







‘ಬಿಂದು’ ಸಂಸ್ಥೆ ಸಮಾಜದ ಆಸ್ತಿ- ಈಶ್ವರ ಭಟ್
ಶುಚಿತ್ವದಿಂದ ಆರೋಗ್ಯ, ಪರಿಸರದ ರಕ್ಷಣೆ- ರಂಜಿತಾ ಶಂಕರ್


ಪುತ್ತೂರು: ಆರೋಗ್ಯಕರ ‘ಬಿಂದು’ ಮಿನರಲ್ ವಾಟರ್, ‘ಬಿಂದು’ ಜೀರಾ, ‘ಸಿಪ್ಆನ್’ ಸೇರಿದಂತೆ 50ಕ್ಕೂ ಅಧಿಕ ಜನಪ್ರಿಯ ಪಾನೀಯಗಳು ಹಾಗೂ ವಿವಿಧ ತಿನಿಸುಗಳ ಮೂಲಕ ಮನೆಮಾತಾಗಿರುವ ಎಸ್.ಜಿ. ಸಮೂಹ ಸಂಸ್ಥೆ ಇದೀಗ ಶುಚಿತ್ವ ಮತ್ತು ನೈರ್ಮಲ್ಯಕ್ಕೂ ಆದ್ಯತೆ ನೀಡುವ ಮೂಲಕ ಸಾಮಾಜಿಕ ಕಾಳಜಿಗೆ ಮತ್ತೊಂದು ಹೆಜ್ಜೆ ಇಟ್ಟಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು ರೂ.50 ಲಕ್ಷ ವೆಚ್ಚದಲ್ಲಿ ನೂತನ ಆಧುನಿಕ ಶೌಚಾಲಯ ನಿರ್ಮಿಸಿಕೊಡಲು ಮುಂದಾಗಿರುವ ಸಂಸ್ಥೆಯ ವತಿಯಿಂದ ಸೆ.24ರಂದು ಶಿಲಾನ್ಯಾಸ ನೆರವೇರಿಸಲಾಯಿತು.



ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ವಸಂತ ಕೆದಿಲಾಯ ಅವರ ವೈದಿಕತ್ವದಲ್ಲಿ ಬಿಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕರ್ ಅವರು ಶಿಲಾನ್ಯಾಸ ನೆರವೇರಿಸಿದರು.
‘ಬಿಂದು’ ಸಂಸ್ಥೆ ಸಮಾಜದ ಆಸ್ತಿ:
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಹಂತ ಹಂತವಾಗಿ ನಡೆಯುತ್ತಿವೆ. ದೇವಳಕ್ಕೆ ಆಗಮಿಸುವ ಭಕ್ತರಿಗೆ ಅಗತ್ಯವಾಗಿರುವ ಉತ್ತಮ ಶೌಚಾಲಯದ ವ್ಯವಸ್ಥೆಯೂ ಆಗಬೇಕಿತ್ತು. ಈ ಕುರಿತು ಬಿಂದು ಸಂಸ್ಥೆಯ ಮಾಲಕ ಸತ್ಯಶಂಕರ್ ಅವರಲ್ಲಿ ಮನವಿ ಮಾಡಿದಾಗ, ಅವರು ತಕ್ಷಣ ಸ್ಪಂದಿಸಿ ಸುಮಾರು ರೂ.50 ಲಕ್ಷ ವೆಚ್ಚದಲ್ಲಿ ಆಧುನಿಕ ಶೌಚಾಲಯ ನಿರ್ಮಿಸಿಕೊಡಲು ಮುಂದಾಗಿದ್ದಾರೆ ಎಂದರು.
ತನ್ನ ಉತ್ಪಾದನೆಯ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಡುವ ಮೂಲಕ ಬಿಂದು ಸಂಸ್ಥೆ ಸಾಮಾಜಿಕ ಕಾಳಜಿಯನ್ನು ತೋರುತ್ತಿದೆ. ಬಿಂದು ಸಂಸ್ಥೆ ಇಂದು ಕೇವಲ ಉದ್ಯಮವಲ್ಲ, ಸಮಾಜದ ಆಸ್ತಿಯಾಗಿ ಬೆಳೆದಿದೆ ಎಂದು ಅವರು ಹೇಳಿದರು.

ಶುಚಿತ್ವದಿಂದ ಆರೋಗ್ಯ, ಪರಿಸರದ ರಕ್ಷಣೆ: ರಂಜಿತಾ ಶಂಕರ್
ಶಿಲಾನ್ಯಾಸ ನೆರವೇರಿಸಿ ಬಿಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕರ್ ಅವರು ಮಾತನಾಡಿ, ಮಹಾಲಿಂಗೇಶ್ವರ ದೇವರ ಸೇವೆಗೆ ಈ ಅವಕಾಶ ದೊರೆತಿರುವುದು ನಮ್ಮ ಪಾಲಿನ ಧನ್ಯತೆಯ ವಿಚಾರ. ‘ಬಿಂದು’ವಿನಿಂದ ಆರಂಭವಾದ ನಮ್ಮ ಪಯಣ ಇಂದು ‘ಸಿಂಧು’ವಿನಂತೆ ವಿಸ್ತರಿಸಲು ಊರಿನ ಜನರು, ಬಂಧುಗಳು ನೀಡಿದ ಸಹಕಾರ ಹಾಗೂ ಮಹಾಲಿಂಗೇಶ್ವರನ ಕೃಪೆಯೇ ಕಾರಣ ಎಂದರು. ನಮ್ಮದು ಆಹಾರ ಉದ್ಯಮವಾಗಿರುವುದರಿಂದ ಶುಚಿತ್ವ ಮತ್ತು ನೈರ್ಮಲ್ಯಕ್ಕೆ ವಿಶೇಷ ಆದ್ಯತೆ ನೀಡುತ್ತೇವೆ. ‘ಆರೋಗ್ಯವೇ ಭಾಗ್ಯ’ ಎಂಬುದನ್ನು ಕಾಪಾಡಿಕೊಳ್ಳಲು ಶುಚಿತ್ವ ಅತ್ಯಗತ್ಯ. ದೇವಸ್ಥಾನದ ಅಂಗಣ ಎಷ್ಟು ಶುದ್ಧವಾಗಿರುತ್ತದೆಯೋ, ಅದಕ್ಕೆ ಪೂರಕವಾಗಿ ಸುಸಜ್ಜಿತ ಶೌಚಾಲಯವೂ ಅಗತ್ಯ. ಉತ್ತಮ ಶೌಚಾಲಯವು ವ್ಯಕ್ತಿಯ ಆರೋಗ್ಯದ ಜತೆಗೆ ಪರಿಸರದ ಆರೋಗ್ಯವನ್ನೂ ಕಾಪಾಡುತ್ತದೆ. ನಮ್ಮ ಸಾಧನೆಯ ಜತೆಗೆ ಸಮಾಜಕ್ಕೆ ನೀಡುತ್ತಿರುವ ಸಣ್ಣ ಕೊಡುಗೆಯಾಗಿ ಇದನ್ನು ಪರಿಗಣಿಸುತ್ತೇವೆ ಎಂದು ಅವರು ಹೇಳಿದರು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಳಿನಿ ಪಿ. ಶೆಟ್ಟಿ, ಈಶ್ವರ ಬೆಡೇಕರ್, ದಿನೇಶ್ ಪಿ.ವಿ., ಕೃಷ್ಣವೇಣಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಬೆಂಗಳೂರಿನ ಅರ್ಬನ್ ಪ್ರೇಮ್ ಸಂಸ್ಥೆಯ ಇಂಜಿನಿಯರ್ ಗಣೇಶ್ ಭಟ್, ಇಂಜಿನಿಯರ್ ಪಿ.ಜಿ. ಜಗನ್ನಿವಾಸ ರಾವ್, ನಡುಬೈಲುಗುತ್ತು ಗೋಪಾಲಕೃಷ್ಣ ಪೂಜಾರಿ, ಪ್ರಕಾಶ್ ಗೌಡ, ಪಿ.ಜಿ. ಚಂದ್ರಶೇಖರ್ ರಾವ್, ಲೋಕೇಶ್ ಪಡ್ಡಾಯೂರು, ರೋಹನ್ರಾಜ್, ಸುದೇಶ್ ಚಿಕ್ಕಪುತ್ತೂರು, ಗುತ್ತಿಗೆದಾರ ರಕ್ಷಿತ್, ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು. ಶಿಲಾನ್ಯಾಸದ ಆರಂಭದಲ್ಲಿ ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿ ಬಿಂದು ಸಂಸ್ಥೆಯ ರಂಜಿತಾ ಶಂಕರ್ ಅವರನ್ನು ದೇವಳದ ವತಿಯಿಂದ ಗೌರವಿಸಲಾಯಿತು.










