನಿಲ, ಗೋಳಿತ್ತೊಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಜನಾರ್ದನ ಪಟೇರಿ, ಸವಿತಾ ಆಲಂತಾಯ, ಶಾಲಿನಿಶೇಖರ ಪೂಜಾರಿ, ಮಾಜಿ ಉಪಾಧ್ಯಕ್ಷರಾದ ಬಾಬು ಪೂಜಾರಿ ಕಿನ್ಯಡ್ಕ, ಪ್ರಸಾದ್ ಕೆ.ಪಿ.ಸುಲ್ತಾಜೆ, ಮಾಜಿ ಸದಸ್ಯರಾದ ಬಾಲಕೃಷ್ಣ ಅಲೆಕ್ಕಿ, ಪದ್ಮನಾಭ, ಹೇಮಲತಾ, ಗುಲಾಬಿ, ಶಿವಪ್ರಸಾದ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್, ಗ್ರಾಮಸ್ಥರಾದ ಎ.ಎಸ್.ಶೇಖರ ಗೌಡ ಅನಿಲಬಾಗ್, ರಘು ಪಾಲೇರಿ, ಜಯಂತ ಅಂಬರ್ಜೆ, ಸುಂದರ ಶೆಟ್ಟಿ ಪುರ ಮತ್ತಿತರರು ವಿವಿಧ ವಿಚಾರ ಪ್ರಸ್ತಾಪಿಸಿದರು. ಗ್ರಾ.ಪಂ.ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here