







ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಪತ್ರಿಕಾಗೋಷ್ಟಿ


ಪುತ್ತೂರು:ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳಲ್ಲಿ ನಿಯಮ ಉಲ್ಲಂಘನೆ,ಅವ್ಯವಹಾರ ಹಾಗೂ ಹಣಕಾಸು ಲೆಕ್ಕಾಚಾರ ನಿರ್ವಹಣೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿರುವುದಾಗಿ ಆರೋಪಿಸಿ ಸಂರಕ್ಷಣಾ ಸಮಿತಿಯವರು ಮತ್ತು ಭಕ್ತಾದಿಗಳು ನೀಡಿರುವ ದೂರನ್ನು ಯಾವುದೇ ಕಾರಣಕ್ಕೂ ಕಡೆಗಣಿಸದೆ ಧಾರ್ಮಿಕ ದತ್ತಿ ಇಲಾಖೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ತಕ್ಷ ಶಿಕ್ಷೆಯಾಗಬೇಕು ಮತ್ತು ದೇವಳದ ಅಭಿವೃದ್ಧಿ ಕೆಲಸಗಳು ಚೆನ್ನಾಗಿ ನಡೆಯುವಂತಾಗಬೇಕು ಎಂದು ಆಗ್ರಹಿಸಿ ಬಿಜೆಪಿಯಿಂದ ಸೆ.29ರಂದು ಬೆಳಿಗ್ಗೆ ಸಹಾಯಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.



ಮಹಾಲಿಂಗೇಶ್ವರ ದೇವರ ಪ್ರೇರಣೆ ಹಾಗೂ ಶಾಸಕ ಅಶೋಕ್ ಕುಮಾರ್ ರೈಯವರ ಮಾರ್ಗದರ್ಶನದಲ್ಲಿ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಆಗಾಗ ಹೇಳಿಕೆ ನೀಡುತ್ತಿದ್ದಾರೆ.ದೇವಸ್ಥಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿಯಿಂದ ಸಂಪೂರ್ಣ ಸಹಕಾರ ನೀಡುವುದಲ್ಲದೆ,ಅವರು ಮಾಡುವ ಅಭಿವೃದ್ಧಿ ಕೆಲಸಗಳಿಗೆ ನಾವೂ ಜೋಡಿಸಿಕೊಳ್ಳುತ್ತೇವೆ.ಈ ನಿಟ್ಟಿನಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಶಾಸಕರಿಗೆ ನಾವು ಅಭಿನಂದನೆ ಸಲ್ಲಿಸುವುದಾಗಿ ಬನ್ನೂರು ಹೇಳಿದರು.
ಇಲಾಖೆಯ ಅನುಮತಿಯಿಲ್ಲದೆ ಕಾಮಗಾರಿ:
ದೇವಸ್ಥಾನದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂಬ ನಿಯಮವಿದ್ದರೂ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇದ್ಯಾವುದೂ ಇಲ್ಲದೆ ಎಲ್ಲವನ್ನೂ ತಮ್ಮ ಸ್ವಂತ ಎಂಬಂತೆ ನಡೆಸಲಾಗುತ್ತಿದೆ.ಶಾಸಕರ ಮಾರ್ಗದರ್ಶನದಲ್ಲಿ ಮಾಡುವುದಾಗಿ ಆಡಳಿತ ಮಂಡಳಿಯವರು ಹೇಳಿದರೂ ಇಲಾಖೆಯ ಅನುಮತಿ ಕಡ್ಡಾಯವಾಗಿರುತ್ತದೆ.ದೇವಳದ ಜಾಗವನ್ನು ಸ್ವಾಧಿನ ಪಡೆಯುವ ಸಮಯದಲ್ಲಿ, ಉಪಯೋಗವಿಲ್ಲದಿರುವ ಸಾಮಾಗ್ರಿಗಳನ್ನು ಏಲಂ ಪ್ರಕ್ರಿಯೆ ಇಲ್ಲದೆ ಸಾರ್ವಜನಿಕ ನೋಟಿಸ್ ನೀಡದೇ ವ್ಯವಹಾರವಾಗಿದೆ.ಕಟ್ಟಡ ತೆರವುಗೊಳಿಸಲು ಲೋಕೋಪಯೋಗಿ ಇಲಾಖೆಯ ಮೂಲಕ ಮೌಲ್ಯಮಾಪನ ನಡೆಸಿ ನಂತರ ಏಲಂ ಪ್ರಕ್ರಿಯೆ ನಡೆಸಬೇಕಾಗಿರುವುದು ಕಡ್ಡಾಯವಾಗಿದ್ದರೂ ಇಲಾಖೆಯ ಅನುಮತಿ ಪಡೆಯದೆ ಮಾಡಿರುವುದು ಅಕ್ರಮವಾಗಿದೆ ಎಂದು ರಾಜೇಶ್ ಬನ್ನೂರು ಆರೋಪಿಸಿದರು.
ಭ್ರಷ್ಟಾಚಾರ ನಡೆದಿರುವುದಕ್ಕೆ ಆಡಿಟ್ ವರದಿಯೇ ಸಾಕ್ಷಿ:
ದೇವಸ್ಥಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ನಾವು ಆರೋಪ ಮಾಡುವುದಲ್ಲ.ದೇವಸ್ಥಾನದ 2025ರ ಆಡಿಟ್ ವರದಿ ಸಾಕ್ಷಿಯಾಗಿದೆ.2026 ತನಕದ ಲೆಕ್ಕಪತ್ರದಲ್ಲಿ ಸಣ್ಣ ಪುಟ್ಟ ಖರ್ಚು ಎಂದು ರೂ.40,32,091 ಉಲ್ಲೇಖವಿದೆ.ವಿಐಪಿ ಹಾಗೂ ತಂತ್ರಿಗಳಿಗೆ ಬಡಿಸಿದ ಬಿಲ್ ಹಾಗೂ ಜೆಸಿಬಿ ಹಾಗೂ ಹಿಟಾಚಿಗಳ ಬಿಲ್ ಎಂದು ರೂ.70 ಲಕ್ಷಗಳನ್ನು ಡ್ರಾ ಮಾಡಲಾಗಿದೆ.ಇಷ್ಟು ಹಣದಲ್ಲಿ ಜೆಸಿಬಿಯನ್ನೇ ಖರೀದಿ ಮಾಡಬಹುದಿತ್ತು.ಕಾನೂನಿನಲ್ಲಿ ಅವಕಾಶ ಇಲ್ಲದೇ ಇದ್ದರೂ ಜೆಸಿಬಿ ಹಿಟಾಚಿ ಕೆಲಸವನ್ನು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯನಿಗೇ ನೀಡಲಾಗಿದೆ.ದೇವಳದ ಅಧಿನದ ಜಾಗದಲ್ಲಿದ್ದ ಮನೆಗಳನ್ನು ತೆರವುಗೊಳಿಸಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ.ಅಭಿವೃದ್ಧಿ ಕೆಲಸಗಳು ಮಾಡುವಾಗ ಇದು ಸಹಜ.ಆದರೆ ತೆರವುಗೊಂಡಿರುವ ಮನೆಗಳ ಮರಮುಟ್ಟು ಬಾಗಿಲು, ಕಲ್ಲು, ಕಿಟಕಿ, ಕಬ್ಬಿಣದ ಶೀಟ್ಗಳು ಏನಾಗಿದೆ.ಸ್ಥಳ ಸ್ವಾಧಿನ ಪಡೆಯುವ ಸಮಯದಲ್ಲಿ ಅದೇ ಜಾಗದಿಂದ ಕಡಿದ ಮರಗಳು ಎಲ್ಲಿ ಹೋಗಿದೆ ಎಂದು ಬನ್ನೂರು ಪ್ರಶ್ನಿಸಿದರು.
ಮಾಹಿತಿ ಹಕ್ಕಿನಲ್ಲಿ ದೊರೆತ ಉತ್ತರದ ದಾಖಲೆಯಿದೆ:
ದೇವಾಲಯದ ಜೀರ್ಣೋದ್ಧಾರ ಸಮಿತಿ ಸಭೆ ನಡೆದ ಉಪಾಹಾರದ ಬಿಲ್ ರೂ. 1.48ಲಕ್ಷ ಆಗಿದೆ.ಸಭೆಗೆ ಊಟ ಇರಲಿಲ್ಲ.ಸಂಜೆಯ ಉಪಹಾರಕ್ಕೆ ಅಷ್ಟೊಂದು ಬಿಲ್ ಹೇಗೆ?.ಪ್ರಧಾನಿ ಮೋದಿಯವರ ಸಭೆಯ ಉಪಹಾರಕ್ಕೂ ಅಷ್ಟು ಬಿಲ್ ಬರಲು ಸಾಧ್ಯವಿಲ್ಲ.ಸಭಾ ಭವನಕ್ಕೆ ಸ್ಥಳ ಬಾಡಿಗೆಯಿಲ್ಲ.ಲೈಟ್, ಜನರೇಟರ್, ಚೆಯರ್ ಎಲ್ಲಾ ಇದೆ. ಆದರೂ ಅಷ್ಟೊಂದು ಬಿಲ್ ಹೇಗೆ. ಪ್ರತಿ ತಿಂಗಳು ಸಣ್ಣಪುಟ್ಟ ಖರ್ಚು ಎಂದು ಪ್ರತಿ ತಿಂಗಳಿಗೆ ಸುಮಾರು ರೂ.4 ಲಕ್ಷದಂತೆ ವರ್ಷಕ್ಕೆ ರೂ.40,32,091 ಎಂಥ ಖರ್ಚು.ಅದನ್ನು ಯಾವುದಕ್ಕೆ ಬಳಸಲಾಗಿದೆ ಎಂದು ತೋರಿಸಬೇಕು.ಖರ್ಚಾದ ಬಗ್ಗೆ ದೇವಸ್ಥಾನದಿಂದ ಮಾಹಿತಿ ಹಕ್ಕಿನಲ್ಲಿ ನೀಡಿದ ಉತ್ತರದ ದಾಖಲೆಯಿದೆ.ಇದರ ಬಗ್ಗೆ ತನಿಖೆ ನಡೆಸಲಿ ಇಲ್ಲವೇ ಸಮಿತಿಯವರು ಸ್ಪಷ್ಟನೆ ನೀಡಲಿ ಎಂದು ಬನ್ನೂರು ಹೇಳಿದರು.ನಟರಾಜ ವೇದಿಕೆ ತೆರವುಗೊಳಿಸುವಾಗ ಅಲ್ಲಿದ್ದ ಕಲ್ಲು, ಸಿಮೆಂಟ್ ಶೀಟ್ಗಳು, ಕಬ್ಬಣಗಳು ಎಲ್ಲಿ ಹೋಗಿದೆ.ಆಡಳಿತ ಕಚೇರಿ ಎಡ ಭಾಗದಲ್ಲಿ ಎಡಿಬಿಯಲ್ಲಿ ನಿರ್ಮಿಸಲಾಗಿದ್ದ ಶಿಲೆ ಕಲ್ಲಿನ ತಡೆಗೋಡೆ ತೆರವುಗೊಸಲಾಗಿದೆ.ಅಲ್ಲಿದ್ದ ಲಕ್ಷಾಂತರ ಬೆಲೆಯ ಶಿಲೆ ಕಲ್ಲುಗಳು ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದ ರಾಜೇಶ್ ಬನ್ನೂರು, ಇವುಗಳ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ನ್ಯಾಯಯುತ ತನಿಖೆ ನಡೆಯಲಿ.ದೇವಳದ ಕೆಲಸ ಕಾರ್ಯಗಳು ಚೆನ್ನಾಗಿ ನಡೆಯುವಂತಾಗಬೇಕು.ಸಾರ್ವಜನಿಕ ಹಿತದೃಷ್ಟಿಯಿಂದ ಪರಸ್ಪರ ಮಾತನಾಡಿಕೊಂಡು ಅಭಿವೃದ್ಧಿ ಕೆಲಸಗಳು ನಡೆಯುವಂತಾಗಲಿ.ಇನ್ನಾದರೂ ಭಕ್ತಾದಿಗಳ ಸಭೆ ಕರೆದು ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.
ಜೀರ್ಣೋದ್ಧಾರ ಸಮಿತಿಗೆ ಅನುಮೋದನೆಯಾಗಿಲ್ಲ:
ದೇವಸ್ಥಾನದಲ್ಲಿ ರಚಿಸಲಾಗಿರುವ ಜೀರ್ಣೋದ್ಧಾರ ಸಮಿತಿಗೆ 24-09-2026ರ ತನಕ ಧಾರ್ಮಿಕ ದತ್ತಿ ಇಲಾಖೆಯಿಂದ ಅನುಮೋದನೆ ಆಗಿಲ್ಲ.ಆದರೂ ಜೀರ್ಣೋದ್ಧಾರದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ.ಸಂಗ್ರಹಿಸುವ ದೇಣಿಗೆಗೆ ಯಾವ ರಶೀದಿ ನೀಡುತ್ತಾರೆ ಎನ್ನುವುದು ಗೊತ್ತಿಲ್ಲ.ಪ್ರಶ್ನಾ ಚಿಂತನೆ ನಡೆಸದೆ ದೇವಳದ ಸುತ್ತ ಕಟ್ಟೆ ನಿರ್ಮಾಣ ಮಾಡಲಾಗಿದೆ.ಇಲಾಖೆಯ ಅನುಮತಿ ಇಲ್ಲದೇ ಈ 5 ಕಟ್ಟೆಗಳನ್ನು ನಿರ್ಮಾಣ ಮಾಡಲಾಗಿದ್ದು ತಲಾ ರೂ.25ಲಕ್ಷ ಸಂಗ್ರಹ ಮಾಡಿದ್ದು ಅವರಿಗೆ ಯಾವ ರಶೀದಿ ನೀಡಿದ್ದಾರೆ ಗೊತ್ತಿಲ್ಲ.ಜಾತ್ರೋತ್ಸವಕ್ಕೆ ಸಿಡಿ ಮದ್ದಿಗೆ ಸಂಗ್ರಹವಾದ ಹಣ ಮತ್ತು ಟೆಂಡರ್ ಬಗ್ಗೆ ಮಾಹಿತಿ ಇಲ್ಲ ಎಂದು ಆರೋಪಿಸಿದರು.
ಅಭಿವೃದ್ಧಿ ಹೆಸರಿನಲ್ಲಿ ಕಳಚಿರುವುದೇ ಹೊರತು ಕಟ್ಟಿಲ್ಲ:
ಮೂರು ಹೊತ್ತು ಪೂಜೆ ನಡೆಯುತ್ತಿದ್ದು ಸಾವಿರಾರು ಭಕ್ತರಿಂದ ಆರಾಧನೆ ಆಗುತ್ತಿದ್ದ ಅಯ್ಯಪ್ಪ ದೇವರು, ನಾಗನ ಗುಡಿ, ನವಗ್ರಹ ಗುಡಿಗಳನ್ನು ಪ್ರಶ್ನಾ ಚಿಂತನೆ ನಡೆಸದೆ, ಕಾರಣ ಇಲ್ಲದೆ ಅಲ್ಲಿಂದ ಸ್ಥಳಾಂತರಿಸಲಾಗಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಅಯ್ಯಪ್ಪ ದೇವರನ್ನು ಶಾರದಾ ಭಜನಾ ಮಂದಿರಕ್ಕೆ ಸ್ಥಳಾಂತರಿಸಿ ಅದಕ್ಕೆ ಪೂಜೆ ನಡೆಯದೇ ಇರುವುದಕ್ಕೆ ಭಕ್ತರ ಆಕ್ಷೇಪವಿದೆ. ದೇವಸ್ಥಾನದ ಅಭಿವೃದ್ಧಿ ಬದಲಾವಣೆಗಳಿಗೆ ನಮ್ಮ ಆಕ್ಷೇಪವಿಲ್ಲ.ಅದನ್ನು ನಿಯಮದಂತೆ ಮಾಡಬೇಕು.ಅಯ್ಯಪ್ಪ ಗುಡಿಗಳನ್ನು ಕಟ್ಟುವ ಸಮಯದಲ್ಲಿ ತೆರವುಗೊಳಿಸಬೇಕಿತ್ತು.ಅಭಿವೃದ್ಧಿ ಹೆಸರಿನಲ್ಲಿ ಕಳಚಿರುವುದೇ ಹೊರತು ಹೊಸತೇನೂ ಕಟ್ಟಿಲ್ಲ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್ ಗೌರಿ, ನಗರ ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ ಹಾಗೂ ಗ್ರಾಮಾಂತರ ಮಂಡಲದ ಮಾಧ್ಯಮ ಪ್ರಮುಖ ಮಹೇಶ್ ರೈ ಕೇರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.










