ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಆರೋಪ : ಸಮಸ್ಯೆ ಈಡೇರಿಕೆಗೆ 15 ದಿನಗಳ ಗಡುವು: ಹೆದ್ದಾರಿ ತಡೆಯ ಎಚ್ಚರಿಕೆ

0

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಸಂದರ್ಭ ಕರುವೇಲಿನಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಲಾಗಿದ್ದು, ಇಲ್ಲಿ ಹೆದ್ದಾರಿಯ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಬೇಕು ಹಾಗೂ ಚರಂಡಿ ವ್ಯವಸ್ಥೆಯನ್ನು ನಿರ್ಮಿಸಬೇಕು. 15 ದಿನಗಳೊಳಗೆ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ದ.ಕ. ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಎಚ್ಚರಿಸಿದ್ದಾರೆ.


ಕರುವೇಲಿನಲ್ಲಿನ ನಡೆದ ಸ್ಥಳೀಯರೊಂದಿಗೆ ಸಮಸ್ಯೆಗಳ ಕುರಿತು ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇವರ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ಹೆದ್ದಾರಿ ಬದಿಯ ಹಲವು ಕೃಷಿ ಭೂಮಿಗಳಿಗೆ ಕೆಸರು ನೀರು ಹರಿದು ಹಲವು ರೈತರ ಅಡಿಕೆ ತೋಟಗಳು ಸಂಪೂರ್ಣ ನಾಶವಾಗಿದೆ. ಇಲ್ಲಿನ ಅವೈಜ್ಞಾನಿಕ ಕಾಮಗಾರಿ, ಸಮಸ್ಯೆಗಳ ಬಗ್ಗೆ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಅವರಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಆದ್ದರಿಂದ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಉಗ್ರ ಪ್ರತಿಭಟನೆ ಮಾಡುವುದು ನಮಗೆ ಅನಿವಾರ್ಯವಾಗಿದೆ ಎಂದರು.


ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಕೃಷಿ ನಾಶಕ್ಕೊಳಗಾದ ವೇಣುಗೋಪಾಲ ನೋಂಡಾ ಮಾತನಾಡಿ, ಬಿ.ಸಿ.ರೋಡ್- ಪೆರಿಯಶಾಂತಿಯವರೆಗಿನ 63 ಕಿ.ಮೀ. ಚುತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಈ ಹಿಂದೆ ಎಲ್ ಆಂಡ್ ಟಿಯವರಿಗೆ ೮೨೧ ಕೋ.ರೂ.ಗೆ ಗುತ್ತಿಗೆ ನೀಡಲಾಗಿತ್ತು. ಆಗ ಅವರ ಯೋಜನಾ ನಕ್ಷೆಯಲ್ಲಿ ಕರ್ವೇಲು ಕೇಂದ್ರ ಭಾಗದಲ್ಲಿ ಮೇಲ್ಸೆತುವೆ ಕಾಮಗಾರಿ, ಎರಡೂ ಕಡೆ ಸರ್ವೀಸ್ ರಸ್ತೆ ಹಾಗೂ ಚರಂಡಿ ವ್ಯವಸ್ಥೆಗಳು ಇತ್ತು. ಅವರು ಮೇಲ್ಸೆತುವೆ ಕಾಮಗಾರಿಗೆ ತಯಾರಿಯನ್ನೂ ನಡೆಸಿದ್ದರು. ಆದರೆ ಅವರು ಬಳಿಕ ಈ ಯೋಜನೆಯನ್ನು ಮುಂದುವರಿಸದ ಕಾರಣ ಬಳಿಕ ಕೆಎನ್‌ಆರ್ ಕಂಪೆನಿಗೆ ಇದರ ಗುತ್ತಿಗೆಯನ್ನು ವಹಿಸಿಕೊಂಡಿತ್ತು. ಅವರಿಗೆ ಈ ಕಾಮಗಾರಿಯನ್ನು ಮೊದಲಿನ ಯೋಜನಾ ವೆಚ್ಚಕ್ಕಿಂತ ೧,೫೦೦ ಕೋ.ರೂ.ಗೆ ಜಾಸ್ತಿ ಮಾಡಿ ಕೊಡಲಾಯಿತು. ಆದರೆ ಅವರ ಮೊದಲ ಯೋಜನಾ ನಕ್ಷೆಯನ್ನೇ ಬದಲಾಯಿಸಿದ್ದು, ಇಲ್ಲಿ ಮೇಲ್ಸೇತುವೆ ಕಾಮಗಾರಿ ಬಿಡಿ. ಸರ್ವೀಸ್ ರಸ್ತೆ ಹಾಗೂ ಚರಂಡಿಯನ್ನೂ ಕೈಬಿಟ್ಟಿದ್ದಾರೆ. ಶಾಂತಿನಗರದಿಂದ ಕವೇಲಿಗೆ ಸಂಪರ್ಕ ಕಲ್ಪಿಸುವ ಡಾಮರು ರಸ್ತೆಯು 1923ಕ್ಕಿಂತಲೂ ಮೊದಲಿನ ರಸ್ತೆಯಾಗಿದ್ದು, ಇಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಭಜನಾ ಮಂದಿರ, ಮಸೀದಿಗಳು ಇದೆ. ಈ ರಸ್ತೆಯು ಹೆದ್ದಾರಿ ಸಂಪರ್ಕವಾಗುವಲ್ಲಿ ಸರ್ವೀಸ್ ರಸ್ತೆಯನ್ನು ನಿರ್ಮಿಸಬೇಕಿತ್ತು. ಆದರೆ ಈಗಿನ ಯೋಜನಾ ನಕ್ಷೆಯಲ್ಲಿ ಇದನ್ನು ೩.೫ ಮೀ. ಅಗಲದ ಎತ್ತಿನ ಗಾಡಿ ಸಾಗುವ ಮಣ್ಣಿನ ರಸ್ತೆ ಎಂದು ತೋರಿಸಲಾಗಿದೆ. ಡಿಪಿಆರ್‌ನಲ್ಲಿ ಇದಕ್ಕೆ ಚರಂಡಿಯನ್ನು ತೋರಿಸಿಲ್ಲ. ಇಲ್ಲಿ ಸರ್ವೀಸ್ ರಸ್ತೆ ಇಲ್ಲದ್ದರಿಂದ ಈ ರಸ್ತೆಯ ಮೂಲಕ ಕರ್ವೇಲಿಗೆ ಬರಬೇಕಾದವರು ಸುಮಾರು 4 ಮೀಟರ್ ದೂರದ ಪೆರ್ನೆಗೆ ಹೋಗಿ ಅಲ್ಲಿಂದ ಹೆದ್ದಾರಿಯ ಮತ್ತೊಂದು ಭಾಗಕ್ಕೆ ಬಂದು ಕರ್ವೇಲಿಗೆ ಹೋಗಿ ಬರಬೇಕಾದ ಅನಿವಾರ್ಯತೆ ಇದೆ. ಆರೋಗ್ಯದ ತುರ್ತು ಸಂದರ್ಭಕ್ಕಾಗಿ ಹಾಗೂ ಇತರ ಕೆಲಸಗಳಿಗಾಗಿ ಕರ್ವೇಲಿನಿಂದ ಶಾಂತಿನಗರದ ಮೂಲಕ ಪುತ್ತೂರಿಗೆ ನಾವೆಲ್ಲಾ ಈ ರಸ್ತೆಯನ್ನೇ ಬಳಕೆ ಮಾಡುತ್ತಿದ್ದೆವು. ಪುತ್ತೂರು ಇಲ್ಲಿಂದ 10 ಕಿ.ಮೀ. ಮಾತ್ರ ದೂರವಿದೆ. ಆದರೆ ಈಗ ನಾವು ಪುತ್ತೂರಿಗೆ ಕರ್ವೇಲಿನಿಂದ ನೇರವಾಗಿ ಶಾಂತಿನಗರ ರಸ್ತೆಯ ಮೂಲಕ ಪುತ್ತೂರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ೩೪ ನೆಕ್ಕಿಲಾಡಿ ಮೂಲಕ ಸಾಗಬೇಕಾದರೆ 16 ಕಿ.ಮೀ. ದೂರವಾಗುತ್ತದೆ. ಕರ್ವೇಲಿನ ಈ ಬದಿಯವರು ಆ ಬದಿಯಲ್ಲಿರುವ ಶಾಲೆ, ಮಸೀದಿ, ಭಜನಾ ಮಂದಿರ ಸೇರಿದಂತೆ ಹಲವು ಕೆಲಸಗಳಿಗೆ ಆ ಬದಿಯನ್ನು ಅವಲಂಬಿಸಿಕೊಂಡಿದ್ದು, ಆದರೆ ಈಗ ಇದಕ್ಕೆಲ್ಲಾ ತೊಂದರೆಯಾಗಿದೆ. ಸರ್ವೀಸ್ ರಸ್ತೆಯಿಲ್ಲದ್ದರಿಂದ ಏಕಮುಖ ಸಂಚಾರದ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಹೋಗುವ ಸ್ಥಿತಿ ಎದುರಾಗಿದೆ. ಈ ಸಂದರ್ಭ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಿವೆ. ಹೆದ್ದಾರಿ ಬದಿ ಚರಂಡಿಗಳು ಇಲ್ಲದ್ದರಿಂದ ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಸಂಪೂರ್ಣವಾಗಿ ಮಳೆ ನೀರು ಹರಿಯುತ್ತದೆ. ಇದರಿಂದ ಈಗಾಗಲೇ ಎರಡು ಅಪಘಾತಗಳು ಸಂಭವಿಸಿವೆ. ಇವರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ಬಾರಿಯ ಮಳೆಗಾಲದಲ್ಲಿ ಸುಮಾರು ಏಳು ಮಂದಿ ರೈತರ ಕೃಷಿ ತೋಟಕ್ಕೆ ಮಳೆ, ಕೆಸರು ಹರಿದು ಬಂದು ಕೃಷಿ ತೋಟ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದರು.


ರೈತ ಸಂಘದ ದ.ಕ. ಜಿಲ್ಲಾ ಗೌರವಾಧ್ಯಕ್ಷ ಹರ್ಷಕುಮಾರ್ ಹೆಗ್ಡೆ ಮಾತನಾಡಿ, ಇಲ್ಲಿ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು, ಕಾಮಗಾರಿ ಗುತ್ತಿಗೆದಾರರು ಹಣದ ಲಾಭಿಗೆ ಮಣಿದಿದ್ದು, ತಮಗೆ ಬೇಕಾದ ಹಾಗೆ ಯೋಜನಾ ನಕ್ಷೆಯನ್ನು ತಯಾರಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಾಗಿ ಭೂಸ್ವಾಧೀನಕ್ಕೆ ಕೆಲವರಿಗೆ ಹಣ ನೀಡಿದ್ದರೂ, ಅವರಿಂದ ಭೂಮಿಯನ್ನು ವಶಪಡಿಸಿಕೊಂಡಿಲ್ಲ. ಅವರ ಹಣದ ಲಾಭಿಗೆ ಮಣಿದು ಅಲ್ಲಿ ಯೋಜನಾ ನಕ್ಷೆಯನ್ನೇ ತಿರುಚಿದ್ದಾರೆ. ಹಣದ ಲಾಭಿ ತೋರಿಸುವ ಪ್ರಭಾವಿಗಳಿಗೆ ಇವರು ಉಪಕಾರ ಮಾಡಲು ಹೊರಟಿದ್ದಾರೆ. ಭೂ ಸ್ವಾಧೀನಗೊಂಡು ಹಣ ಪಡೆದ ವ್ಯಕ್ತಿಯೋರ್ವರ ಮನೆಯನ್ನು ಸರ್ವೀಸ್ ರಸ್ತೆಯ ಕಾಮಗಾರಿಗಾಗಿ ಕೆಡವಬೇಕೆಂಬ ಕಾರಣಕ್ಕೆ ಕರ್ವೇಲ್ ಪೇಟೆಯ ಕಡೆಯೂ ಸರ್ವೀಸ್ ರಸ್ತೆ ನಿರ್ಮಿಸಿಲ್ಲ. ಕೆಲವು ತಿಂಗಳ ಹಿಂದೆ ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಸಣ್ಣದಾದ ರಸ್ತೆಯೊಂದನ್ನು ಮಾಡಿಕೊಟ್ಟಿದ್ದಾರೆ. ಅದು ಕೂಡಾ ಅನತಿ ದೂರದಲ್ಲಿರುವ ಮಸೀದಿಯವರೆಗೆ ಮಾತ್ರ. ಮುಂದಕ್ಕೆ ಯಾವುದೇ ರಸ್ತೆಯಿಲ್ಲ. ಈಗ ಮಾಡಿರುವ ಈ ರಸ್ತೆಯಲ್ಲಿ ವಾಹನಗಳು ಹೋಗಲು ಸಾಧ್ಯವಿಲ್ಲ. ಈ ರಸ್ತೆಯು ಮುಂದಕ್ಕೆ ಹೋದರೆ ಹತ್ತು ಕಲಸೆ, ಬಾನೊಟ್ಟು- ಬಿಳಿಯೂರಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಇಲ್ಲಿ ರಸ್ತೆ ನಿರ್ಮಾಣವಾಗದ್ದರಿಂದ ಹತ್ತು ಕಲಸೆ, ಬಾನೊಟ್ಟು ಸಂಪರ್ಕ ಕಡಿತಗೊಂಡಿದೆ. ಬಾನೊಟ್ಟುಗೆ ತೆರಳುವವರು ಪೆರ್ನೆಯ ವರೆಗೆ ಕ್ರಮಿಸಿ ಆ ಬಳಿಕ ಬಾನೊಟ್ಟುಗೆ ತೆರಳುವ ಅನಿವಾರ್ಯತೆ ಎದುರಾಗಿದೆ. ಬಾನೊಟ್ಟು ಮೂಲಕ ಬಿಳಿಯೂರಿಗೆ ಸಾಗಿದರೆ ಅಲ್ಲಿಂದ ಬೆಳ್ತಂಗಡಿ ತಾಲೂಕಿನ ಸರಳೀಕಟ್ಟೆಗೂ ಸಂಪರ್ಕ ಸಾಧ್ಯವಾಗುತ್ತದೆ. ಹಲವು ಜನರಿಗೆ ಉಪಯೋಗ ಬೀಳುವ ರಸ್ತೆಯನ್ನು ಅವರು ನಿರ್ಮಿಸಿಲ್ಲ. ಆದ್ದರಿಂದ ಕರ್ವೇಲಿನಲ್ಲಿ ಹೆದ್ದಾರಿಯ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆಯನ್ನು ನಿರ್ಮಿಸಿ ಅದಕ್ಕೆ ಕಾಂಕ್ರೀಟ್ ಕಾಮಗಾರಿ ನಡೆಸಬೇಕು. ಶಾಂತಿನಗರ – ಕರ್ವೇಲು ರಸ್ತೆಯಲ್ಲಿ ಬರುವವರು ನೇರವಾಗಿ ಕರ್ವೇಲಿಗೆ ಸಂಪರ್ಕ ಸಾಧಿಸುವಂತೆ ಮಾಡಿಕೊಡಬೇಕು. ಕರ್ವೇಲ್ – ಬಾನೊಟ್ಟು- ಬಿಳಿಯೂರುವರೆಗೆ ಸರ್ವಿಸ್ ರಸ್ತೆಯನ್ನು ಮಾಡಬೇಕು. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಕಾಮಗಾರಿಯನ್ನು ಮಾಡಬೇಕು. ಕೃಷಿ ನಷ್ಟವಾದವರಿಗೆ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ನಮಗೆ ಹೋರಾಟ ಅನಿವಾರ್ಯವೆಂದರು.


ಈ ಸಂದರ್ಭ ಸ್ಥಳೀಯರಾದ ಪ್ರಕಾಶ್ ನಾಯಕ್, ಧರ್ನಪ್ಪ ನಾಯ್ಕ, ಕುಶಾಲಪ್ಪ, ಅಬ್ದುಲ್ ರಝಾಕ್, ಅಬ್ದುಲ್ ಹಕೀಂ ಮತ್ತಿತರರು ಮಾತನಾಡಿ ಸಮಸ್ಯೆಗಳನ್ನು ಬಿಚ್ಚಿಟ್ಟರು. ಸಭೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ ಪರಣೆ, ರೈತ ಮುಖಂಡರಾದ ವಿನೋದ್ ಶೆಟ್ಟಿ, ಶ್ರೀಧರ ರೈ ಮೇರ್ಲ, ಅಬ್ದುಲ್ ರಝಾಕ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here